Friday, January 1, 2010

ಎರಡು ವರ್ಷ ಆಗೋಯ್ತು !

ಡಿಸೆಂಬರ್ ಮೂವತ್ತೊಂದು ೨೦೦೭ ರಾತ್ರಿ ಸುಮಾರು ಇದೇ ಹೊತ್ತು. ನಾವೇಕೆ ಹೀಗೆ ಬ್ಲಾಗ್ ನಲ್ಲಿ ನಾನು ಹೊಸವರ್ಷದ ಆಗಮನ ಎಂಬ ಲೇಖನವನ್ನು ಬರೆಯುತ್ತಿದ್ದೆ. ಜೊತೆಜೊತೆಗೇ ಬ್ಲಾಗಿಗರೊಡನೆ ಯಾಹೂನಲ್ಲಿ ಕಾನ್ಫರೆನ್ಸು. ನಾನು ಬ್ಲಾಗ್ ಪ್ರಪಂಚಕ್ಕೆ ಕಾಲಿಟ್ಟು ಕೇವಲ ಎರಡು ವರೆ ತಿಂಗಳಾಗಿದ್ದವು ಅಷ್ಟೇ. ಎಲ್ಲರ ಬ್ಲಾಗುಗಳನ್ನುಸ್ಥೂಲವಾಗಿ ಅವಲೋಕಿಸುತ್ತಿದ್ದೆ. ಆಗ ಅದೇನೋಪಾ, ನನಗೆ ಒಂದು ವಿಚಿತ್ರ ಭಾವನೆ ಕಾಡತೊಡಗಿತು. ಎಲ್ಲರೂ ಬ್ಲಾಗನ್ನು ಭಾವನೆಗಳ ಅಭಿವ್ಯಕ್ತಿಯ ಮಾಧ್ಯಮವನ್ನಾಗಿ ಬಿಂಬಿಸಿದ್ದರು. ನಾನು ಅದುವರೆಗೂ ತಲೆಗೆ ಮಾತ್ರ ಕೆಲಸ ಕೊಟ್ಟಿದ್ದೆ. ಭಾವನೆಗಳ ಬಗ್ಗೆ ಯೋಚನೆ ಮಾಡಿರಲಿಲ್ಲ. ನಾವೇಕೆ ಹೀಗೆಯಲ್ಲಿ ಭಾವನೆಗಳ ಬಗ್ಗೆ ಬರೆಯಲು ಅದ್ಯಾಕೋ ಸರಿಬರಲಿಲ್ಲ. ಭಾವನೆಗಳನ್ನು ಹೇಗೆಲ್ಲಾ ವ್ಯಕ್ತಪಡಿಸಬಹುದು ಎಂದು ಯೋಚನೆ ಮಾಡಿದೆ. ಆಗಲೇ ನನ್ನ ಮೊಬೈಲ್ ಫೋನು ರಿಂಗಣಿಸಿ - ಹ್ಯಾಪಿ ನ್ಯೂ ಇಯರ್ ಮೆಸೇಜ್ ಒಂದನ್ನು ತಂದಿಟ್ಟಿತು. ಆಗಲೇ ನನಗನ್ನಿಸಿದ್ದು, ಭಾವನೆಯನ್ನ ಒಬ್ಬ ವ್ಯಕ್ತಿಯಂತೆ ಪರಿಗಣಿಸಿ, ಭಾವನೆಗಳೊಟ್ಟಿಗೆ ಫೋನ್ ನಲ್ಲಿ ಮಾತಾಡಿದರೆ ಹೇಗೆ ? ರೂಪ ತದ್ರೂಪು ನನ್ನದೇ, ಆದರೆ ಗುಣದಲ್ಲಿ ನನಗಿಂತಾ ಸಂಪೂರ್ಣ ಭಿನ್ನ.ನನಗೆ ನಿಜವಾಗಿಯೂ ಏನನ್ನಿಸತ್ತೆ, ನಾನು ಭಾವಜೀವಿಯಾಗಿರಬಲ್ಲೆನೆ ? ಅಂತ ಫೋನ್ ನಲ್ಲಿ ನನಗೇ ಗೊತ್ತಾದರೆ ಹೇಗಿರತ್ತೆ?! ಒಂದೇ situation ಗೆ ನಾನು ಯಾವ್ಯಾವ ರೀತಿಯಲ್ಲಿ ಪ್ರತಿಕ್ರಯಿಸಬಲ್ಲೆ ? ನನ್ನ ವಿಸ್ತೃತ ರೂಪಕ್ಕೆ ಬ್ಲಾಗಿನಲ್ಲಿ ಏಕೆ ಅವಕಾಶ ಕಲ್ಪಿಸಬಾರದು ಅನಿಸಿತು.ಇದ್ದಿದ್ದರಲ್ಲಿ ಇದು ಒಂದು ಬ್ಲಾಗಿರಲಿ, ಯಾರಿಗೂ ಹೇಳೋಣು ಬ್ಯಾಡ ಅಂತ ಬ್ಲಾಗ್ ಒಂದನ್ನು ರೆಜಿಸ್ಟರ್ ಮಾಡಲು ಹೊರಟೆ. ತಾಪತ್ರಯ ಶುರುವಾಗಿದ್ದು ಅಲ್ಲಿಯೇ. ಹೆಸರೇನಿಡೋದು ?! ಮೂರು ಚುಕ್ಕಿ...ಉಹು. ಮನಸ್ಸು...not available. ಮಾನಸ-Already registered.ಹುಚ್ಚು ಮನಸ್ಸು...ಉಹು ! ಕನ್ನಡದಲ್ಲಿ ಬ್ಲಾಗ್ ಮಾಡಲು ಕನ್ನಡದಲ್ಲೇ ಪದಗಳು ಸಿಗಲಿಲ್ಲ :(

ನೀವ್ಯಾರು ನನ್ನ ಬೈಯಲ್ಲ ಅಂತ ಭಾಷೆ ಕೊಟ್ಟರೆ ಮಾತ್ರ ನಾನು ನಿಜ ಹೇಳ್ತಿನಿ. ನನ್ನ ಅತ್ಯಂತ ಪ್ರಿಯವಾದ ಭಾಷೆಗಳಲ್ಲಿ ಪ್ರಥಮ ಸ್ಥಾನ ಕನ್ನಡಕ್ಕೆ ಲಭಿಸಿದರೆ, ಎರಡನೆಯದು ಹಿಂದಿಗೆ ! ನಾನು ಹಿಂದಿಯನ್ನು ಎಷ್ಟು ಇಷ್ಟ ಪಡುತ್ತೇನೆಂದರೆ ನಾನು ಖಾಸಗಿ ಡೈರಿಯನ್ನು ಕೂಡಾ ಹಿಂದಿಯಲ್ಲೇ ಬರೆಯುತ್ತಿದ್ದೆ !ಹಾಗಾಗಿ ನಾನು ನನ್ನ ಈ ಹೊಸ ಬ್ಲಾಗಿನ ಹೆಸರಿಗೆ ಮೊದಲನೆಯ ಪದವನ್ನು ಹಿಂದಿಯಲ್ಲಿ ಇಟ್ಟೆ. ಮೊಬೈಲ್ ಫೋನಿನ concept ಇತ್ತು ಆದ್ದರಿಂದ ಎರಡನೆಯ ಪದ ಆಂಗ್ಲದಲ್ಲೇ ಇರಬೇಕಾಗಿತ್ತು. ನಾನು ಫೋನ್ ಮಾಡುವಂತಿದ್ದಿದ್ದರೆ ಚೆನ್ನಾಗಿರ್ತಿತ್ತೇನೊ, ಆದರೆ ನಾವಿವುರುದೇ ಜೀವನದ ಮರ್ಜಿಯಲ್ಲಲ್ಲವೇ ? ಇಷ್ಟೆಲ್ಲಾ ಆಧ್ಯಾತ್ಮ ಯಾಕೆ ಹೊಳೆಯಿತೋ ಗೊತ್ತಿಲ್ಲ, ಇದು ಜೀವನವೇ ಫೋನ್ ಮಾಡಿ ಅದೇ ಕಟ್ ಮಾಡಬೇಕಾದ call ಅನ್ನಿಸಿ ಇದಕ್ಕೆ ज़िंदगी Calling ಅಂತ ಹೆಸರಿಟ್ಟೆ. ಮಾತಿಲ್ಲದೇ ಬ್ಲಾಗರ್ ಈ ಬ್ಲಾಗನ್ನು ರಿಜಿಸ್ಟರ್ ಮಾಡಿಕೊಂಡಿತು.

ನಾನು ಮಾತನ್ನು ಆರಂಭಿಸಬೇಕಿತ್ತು. ನನಗೆ ಮಾತಾಡಲು ಸಾಮಾನ್ಯವಾಗಿ ಕಷ್ಟ ಆಗಲ್ಲ, ಆದ್ರೆ ನನ್ನೊಟ್ಟಿಗೇ ನಾನೆಂದೂ ಮಾತಾಡಿರಲಿಲ್ಲ ! ಹಾಗೂ ಹೀಗೂ ಒಂದು ಪೋಸ್ಟ್ ಬರೆದೆ. ಪೋಸ್ಟನ್ನು ಪಬ್ಲಿಷ್ ಕೂಡಾ ಮಾಡಿಬಿಟ್ಟೆ.

ಕಾನ್ಫರೆನ್ಸಲ್ಲಿ ಬರಿ "ಹು, ಸರಿ, ಆಯ್ತು" ಮತ್ತು ಸ್ಮೈಲಿಗಳನ್ನು ಮಾತ್ರ ಹಾಕುತ್ತಿದ್ದೆ. ಗುರುಸ್ವರೂಪ ಅರುಣರಿಗೆ ಮೊದಲು ಪಿಂಗಿ " ಗುರುಗಳೇ-ಇದು ನನ್ನ ಹೊಸಾ ಬ್ಲಾಗು. ನೋಡಿ. ಚೆನ್ನಾಗಿಲ್ಲ ಅಂದ್ರೆ ಡಿಲೀಟ್ ಮಾಡಿಬಿಡುತ್ತೇನೆ ಈಗಲೇ !" ಅಂದೆ. ಬ್ಲಾಗ್ ಓದಿ ಗುರುಗಳು-"ಈ ಬ್ಲಾಗ್ ನ ಡಿಲೀಟ್ ಮಾಡಿದ್ರೆ, ನನ್ನ ಹತ್ತಿರ ಮಾತಾಡ್ಬೇಡ ನೀನು !" ಎಂದುಬಿಟ್ಟರು. ನನಗಿದು ಹೊಗಳಿಕೆಯೋ ಬೈಗುಳವೋ, ಆಜ್ಞೆಯೋ ಆಗ ಗೊತ್ತಾಗಲಿಲ್ಲ.ಪಟಾಕಿ ಶಬ್ದದ ನಡುವೆ ಹೊಸವರ್ಷ ಬಂದಾಗಿತ್ತು, ಜೊತೆಗೆ ನನ್ನ ಹೊಸ ಬ್ಲಾಗೂ !

ಸಿಕ್ಕಾಪಟ್ಟೆ ಭಯದಿಂದ ಮಿಕ್ಕೆಲ್ಲಾ ಯಾಹೂ ಮಿತ್ರರಿಗೆ ಲಿಂಕಿಸಿದೆ. ಕಾನ್ಫರೆನ್ಸಲ್ಲಿ ಚಪ್ಪಾಳೆಗಳ ಸುರಿಮಳೆಯಾದವು. ಆಗ ಗುರುಗಳ ಮಾತು ಅರ್ಥ ಆಯ್ತು ನಂಗೆ ! ಸಧ್ಯ ಇದು ಡಿಲೀಟನೀಯ ಬ್ಲಾಗಲ್ಲಪ್ಪಾ ಎಂದು ನೆಮ್ಮದಿಯ ನಿಟ್ಟುಸಿರು ಬಿಟ್ಟು ಅಂದಿನಿಂದ ಮಾತಡಲು ಶುರು ಮಾಡಿದ Z ಇಂದಿಗೂ ಮಾತಾಡುತ್ತಿದ್ದಾಳೆ. ಎರಡು ವರ್ಷ ಇದನ್ನ ಕೇಳಿಸಿಕೊಂಡು ನಿಮ್ಮ ಕಿವಿಗಳು ತೂತಾಗಿಲ್ಲದಿರುವುದನ್ನು ಕಂಡು head ruled ಆಶ್ಚರ್ಯ ಪಟ್ಟಿದ್ದಾಳೆ.ಯಾಕಂದರೆ listeners ಸಂಖ್ಯೆ ಇತ್ತೀಚೆಗೆ ದಿನಕ್ಕೆ ನೂರು ತಲುಪುತ್ತಿದೆ !ನಿಮ್ಮ ಪ್ರೋತ್ಸಾಹ ಕಂಡು ನಾವಿಬ್ಬರೂ ಮೂಕರಾಗಿದ್ದೇವೆ. ಹಾಗಂತ ಮಾತು ನಿಲ್ಲಿಸಿದರೆ ಎಲ್ಲರೂ ನಮ್ಮನ್ನು ಬೈಯ್ಯುತ್ತಾರೆಂಬ ಭಯದಲ್ಲಿ ನಾವು ಮೂಕರಾಗಿದ್ದೇವೆ ಎಂದು ಬಾಯ್ಬಿಟ್ಟು ಹೇಳುತ್ತಿದ್ದೇವೆ !

ಈ ನಮ್ಮ ಗುಸುಗುಸುವಿನಲ್ಲಿ ನಿಮಗೇನು ಹಿಡಿಸಿತೋ ನಮಗೆ ಖಂಡಿತಾ ಅರ್ಥವಾಗುತ್ತಿಲ್ಲ ! ದಯವಿಟ್ಟು ಅದನ್ನ ನಮ್ಮೊಟ್ಟಿಗೆ ಹಂಚಿಕೊಳ್ಳಿ . ಅದೇನೇನು ಘನಕಾರ್ಯ ಗಳನ್ನು ಸಾಧಿಸಿದ್ದೇವೆ ನಾವು ಎರಡು ವರ್ಷದಲ್ಲಿ ಅಂತ ತಾವೇ ದಯಮಾಡಿ ನಮಗೆ ತಿಳಿಸಿಕೊಡಿ.

೨೦೦೯ ನನ್ನ ನೆಚ್ಚಿನ ಗಾಯಕ ಅಶ್ವಥ್ ಮತ್ತು ನೆಚ್ಚಿನ ನಟ ವಿಷ್ಣುವರ್ಧನ್ ಅವರ ಸಾವಿನಿಂದ ಬಹಳ ದುಃಖಕರ ಅಂತ್ಯವನ್ನು ಕಂಡಿದೆ. ಹಾಲು ಬೆಳಕನೀವ ಹುಣ್ಣಿಮೆ ಚಂದ್ರನಿಗೆ ಇನ್ನೇನು ಹತ್ತು ನಿಮಿಷಕ್ಕೆ ಗ್ರಹಣ ಹಿಡಿಯಲಿದೆ. ಆದರೆ ದುಃಖ, ಗ್ರಹಣ ಎಲ್ಲವೂ ಕ್ಷಣಿಕವಷ್ಟೇ. ಮುಂಬರುವ ಬೆಳಕು ಎಲ್ಲರಿಗೂ ಶಾಂತಿ, ಸುಖ, ಸಮೃದ್ಧಿ, ನೆಮ್ಮದಿಗಳನ್ನು ತರಲಿ ಎಂದು ಆಶಿಸುತ್ತೇನೆ.

ಉತ್ತರಾಯಣ ೩

ನಾನು: ಬೃಂದಾವನಕ್ಕೆ ಹೊರಡಲು ನಾಲ್ಕು ಘಂಟೆಯಷ್ಟೊತ್ತಿಗೆ ರೆಡಿ ಇರಬೇಕು ಎಂದು ಮ್ಯಾನೇಜರ್ ವೆಂಕಟೇಶ್ ಅವರು ಹೇಳಿದ್ದರು. ಇವರೆಲ್ಲರೂ ಊಟ ಮಾಡಿ, ಮಲಗಿ, ಎದ್ದು ರೆಡಿಯಾಗು...