Friday, April 5, 2013

ಉತ್ತರಾಯಣ ೩

ನಾನು: ಬೃಂದಾವನಕ್ಕೆ ಹೊರಡಲು ನಾಲ್ಕು ಘಂಟೆಯಷ್ಟೊತ್ತಿಗೆ ರೆಡಿ ಇರಬೇಕು ಎಂದು ಮ್ಯಾನೇಜರ್ ವೆಂಕಟೇಶ್ ಅವರು ಹೇಳಿದ್ದರು. ಇವರೆಲ್ಲರೂ ಊಟ ಮಾಡಿ, ಮಲಗಿ, ಎದ್ದು ರೆಡಿಯಾಗುವಷ್ಟರ ಹೊತ್ತಿಗೆ ನಾನು ಮತ್ತು ಅಣ್ಣ ಹಾಗೇ ಸುಮ್ಮನೆ ಆಗ್ರಾದಲ್ಲಿ ಬೀದಿ ಅಲೆಯಲು ತೀರ್ಮಾನಿಸಿದ್ದೆವು.

Z:ಯಾಕೆ ?

ನಾನು: ನನ್ನ ಕ್ಯಾಮೆರಾದಲ್ಲಿ ಇದ್ದ ಮೆಮೋರಿ ಕಾರ್ಡನ್ನು empty ಮಾಡಲು ಮರೆತಿದ್ದೆ. ಅದರಲ್ಲಿ ಕೆಲವು ಮುಖ್ಯ ಫೋಟೋಗಳು ಮತ್ತು ವಿಡಿಯೋಗಳು ಇದ್ದವು. ಅಣ್ಣ laptop  ತರಬೇಡ ಎಂದು ಒಂದೇ ಸಮ ಹಠ ಹಿಡಿದ ಕಾರಣ, ಬೇರೆ ಯಾವ ದಾರಿಯೂ ಕಾಣದೇ, cyber cafe ನಲ್ಲಿ ಸಿ.ಡಿ. ಮಾಡಿಸುವ ಹಾಗಾಯಿತು. ಅದಕ್ಕಾಗಿ, ಮಟಮಟ ಮಧ್ಯಾಹ್ನದ ಬಿಸಿಲನ್ನೇ ತಂಪು ಬೆಳದಿಂಗಳು ಎಂದುಕೊಂಡು ಅಗ್ರಾದ ಬೀದಿಗೆ ಕಾಲಿಟ್ಟೆವು. ಪುಣ್ಯಕ್ಕೆ, ನಾವು ತಂಗಿದ್ದ ಹೋಟೆಲ್ ಪಕ್ಕದಲ್ಲಿಯೇ cyber cafe ಇತ್ತು. ಅವನು Art and Craft Emporium ಸಹ ನಡೆಸುತ್ತಿದ್ದನು.ಸಿಡಿ write  ಮಾಡಿಸುವ ಹೊತ್ತಿಗೆ ಅಂಗಡಿಯಲ್ಲಿ ಒಂದು ಸುತ್ತು ಹಾಕಿದೆವು.

Z:ಎಷ್ಟು ಬಿತ್ತು ಟ್ಯಾಕ್ಸ್ ಅಣ್ಣನಿಗೆ ?

ನಾನು: ಒಂದು ಪೈಸಾನೂ ಇಲ್ಲ. ಆ ಅಂಗಡಿಯವನು ತಾಜ್ ಮಹಲ್ ತಗೊಳ್ಳೀ ಅಂತ ಒಂದೇ ಸಮನೆ ದುಂಬಾಲು ಬಿದ್ದ. ನನಗೆ ತಾಜ್ ನೋಡುವ ಆಸೆಯಿತ್ತೇ ಹೊರತು ಅದನ್ನು ಕೊಳ್ಳುವ ಆಸೆ ಇರಲಿಲ್ಲ.ಮತ್ತೆ, ಅವನು ಅದಕ್ಕೆ ಹೇಳಿದ ಬೆಲೆ ಮೂರು ಸಾವಿರ ! ಮಿಕ್ಕೆಲ್ಲದರ ಬೆಲೆಯೂ ಹೆಚ್ಚೇ ಇತ್ತು. ಅದಕ್ಕೆ, ಇನ್ನು ಸ್ವಲ್ಪ ಹೊತ್ತಿನಲ್ಲಿ ನಮ್ಮ ಹೋಟೆಲ್ ನವರನ್ನೆಲ್ಲಾ ಕರೆದುಕೊಂಡು ಬರುತ್ತೇನೆ ಎಂದು ಹೇಳಿ ಅಲ್ಲಿಂದ ಕಾಲ್ಕಿತ್ತೆ.

Z: ಹಿಹಿಹಿಹಿ....

ನಾನು: ಮತ್ತೆ ಸ್ವಲ್ಪ ಓದು ಬರಹ ಎಲ್ಲ ಆದ ನಂತರ ರೆಡಿಯಾಗಿ ಎಲ್ಲರೂ ಬಸ್ ಹತ್ತಲು ಅನುವಾದೆವು. ಅಲ್ಲೇ ಶುರುವಾಗಿದ್ದು ಎಡವಟ್ಟು.

Z: ಯಾಕೆ ? ಏನಾಯ್ತು ?

ನಾನು: ದೀಪು ಹೆಂಡತಿ ನಂದಿನಿಯ ತಂದೆ ತಾಯಿಗೆ ಕಡೆಯಿಂದ ಎರಡನೆಯ ಸೀಟ್ ಕೊಟ್ಟಿದ್ದರು. ಅವರಿಬ್ಬರಿಗೂ ವಯಸ್ಸು ಎಪ್ಪತ್ತು ಮೀರಿತ್ತು. ಆಶ್ಚರ್ಯ ಏನಪ್ಪಾ ಅಂದರೆ, ಅವರಿಗೆ ಅಲಾಟ್ ಆದ ಸೀಟಿನ ಮುಂದೆ ಎರಡು ಸೀಟ್ ಗಳು ಖಾಲಿ ಇದ್ದವು. ದೀಪು ಅವರಿಗೆ ಸ್ವಲ್ಪ ಮುಂದಿನ ಸೀಟ್ ಕೊಡಿ ಎಂದು ಕೇಳಲು ಹೋಗಿದ್ದಕ್ಕೆ ಆ ಮ್ಯಾನೇಜರ್ ವೆಂಕಟೇಶ್ ಅವರು ನಿರಾಕರಿಸಿದರು. ಯಾರೋ ಇಬ್ಬರು ಪ್ರಯಾಣಿಕರು ಬೆಂಗಳೂರಿನಿಂದ ಹತ್ತುವ ಬದಲು ಅಲಹಾಬಾದ್ ನಿಂದ ನಮ್ಮ ಜೊತೆ ಸೇರಿಕೊಳ್ಳಲಿದ್ದಾರೆ, ಅವರಿಗೆ ಆ ಸೀಟು ಕೊಡಬೇಕು, ನಿಮಗೆ ಕೊಡೋದಿಲ್ಲ ಅಂತ ಹೇಳಿಬಿಟ್ಟರು.ಆದರೆ ನಾವು ಅಲಹಾಬಾದ್ ಗೆ ಮೂರು ದಿನಗಳ ನಂತ ತಲುಪಲಿದ್ದೆವು. ಅವರಿಗೂ ಕೈಯಲ್ಲಿ ಆಗಲ್ಲ ಸರ್, ಅದಕ್ಕೆ ಕೊಡೋಕೆ ಆಗಲ್ಲ ಅಂದರು. ದೀಪು ಎಷ್ಟು ದೈನ್ಯತೆಯಿಂದ ಕೇಳಿಕೊಂಡರೂ ಅವರು ಕೇಳುವಮಟ್ಟಿಗೆ ಕಾಣಲಿಲ್ಲ.ಸಹಜವಾಗಿ ಧ್ವನಿ ಏರಿತು. ಮಿಕ್ಕವರೆಲ್ಲರೂ ನಿಧಾನಕ್ಕೆ ಬಸ್ಸು ಹತ್ತುತ್ತಿದ್ದರು. ದೀಪುವಿನ ಏರಿದ ಧ್ವನಿಯನ್ನು ಮಾತ್ರ ಕೇಳಿಸಿಕೊಂಡ ಮಿಕ್ಕವರು ಪರಿಸ್ಥಿತಿಯ ಅರಿವಿಲ್ಲದೇ ದೀಪುವಿಗೆ ದೊಡ್ಡವರ ಬಗ್ಗೆ ಗೌರವವಿಲ್ಲ ಎಂದು ಅಣಕವಾಡಿದರು. ದೀಪುವಿಗೆ ಮತ್ತು ನಂದಿನಿಗೆ, ಬೇಜಾರಾಯಿತು. ಅವರು ಇವರೆಲ್ಲರ  ಮೇಲೆ ಹರಿಹಾಯ್ದರು. ಸುಧಾ ಆಂಟಿ ಇವೆಲ್ಲದಕ್ಕೆ ವಿಪರೀತ ಬೇಜಾರು ಮಾಡಿಕೊಂಡರು. ಆದರೂ ಚಲ ಬಿಡದ ದೀಪು ಅವನ ಅತ್ತೆ ಮಾವರನ್ನು ಮುಂದುಗಡೆಯ ಸೀಟುಗಳಲ್ಲಿಯೇ ಕೂರಿಸಿಬಿಟ್ಟನು. ಮ್ಯಾನೇಜರ್ ಹೌಹಾರಿದರು. ಕಡೆಗೆ, ಬಸ್ಸಿನವರು ಎಲ್ಲಾ ಸೇರಿ ರಾಜಿ ಮಾಡಿಸಿದರು.

Z: ಉಫ್ಫ್ಫ್ಪ್.....

ನಾನು: ನಾನೂ ಹೀಗೆ ನಿಟ್ಟುಸಿರು ಬಿಟ್ಟೆ. ಆನಂತರ ಬಸ್ಸಿನಲ್ಲಿರುವವರೆಲ್ಲರ ಪರಿಚಯ ಆಯಿತು. ಬಸ್ಸಿನಲ್ಲೆ ಮೈಕ್ ಇಟ್ಟಿದ್ದರು, ಅನೌನ್ಸ್ ಮಾಡಲು ಅನುಕೂಲವಾಗಲಿ ಅಂತ. ಪರಿಚಯವೆಲ್ಲ ಮುಗಿದ ನಂತರ ನಾವು ಹೋಗುತ್ತಿರುವ ಸ್ಥಳಗಳ ಸ್ಥೂಲ ಪರಿಚಯ ಮಾಡಿಕೊಡಲಾಯಿತು.ನೀವು ಟೂರನ್ನು ಬಹಳ ಆನಂದಿಸುತ್ತೀರಿ ಎಂದು ಆಶ್ವಾಸನೆ ಇತ್ತ ಆ ಮ್ಯಾನೇಜರ್ ನಮ್ಮನ್ನು ಮೊಟ್ಟಮೊದಲು ಕರೆದೊಯ್ದದ್ದು ವೃಂದಾವನಕ್ಕೆ . ವೃಂದಾವನದಲ್ಲಿ ನಮಗೆ ಗೈಡ್ ಒಬ್ಬರನ್ನ ಟ್ರಾವಲ್ಸ್ ನವರು ವ್ಯವಸ್ಥೆ ಮಾಡಿದರು. ದುಡ್ಡನ್ನು ನಾವೆಲ್ಲಾ ಸೇರಿ ಭರಿಸಬೇಕು ಎಂದು ಮಾತಾಯ್ತು. ವೃಂದಾವನದಲ್ಲಿ ವಿಜಯನಗರ ಶೈಲಿಯ ಗೋಪುರವನ್ನು ನೋಡಿ ನಮಗೆಲ್ಲಾ ಆಶ್ಚರ್ಯವಾಯಿತು . ಆಗ ಆ ಗೈಡು ಅದನ್ನು ಒಬ್ಬ ದಕ್ಷಿಣ ಭಾರತೀಯರೇ ಕಟ್ಟಿಸಿದ್ದು ಎಂದು ವಿವರಿಸುತ್ತಾ ಅವರೇ ಈ ವೃಂದಾವನದ ಮಹಾ ಪೋಷಕರೆಂದು, ಅವರ ವಂಶಸ್ಥರೇ ಈಗ ದೇವಸ್ಥಾನವನ್ನು ನಡೆಸುತ್ತಿರುವರು ಎಂದು ವಿವರಿಸಿದರು. ಆನಂತರ ಅಲ್ಲಿನ ತುಳಸಿ ವನವನ್ನು ತೋರಿಸುತ್ತಾ ಅಲ್ಲಿ ರಾತ್ರಿ ಯಾರು ಹೋಗಬಾರದಂತೆ, ತುಳಸಿವನದಲ್ಲಿ ರಾತ್ರಿ ಪ್ರತಿಯೊಂದು ತುಳಸಿ ಗಿಡವು ರಾಧೆ ಮತ್ತು ಕೃಷ್ಣ ನಾಗಿ ಬದಲಾಗಿ ನಾಟ್ಯವಾಡುತ್ತವಂತೆ , ಅದನ್ನು ನೋಡಿದವರ ಬುದ್ಧಿ ಭ್ರಮಣೆಯಾಗುತ್ತದಂತೆ ಅಂತ ಹೇಳಿದರು  .

Z: ನೀನು ದೊಡ್ಡ ವಿಜ್ಞಾನಿ ಥರ ನಾನು experiment ಮಾಡೇ ಮಾಡ್ತೀನಿ ಅಂತ ಹೊರಟಿರ್ತಿಯಾ.

ನಾನು :  ಹು. ಆದರೆ ನಾವು ವಾಪಸ್ ಆಗ್ರಾ ಗೆ ಬರಲೇ ಬೇಕಿತ್ತು.  ಎಂದಾದರು ಒಂದು ದಿನ  ಈ ಪ್ರಯೋಗ ಮಾಡೇ ಮಾಡ್ತೀನಿ  ಅಂತ  ಅಂದುಕೊಂಡು ವಾಪಸ್ ಬಂದೆ. ಅಲ್ಲಿ ಏಳು ಅಂತಸ್ತಿನ ಒಂದು ಅದ್ಭುತವಾದ ದೇವಸ್ಥಾನ ಇದೆ. ಗೋವಿಂದರಾಜ ದೇವಸ್ಥಾನ ಅಂತ. ಔರಂಗಜೇಬ ದಾಳಿ ಇಟ್ಟು ಏಳಂತಸ್ತಿನಲ್ಲಿ ನಾಲ್ಕಂತಸ್ತನ್ನು ಸುಟ್ಟು ಹಾಕಿದ ಎಂದು ಗೈಡ್ ವಿವರಿಸಿದರು.  ಕೆಲವು ವೃದ್ಧ ವಿಧವೆಯರಿಗೆ  ಅಲ್ಲಿನ ಒಂದು ಆಶ್ರಮದಲ್ಲಿ ಪುನರ್ವಸತಿ ಮತ್ತು ಆಶ್ರಯವನ್ನು ಕಲ್ಪಿಸಲಾಗಿದೆ. ಅಲ್ಲಿಗೆ ದಾನ ಮಾಡಿ ಎಂದು ಕೇಳಿದರು. ಒಂದಿಷ್ಟು ದಾನ ಮಾಡಿದೆವು. ಆನಂತರ ಕೃಷ್ಣ, ನಂದಗೋಪ ಯಶೋದೆ ಎಲ್ಲ ಇರುವ ದೇವಸ್ಥಾನಕ್ಕೆ ಹೋದೆವು. ಅಲ್ಲಿ ಕೃಷ್ಣನಿಗೆ ಪ್ಯಾಂಟ್ ಶರ್ಟ್ ತರಹದ ಬಟ್ಟೆ ಹಾಕಿದ್ದರು. ಅಣ್ಣ.."ಇದೇನು ಕೃಷ್ಣನಿಗೆ ಪ್ಯಾಂಟ್ ಶರ್ಟ್ ಹಾಕ್ಬಿಟ್ಟಿದಾರೆ ! ರಾಧೆಗೆ ಸ್ಕೂಲ್ ಯೂನಿಫಾರಮ್ ತರಹದ ಸ್ಕರ್ಟ್ ಹಾಕ್ಬಿಟ್ಟಿದ್ದಾರೆ ! ಸೀರೆ ಮತ್ತು ಪಂಚೆಲಿ ಇದ್ರೇನೆ ದೇವ್ರು ದೇವ್ರು ಅಂತ ಅನ್ನಿಸ್ಕೊಳ್ಳೋದು. " ಅಂದರು. ನಾನು ಮತ್ತು ಅಪರ್ಣ " ಇದು ಉತ್ತರ ಭಾರತದ ಶೈಲಿ ಅಣ್ಣ. ಇಲ್ಲೆಲ್ಲಾ ಹಿಂಗೇ ಮಾಡೋದು " ಅಂದೆವು. ಅಣ್ಣ ಯಾಕೋ ಕನ್ವಿನ್ಸ್ ಆದ ಹಾಗೆ ಕಾಣಲಿಲ್ಲ. ನಾವು " ಹೋಗ್ಲಿ ಬಿಡು" ಮಂತ್ರವನ್ನು ಪಠಿಸಿದೆವು.  ದಾರಿಯಲ್ಲಿ ಬಿರ್ಲಾ ಟೆಂಪಲ್ ಶೈಲಿಯ ಮತ್ತೊಂದು ದೇವಸ್ಥಾನಕ್ಕೆ ಭೇಟಿ ಕೊಟ್ಟು  ಮಥುರಾ ಗೆ ಹೋಗಲು ಅನುವಾದೆವು. ಮಥುರಾ ಗೆ ಹೋಗುವ ಹೊತ್ತಿಗೆ ಸುಮಾರು ಕತ್ತಲಾಗಿತ್ತು.

ಮಥುರೆಗೆ ಹೋಗಬೇಕಾದರೆ ಬಸ್ಸನ್ನು ಒಂದು ಕಡೆ ನಿಲ್ಲಿಸಿ ನಾವು ಅಲ್ಲಿಂದ ಸುಮಾರು ದೂರ ನಡೆಯಬೇಕಿತ್ತು. ಅಷ್ಟಲ್ಲದೇ ಅಲ್ಲಿ ಕ್ಯಾಮೆರಾ ಕೊಂಡೊಯ್ಯುವ ಹಾಗಿಲ್ಲ , ಬೆಲ್ಟು, ಪರ್ಸು ಮುಂತಾದ leather ಇಂದ ಮಾಡಿರುವ ವಸ್ತುಗಳಿಗೆ ಪ್ರವೇಶ ಇರಲಿಲ್ಲ. ಅಷ್ಟೇ ಯಾಕೆ hair pin ಕೂಡಾ ಬಿಡುತ್ತಿರಲಿಲ್ಲ. ಪರ್ಸುಗಳನ್ನು ಬಸ್ಸಿನಲ್ಲಿ ಬಿಟ್ಟು ಹೋದರೆ ನೋಡಿಕೊಳ್ಳುವವರು ಯಾರೂ ಇರಲಿಲ್ಲ. ಅಣ್ಣ ಈ ಹಿಂದೆ ಮಥುರಾವನ್ನು ನೋಡಿದ್ದರು ಆದ್ದರಿಂದ ಅವರು ಬಸ್ಸಿನಲ್ಲಿಯೇ ಉಳಿದರು. ನಾವೆಲ್ಲಾ ಮಥುರೆಯ ಕೃಷ್ಣನನ್ನು ನೋಡಲು ಹೊರಟೆವು.

Z : ಹೇಗಿದೆ ದೇವಸ್ಥಾನ ?

ನಾನು : ದೇವಸ್ಥಾನದ ಭವ್ಯತೆಗಿಂತಾ ಸೆಕ್ಯೂರಿಟಿ ಭವ್ಯವಾಗಿದೆ !

Z: ಹಾಂ ?

ನಾನು : ಹು. ಅಡಿಗಡಿಗೂ ಪೋಲೀಸ್ ಕಾವಲು. ಹಿಂದೂ ಮುಸ್ಲಿಮ್ ಸ್ಮಾರಕಗಳು ಎಲ್ಲೆಲ್ಲಿ ಒಟ್ಟೊಟ್ಟಿಗೆ ಇರತ್ತೋ, ಅಲ್ಲೆಲ್ಲಾ ಅರಿಭಯಂಕರವಾದ ಸೆಕ್ಯೂರಿಟಿ ಇರತ್ತೆ. ಬರುವವರೆಲ್ಲರೂ ಉಗ್ರಗಾಮಿಗಳು ಎನ್ನುವ ರೀತಿಯಲ್ಲಿ ನಿರ್ದಾಕ್ಷಿಣ್ಯವಾಗಿ ಪರೀಕ್ಷೆ ಮಾಡುತ್ತಾರೆ.ಹಾವಿನ  ತರಹ ಸುರುಳಿ ಸುತ್ತುವ ಕ್ಯೂ. ಅದೆಲ್ಲಾ ಆದ ಮೇಲೆ ನಾವು ಒಳಪ್ರಾಂಗಣ ತಲುಪಿದ್ದು.  ಮಥುರೆಯ ಕಾರಾಗೃಹದಲ್ಲಿ ಅಲ್ಲವೇ ನಮ್ಮ ಕೃಷ್ಣ ಜನಿಸಿದ್ದು ?  ಔರಂಗಜೇಬನು ಆ ಕಾರಾಗೃಹವನ್ನು ಒಡೆಸಿ ಅಲ್ಲಿ ಒಂದು ಮಸೀದಿಯನ್ನು ಕಟ್ಟಿಸಿದ್ದಾನೆ. ಆದರೂ ಹಿಂದೂಗಳು ಕೃಷ್ಣನು ಹುಟ್ಟಿದ  ಜನ್ಮಸ್ಥಳದ ಒಂದು ಭಾಗವನ್ನು ಮಾತ್ರ ಉಳಿಸಿಕೊಂಡು ಅದನ್ನು ಜೀರ್ಣೋದ್ಧಾರ ಮಾಡಿದ್ದಾರೆ. ಮಸೀದಿಗೂ ಕೃಷ್ಣನ ಜನ್ಮಸ್ಥಳಕ್ಕೂ ಇರುವುದು ಒಂದೇ  common wall.

Z: ಹೌದಾ ? This is interesting.

ನಾನು: ಹು. ಮಥುರೆಯ ದೇವಸ್ಥಾನವನ್ನು ಒಂದು ಪ್ರಸಿದ್ಧ ಸ್ಥಳವನ್ನಾಗಿ ಮಾಡಬೇಕು ಎಂದು ಕೃಷ್ಣನ ಬಾಲ ಲೀಲೆಗಳನ್ನೆಲ್ಲಾ ಬಿಂಬಿಸುವ ಬೊಂಬೆಗಳನ್ನು ಇಟ್ಟಿದ್ದಾರೆ. ದೊಡ್ಡದೊಂದು ದೇವಸ್ಥಾನದಲ್ಲಿ ರಾಧಾ ಕೃಷ್ಣನ ಬೃಹತ್ ಮೂರ್ತಿಗಳನ್ನು ಸ್ಥಾಪಿಸಿದ್ದಾರೆ. ಪಾದರಸದಲ್ಲಿ ಶಿವಲಿಂಗ ಮೂರ್ತಿಯನ್ನುಕೂಡಾ ಮಾಡಿದ್ದಾರೆ. its a challenge to chemistry...ನನಗೆ ತುಂಬಾ ಇಷ್ಟ ಆಯ್ತು ಅದು.

Z: ಅದು ಹೇಗೆ ಪಾದರಸವನ್ನ  ಲಿಂಗ ಮಾಡಿದರಂತೆ ಅವರು ?

ನಾನು : ನಾನು ಆ ಗೈಡ್ ನ ಹೀಗೆ ಕೇಳಿದೆ. ಅದಕ್ಕೆ ಅವರು ಮಂತ್ರಶಕ್ತಿಯಿಂದ ಯಾರೋ ಸ್ವಾಮಿಜಿ ಮಾಡಿದ್ದಾರೆ ಅಂತ ಹೇಳಿದ. ನನಗೆ ನಂಬಲು ಕಷ್ಟವಾಯಿತು. ಇದರ ಮೂಲಕ್ಕೆ ಕೈ ಹಾಕಲೇಬೇಕೆಂದು ಯೋಚಿಸಿದೆ. ಅಣ್ಣನ blackberryಯಲ್ಲಿ ಗೂಗಲ್ ಮಾಡಿದೆನಾದರೂ, ಹೆಚ್ಚು ಕ್ಲೂ ಏನೂ ಸಿಗಲಿಲ್ಲ. ಇನ್ನೂ ಉತ್ತರ  ಹುಡುಕುತ್ತಿದ್ದೇನೆ. 

Z: ಯಮುನೆ ಕಂಡಳೇ ?

ನಾನು : ಆ ಕಾರ್ಗತ್ತಲಲ್ಲಿ ಎಲ್ಲಿ ಹುಡುಕಲಿ ಯಮುನೆಯನ್ನ ? ಆಗ್ರಾದಲ್ಲೇ ನೋಡಬೇಕು ಎಂದುಕೊಂಡು ಬಂದೆ.ಮಥುರೆಯನ್ನು ನೋಡಿ ಮತ್ತೆ ಬಸ್ಸು ಹತ್ತಿ ಹೋಟಲ್ಲಿಗೆ ಬರುವ ಹೊತ್ತಿಗೆ ಸುಮಾರು ತಡವಾಗಿತ್ತು. ಮಾರನೆಯ ದಿನ ತಾಜ್ ಮಹಲು ಮತ್ತು ಆಗ್ರಾ ಕೋಟೆಯನ್ನು ನೊಡಲಿದ್ದೇವೆ ಎಂದು ಗೈಡ್ ಹೇಳಿದರು. ಊತ ಪರವಾಗಿಲ್ಲ. ಎಲ್ಲರೂ ಅವರವರ ರೂಮಿಗೆ ಹೋಗಿ ಮಾರನೆಯ ದಿನದ ಬಗ್ಗೆ ಯೋಚಿಸುತ್ತಾ ಮಲಗಿದರು. ನನಗೆ ಆ ರಾತ್ರಿ ತಾಜ್ ಮಹಲಿನದ್ದೇ ಕನಸು !

Saturday, January 1, 2011

ಮೂರು ವರ್ಷ....and still calling ! :)

ಎಲ್ಲರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು. ಈ ಬ್ಲಾಗಿನ ಹುಟ್ಟು ಹಬ್ಬ ಮತ್ತು ಹೊಸ ವರ್ಷ ಯಾವಾಗ್ಲು ಒಟ್ಟಿಗೆ ಬರತ್ತೆ. ಆದರೆ, ಮತ್ತೆ ಅದೇ flash back ಗೆ ಹೋಗಿ, ಅದೇ ಕಥೆಯನ್ನ ಹೇಳಿ ನಿಮ್ಮನ್ನ ಬೋರ್ ಹೊಡೆಸಲ್ಲ. ನೀವೆಲ್ಲ ಬುದ್ಧಿವಂತರು. Call history ತೆಗೆದು ನೋಡಿ ಈ ಬ್ಲಾಗ್ ಹೇಗೆ ಹುಟ್ಟಿತು ಅನ್ನೋದನ್ನ ಓದ್ಕೋತಿರಾ :)

ಹೌದು, ಇವತ್ತಿಗೆ ಮೂರು ವರ್ಷ ಆಗೋಯ್ತು ಈ ಬ್ಲಾಗ್ ಆರಂಭ ಆಗಿ. ಮೂರು ವರ್ಷಗಳಲ್ಲಿ ಬ್ಲಾಗ್ ಲೋಕದಿಂದ ನಾನು ಬಹಳಷ್ಟು ಒಳ್ಳೆ ಗೆಳೆಯರನ್ನು ಪಡೆದಿದ್ದೇನೆ.ನನ್ನ ಈ non stop  ವಟವಟವನ್ನ ನೀವು ಪಾಪ ಬಹಳ ಉತ್ಸಾಹದಿಂದ, ಶ್ರದ್ಧೆಯಿಂದ, ಪ್ರೀತಿಯಿಂದ, ಅಭಿಮಾನದಿಂದ ಕೇಳುತ್ತಾ ಬರುತ್ತಿದ್ದೀರ. ಡೊಂಟ್ ವರಿ ಮಾಡ್ಕೊಳಿ, ಈ ವಟ ವಟ ಈ ವರ್ಷವೂ ಮುಂದುವರಿಯಲಿದೆ,on one condition: ನೀವು ಹೀಗೆ ಈ ಬ್ಲಾಗ್ ಓದೋದರ ಬಗ್ಗೆ ಉತ್ಸಾಹ, ಶ್ರದ್ಧೆ ಮತ್ತು ಪ್ರೀತಿ ನ ಮುಂದುವರಿಸಿದರೆ ಮಾತ್ರ ! :)

ಈ ಬ್ಲಾಗಿನ ಕಟ್ಟಾ ಅಭಿಮಾನಿ ವರ್ಗ ಈ ಬ್ಲಾಗು ನಿಯತವಾಗಿ ಅಪ್ಡೇಟ್ ಆಗ್ತಿಲ್ಲ ಅನ್ನೋದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಇದರ ಬಗ್ಗೆ ಸ್ವತಃ ಸ್ವಯಂ ಸಾಕ್ಷಾತ್ ನನಗೇ ಬೇಜಾರಿದೆ.I don't want reasons, I want results ಅಂತ ಸದಾ ಕಾಲ ಶಂಖ ಊದುವ ನಾನು, ಇಂದು ಬ್ಲಾಗ್ ಅಪ್ಡೇಟ್ ಆಗದಿರುವುದಕ್ಕೆ ನಿಮಗೆ ಕಾರಣ ಹೇಳಬೇಕೋ ಬೇಡವೋ ತಿಳಿಯದೇ ಪರದಾಡುತ್ತಿದ್ದೇನೆ. ಆದರೂ, ನೀವೆಲ್ಲಾ ನನ್ನನ್ನ ಅರ್ಥ ಮಾಡ್ಕೊತಿರಾ ಅನ್ನೋದರ ಬಗ್ಗೆ ದೃಢವಾದ ನಂಬಿಕೆ ಇದೆ ಆದ್ದರಿಂದ, ಕಾರಣಗಳನ್ನು ನಿಮ್ಮ ಮುಂದೆ ಇಡಬಯಸುತ್ತೇನೆ.

೧. ದಿನ ಬೆಳಗಾದರೆ ಕಾಲೇಜು, ಪಾಠ, ಮತ್ತು ನನ್ನ ಲ್ಯಾಬು, ಎಮ್.ಫಿಲ್ ಪ್ರಾಜೆಕ್ಟು, ಅದಕ್ಕಾಗಿ ಜೆ.ಸಿ.ರಸ್ತೆ ಮತ್ತು ಜಯನಗರ ಮೂರನೇ ಬ್ಲಾಕಿನ ನಡುವಿನ ಅವ್ಯಾಹತ ಓಡಾಟ."ನಾವೂ ಇದೇ ರಸ್ತೆಗಳಲ್ಲಿ ಓಡಾಡೋದು.ಅದರಲ್ಲಿ ಏನು ವಿಶೇಷ" ಅಂತ ನೀವು ಕಮೆಂಟೋ ಮುಂಚೆ ದಯವಿಟ್ಟು ನನ್ನ ಮಾತನ್ನ ಪೂರ್ತಿ ಕೇಳಿ. ನಿಮಗೆ ಆಫೀಸಲ್ಲಿ ಫ್ರೀ ಟೈಂ ಸಿಗಬಹುದು, ಆದರೆ ನನಗೆ ಕಾಲೇಜಲ್ಲಿ ಟೈಂ ಸಿಕ್ತಿಲ್ಲ.ಸಾಲದ್ದಕ್ಕೆ ಶನಿವಾರ ಭಾನುವಾರಗಳು ನಾನು ರಿಸರ್ಚ್ ಲ್ಯಾಬ್ನಲ್ಲಿ ವಾಸ್ತವ್ಯ  ಹೂಡಿರುವ ಕಾರಣ, ವೀಕೆಂಡ್ ಬರುವುದೂ ಗೊತ್ತಾಗುತ್ತಿಲ್ಲ, ಹೋಗುವುದೂ ಗೊತ್ತಾಗುತ್ತಿಲ್ಲ. ಟೈಂ ಇಲ್ಲ ಅನ್ನೋರನ್ನ ನಂಬಬೇಡಿ ಅಂತ ಹಿರಿಯರು ಅಪ್ಪಣೆ ಕೊಡಿಸಿರುವರಾದರೂ, ನನ್ನ ಮಟ್ಟಿಗೆ, ಬ್ಲಾಗಲು ನನಗೆ ಟೈಂ ಇಲ್ಲದಿರುವುದು ನನ್ನ ಜೀವನದ ಸಧ್ಯದ ಮಹಾದುರಂತಗಳಲ್ಲೊಂದು. 

೨. ಹಿಂದೆಲ್ಲಾ ರಾತ್ರಿ ಒಂದಕ್ಕೆ ಮಲಗಿ ಬೆಳಿಗ್ಗೆ ಎಂಟಕ್ಕೆ ಏಳುತ್ತಿದ್ದೆ. ಈಗ ಒಂಭತ್ತುವರೆಗೆ ಪಾಚ್ಕೊತಿದಿನಿ. ಯಾಕಂದ್ರೆ, earth  polarity ಬದಲಾದರೂ, Land to water mass ratio interchange  ಆದರೂ ನಾನು ಬೆಳಿಗ್ಗೆ ಎಂಟು ಹದಿನೈದರೊಳಗೆ ಕಾಲೇಜಲ್ಲಿರಬೇಕು. ಆದ್ದರಿಂದ ಸೂರ್ಯ ಯಾವಾಗ ಹುಟ್ಟುತ್ತಾನೋ, ನಾನು ಆಗಲೇ ಏಳಬೇಕು :(

೩. ನನ್ನ ಎಮ್.ಫಿಲ್ ಒಂದು ವರ್ಷಕ್ಕೆ ಪರಿಸಮಾಪ್ತಿಯಾಗದೇ ಇನ್ನೂ ಮೂರು ತಿಂಗಳು ಮುಂದೂಡಲ್ಪಟ್ಟಿದೆ.ಕಾರಣ ಮೂರು ಬಾರಿ experiments  ಮಾಡಿದರೂ ಸರಿಯಾಗಿ ಬರದೇ ಕೈಕೊಟ್ಟ ನನ್ನ samples.ಮತ್ತು, ಮಹಾ ಭಾರತಕ್ಕೆ ಮತ್ತು ಕಾಳಿದಾಸನ ಮಹಾಕಾವ್ಯಕ್ಕೆ competition  ಕೊಡುವ ರೀತಿಯಲ್ಲಿ ನನ್ನ ಥೀಸಿಸ್ ಇರಬೇಕು ಎಂದು ನನ್ನ ಗುರುಗಳು ಆಜ್ಞೆ ಮಾಡಿದ್ದಾರೆ. ಆ ಮಹಾಕಾವ್ಯದ ರಚನೆಗೆ ಇರೋ ಟೈಂ ಎಲ್ಲಾ ಮೀಸಲಿಡಬೇಕಾಗಿದೆ.ಇಷ್ಟು ತಿಂಗಳುಗಳಿಂದ ತಿನುಕಾಡಿ ಒಂದು ಅಧ್ಯಾಯ ಬರ್ದಿದಿನಿ, ಮಿಕ್ಕಿದ್ದಕ್ಕೆ ಗಣೇಶ ಮತ್ತು ಕಾಳಿದಾಸನ ಅನುಗ್ರಹ ಮತ್ತು ಸಹಾಯಕ್ಕೆ ವೈಟಿಂಗು.

ಹಿಂಗೆಲ್ಲಾ ಆಗೋಗಿರೋದ್ರಿಂದ, ನನಗೆ ಬ್ಲಾಗಲು ಆಗುತ್ತಿಲ್ಲ ಮತ್ತು ಎಲ್ಲರ ಬ್ಲಾಗುಗಳಿಗೆ ನನ್ನ ಭೇಟಿ ಆಲ್ಮೋಸ್ಟ್ ನಿಂತುಹೋಗಿದೆ. ಬಜ್ ನಲ್ಲಿ ಕಂಡದ್ದನ್ನಷ್ಟೇ ಓದುವ ಹಾಗಾಗಿದೆ. ಹಾಗಾಗಿ, ಬ್ಲಾಗಿಗೆ ಬಂದು ಕಮೆಂಟಿಸಲು ಸಾಧ್ಯವಾಗಿಲ್ಲ.ಇದಕ್ಕೆ ಸಹಬ್ಲಾಗಿಗರಲ್ಲಿ ಕ್ಷಮೆಯಾಚಿಸುತ್ತಿದ್ದೇನೆ.

ಆದರೂ ಈ ವರ್ಷದ ಹೈಲೈಟ್ಸ್ ಕೊಟ್ಟುಬಿಡುತ್ತೇನೆ. ಡೀಟೈಲಾಗಿ ಖಂಡಿತಾ ಏಪ್ರಿಲ್ ತಿಂಗಳಿನಿಂದ ಬ್ಲಾಗುತ್ತೇನೆ. ಫೂಲ್ ಮಾಡ್ತಿಲ್ಲ, ಪ್ರಾಮಿಸ್ ಮಾಡ್ತಿದಿನಿ. :)

೧. ಉತ್ತರಾಯಣ. ಸಕ್ಕತ್ತಾಗಿತ್ತು ಟೂರು. ಇದರ ಪ್ರತಿಯೊಂದು ಡೀಟೈಲ್ ಖಂಡಿತಾ ಬ್ಲಾಗುತ್ತೇನೆ.

೨. ಕೆಲವು ವಿಜ್ಞಾನದ ವರ್ಕ್ ಶಾಪುಗಳಿಗೆ ಹೋಗಿದ್ದೆ. ಒಳ್ಳೇ ಅನುಭವ.

೩.ಡಿಸೆಂಬರ್ ನಲ್ಲಿ ಮತ್ತೆ ಜಲೇಬಿನಾಡಿಗೆ ಮೂರುದಿನಗಳ ಪ್ರವಾಸ. ಅದರದ್ದೂ ಬ್ಲಾಗ್ ಬರಲಿದೆ, ಕಾಯಬೇಕಾಗಿ ಪ್ರಾರ್ಥನೆ.

೪. ಶನಿವಾರ ಭಾನುವಾರಗಳನ್ನೂ ಬಿಡದೆ, ರಜಾದಿನಗಳಲ್ಲಿಯೂ ಬೆಳಗಿಂದ ಸಾಯಂಕಾಲ ನಾನು ಲ್ಯಾಬ್ ವಾಸ್ತವ್ಯ ಹೂಡಿರುವುದರಿಂದ ರಿಸರ್ಚ್ ಲ್ಯಾಬಿನಿಂದ ನನ್ನನ್ನು ಓಡಿಸಲು ಉತ್ಸುಕನಾಗಿದ್ದಾನೆ ನಮ್ಮ ಲ್ಯಾಬಿನ ವಾಚ್ಮಾನ್ !

೫.ಅಡುಗೆ ಮನೆಗೆ ಹೋಗದೆ, ಅಡುಗೆ ಮಾಡದೇ, ಅಮ್ಮನ ಹತ್ತಿರ 2010 ರಲ್ಲಿ ಸರಿಸುಮಾರು ಒಂದು ಲಕ್ಷ ಸರ್ತಿ ಬೈಸಿಕೊಂಡಿದ್ದೇನೆ. ಮನೆಯ ಕೆಲಸಗಳ ಕಡೆಗೆ ಗಮನ ಕೊಡದಿರುವ,ಮತ್ತು ಸದಾ ಕಾಲ ಮಹಾಕಾವ್ಯ ರಚನೆಯಲ್ಲಿ ತಲ್ಲೀನಳಾಗಿ ಮಿಕ್ಕೆಲ್ಲದ್ದಕ್ಕೆ ವಿದಾಯ ಹೇಳಿರುವ ಕಾರಣ ಅಮ್ಮ ನನ್ನನ್ನು ಮನೆಯಿಂದ ಓಡಿಸಲು ಹವಣಿಸುತ್ತಿದ್ದಾರೆ. ;)

೬.ಸುಶ್ರುತನ ಕೈಲಿ ಮಾಡಿಸಿದ ಕ್ಯಾರಟ್ ಸಾರಿನ experiment work  ಆಗಿದೆ.

೫.Anchor stich kit. ಏನ್ ಚೆನ್ನಾಗಿದೆ ಗೊತ್ತಾ ಅದು ! ಒಂದು ಕಿಟ್ಟಲ್ಲಿ ಎರಡು ಟ್ವೀಟಿ ಮರಿಗಳಿರುವ ಚಿತ್ರವನ್ನು cross stich ನಲ್ಲಿ ಹಾಕಿ, ಅದನ್ನ ಫ್ರೇಮ್ ಮಾಡಿಸಿದೆ. ಅದೇ ಜೋಷಿನಲ್ಲಿ, ಈಗ ಜಿಂಕೆ ಮರಿಯನ್ನು stich ಮಾಡುತ್ತಿದ್ದೇನೆ. ಮಜಾ ಬರ್ತಿದೆ :)

೬.ಪಾನಿ ಪುರಿ ಮತ್ತು ಐಸ್ ಕ್ರೀಮ್ ನ  ಸ್ನೇಹಿತರೊಟ್ಟಿಗೆ ಹಿಂದಿನಂತೆ ನಿಧಾನಕ್ಕೆ ಚಪ್ಪರಿಸಿಕೊಂಡು ತಿನ್ನಕ್ಕೆ ಆಗಿಲ್ಲ :(  ಜಯನಗರದಂತಹಾ ಜಯನಗಕ್ಕೆ ಪ್ರತಿದಿನ ಹೋದರೂ ಪಾನಿಪುರಿ ತಿನ್ನಲಾಗದ ನನ್ನ ದೌರ್ಭಾಗ್ಯವನ್ನು ವರ್ಣಿಸಲು ಪದಗಳಿಲ್ಲ.ಮೈಯಾಸ್ ಗೆ ಮಾತ್ರ ವಿಸಿಟ್ಟು ಕೊಡುತ್ತಿದ್ದೇನೆ ಅಷ್ಟೇ.

೭.ಹೊಸ ಫೋನ್. ನಮ್ಮಪ್ಪ ಗಿಫ್ಟ್ ಮಾಡಿದ್ರು ನನ್ನ ಹುಟ್ಟುಹಬ್ಬಕ್ಕೆ. Nokia X6. ಫೋನ್ ಸಕತ್ತಾಗಿದೆ.ಆದರೆ ಅದಕ್ಕೆ ಒಗ್ಗಲು ನನಗಿನ್ನೂ ಸಮಯ ಬೇಕಾಗಿದೆ. ಸಿಕ್ಕಾಪಟ್ಟೆ ಯೋಚನೆ ಮಾಡಿ, ಫೋನಿಗೆ ಪ್ರಿಯಂವದಾ ಅಂತ ನಾಮಕರಣ ಮಾಡಿದೆ. ಹಿರಣ್ಮಯಿಯನ್ನು ನನ್ನ ತಂಗಿಗೆ ಹಸ್ತಾಂತರಿಸಿದೆ.

ಇಷ್ಟು ೨೦೧೦ ಮುಖ್ಯಾಂಶಗಳು. ಈ ವರ್ಷ ಎಮ್.ಫಿಲ್ ಮುಗಿಯತ್ತೆ. ವಟವಟಕ್ಕೆ, ಗುಸುಗುಸುವಿಗೆ ನನ್ನ ಸಮಯ ಮಿಸಲಿರತ್ತೆ.2011  ಬಗ್ಗೆ ಸಿಕ್ಕಾಪಟ್ಟೆ ಆಸೆ, ಭರವಸೆ ಇಟ್ಟುಕೊಂಡಿದ್ದೇನೆ. ನೀವು ಇಟ್ಕೊಂಡಿರ್ತಿರ. ಇಟ್ಕೊಂಡಿಲ್ಲಾಂದ್ರೆ ಇಟ್ಕೊಳ್ಳಕ್ಕೆ ಶುರು ಮಾಡಿ. ನಮ್ಮ ನಿಮ್ಮೆಲ್ಲರ ಜೀವನದ ಎಲ್ಲ ಆಸೆಗಳು ಈಡೇರಲಿ, ಭರವಸೆ ಬತ್ತದಿರಲಿ ಅಂತ ಆಶಿಸುತ್ತೇನೆ .Wish you all a very happy 2011!

Wednesday, December 15, 2010

ಪ್ರಣತಿಯಿಂದ ಪ್ರಬಂಧ ಸ್ಪರ್ಧೆ

ಪ್ರಬಂಧ ಸ್ಪರ್ಧೆ

ಸಾಹಿತ್ಯ, ಸಂಸ್ಕೃತಿ, ಪ್ರಕೃತಿ -ಅಂಶಗಳನ್ನು ಧ್ಯೇಯವಾಗಿಸಿಕೊಂಡಿರುವ ಸಂಸ್ಥೆ ‘ಪ್ರಣತಿ’, ಕಾಲೇಜು ವಿದ್ಯಾರ್ಥಿಗಳಿಗಾಗಿ ಪ್ರಬಂಧ ಸ್ಪರ್ಧೆ ಏರ್ಪಡಿಸಿದೆ. ವಿದ್ಯಾರ್ಥಿಗಳು ‘ಪ್ರಕೃತಿ ನಿಯಮ ಮತ್ತು ಮನುಷ್ಯ ಜೀವನ’ ಎಂಬ ವಿಷಯದ ಮೇಲೆ ೨೦೦೦ ಪದಗಳಿಗೆ ಮೀರದಂತೆ ಪ್ರಬಂಧವನ್ನು ಸ್ಫುಟವಾದ ಕೈಬರಹದಲ್ಲಿ ಅಥವಾ ಡಿ.ಟಿ.ಪಿ. ಮಾಡಿ ಕಳುಹಿಸಬಹುದು. ಪ್ರಬಂಧದ ಜೊತೆ ನಿಮ್ಮ ಕಾಲೇಜ್ ಐಡೆಂಟಿಟಿ ಕಾರ್ಡ್‌ನ ಪ್ರತಿ ಇರಿಸುವುದು ಕಡ್ಡಾಯ. ಸಂಪಾದಕ ಮಂಡಲಿ ಮತ್ತು ವಿಷಯ ತಜ್ಞರು ಆಯ್ದ ಪ್ರಬಂಧಕ್ಕೆ ಸೂಕ್ತ ಬಹುಮಾನ ನೀಡಲಾಗುತ್ತದೆ. ಪ್ರಬಂಧವನ್ನು ಈ ವಿಳಾಸಕ್ಕೆ ಕಳುಹಿಸಬಹುದು ಅಥವಾ ಇ-ಮೇಲ್ ಮಾಡಬಹುದು. ಕೊನೆಯ ದಿನಾಂಕ: ೩೦ ಡಿಸೆಂಬರ್ ೨೦೧೦. ವಿಳಾಸ: ಪ್ರಣತಿ, ನಂ. ೪೪೮/ಎ, ೮ನೇ ಮೇನ್, ೭ನೇ ಕ್ರಾಸ್, ತ.ರಾ.ಸು. ರಸ್ತೆ, ಹನುಮಂತನಗರ, ಬೆಂಗಳೂರು - ೫೬೦ ೦೧೯. ಇ-ಮೇಲ್: prabandha@pranati.in. ಯಾವುದೇ ಮಾಹಿತಿಗೆ: ೯೬೧೧೪೫೮೬೯೮ / ೯೯೮೦೦೨೨೫೪೮

Friday, November 5, 2010

ಉತ್ತರಾಯಣ - ೨

ನಾನು : ಟ್ರೈನ್ ಇಂದ ಕೆಲಗಿಳಿದ ಮೇಲೆ ನಮಗೆ ನಾವು ಹೋಗಿದ್ದ ಟ್ರಾವೆಲ್ಸ್ ಆದ ಹನ್ಸಾ ಟ್ರಾವೆಲ್ಸ್ ಮ್ಯಾನೇಜರ್ ವೆಂಕಟೇಶ್ ಅವರು ಕಾಣಿಸಿಕೊಂಡರು.

Z : ಬೆಂಗಳೂರಿನಿಂದ ನಿಮ್ಮೊಟ್ಟಿಗೆ ಯಾರೂ ಬರಲಿಲ್ಲವಾ ?

ನಾನು : ಇಲ್ಲ.

Z : ಟ್ರಾವೆಲ್ಸ್ ಅಂದ ಮೇಲೆ ಹೊರಡುವಾಗಿನಿಂದಲೇ ಜವಾಬ್ದಾರಿ ತೆಗೆದುಕೊಳ್ಳಬೇಕಲ್ಲವಾ ?

ನಾನು : ಹೌದು.ಆದರೆ ಇವರದ್ದು ಸ್ವಲ್ಪ ಡಿಫರೆಂಟ್ ಸ್ಟೈಲ್. ಅವರು ನಮಗಿಂತ ಒಂದು ದಿನ ಮುಂಚೆ ಆಗ್ರಾ ತಲುಪಿ, ಅಲ್ಲಿ ಮುಂದಿನ ಪ್ರಯಾಣಕ್ಕೆ ವ್ಯವಸ್ಥೆ ಮಾಡಿ ನಮಗಾಗಿ ಕಾಯುತ್ತಿದ್ದರು.

Z : ಸೀ. ಏನು ವ್ಯವಸ್ಥೆ ಮಾಡಿದ್ದರು ?

ನಾನು : ಬಂದೆ, ಅದನ್ನೇ ಹೇಳಕ್ಕೆ ಬರ್ತಿದಿನಿ.ಬೆಂಗಳೂರು ಬಿಡುವ ಮುಂಚೆ ಹನ್ಸಾ ಟ್ರಾವಲ್ಸ್ ನವರು ಒಂದು ಮೀಟಿಂಗ್ ಕರೆದಿದ್ದರು. ಅಲ್ಲಿ ಎಲ್ಲರೂ ಆಗ್ರ ಇಂದ ನಮ್ಮ ಪ್ರಯಾಣ ಮುಂದುವರೆಸಲು ಏಸಿ ಇರುವ ಬಸ್ ಮಾಡಿಸಿ, ದುಡ್ಡು ಹೆಚ್ಚು ಬೇಕಿದ್ದರೆ ಎಲ್ಲರೂ ಅಲ್ಲಿಯೇ ಕೊಡುತ್ತೇವೆ ಎಂದು ಹೇಳಿದ್ದರು. ಟ್ರಾವೆಲ್ಸ್ ನವರೂ ಹೂಂಗುಟ್ಟಿದ್ದರು.ಆದರೆ ಆಗ್ರಾದಲ್ಲಿ ಇಳಿದ ತಕ್ಷಣ ಎಲ್ಲಾ ಉಲ್ಟಾಪಲ್ಟಾ. ಮ್ಯಾನೇಜರ್ ವೆಂಕಟೇಶ್ ಅವರು "ಏಸಿ ಬಸ್ಸು ಮಾಡಿಸಬೇಕು ಅಂತ ನಮಗೆ ಬೆಂಗಳೂರಿನವರು ಹೇಳೇ ಇರಲಿಲ್ಲ. ಈಗ ಏಸಿ ಬಸ್ಸು ಮಾಡಿಸಲಾಗುವುದಿಲ್ಲ. ಆದ್ದರಿಂದ ನಾವು ಮಾಡಿಸಿರುವ ಬಸ್ಸಿಗೆ ಬಂದು ಕುಳಿತುಕೊಳ್ಳಿ. ಈಗ ಹೇಗೆ ಬೇಕಾದರೂ ಕುಳಿತುಕೊಳ್ಳಿ, ಹೋಟೆಲ್ ಗೆ ಹೋಗಿ ಮೊದಲು ತಿಂಡಿ ತಿಂದು ನೀವು ಎಲ್ಲರೂ ವಿಶ್ರಾಂತಿ ತೆಗೆದುಕೊಳ್ಳಿ.ಆಮೇಲೆ ಸೀಟ್ ನಂಬರ್ ಅನ್ನು ಕೊಡಲಾಗುತ್ತದೆ, ಎಲ್ಲರೂ ಕಡ್ಡಾಯವಾಗಿ ಅದರಲ್ಲಿಯೇ ಕೂರತಕ್ಕದ್ದು." ಎಂದರು.ನಮಗೆ ಅವರು ಮಾತನ್ನು ಹೇಳಿದ ಶೈಲಿ ಯಾಕೋ ಸರಿಬರಲಿಲ್ಲ. ಒಬ್ಬ ಮ್ಯಾನೇಜರ್ ಗೆ ಇರಬೇಕಾದ ಸಹಜ managerial skills ,effective communication ಇರಲಿಲ್ಲ. ಧ್ವನಿಯಲ್ಲಿ ಉಡಾಫೆ ಮತ್ತು ಅಲ್ಲಲ್ಲಿ ಧೋರಣೆ ಕಾಣುತ್ತಿತ್ತು. ಇವರ ಮಾತನ್ನು ಕೇಳಿ ನಾನು ಅಣ್ಣ ಇಬ್ಬರು ಹುಬ್ಬು ಗಂಟಿಕ್ಕಿದೆವು.ಅಮ್ಮ," ನೋಡೋಣ ಮುಂದೆ, ಬಂದಿಳಿದ ತಕ್ಷಣ ಏನೂ ಮಾತಾಡೋದು ಬೇಡ . ಹೋಟೆಲ್ ನಲ್ಲಿ ವ್ಯವಸ್ಥೆ ನೋಡಿ ನಂತರ ಮಾತಾಡೋಣ" ಅಂದರು. ನಾವು ಸೂಟ್ಕೇಸ್ ಗಳನ್ನ ತಳ್ಳುವ ಗಾಡಿಗೆ ಹಾಕಿಸುವ ಕಡೆ ಗಮನ ಹರಿಸಿದೆವು. ಕೂಲಿಯವರು ಆಗಲೇ ತಮ್ಮ ಬುದ್ಧಿ ತೋರಿಸಲು ಶುರುಮಾಡಿದರು. ಏಳುನೂರು ರುಪಾಯಿಗಳಿಂದ ನಾನೂರು ರುಪಾಯಿಗೆ ದರವನ್ನು ಇಳಿಸಿ, ನಾಲ್ಕು ಪರಿವಾರಗಳ ಲಗೇಜನ್ನು ಹೊರಿಸಿಕೊಂಡು ಬಸ್ಸಿನಲ್ಲಿ ತುಂಬಿಸಿದ್ದಾಯ್ತು.ಬಸ್ ನಲ್ಲಿ ಕುಳಿತುಕೊಳ್ಳುವಷ್ಟರಲ್ಲಿ ಆಗಲೇ ಎಲ್ಲರಿಗೂ ಬೆವರಿಳಿಯುತ್ತಿತ್ತು. ಅಲ್ಲಿನ ಬೆಳಿಗ್ಗೆ ಏಳುವರೆಯ ಬಿಸಿಲು, ಬೆಂಗಳೂರಿನ ಬೇಸಿಗೆಗಾಲದ ಮಧ್ಯಾಹ್ನ ಹನ್ನೆರಡುಘಂಟೆಯ ಬಿಸಿಲಿಗೆ ಸಮ.

Z :  ಐಸೀ.

ನಾನು : ಹು. ಬಸ್ ನಿಂದ ಆಗ್ರಾ ನಗರಿ ಬಹಳ ಚೆಂದ ಕಾಣ್ತಿತ್ತು. ಅಲ್ಲಿನ ಗಾಳಿಗೆ ಒಂಥರಾ ಗಾಂಭೀರ್ಯ. ಮೊಘಲರ ಗಾಂಭೀರ್ಯ ಅಂತ ಇಟ್ಕೊ.

Z : ಒಹ್ಹೋ...

ನಾನು : ನಾವು ಹೋಟೆಲ್ ತಲುಪಿದಾಗ ಒಂಭತ್ತುವರೆ. ನಮ್ಮ ರೂಂ ಗಳೆಲ್ಲ ಅಲ್ಲಾಟ್ ಆಗುವ ಹೊತ್ತಿಗೆ ಹತ್ತು ಕಾಲು.ನಾನು ಆಗಲೇ ನನ್ನ ಕೆಲ್ಸ ಶುರು ಹಚ್ಕೊಂಡಿದ್ದೆ.

Z :  ಏನ್ ಮಾಡಿದೆ ?

ನಾನು : ನಮ್ಮ ರೂಮಿದ್ದಿದ್ದು ಟಾಪ್ ಮೋಸ್ಟ್ ಫ್ಲೋರ್ನಲ್ಲಿ. ಅಲ್ಲಿಂದ ನಾನು ಸುತ್ತಮುತ್ತಲಿನ ಫೋಟೋಸ್ ತೆಗೆಯಕ್ಕೆ ಶುರು ಮಾಡಿದೆ.

Z : ಶೆಟ್ಟಿ ಬಿಟ್ಟಲ್ಲೇ ಪೊಟ್ಟಣ ಕಟ್ಟಕ್ಕೆ ಶುರು ಮಾಡ್ತಾನೆ ಅಂತ ಗಾದೆ.


ನಾನು : ಹು. ಹಂಗೇನೆ. ನೋಡು ಒಂದೆರಡು ಸ್ಯಾಂಪಲ್ ಗೆ.


ಆಗ್ರಾದಲ್ಲಿ ನಮ್ಮ ಹೋಟೆಲ್ ಇದ್ದ ರಸ್ತೆ.


ನಮ್ಮ ಫ್ಲೋರ್ ನಿಂದ ತಾಜ್ ಕಂಡದ್ದು ಹೀಗೆ :)

Z :  ಹಾ..............

ನಾನು : ಸಾಕು. ಅಷ್ಟೋಂದ್ ಜೋರಾಗಿ ಬಾಯ್ಬಿಡ್ಬೇಡ. ನಿನಗೆ ಇನ್ನೊಂದ್ ಫೋಟೋ ತೋರ್ಸ್ಬೇಕು.

Z :  yes please.


Z : ಒಹ್ಹೊಹೊಹೊಹೊಹೊ.....

ನಾನು : ನಾವಿದ್ದ ರೂಮಿನ ಕಿಟಕಿಯ ಪಕ್ಕದಲ್ಲಿ ಇವು ವಾಸ್ತವ್ಯ ಹೂಡಿದ್ದವು.ನಮ್ಮ ನಿದ್ದೆ ಹೋದಂಗೆ ಅಂತ ನಾನು ಅಪರ್ಣ ನಿಟ್ಟುಸಿರಿಟ್ಟೆವು.ಅಮ್ಮನ ರೂಮಿಗೆ ಬಂದು ಇರೋ ವಿಷಯ ಹೇಳಿದೆವು. ಅದಕ್ಕೆ ಅಮ್ಮ, "ನಿಮ್ಮ ಥರಾನೆ ಅಲ್ವಾ ಅವು, ಈಗ್ಲಾದ್ರು ಗೊತ್ತಾಗ್ಲಿ ಎಂಥವ್ರು ನೀವು ಅಂತ..." ಅಂತ ಅಂದು ನಮ್ಮ ಹೊಟ್ಟೆ ಉರಿಸಿದರು.

Z : ಎಷ್ಟೇ ಆಗಲಿ....

ನಾನು : ನೀನು ಅಮ್ಮನ ತರಹ ಆಡ್ಬೇಡ. ಅಮ್ಮನೂ ಇದೇ ಡೈಲಾಗ್ ಹೊಡೆದಿದ್ದರು.

Z : :) :) :)

ನಾನು : ರೂಮಲ್ಲಿ ಸೆಟಲ್ ಆಗುವ ಹೊತ್ತಿಗೆ ಟ್ರಾವೆಲ್ಸ್ ನವರು ನಮ್ಮನ್ನ ತಿಂಡಿಗೆ ಕರೆದರು. ನಾನು ಅಪರ್ಣ ಕಿಟಕಿ ತೆಗೆಯಲಾಗುವುದಿಲ್ಲ ಎಂದು ಕೈ ಕೈ ಹಿಸುಕಿಕೊಳ್ಳುತ್ತಿದ್ದೆವು. ಪುಣ್ಯಕ್ಕೆ, ಇವಕ್ಕೆ ನಮ್ಮ ಕಷ್ಟ ತಿಳಿದು, ನೀಟಾಗಿ ಪಕ್ಕದ ಬಿಲ್ಡಿಂಗ್ ಗೆ ಹಾರಿದವು. ನಾವು ನೆಮ್ಮದಿಯಾಗಿ ಕಿಟಕಿ ತೆಗೆದಿಟ್ಟು ತಿಂಡಿ ದಿನ್ನಲು ಹೋದೆವು.

ತಿಂಡಿ ತಿನ್ನೋವಾಗ ನಂಗೆ ಕೆಲವು ವಿಷಯಗಳು ಜ್ಞಾನೋದಯವಾದ್ವು.

Z : ತಿಂಡಿ ಏನು ಅನ್ನೋದನ್ನ ಹೇಳು ಮೊದ್ಲು.

ನಾನು :  ಇಡ್ಲಿ, ಚಟ್ನಿ, ಉಪ್ಪಿಟ್ಟು, ಕೇಸರಿಬಾತು.

Z : ಲಗಾಯ್ಸಿದ್ಯಾ ?

ನಾನು : ಅಷ್ಟೋಂದ್ ಏನು ತಿನ್ನಲಿಲ್ಲ.

Z : ನ್ಯಾನೋಗ್ರಾಮ್ಸ್ ?

ನಾನು : ಅದಕ್ಕಿಂತ ಜಾಸ್ತಿ.

Z : ಮತ್ತೆ ?

ನಾನು : ಗ್ರಾಮ್ಸ್.

Z : ಗ್ರಾಮ್ಸ್ ಲೆವೆಲ್ಲಲ್ಲಿ ಊಟ ಮಾಡಿದ್ದಕ್ಕೆ ಏನೆಲ್ಲಾ ಜ್ಞಾನೋದಯ ಆಯ್ತು ಅಂತ ?

ನಾನು :  ಆಗ್ರ ಇಂದ ಫತೇಹ್ ಪುರ ಸಿಕ್ರಿ ಅರ್ಧ ಘಂಟೆಯ ಪ್ರಯಾಣ. ಹೇಗೂ ಮಥುರೆಗೆ ಒಂದುವರೆ ಘಂಟೆಗೆ ಬಿಡುವುದೆಂದು ವೆಂಕಟೇಶರವರು ಅಪ್ಪಣೆ ಕೊಡಿಸಿದರು. ನಾವೇ ಕಾರು ಮಾಡೀಕೊಂಡು ಹೋಗಿ ಬಂದುಬಿಡಬಹುದಲ್ಲಾ ಅಂತ ಜ್ಞಾನೋದಯವಾಯ್ತು.

Z :  ಏನಿದು ಫತೇಹ್ ಪುರ್ ಸಿಕ್ರಿ ?

ನಾನು : ಅದು ಬಾದ್ ಶಾಹ್ ಅಕ್ಬರನು ಕಟ್ಟಿಸಿದ ಮೊದಲ ಕೋಟೆ. ಅವನು ಜೈತ್ರಯಾತ್ರೆಯಲ್ಲೆಲ್ಲ ವಿಜಯಶಾಲಿಯಾದ ಮೇಲೆ ಕಟ್ಟಿಸಿದ್ದು. ಉರ್ದು ಅಲ್ಲಿ ಫತೇಹ್ ಅಂದರೆ " to conquer " ಅಂತ. ಅವನು ಭಾರತವನ್ನೆಲ್ಲ ಗೆದ್ದಮೇಲೆ ಕಟ್ಟಿಸಿದ ಕೋಟೆಯದು. ತನ್ನ ಸಾಮ್ರಾಜ್ಯ ಬುಲಂದ್ (ಸದೃಢ)ವಾಗಿರಲೆಂದು, ಅಲ್ಲಿನ ಮಸೀದಿಯ ಬಾಗಿಲಿಗೆ "ಬುಲಂದ್ ದರ್ವಾಜಾ" ಎಂದು ಹೆಸರಿಟ್ಟ.

ಸಲೀಮ..

Z : ಅದೇ ಅನಾರ್ಕಲಿ ಸಲೀಮ !

ನಾನು : ಹಾಂ...ಅದೇ ಸಲೀಮ. ಅವನು ಹುಟ್ಟಿದ್ದು ಇಲ್ಲಿಯೇ.

Z : ನನಗೊಂದು ಡೌಟು.

ನಾನು : ಕೇಳುವಂಥವಳಾಗು ಬಾಲೆ !

Z : ಮೊಘಲರ ರಾಜಧಾನಿ ಆಗ್ರಾ ಅಲ್ವ ? ದೇಕೆ ಅಕ್ಬರ್ ಫತೇಪುರ್ ಸಿಕ್ರಿ ಕಟ್ಟಿಸಿದ ?

ನಾನು : ಏನಿಷ್ಟೆಲ್ಲಾ ತಿಳ್ಕೊಂಡಿದ್ಯಾ ?

Z : ನಾವು ನಾಲ್ಕಕ್ಸರ ಓದಿದೀವಿ ಅಮ್ಮಾವ್ರೆ...

ನಾನು : Oh yes, I know :) ಒಳ್ಳೆ ಪ್ರಶ್ನೆ. ಕೇಳು, ಕಥೇನ. ಅಕ್ಬರನಿಗೆ ಮೊದಲು ಅವಳಿ ಮಕ್ಕಳು ಜನಿಸಿದವು. ಆದರೆ ಅವು ತೀರಿಕೊಂಡವು ಮಕ್ಕಳಾಗಲಿಲ್ಲ. naturally, ಅಕ್ಬರನಿಗೆ ಸಖತ್ ಬೇಜಾರ್ ಆಯ್ತು. ದೇವರು, ದಿಂಡರುಗಳ ಪಾದಕ್ಕೆ ಎರಗಿದ. ಆಗ, ಆಗ್ರಾದಿಂದ ಸ್ವಲ್ಪ ದೂರ ಸಿಕ್ರಿ ಎಂಬ ಊರಿನಲ್ಲಿ ಸಲೀಮ ಎಂಬ ಸನ್ಯಾಸಿಯೊಬ್ಬನು ವಾಸಿಸುತ್ತಾನೆ. ಅವನು ಹೇಳಿದ್ದೆಲ್ಲಾ ನಿಜ ಆಗತ್ತೆ, ಸಿಕ್ಕಾಪಟ್ಟೆ ಜನರ ದುಃಖನೆಲ್ಲಾ ಚಿಟ್ಪಟ್ ಅಂತ ನಿವಾರಿಸಿಬಿಟ್ಟಿದ್ದಾನೆ ಅಂತೆಲ್ಲಾ ಒಂದಿಷ್ಟು ಜನ ಅಕ್ಬರನಿಗೆ ಹೇಳಿದರು. ಅದಕ್ಕೆ ಅಕ್ಬರು ಸಲೀಮರ ಬಳಿ ಹೊರಟ.

Z : ಮಾರ್ಚ್ ಪಾಸ್ಟಾ ?

ನಾನು : ಹು, by the left, quick march !

Z : ಆಮೇಲೆ ?


ನಾನು : ಸಲೀಮರು, ಅಕ್ಬರ ಆಗ್ರಾ ಬಿಟ್ಟು, ಇಲ್ಲಿ ಸಿಕ್ರಿಯಲ್ಲಿ ಕೋಟೆ ಕಟ್ಟಿಸಿ ರಾಜನು ಇರಬೇಕೆಂದು ಹೇಳಿದರು. ಆಗ ಅವನ ಪರಿವಾರ ಇಲ್ಲಿ ಶಿಫ್ಟ್ ಆಯ್ತು. ಆಗ ಕಟ್ಟಿಸಿದ ಕೋಟೆಯೇ ಈ ಫತೇಹ್ಪುರ್ ಸಿಕ್ರಿ.

Z : packers and movers ಗೆ  contract ಕೊಟ್ಟಿದ್ನಂತಾ ಅಕ್ಬರ್ರು ? ಪುಳಕ್ ಅಂತ ರಾಜಧಾನಿನೆ ಎತ್ತಂಗಡಿ ಮಾಡಿಸ್ಬಿಟ್ನಲ್ಲಾ ? 

 ನಾನು : ಇಲ್ಲಮ್ಮಾ...ಜನ ಪಾಪ ತಮ್ಮ ಮನೆ ಬಿಟ್ಟು,  ಹಸು ಕರುಗಳನ್ನ ಹೊಡೆದುಕೊಂಡು ನಡ್ಕೋಂಡ್ ಹೋಗಿರ್ತಾರೆ. ಇವ್ರು ಆನೆ, ಕುದುರೆ ಅಂಥಿಂಥವುಗಳಲ್ಲಿ ಹೋಗಿರ್ತಾರೆ.

Z : ಏನ್ ಸೆಖೆ ಅಲ್ವಾ ಆ ಜಾಗ ಎಲ್ಲ ?  ನಡೆಯೋಕೆ ಎಷ್ಟ್ ಕಷ್ಟ. ವೋಲ್ವೋ ಬಸ್ಸಿರ್ಬೇಕಿತ್ತು ನೋಡು...ನೆಮ್ಮದಿಯಾಗಿ ಹೋಗ್ಬಹುದಿತ್ತು.

ನಾನು : ನಾವು ರಾಜ್ಯ ಸಂಸ್ಥಾಪನೆ ಮಾಡಿ ಆಳ್ತಿವಲ್ಲಾ, ಯಾವ್ದಾದ್ರು ಒಂದು ಜನ್ಮದಲ್ಲಿ..ಆಗ ನಮ್ಮ ರಾಜ್ಯದಲ್ಲಿ ಇಡ್ಸ್ಕೊಳ್ಳೋಣಂತೆ. ಇದು ಅಕ್ಬರನ ರಾಜ್ಯ ಅಲ್ವಾ ? ಅವನೇನ್ ಬೇಕಾದ್ರು ಮಾಡ್ಕೊಳ್ಳಲಿ.ಬಿಡು. Let us not interfere.

Z : yes yes. ಅದಿರ್ಲಿ, ಇದಕ್ಕೆ ಫತೇಹ್ ಪುರ್ ಎಂದು ಕರೆಯಲು ಕಾರಣ ಏನಿರ್ಬಹುದು ?

ನಾನು :ಅಕ್ಬರ ಸಿಕ್ಕಾಪಟ್ಟೆ ರಾಜ್ಯಗಳನ್ನೆಲ್ಲಾ ಗೆದ್ದಿದ್ದನಲ್ಲಮ್ಮಾ,, ಆ ಸಂತೋಷಕ್ಕೆ ಆ ಹೆಸರಿಟ್ಟಿರಬಹುದು. ಅಲ್ಲಿ ಕೋಟೆ ಕಟ್ಟಿಸಿದ,ರಾಜಧಾನಿಯನ್ನ ಅಲ್ಲಿಗೆ ವರ್ಗಾಯಿಸಿದ. ಅಲ್ಲಿ ಅಕ್ಬರನಿಗೆ ಮೊದಲನೇ ಮಗ ಹುಟ್ಟಿದ. ಅದಕ್ಕೆ ಅಕ್ಬರ ಸಲೀಮ ಅಂತಲೇ ಹೆಸರಿಟ್ಟ. ಆಮೇಲೆ ಸಲೀಮ ಅದನ್ನ ಜಹಂಗೀರ್ ಅಂತ ಬದಲಾಯ್ಸಿಕೊಂಡ.

Z : Without an affidavit ?!

ನಾನು :ನಾನು ಹೇಳಿದೆನಲ್ಲಾ...This was the time of Akbar's reign ಅಂತ ? 

Z : ಓಕೆ ಓಕೆ. 

ನಾನು : ಸಲೀಮ ಹುಟ್ಟಿ ಎರಡು ಮೂರು ವರ್ಷಕ್ಕೆ ಸಿಕ್ರಿಯಲ್ಲಿ ನೀರಿನ ಅಭಾವ ಹೆಚ್ಚಾಗಿ, ಅಕ್ಬರ ಮತ್ತೆ ತನ್ನ ರಾಜಧಾನಿಯನ್ನು ಯಮುನಾ ನದಿಯ ದಂಡೆಯ ಮೇಲಿದ್ದ ಆಗ್ರಾವೇ ಎಂದೆಂದಿಗೂ ಎಂದು ಘೋಷಿಸಿ, ರಾಜಧಾನಿಯನ್ನು ಎತ್ತಂಗಡಿ ಮಾಡಿದ. ಅಂದಿನಿಂದ ಸಿಕ್ರಿ ನಿರ್ಜನವಾಗಿ "ghost city" ಎಂದು ಪ್ರಸಿದ್ಧವಾಯ್ತು. 

Z : ಮನೆ ಮಠ ?

ನಾನು :ಎಲ್ಲ ಶಿಫ್ಟ್.

Z : ಆಗೇನಾದ್ರು ಎಲ್. ಐ. ಸಿ, ಕೆ. ಈ. ಬಿ, ಬಿ.ಡಬ್ಲ್ಯೂ.ಎಸ್.ಎಸ್.ಬಿ ಎಲ್ಲಾ ಇದ್ದಿದ್ದ್ರೆ, address change  ಮಾಡೋಕೆ ಎಷ್ಟ್ ಪರ್ದಾಡಿರ್ತಿದ್ರು ಜನ !

ನಾನು :ಪುಣ್ಯ, ಅವೆಲ್ಲ ಇರ್ಲಿಲ್ಲ ಆಗ.

Z :  ಸೋ, ನೀನು ಫತೇಹ್ ಪುರ್ ಸಿಕ್ರಿ ಗೆ ಹೋಗುವ ಪ್ಲಾನ್ ಹಾಕ್ದೆ.

ನಾನು :ಹು. ಹೋಟೆಲ್ ನವರನ್ನ ಕೇಳ್ದೆ.ಅವರು ಕಾರಿನ ವ್ಯವಸ್ಥೆ ಮಾಡಿಕೊಡ್ತಿವಿ ಅಂತ ಹೇಳಿದ್ರು. ನಾನು ಅಣ್ಣನ ಹತ್ತಿರ permission ಕೇಳಲು ಹೋದೆ.ಅಣ್ಣ ಯೋಚಿಸತೊಡಗಿದರು.

Z : as usual.

ನಾನು :ಆದ್ರೆ ಅಮ್ಮ ಸುತರಾಮ್ ಆಗಲ್ಲ ಅಂದುಬಿಟ್ಟರು.

Z : ನೀನು ಸಿಟ್ಟು ಮಾಡ್ಕೊಂಡಿರ್ತ್ಯ.

ನಾನು :ಇನ್ನೇನ್ ಮತ್ತೆ. ಸಿಕ್ಕಿರೋ ಎರಡು ಘಂಟೆಯನ್ನು ಉಪಯುಕ್ತವಾಗಿ ಬಳಸಿಕೊಳ್ಳೋಣ ಅಂದರೆ ಇವರು ಉಸ್ಸಪ್ಪಾ ಅಂತ ಮಲ್ಕೊತಿನಿ ಅಂದ್ರೆ ಕೋಪ ಬರಲ್ವಾ ?

Z : ನೋಡು, ಟ್ರೈನ್ ನಲ್ಲಿ ನೀನು ನಿದ್ದೆ ಮಾಡಿಲ್ಲ. courtesy,  ಕಾಣದೆ ಇರೋ, ಬರ್ದೆ ಇರೋ ಕಳ್ಳ. ಅವರೂ ನಿದ್ದೆ ಮಾಡಿರಲ್ಲ. ಮುಂದಿನ ಪ್ರಯಾಣದ ಯೋಚನೆ, ಲಗೇಜ್ ತೆನ್ಷನ್ನು. ಸುಧಾರ್ಸ್ಕೊಳ್ಳೋದ್ ಬೇಡ್ವಾ ? 

ನಾನು :ಇವ್ರಿಬ್ರು ಅದನ್ನೇ ಹೇಳಿದ್ದು.ನಾನು ಬೇರೆ ದಾರಿ ಇಲ್ಲದೇ ಹು ಅಂದೆ.ಕಡೆಗೆ ನಮ್ಮನ್ನು ಬಿಟ್ಟು, ಸುಧಾ ಆಂಟಿ, ಅನಂತ್ ಅಂಕಲ್ ಮತ್ತು ಪರಿವಾರ, ಹೋಟೆಲ್ ನವರು ಮಾಡಿಕೊಟ್ಟ ಕಾರಿನಲ್ಲಿ ಹೋಗಿ ಫತೇಹ್ ಪುರ್ ಸಿಕ್ರಿ ನೋಡ್ಕೊಂಡ್ ಬಂದ್ರು. ದೀಪು ಸಂಪದ್ಭರಿತವಾಗಿ ಫೋಟೋಸ್ ತೆಕ್ಕೊಂಡ್ ಬಂದ.

Z : ಆಗ ತಾವು ಇಲ್ಲಿ ಕೂತ್ಕೊಂಡ್ ಏನ್ ಮಾಡ್ತಿದ್ರಿ ?

ನಾನು : "Conducting polymers-Theory and Applications" ಪುಸ್ತಕ ಓದ್ತಿದ್ದೆ.

Z : ಅಪರ್ಣ ?

ನಾನು : ಮಿಕ್ಕಿದ್ದವರೆಲ್ಲರೂ ಸಾಂಗವಾಗಿ ತಾಚ್ಕೊಂಡಿದ್ರು.

Z : ಏನು ಡೆಡಿಕೇಷನ್ನು ಏನ್ ಕಥೆ...

ನಾನು : ಅಲ್ವಾ ? 

Z : ನೀನು ಫತೇಹ್ ಪುರ್ ಸಿಕ್ರಿ ಗೆ ಹೋಗದೇ ಇದ್ದಿದ್ದು ಒಂಥರಾ ಒಳ್ಳೆದೇ ಆಯ್ತು. 

ನಾನು : ಯಾಕೆ ?

Z : ಅಲ್ಲಿ ನೀನು ಅನಾರ್ಕಲಿ ಗೋರಿಯನ್ನ ನೋಡೋದು, ನಿನ್ನ ಮಹಾನ್ ಚತ್ರಿ ತಲೆ ಉಪಯೋಗಿಸಿ ಗೋರಿಯ ಒಂದೇ ಒಂದು ಕಲ್ಲು ಅಲ್ಲಾಡಿಸಿ,ಈಚೆತೆಗದು, ಊಊಊಊದ್ದ ಕೋಲಲ್ಲಿ  ಅನಾರ್ಕಲಿಯನ್ನ ತಿವಿದು ಅವಳನ್ನ ಗೋರಿಯಿಂದ ಎಚ್ಚರಿಸೋದು, ಇಂಟರ್ವ್ಯೂ ತಗೊಳ್ಳೋದು, ಹೀಗೂ ಉಂಟೆ ಸ್ಟೈಲಲ್ಲಿ ಅದನ್ನ ರೆಕಾರ‍್ಡ್ ಮಾಡ್ಕೊಳ್ಳೋದು, ಪಾಪ,  ಅವಳು ತನ್ ಸ್ಥಿತಿಯನ್ನು ನೋಡ್ಕೊಂಡು ಅಳೋದು, ನಿನ್ನಲ್ಲಿ ಇರೋ ಸ್ತ್ರೀವಾದಿ ಎಚ್ಚರ ಆಗೋದು, ನೀನು ಅವಳು ಪ್ಲಕಾರ್ಡ್ ಇಟ್ಕೊಂಡು "ಡೌನ್ ಡೌನ್ ಎಂಪೆರರ್ ಅಕ್ಬರ್ !" ಅಂತ ಕಿರ್ಚ್ಕೊಳ್ಳೋದು, ಅವಳನ್ನ ಉಪವಾಸ ಇಟ್ಟು, ಜೀವಂತವಾಗಿ ಹೂಳಿದರು ಅಂತ ನೀನು ಊಟ ನಿದ್ದೆ ಬಿಡೋದು, ಅಣ್ಣ ಅಮ್ಮ ಗಾಬರಿ ಆಗೋದು, ನೀನು ಅವಳು ಮಧ್ಯರಾತ್ರಿಲಿ ಟೈಂ ಪಾಸಿಗೆ ಅಂತ "ಪ್ಯಾರ್ ಕಿಯಾ ತೋ ಡರ್ನಾ ಕ್ಯಾ" ಅಂತ ಹಾಡ್ ಹೇಳ್ಕೊಂಡ್   ಡ್ಯಾನ್ಸ್ ಮಾಡೋದು, ಮಾರನೇ ದಿನ ಪೇಪರ್ ನಲ್ಲಿ "ಭೂತಗಳ ಊರು ಫತೇಹ್ ಪುರ್ ಸಿಕ್ರಿಯಲ್ಲಿ ಎರಡು ಭೂತಗಳ ನರ್ತನ" ಅಂತ ಹೆಡ್ ಲೈನ್ಸ್ ಬರೋದು.... 

ನಾನು : FYI,  ಅನಾರ್ಕಲಿ ಗೋರಿ ಇರೋದು ಇಲ್ಲಲ್ಲ, ಪಾಕಿಸ್ತಾನದಲ್ಲಿ.

Z :  ಅಯ್ಯೋ ! 


ನಾನು : ಅದಕ್ಕೇ ಹೇಳೋದು, ಸುಮ್ನೆ ಅರ್ಧಂಭರ್ದ ತಿಳ್ಕೊಂಡು ಏನೇನೋ imagine ಮಾಡ್ಕೋಬಾರ್ದು ಅಂತ. 

Z :  :( :( :(

ನಾನು :ಕಮಿಂಗ್ ಬ್ಯಾಕ್ ಟು ಕಥೆ, ಹೋದವರೆಲ್ಲರೂ ವಾಪಸ್ ಬಂದ ಮೇಲೆ ಊಟದ ಕಾರ್ಯಕ್ರಮ ಸಾಂಗವಾಗಿ ಜರುಗಿತು. ಸಾರು ಸಕತ್ತಾಗಿತ್ತು. ಆಮೇಲೆ ಎಲ್ಲರೂ ರೆಡಿ ಆಗಿ ಬೃಂದಾವನಕ್ಕೆ ಹೊರಟ್ವಿ ಅದರ ಕಥೆ ಸಿಕ್ಕಾಪಟ್ಟೆ ಇದೆ, ಆಮೇಲೆ ಹೇಳ್ತಿನಿ :)

Z :  :)ಉತ್ತರಾಯಣ ೩

ನಾನು: ಬೃಂದಾವನಕ್ಕೆ ಹೊರಡಲು ನಾಲ್ಕು ಘಂಟೆಯಷ್ಟೊತ್ತಿಗೆ ರೆಡಿ ಇರಬೇಕು ಎಂದು ಮ್ಯಾನೇಜರ್ ವೆಂಕಟೇಶ್ ಅವರು ಹೇಳಿದ್ದರು. ಇವರೆಲ್ಲರೂ ಊಟ ಮಾಡಿ, ಮಲಗಿ, ಎದ್ದು ರೆಡಿಯಾಗು...