Thursday, July 24, 2008

ತಾಯಮ್ಮ- ೩

ನಾನು : ಹಾ....ಎಲ್ಲಿದ್ದೆ ಕಥೆ ಲಿ ?

Z : ಅದೇ...ತಾಯಮ್ಮ ಬೇರೆ ಕೆಲ್ಸದವಳನ್ನ ಕರ್ಕೊಂಡು ಬರ್ತಿನಿ ಅಂದಿದ್ದು.

ನಾನು : ಹಾ...ಯೆಸ್. ಅವರು ಹೋದ ರಾತ್ರಿ ಮಾತಾಮಣಿಯರು ಹೈ ಕಮಾಂಡ್ ಬಳಿ ತಾಯಮ್ಮನ ಪುರಾಣವನ್ನು ಎಪಿಸೋಡ್ ಬೈ ಎಪಿಸೋಡ್ ಹೇಳಿ ತಾಯಮ್ಮನಿಗೆ ದುಡ್ಡು ಕೊಡಲು ದುಡ್ಡು sanction ಮಾಡಿ ಎಂದು ಕೇಳಿದರು. ಹೈ ಕಮಾಂಡ್ ಊಟ ಮಾಡುವಾಗ ಯೋಚನೆ ಮಾಡಿ, ಬೇರೆ ಕೆಲ್ಸದವಳು ತಾಯಮ್ಮನ ಸಂಬಳಕ್ಕೆ ಕೆಲಸ ಮಾಡುವುದಾದರೆ ಇಟ್ಕೊಳ್ಳಬೇಕೆಂಡು ಆಜ್ಞೆ ಮಾಡಿತು. ನಾರಿಮಣಿಯರು ನಿರಾಕರಿಸಲಿಲ್ಲ. ತಾಯಮ್ಮನ ಐದು ಸಾವಿರ ರೆಡಿಯಾಯಿತು.

Z : oho...ಆಮೇಲೆ ?

ನಾನು : ಮಾರನೆಯ ದಿನ ತಾಯಮ್ಮನೊಂದಿಗೆ ವಯಸ್ಸಾದ ಹೆಂಗಸೊಬ್ಬಳು ಬಂದಳು. she must be in her mid 50's. ಅವಳ ಹೆಸರು ಅಲಮೇಲು ಅಂತ. ತಮಿಳಿನವಳು. ಕನ್ನಡ ಅರ್ಥ ಮಾಡಿಕೊಳ್ಳಬಲ್ಲಳು...ಆದ್ರೆ ಕನ್ನಡ ಮಾತಾಡಳು. ನಮ್ಮ ಅಮ್ಮನಿಗೆ ತಮಿಳು ಮಾತಾಡಲು ಬರದು. ಅರ್ಥ ಮಾಡಿಕೊಳ್ಳಬಲ್ಲರು. ತಾಯಮ್ಮ ಇವಳು ನಿಮ್ಮ ಮನೆಗೆ ಸರಿಯಾದವರೆಂದರು. ಅದೇ ಸಮಯಕ್ಕೆ ನಾನು ಲ್ಯಾಬ್ ಇರಲಿಲ್ಲವಾದ್ದರಿಂದ ಮನೆಗೆ ಬಂದೆ. ಅಮ್ಮನ ಕನ್ನಡ ಪ್ರಶ್ನೆ ಮತ್ತು ಅವರ ತಮಿಳಿನ ಉತ್ತರ ನಡಿಯುತ್ತಿತ್ತು. ಇಬ್ಬರು ಸರೀಗಿದ್ದಾರೆಂದು ನನಗನ್ನಿಸಿತು. ಒಳಗೇ ನಕ್ಕೆ. ಸರಿ ಬಂದ ದಿನವೇ ಇವರು ಕೆಲ್ಸ ಮಾಡಲು ಶುರು ಮಾಡಿದರು.

Z : ಸದ್ಯ...

ನಾನು : wait wait....there is more to come. ತಾಯಮ್ಮ ಆವತ್ತೇ ಅಸ್ಪತ್ರೆಗೆ ಸೇರಿದರೆಂದು ಫೋನ್ ಬಂದಿತು. ನಾವೆಲ್ಲ ಅವಳ ಕ್ಷಿಪ್ರ ಚೇತರಿಕೆಗೆ ಪ್ರಾರ್ಥನೆ ಮಾಡಿದೆವು. ಅಲಮೇಲು ನಮ್ಮ ಮನೆಯಲ್ಲಿ ಒಂದು ತಿಂಗಳು ಒಂದು ದಿನವೂ ತಪ್ಪಿಸದೇ ಬರುತ್ತಿದ್ದರು. ಆದರೆ ಅವರು ತಾಯಮ್ಮನಷ್ಟು ಚೆನ್ನಾಗಿ ಅಚ್ಚುಕಟ್ಟಾಗಿ ಕೆಲಸ ಮಾಡುತ್ತಿರಲಿಲ್ಲ. ಹೇಳಿ ಹೇಳಿ ಮಾಡಿಸಬೇಕಿತ್ತು. ವಯಸ್ಸಾದವರೆಂದು ನಾವೂ ಮೆಲ್ಲಗೇ ಹೇಳಿ ಹೇಳಿ ಮಾಡಿಸುತ್ತಿದ್ದೆವು.

ನಮ್ಮಮ್ಮ ಬೆಳಿಗ್ಗೆ ಒಂದು ದಿನ ಎಲ್ಲೋ ಹೋಗಬೇಕಿತ್ತು. ಎದುರು ಮನೆಯಲ್ಲಿ ಕೀ ಕೊಟ್ಟು ಅಲಮೇಲು ಕೈಲಿ ಪಾತ್ರೆ ತೊಳಿಸಿ, ಕಸ ನಾನೆ ಗುಡಿಸಿ ಮನೆ ಸಾರಿಸಿದ್ದೇನೆ. ಹಿತ್ತಲಲ್ಲೇ ಪಾತ್ರೆ ಇದೆ..ಪಾತ್ರೆ ತೊಳಿಸಿಬಿಡಿ ಸಾಕು ಎಂದು ಹೇಳಿ ಹೋಗಿದ್ದರು. ಎದುರು ಮನೆಯವರೂ ಹಾಗೆಯೇ ಮಾಡಿಸಿದ್ದರು. ಆದರೆ ಯಾವುದೋ ಮಾಯೆಯಲ್ಲಿ ಪಾತ್ರೆಗಳು ಕೆಲವು, ಎರಡು ಸೌಟು ನಾಪತ್ತೆಯಾಗಿದ್ದವು. ನಮಗದು ತಿಳಿದಿದ್ದು ಮೂರು ದಿನ ಆದಮೇಲೆ...ಯಾಕಂದರೆ ನಮ್ಮಮ್ಮ ಅದನ್ನ ನೋಟೀಸ್ ಮಾಡಿದ್ದೇ ಆವತ್ತು. ಅಲಮೇಲು ಅಂದಿನಿಂದ ಕೆಲಸಕ್ಕೇ ಬಂದಿರಲಿಲ್ಲ. ಅವರಿಗೆ ಅಸ್ಥಮಾ ತೊಂದರೆ ಇದ್ದಿದ್ದು ಆವತ್ತು ಹೇಳಿದ್ದರು. ಆದರೆ ನಾನು ಏನು ಮಾಡಿರೂ ತಪ್ಪಿಸುವುದಿಲ್ಲ ಎಂದು ಹೇಳಿದ್ದರು ಸಹ. ಸರಿ ನಮ್ಮಮ್ಮ ಪಾತ್ರೆ ಹೋದಮೇಲೆ ನಮಗೆ ರೆಡ್ ಅಲೆರ್ಟ್ ಕೊಟ್ಟರು..ನಮ್ಮ earrings, hangings ಎಲ್ಲಾ ಸರಿಗಿದಿಯಾ ಚೆಕ್ ಮಾಡಿಕೊಳ್ಳೀ ಅಂತ. ನಮಗೆ ಗಾಬರಿಯಾಯ್ತು. ಎಲ್ಲ ಕೂಲಂಕುಷವಾಗಿ ನೋಡಿದೆವು. ನೆಟ್ಟಗಿದ್ದವು. ಅಮ್ಮನದ್ದೂ ಸರಿಗಿದ್ದವು. ಪಾತ್ರೆ ಗಾಯಬ್ಬಾದ ದಿನದಂದೇ ನಾವು ಹುಷಾರಾದೆವು. ಎಲ್ಲ artificial ವೊಡವೆಗಳನ್ನು ಮೊದಲು mirror wardrobe ನಲ್ಲಿ ಇಡುತ್ತಿದ್ದವರು ಈಗ ತಿಜೋರಿಯಲ್ಲಿಡಲಾರಂಭಿಸಿದೆವು. ಆದರೆ, ಅಲಮೇಲು ನಾಪತ್ತೆ.

Z : sad !

ನಾನು : yes ! ತಾಯಮ್ಮನ ಮನೆ ಗೊತ್ತಿಲ್ಲ, ಆಪರೇಷನ್ ಆದ ದಿನ ಆಪರೇಷನ್ ಸಕ್ಸೆಸ್ಸ್ ಅಂತ ಫೋನ್ ಮಾಡಿದ್ದ ಅವರ ಮಗ. ಊರಿಗೆ ಹೊರಟರೇನೋ...ಏನೂ ಗೊತ್ತಿಲ್ಲ. ಬೇರೆ ಕೆಲಸದವಳಿಲ್ಲ, ನನಗೆ ಇಂಟರ್ನಲ್ಸ್, ತಂಗಿಗೆ ಹತ್ತನೇ ಕ್ಲಾಸಿನ ಫೈನಲ್ ಪರೀಕ್ಷೆ. ಅಮ್ಮನೇ ಪಾಪ ಎಲ್ಲ ಕೆಲ್ಸ ಮಾಡಿಕೊಳ್ಳುತ್ತಿದ್ದರು. ನಾವು ಅಸಹಾಯಕರಾಗಿದ್ದೆವು.

Z : ಕಷ್ಟಗಳು ಒಟ್ಟೊಟ್ಟಿಗೇ ಬರೋದು....ಅಮೇಲೆ ?

ನಾನು : ಹು ! ಹೀಗೆ ಒಂದು ತಿಂಗಳು ಕಳೇಯಿತು. ಜೂನ್ ನಲ್ಲಿ ಒಂದು ದಿನ ಹಿಂದಿನ ರಸ್ತೆಯ ಮನೆಯವರು ಒಬ್ಬರು ಮತ್ತೊಬ್ಬ ಕೆಲಸದವರನ್ನು ಹುಡುಕಿ ಕೊಟ್ಟರು. ಅವರು ವಿಪರೀತ ಚಿಕ್ಕವರು. ಅವರ ತಾಯಿಗೆ ಐದು ಜನ ಹೆಣ್ಣು ಮಕ್ಕಳು. ಇವರಿಗೆ ೧೪ ವರ್ಷಕ್ಕೇ ಮದುವೆ, ವಯಸ್ಸು ಇಪ್ಪತ್ತು...ಮೂರು ಮಕ್ಕಳು. ಒಂದೂ ಆರೋಗ್ಯದಿಂದಿಲ್ಲ. ಒಂದು ದಿನ ಬಂದರೆ ಇನ್ನೊಂದು ದಿನ ಮಗುವಿಗೆ ಹುಷಾರಿಲ್ಲವೆಂದು ನಾಪತ್ತೆ. ನಾವೇ ಅವರ ತಂಗಿಯರಿಗೆ, ಅವರಿಗೆ ನಮ್ಮ ಹಳೆಯ ಬಟ್ಟೆ, ಸೀರೆ ಮುಂತಾದವುಗಳನ್ನು ಕೊಟ್ಟೆವು. ಮಳೆಗಾಲ, ಹಾಕಿಕೊಳ್ಳಲಿ ಅಂತ. ಕೆಲಸ super ಆದರೆ attendance irregular :( . ನಾವು ದಿನಾ ಹತ್ತುವರೆವರೆಗೂ ಕಾಯುವುದು, ಅವರು ಬರಲಿಲ್ಲವೆಂದರೆ ನಾನು ಪಾತ್ರೆ ತೊಳೆದು, ಗುಡಿಸಿ ಸಾರಿಸಿ ಮಾಡುವುದು...ಇಷ್ಟು ನನ್ನ ರೊಟೀನು ಸದ್ಯಕ್ಕೆ. ಆದ್ದರಿಂದ ಟೈಮ್ ಪಾಸ್ ಆಗುತ್ತಿದೆ...ಕೆಲ್ಸದಲ್ಲಿ.

Z : hmm....

ನಾನು : ಇದಲ್ಲದೇ ಇನ್ನೊಂದು ತೊಂದರೆ ಇದೆ. ಈ ಹೊಸ ಕೆಲಸದವರ, (ಅವರ ಹೆಸರು ಜಯಂತಿ) ತಂಗಿಯರು ಇನ್ನೂ ಚಿಕ್ಕ ಮಕ್ಕಳು. ಇವರು ಬರಲಾಗದಿದ್ದರೆ ಅವರನ್ನು ಕಳಿಸುತ್ತಾರೆ. We are strictly against child labor. ಇವರ ಕೈಲಿ ಏನು ಕೆಲಸ ಮಾಡಿಸುವುದು ? ಹೇಗೆ ಮಾಡಿಸುವುದು ? ಪುಟ್ಟ ಪುಟ್ಟ ಕೈಗಳು, ಕೈಯಲ್ಲಿ ಪೆನ್ಸಿಲ್ಲು ಹಿಡಿಯಬೇಕಾದವು ಪಾತ್ರೆ ತೊಳೆಯುವ ಗುಂಜನ್ನು ಹಿಡಿಯುವುದನ್ನು ನೋಡಿದರೆ ಯಾರಿಗೆ ಏನನ್ನಿಸತ್ತೋ ಬಿಡತ್ತೋ...ನನಗಂತೂ ಸಂಕಟವಾಗುತ್ತದೆ. ಯಾಕಂದರೆ ನನಗೆ ಅವರಿಗಿಂತ ಸ್ವಲ್ಪವೇ ದೊಡ್ಡ ತಂಗಿಯಿದ್ದಾಳೆ. ನಾವು ಸುಮ್ಮನೆ ಕೂರುವುದು, ನಮಗಿಂತ ಚಿಕ್ಕ ಚಿಣ್ಣರು ಅವರು ದುಡಿಯುವುದು ಎಷ್ಟು ಸರಿ ಹೇಳು ? ಶಾಲೆಗೆ ರಜೆ ಹಾಕಿ ಕೆಲಸ ಮಾಡಿ ನಾವು ಕೊಡುವ ಹತ್ತು ರುಪಾಯಿಯನ್ನು ಆಸೆಗಣ್ಣಿನಿಂದ ನೋಡುವ ಅವರ ಅಸಹಾಯಕತೆ ನನ್ನನ್ನು ಹತಾಶಗೊಳಿಸುತ್ತದೆ Z ....

Z : ನಿಜ...ತುಂಬಾ ನಿಜ.

ನಾನು : ಆದ್ದರಿಂದಲೆ ನಾನು ಅವರು ಬಂದರೆ ಕೆಲಸ ಮಾಡಲೇ ಬೇಡಿ ಎಂದು ಹೇಳಿದೆ. ಆದರೆ ಅವರು ಇಲ್ಲ ನಾವು ಮಾಡಿಯೇ ಮಾಡುತ್ತೇವೆಂದು ಹಠ ಹಿಡಿದರು. ಗುಡಿಸಿ ಸಾರಿಸಿ ಮಾಡಿಸದೆ, ಬರೀ ಪಾತ್ರೆ ತೊಳೆಯಿರೆಂದು ಹೇಳಿದೆ. ಬೆಂಗಳೂರಿನಲ್ಲಿ ಹಣವನ್ನು ನೀರಿನಂತೆ ಚೆಲ್ಲುವ ಜನರೊಂದು ಕಡೆ, ಪುಡಿಗಾಸಿಗೂ ಹೋರಾಡಿ, ಆಕಾಶಕ್ಕೆ ಕೈಚಾಚಿ, ಬೊಗಸೆಯಲ್ಲಿ ಸಿಕ್ಕಷ್ಟನ್ನು ಬಚ್ಚಿಟ್ಟು ಮುಚ್ಚಿಟ್ಟು ಕಾಪಾಡುವ ಜನ ಇನ್ನೊಂದು ಕಡೆ, ಇಂಥವರೆಲ್ಲರ ಮಧ್ಯ ಕಿಂಕರ್ತವ್ಯಮೂಢಳಾದ ನಾನು !

ನನಗೆ ಕೆಲ್ಸ ಮಾಡಲು ಗೊತ್ತಿಲ್ಲ ಅಂತ ಏನಲ್ಲ. ಆದರೆ ಮಾಡಲು ಸಮಯ ಸಿಕ್ಕಿರಲಿಲ್ಲ ಅಷ್ಟೆ. ಆದ್ದರಿಂದ, ಇವೆಲ್ಲ ಗಲಾಟೆ ಯಿಂದ ನಮ್ಮ ಮನೆ ಹದಗೆಟ್ಟು ಹಣ್ಣಾದ ಮೇಲೆ, ನಾನು ಮನೆಯಲ್ಲಿರುವ ತನಕ ( ಕೆಲ್ಸ/ph.D position ಸಿಗುವ ವರೆಗೂ) ನಾನೆ ಕೆಲಸ ಮಾಡುವೆನೆಂದು ಹೇಳಿದ್ದೇನೆ. ಟೈಮ್ ಪಾಸ್ ಆದ ಹಾಗೂ ಆಯ್ತು. ಕೆಲಸದ recapitulation ಕೂಡಾ ಆಯ್ತು.

Z : good...

ನಾನು : thanks. ಆದರೂ...ನನಗೆ ತಾಯಮ್ಮನ ನೆನಪು ಬಂದೇ ಬರುತ್ತದೆ. ಯಾಕೆ ಗೊತ್ತಾ ? ನಮ್ಮಿಬ್ಬರ ನಡುವೆ ಒಂದು funny conversation ನಡೆದಿತ್ತು ಒಂದು ದಿನ. ಹೇಳುತ್ತೇನೆ ಕೇಳು :

ತಾಯಮ್ಮ ಕಸ ಗುಡಿಸುತ್ತಿದ್ದರು. ನಾನು ಓದಿಕೊಳ್ಳುತ್ತಿದ್ದೆ. ಬಂದದ್ದೇ ಕೇಳಿದರು-

" ಅಮ್ಮಾವ್ರೆ, ನೀವು ಎಸ್ಸೆಸ್ಸೆಲ್ಸಿ ಆದ್ಮ್ಯಾಕೆ ಏಟ್ ವರ್ಷ ಓದೀರಿ ?"

ನಾನು : " ಏಳು ವರ್ಷ"

ಅವರು: " ಈ ವರ್ಸ ಆದ್ಮ್ಯಾಕೆ ಮುಗಿತದಾ ? "

ನಾನು : " ಇಲ್ಲ ತಾಯಮ್ಮ, ಇನ್ನೂ ಏಳು ವರ್ಷ ಓದಬೇಕು "

ಅವರು : ಯಾಕೆ ?

ನಾನು : ಅದು ಹಾಗೇ ತಾಯಮ್ಮ...ನಮಗಿಷ್ಟ ಆದ ವಿಷಯ ನ ಚೆನ್ನಾಗಿ ತಿಳ್ಕೋ ಬೇಕಲ್ಲ...ಅದಕ್ಕೆ.

ಅವರು : ಕಡೆ ಮನೆ ಡಾಕ್ಟರಮ್ಮ ಏಟ್ ವರ್ಸ ಓದವ್ರೆ ಎಸ್ಸೆಸೆಲ್ಸಿ ಆದ್ಮೆಲೆ ?

ನಾನು : ಹತ್ತು ವರ್ಷ.

ಅವರು : ಯಪ್ಪಾ ಸಿವನೆ ! ಇರ್ಲಿ ಬುಡಿ...ನೀವ್ ಏನ್ ಮಾಡ್ತಿರಿ ಇನ್ನು ಯೊಳ್ ವರ್ಸ ಓದ್ಮ್ಯಾಕೆ ?

ನಾನು : ಮನೆಯಲ್ಲಿರ್ತಿನಿ ತಾಯಮ್ಮ...

ಅವರು : ಅದೆಂಥದ್ದು ಅಮ್ಮಾವ್ರೆ ಈಟ್ ವರ್ಷ ಓದ್ಮ್ಯಾಕೆ ಮನೆಲಿದ್ಗೊಂಡು ? ಈ ಪುರುಸಾರ್ಥಕ್ಕೆ ಬರೀ ಎಸ್ಸೆಸೆಲ್ಸಿ ಮಾಡಿದ್ರೆ ಸಾಕಿರ್ತಿಲಿಲ್ವಾ ? ಸುಮ್ನಿರಿ ನೀವು ಅಮಾವ್ರೆ...ಸೌಟ್ ಎಲ್ಲ ಎಣ್ಣ್ ಮಕ್ಕಳು ಇಡಿಯೋದೇಯಾ ತಗಳಿ.. ಗಂಡಾ ಮನೆ ಮಕ್ಕಳು ಎಲ್ಲ ಮಾಡ್ಕಳಿ ಯಾರು ಬೇಡಾ ಅನ್ನಾಕಿಲ್ಲ. ಆದ್ರೆ ನೀವ್ ಮನೆಲಿ ಮಾತ್ರ ಇರ್ಬ್ಯಾಡಿ ನೋಡಿ... ಎಲ್ಲೆಲ್ಲೊ ಓಗ್ ಏನೋ ಸಮ್ಸೋದನೆ ಎಲ್ಲ ಮಾಡವ್ರಂತೆ ನೀವು ? ಮನೆಲಿದ್ರೆ ನಿಮ್ಮಂಥವರು ಅದ್ಯಾವ್ ನ್ಯಾಯ ಅಂತಿನಿ... ಆಕಡೆ ಮನೆ ಇಂಜಿನೀರಮ್ಮ ಈಗ ಓಗ್ತಿಲ್ವಾ ಕೆಲ್ಸಕ್ಕೆ ? ಮಕ್ಕಳನ್ನ ಸಾಲೆಗೆ ಬಿಟ್ಟು ? ಏಟ್ ಓದಿದಾರೆ ಅಂತೀರಾ ಅವ್ರುನೂ ...ಅವ್ರ ಮನೆಲೂ ಬರೀ ಪುಸ್ತಕಾನೆಯಾ...ನಾನ್ ಈಗ ಅವ್ರ ಮನೆಲಿ ಕೆಲ್ಸ ಮಾಡ್ಕಂಡ್ ಇಲಾ ? ನೀವ್ ಎಲ್ಲೇ ಇರಿ ಬೆಂಗ್ಳೂರ್ ನಾಗೆ...ನಾನ್ ಬಂದ್ ಮಾಡ್ಕೊಟ್ಟ್ ಓಯ್ತಿನಿ ಕೆಲ್ಸಾ ನ...ಮಗೀನ ನೋಡ್ಕೊಳ್ಳೊಕೆ ನಿಮ್ಮಮ್ಮ ಇಲ್ವಾ ? ನೀವೇನ್ ಈಟ್ ಒದು ಬರ್ಹ ಮಾಡೀ ಮನೆಯಾಕ್ ಮುದುರ್ಕಂಡಿರದು..ಹಾ ? ನಾನ್ ಯೋಳ್ತಿನಿ ಕೇಳಿ... ಓಗಿ ಓರ್ಗೆ ದುಡಿರಿ ಅತ್ತ್ಲಾಗೆ !

ನಾನು ಆವತ್ತೆಲ್ಲಾ ನಕ್ಕಿದ್ದೂ ನಕ್ಕಿದ್ದೇ ! ನನ್ನ ಮದುವೆ, ಮಕ್ಕಳ ಬಗ್ಗೆಯೂ ತಾಯಮ್ಮ ಯೋಚಿಸಿದ್ದರು ಆಗಲೇ ! ತಾಯಮ್ಮ ನನಗೆ ಆರ್ಡರ್ ಮಾಡಿದರೋ, ಅಥವಾ ಅವರ ಕೆಲಸ ಖಾಯಮ್ ಮಾಡಿಕೊಂಡರೋ ನನಗಿನ್ನೂ ತಿಳಿಯದ ವಿಷಯ !

Z : :) :) :) .....ಆದರೆ ಅವರ concern ನ ಮೆಚ್ಚಬೇಕು ನೋಡು !

ನಾನು : ನಿಜ ನಿಜ. ಅವರು ಒಂದು ನಿಯಮ ಮಾಡಿದ್ದರು...ಬಿಸಾಕಬೇಕಿದ್ದ ಪೇಪರ್ಗಳನ್ನೆಲ್ಲ ಹರಿದು ಹಾಕಿ, ಇಲಾಂದ್ರೆ ನಾನು ಎಲ್ಲಾ ನಿಮ್ಮ ಟೇಬಲ್ ಮೇಲೆ ಮತ್ತೆ ಎತ್ತಿಟ್ಟು ಹೋಗುವೆ ಅಂತ. ಇಂದು ನನಗೆ ಪೇಪರ್ ಹರಿಯುವಾಗಲೆಲ್ಲಾ ತಾಯಮ್ಮನದೇ ನೆನಪು. ಅವರು ಸದ್ಯ ಎಲ್ಲಿದ್ದಾರೋ, ಹೇಗಿದ್ದಾರೋ...ಕ್ಷೇಮದಿಂದ ಇರಲಿ, ಬೇಗ ಗುಣವಾಗಲಿ ಎಂದಷ್ಟೇ ಪ್ರಾರ್ಥನೆ ಸದ್ಯೋಜಾತನಲ್ಲಿ. ಆದಷ್ಟು ಬೇಗ ಅವರು ಕೆಲಸಕ್ಕೆ ಬರಲಿ ಅಂತ ಆಸೆ.

Z : hmm.....same here.

2 comments:

ಅಂತರ್ವಾಣಿ said...

kelsadavarannu nambalu asaadya ma

ellaru taayamma thra irodilla. nim luck antha obbaru sikkirOdu..

PaLa said...

ತಾಯಮ್ಮ ೧,೨,೩ ಸೂಪರ್ ಸೀರೀಸ್, ಅವರ ಬಡತನ, ಅಸಹಾಯಕತೆ, ಸ್ವಾಭಿಮಾನ, ಆಸ್ಪತ್ರೆಯ ಮೇಲಿನ ಹೆದರಿಕೆ, ಕಾಳಜಿ ತುಂಬಾ ಚೆನ್ನಾಗಿ ಬರ್ದಿದೀರ. ಇದನ್ನ ನೀವು ಸಣ್ಣ ಕಥೆ ತರ ಯಾಕೆ ಬರೀಬಾರ್ದು

ಬರ್ತಾ ಇದಾರ ಈವಾಗ ಮನೆಗೆ..

--
ಪಾಲ

ಉತ್ತರಾಯಣ ೩

ನಾನು: ಬೃಂದಾವನಕ್ಕೆ ಹೊರಡಲು ನಾಲ್ಕು ಘಂಟೆಯಷ್ಟೊತ್ತಿಗೆ ರೆಡಿ ಇರಬೇಕು ಎಂದು ಮ್ಯಾನೇಜರ್ ವೆಂಕಟೇಶ್ ಅವರು ಹೇಳಿದ್ದರು. ಇವರೆಲ್ಲರೂ ಊಟ ಮಾಡಿ, ಮಲಗಿ, ಎದ್ದು ರೆಡಿಯಾಗು...