Monday, September 27, 2010

ಕ್ಷಮಯಾ ಧರಿತ್ರಿಗೊಂದು ಭಾವಪೂರ್ಣ ವಿದಾಯ

ಸೀರಿಯಲ್ಲುಗಳು ದೂರದರ್ಶನದಲ್ಲಿ ಆಗಷ್ಟೇ ತಮ್ಮ ನಿಲುವನ್ನು ಸ್ಥಾಪಿಸಿಕೊಳ್ಳುತ್ತಿದ್ದ ಕಾಲ ಅದು. ಮಾನವ ಸಮಾಜವನ್ನು ಕಾಡುತ್ತಿದ್ದ ಸಮಸ್ಯೆಗಳ ಹಲವು ಮಜಲುಗಳನ್ನು ಪರಿಚಯಿಸಲು ಕಲಾವಿದರು ಪ್ರಯತ್ನಿಸುತ್ತಿದ್ದ ಕಾಲವದು. ಅಂತಹ ಸಮಯದಲ್ಲಿ ಸದ್ದಿಲ್ಲದೇ ಸುದ್ದಿ ಮಾಡಿದ, ಸೂಕ್ಷ್ಮ ವಿಷಯಗಳ ಸಮರ್ಥ ಅಭಿವ್ಯಕ್ತಿಯಿಂದ ಎಲ್ಲರ ಗಮನ ಸೆಳೆದ ಸೀರಿಯಲ್ಲುಗಳು ಐದು.

೧- ಪ್ರಕಾಶ್ ಬೆಳವಾಡಿಯವರ ಕವಲೊಡೆದ ದಾರಿ-ವಿವಾಹ ವಿಚ್ಛೇದನ ಇದರ ವಸ್ತು. ೧೯೯೪ ನಲ್ಲಿ ಡಿವೋರ್ಸ್ ಈಗಿನಷ್ಟು ಕಾಮನ್ ಆಗಿರಲಿಲ್ಲ.

೨. ಕ್ಷಮಯಾ ಧರಿತ್ರಿ ಎಂಬ ವೈದ್ಯೆಯೊಬ್ಬಳ ಕಥೆ. ನಿರ್ದೇಶನ ಪ್ರಾಯಶಃ ವೈಶಾಲಿ ಯವರದ್ದೇ ಇರಬೇಕು, ಇದರ ಕಥಾನಾಯಕಿಯೂ ಇವರೆ. ಈಕೆ ಒಬ್ಬರು ಗೈನಾಕಾಲಜಿಸ್ಟ್. ಮನೆಯಲ್ಲಿ ಒಬ್ಬ ಗೃಹಿಣಿ,ಆದರೆ ಮನೆಯಲ್ಲಿ ಯಾರಿಗೂ ಇವಳ ಬೆಲೆ ಗೊತ್ತಿಲ್ಲ. ಯಾರು ಏನೇ ವ್ಯಂಗ್ಯವಾಡಿದರೂ, ಎಲ್ಲರೂ ಏನೇ ಮಾಡಿದರೂ, ಮಾಡಿದ ತಪ್ಪನ್ನು ನಗುನಗುತ್ತಲೇ ಕ್ಷಮಿಸುತ್ತಿದ್ದ ಕ್ಷಮಯಾ ಧರಿತ್ರಿ. ಈ ಕಥೆ ನನಗೆ ಅಷ್ಟು ಚಿಕ್ಕವಯಸ್ಸಿನಲ್ಲೇ ನನ್ನ ಮನಸ್ಸನ್ನು ಆಕರ್ಷಿಸಿದ್ದ ಸೀರಿಯಲ್ಲು. ಇದರಲ್ಲಿ ವೈಶಾಲಿಯವರ ಅಭಿನಯ ಇನ್ನೂ ನನ್ನ ಕಣ್ಣ ಮುಂದೆ ಹಾಗೇ ನಿಲ್ಲುತ್ತದೆ. ತನ್ನ ಆಸ್ಪತ್ರೆಯಲ್ಲಿ ಯಾವುದೇ ಕಾರಣಕ್ಕೂ ಗರ್ಭಪಾತ ನಡೆಯಕೂಡದೆಂದು ಹೋರಾಡುತ್ತಿದ್ದ, ತಾನು ಎಂದಿಗೂ ಗರ್ಭಪಾತದ ಕೇಸುಗಳನ್ನು ಒಪ್ಪಿಕೊಳ್ಳದ, ಗುಟ್ಟಾಗಿ ಸಿಸೇರಿಯನ್ ಮತ್ತು ಅಬಾರ್ಷನ್ ಮಾಡುತ್ತಿದ್ದ ವೈದ್ಯರನ್ನೆಲ್ಲಾ ಎದುರುಹಾಕಿಕೊಂಡರೂ ಅಂಜದೇ ಅಳುಕದೇ ದಿಟ್ಟ ಮಹಿಳೆಯಾಗಿ ಬಾಳುತ್ತಿದ್ದ ಈ ವೈದ್ಯೆಯ ಮಗಳೇ ಕಡೆಗೆ ತನ್ನದೇ ಆಸ್ಪತ್ರೆಯಲ್ಲಿ ಗುಟ್ಟಾಗಿ ಗರ್ಭಪಾತ ಮಾಡಿಸಿಕೊಂಡು ಸಿಕ್ಕಿಬೀಳುವ ಪ್ರಸಂಗ ಇನ್ನೂ ನೆನಪಿದೆ ನನಗೆ. ಆ ಸಮಯದಲ್ಲಿ ಆ ವೈದ್ಯೆಯ ತಾಕಲಾಟದ ಆ ಅಭಿನಯಕ್ಕೆ ನಿಜವಾಗಲೂ ಹ್ಯಾಟ್ಸ್ ಆಫ್, ವೈಶಾಲಿಯವರು ಆ ತುಮುಲವನ್ನು ಕಣ್ಣಿನ ಒಂದು ನೋಟದಲ್ಲಿ ತೋರಿಸುತ್ತಾರೆ, ಆ ನೋಟ ಇನ್ನೂ ಕಾಡತ್ತೆ ನನ್ನ. ಚಿತ್ರಗಳಲ್ಲಿನ ಅವರ ಅಭಿನಯದ ಶ್ಲಾಘನೆ ಮಾಡಿದಷ್ಟೂ ಮುಗಿಯದು, ಅವರ ಪ್ರತಿಭೆ ಎಷ್ಟೇ ಹಾಡಿ ಹೊಗಳಿದರೂ ಸಾಲದು. ಲೋಕಕ್ಕೆ ಅವ್ರು ಹಾಗೆ, ಆದರೆ ವೈಶಾಲಿ ಎಂದರೆ ನನ್ನ ಪಾಲಿಗೆ ಕ್ಷಮಯಾ ಧರಿತ್ರಿಯೇ. ಆನಂತರ ಗಣೇಶನ ಮದುವೆಯ ಕ್ರಿಕೆಟ್ ಪ್ರಿಯೆ.

ಇಂದು ವೈಶಾಲಿಯವರು ನಮ್ಮೊಂದಿಗೆ ಇಲ್ಲ. ನನ್ನ ಹೃದಯಕ್ಕೆ ಅತ್ಯಂತ ಆಪ್ತರಾದ ಒಬ್ಬರನ್ನು ಕಳೆದುಕೊಂಡಂತೆ ಆಗಿದೆ ನನಗೆ. ಅವರು ಪಾತ್ರವನ್ನು ಅಭಿನಯಿಸದಂತೆ ಕಾಣುತ್ತಿರಲಿಲ್ಲ, ಪಾತ್ರವೇ ಅವರಾಗಿಬಿಡುತ್ತಿದ್ದರು. ಹಾಗಾಗಿ ಅವರು ಮತ್ತಷ್ಟು ಆಪ್ತರಾಗುತ್ತಿದ್ದರು. ಕಳ್ಳ ಕುಳ್ಳ ಚಿತ್ರದ ಕತ್ರಿ ಕಮಲಿಯಾಗಲಿ, ಹೊಂಬಿಸಿಲಿನ ವೈದ್ಯೆಯಾಗಲೀ, ಇನ್ಯಾವುದೇ ಪಾತ್ರವಾಗಲಿ, ಅದು ಜನ ಮರೆಯುವಂಥದ್ದಲ್ಲ, ಆಚಂದ್ರಾರ್ಕಸ್ಥಾಯಿಯಾದಂಥದ್ದು.

೩. ಟಿ.ಎನ್.ಸೀತಾರಾಂ ಅವರ ಕಾಮನ ಬಿಲ್ಲು ಧಾರಾವಾಹಿ. ಬಿಸಿನೆಸ್ ಜನರ ಮನೆತನದ ಒಳಗು ಹೊರಗುಗಳನ್ನು ಸಾಮಾನ್ಯರಿಗೆ ಅತ್ಯಂತ ಮನೋಜ್ಞವಾಗಿ ತೋರಿಸಿಕೊಟ್ಟ ಸೀತಾರಾಂ ಅವರ ಮಾಸ್ಟರ್ ಪೀಸ್ ಗಳಲ್ಲಿ ಒಂದು. ಇದರಲ್ಲಿ ವೈಶಾಲಿಯವರದ್ದು ಬಿಸಿನೆಸ್ ಮೆನ್ ಒಬ್ಬನ ಹೆಂಡತಿಯ ಪಾತ್ರ. ಆ ಪಾತ್ರ ನೋಡಿದಾಗಲೆಲ್ಲಾ ನನಗೆ ನಮ್ಮ ಅಜ್ಜಿಯ ನೆನಪಾಗುತ್ತಿತ್ತು. ನಮ್ಮ ಅಜ್ಜಿ ಹೋಗಿಬಿಟ್ಟರು. ಈಗ ಇವರೂ....

೪. ಬ ಲ ಸುರೇಶ್ ಅವರ ಅಸ್ತಂಗತ ಧಾರಾವಾಹಿ. ವಾರ್ಧಕ್ಯದ ಕುರಿತಾದ ಧಾರಾವಾಹಿ ಇದು. ಸಾಹಸ ಸಿಂಹ ಡಾ|| ವಿಷ್ಣುವರ್ಧನ್ ಅವರ ಅಣ್ಣ ರವಿಕುಮಾರ್ ಅವರು ಮುಖ್ಯಪಾತ್ರದಲ್ಲಿದ್ದ ಧಾರಾವಾಹಿ. ಇಂದು ವೈಶಾಲಿಯವರು ಅಸ್ತಂಗತರಾಗಿದ್ದು ಇದನ್ನೆಲ್ಲಾ ಬರೆಯುವಂತೆ ಮಾಡಿದೆ.

೫. ಐ.ಓ.ಬಿ ಚಂದ್ರು ಅವರ ಚಂದಮಾಮ ಚಕ್ಕುಲಿಮಾಮ ಧಾರಾವಾಹಿ. ಐ.ಓ.ಬಿ ಚಂದ್ರು ಒಬ್ಬ ಕ್ರಿಯೇಟಿವ್ ನಿರ್ದೇಶಕ. ಪ್ರತಿಯೊಂದು ಸೀರಿಯಲ್ ನಲ್ಲೂ ಏನಾದರೊಂದು ಹೊಸದೊಂದು ಇದ್ದೇ ಇತ್ತು. ಕ್ಲೈಮ್ಯಾಕ್ಸ್ ನ ಇಡೀ ಟೀಮ್ ನೊಟ್ಟಿಗೆ ಚರ್ಚಿಸಿ ಅದೊಂದು ಸಂವಾದದಂತೆ ಮಾಡಿದ ಪ್ರಪ್ರಥಮ ನಿರ್ದೇಶಕರು. ಇವರೂ ಕೂಡಾ ರಸ್ತೆ ಅಪಘಾತದಲ್ಲಿ ವಿಧಿವಶರಾದರು. ಇವರು ಸತ್ತಾಗ ಅವರ ವಯಸ್ಸು ಮೂವತ್ತೆರಡರ ಸುಮಾರು.

ಹೀಗೆ, ನನ್ನ ಆಪ್ತೇಷ್ಟರೆಲ್ಲಾ ಒಬ್ಬೊಬ್ಬರೇ ಮಾಯವಾಗುತ್ತಿದ್ದಾರೆ. ನನಗೆ ಇವತ್ತು ಎಷ್ಟು ಬೇಜಾರಾಗಿದೆ ಅಂತ ಪ್ರಾಯಶಃ ಪದಗಳಲ್ಲಿ ವರ್ಣಿಸುವುದು ಸಾಧ್ಯವಿಲ್ಲ. ಜ್ವರದಲ್ಲಿ ಮಲಗಿರುವ ನನಗೆ ಕಂಪ್ಯೂಟರ್ ಕಡೆ ದಿಂಬು ಕೂಡಾ ಹಾಕಿ ಮಲಗಬಾರದೆಂದು ಕಟ್ಟಪ್ಪಣೆ ಮಾಡಿದ್ದರು. ಆದರೆ ಔಷಧಿ ತೆಗೆದುಕೊಳ್ಳಲು ಕಣ್ಬಿಟ್ಟ ನನ್ನ ನಿದ್ದೆ ಕೆಡಿಸಿದ್ದು ಈ ಸುದ್ದಿ. ದುಃಖ ಉಮ್ಮಳಿಸಿಬಂದು, ಅಪ್ಪಣೆಗಳನ್ನು ಅಟ್ಟಕ್ಕೆ ಎಸೆದು ಬ್ಲಾಗ್ ಅಪ್ಡೇಟ್ ಮಾಡಲು ಕೂತಿದ್ದೇನೆ. ಸುದ್ದಿಕೇಳಿದಾಗಿನಿಂದ ನನ್ನ ಕಿವಿಯಲ್ಲಿ ಗುಯ್ ಗುಡುತ್ತಿರುವುದು ಕ್ಷಮಯಾ ಧರಿತ್ರಿಯ ಟೈಟಲ್ ಸಾಂಗು...

"ಭೂಮಿ ನೀನು ಸಹನೆಯಲಿ, ಬೆಂಕಿ ನಿನ್ನ ಒಡಲಿನಲಿ, ಯಾರಿಗೆ ಹೋಲಿಸಲಿ, ಕ್ಷಮಯಾ ಧರಿತ್ರಿಯ ಕಲೆ..."

ಕ್ಷಮಯಾ ಧರಿತ್ರಿಗೆ ಒಂದು ಭಾವಪೂರ್ಣ ಶ್ರದ್ಧಾಂಜಲಿ.

ಉತ್ತರಾಯಣ ೩

ನಾನು: ಬೃಂದಾವನಕ್ಕೆ ಹೊರಡಲು ನಾಲ್ಕು ಘಂಟೆಯಷ್ಟೊತ್ತಿಗೆ ರೆಡಿ ಇರಬೇಕು ಎಂದು ಮ್ಯಾನೇಜರ್ ವೆಂಕಟೇಶ್ ಅವರು ಹೇಳಿದ್ದರು. ಇವರೆಲ್ಲರೂ ಊಟ ಮಾಡಿ, ಮಲಗಿ, ಎದ್ದು ರೆಡಿಯಾಗು...