Showing posts with label ಪುರಾಣ "ಪುಣ್ಯಕಥೆಗಳು". Show all posts
Showing posts with label ಪುರಾಣ "ಪುಣ್ಯಕಥೆಗಳು". Show all posts

Monday, September 15, 2008

ಪಾನಿ ಪಾನಿ ರೆ !

Z : ಏನ್ ಹಾಡ್ ಹೇಳ್ತಿದ್ಯ ?

ನಾನು : ಅಯ್ಯೋ ಒಂದು ಸಣ್ಣ ತಪ್ಪು ಒಂದು ದೊಡ್ಡ ಹಗರಣಕ್ಕೆ ಕಾರಣ ಆಗಿದೆ .ಅದಕ್ಕೆ ನಂಗೆ ಈ ಹಾಡು ನೆನ್ಪಾಯ್ತು.

Z : ಏನ್ ತಪ್ಪು ಮತ್ತು ಎಂಥಾ ಹಗರಣ ?

ನಾನು : ಶನಿವಾರ ಬೆಳಿಗ್ಗೆ ನಾನು ಗಾಂಧಿ ಬಜಾರ್ ಗೆ ವಾಕಿಂಗ್ ಹೋಗಿ ಬರುವ ಹೊತ್ತಿಗೆ ಮನೆಯಲ್ಲಿ ಸಿಕ್ಕಾಪಟ್ಟೆ ದೊಡ್ಡ ಹಗರಣ ಆಗಿತ್ತು. ಒಂಭತ್ತನೇ ತಾರೀಖು ಬೆಳಿಗ್ಗೆ ವಾಟರ್ ಬಿಲ್ಲಿನವ ಬಂದು ರೀಡಿಂಗ್ ತಗೊಂಡು ಹೋಗಿದಾನೆ. ಹದಿಮೂರನೆಯ ತಾರೀಖು ಶನಿವಾರ ಬಿಲ್ಲು ಹಾಕಿ ಹೋಗಿದ್ದಾನೆ. ಬಿಲ್ಲಿನ ಮೊತ್ತವನ್ನು ನೋಡಿ ಅಮ್ಮನ ಎದೆ ಒಡೆದು ಹೋಗಿದೆ.

Z : ಎಷ್ಟು ಬಂದಿತ್ತು ?

ಎರಡು ಸಾವಿರ ರುಪಾಯಿ .

Z : ಹಾ ? ! ಫೋನ್ ಬಿಲ್ಲೇ ಸಾವಿರ ದಾಟೊಲ್ಲ !!

ನಾನು : exactly.ನೀರಿನ ಬಿಲ್ಲು ಇಷ್ಟು ಬರಲು ಸಾಧ್ಯವೇ ಇಲ್ಲ ಎಂದು ನಮ್ಮಮ್ಮನಿಗೆ ಯೋಚನೆ ಬಂತಾದರೂ, ಹೊಸ ಕೆಲಸದವಳು ಎರ್ರಾಬಿರ್ರಿ ನೀರು ಉಪಯೋಗಿಸುತ್ತಿದ್ದಾಳಾ ? ನೀರಿನ ಟ್ಯಾಂಕ್ ನಲ್ಲಿ ಸೋರಿಕೆ ಉಂಟಾಗಿದಿಯಾ,ಪಂಪಿನ ಆಟೋ ಲೆವೆಲ್ ಕಂಟ್ರೋಲರ್ ಕೈಕೊಟ್ಟಿದ್ಯಾ ಇವೇ ಮುಂತಾದ ಯೋಚನೆಗಳು ಅಮ್ಮನ ತಲೆಯಲ್ಲಿ ಏಕಕಾಲಕ್ಕೆ ಬಂದಿವೆ. ಆದರೂ, ಏನೇ ಆಗಲಿ ಎರಡು ಸಾವಿರ ಬರಲು ಸಾಧ್ಯವೇ ಇಲ್ಲ, ಆ ಬಿಲ್ಲು ಹಾಕುವವರನ್ನು ಹಿಡಿಯಲೇ ಬೇಕೆಂದು ರಸ್ತೆಯಲ್ಲಿರುವ ಎಲ್ಲರ ಮನೆಗೂ ಹೋಗಿ "ವಾಟರ್ ಬಿಲ್ಲಿನವರು ಬಂದರಾ ? " ಅಂತ ಕೇಳಿ ಕೇಳಿ ರಸ್ತೆಯ ಕಡೆಯ ಮನೆಯಲ್ಲಿ ಅವರನ್ನ ಹಿಡಿದು ವಿಚಾರಿಸಿದ್ದಾರೆ.

ಅಮ್ಮ : ಅಲ್ಲಪ್ಪಾ...ಏನ್ ರೀಡಿಂಗೂ ಅಂತ ತಗೊಂಡಿದ್ಯಾ ? ನಾವು ನೀರು ಪೋಲಾಗದಿರಲಿ ಅಂತ ಎಲ್ಲ ಆಟೋಮ್ಯಾಟಿಕ್ ಮಾಡ್ಸ್ಕೊಂಡಿದಿವಿ ಅಣ್ಣಯ್ಯ...ನಮಗೆ ಮಿನಿಮುಮ್ ವಾಟರ್ ಬಿಲ್ಲಷ್ಟೇ ಬರದು...ಕರೆಂಟ್ ಬಿಲ್ಲು ಫೋನ್ ಬಿಲ್ಲುಗಳೇ ಸಾವಿರ ದಾಟೊಲ್ಲ ನಮ್ಮ ಮನೆಯಲ್ಲಿ, ನೀನು ನೀರಿನ ಬಿಲ್ಲನ್ನ ಏನ್ ಸಾವಿರಾರುಗಟ್ಟಲೆ ಹಾಕಿಬಿಟ್ಟರೆ,ನನಗೆ ಗಾಬರಿ ಆಗ್ತಿದೆ. ದಯವಿಟ್ಟು ಕಣ್ಣು ಬಿಟ್ಟು ನೋಡಯ್ಯ...

ಅವರು : ಮೇಡಮ್, ನನಗೂ ಗೊತ್ತು ನಿಮ್ಮ ಮನೆಗೆ ಹೀಗೆ ಬರಲ್ಲ ಅಂತ...ನೀವು ಸಿಕ್ಕಾಪಟ್ಟೆ ಉಪಯೋಗಿಸುತ್ತಿದ್ದೀರಿ ಅಂತ ಅನ್ನಿಸಲ್ಲ...ಮೋಸ್ಟ್ಲಿ ರೀಡಿಂಗ್ ತಪ್ಪಾಗಿರಬೇಕು. ಯಾವ್ದಕ್ಕೂ ಸೋಮವಾರ ಸಂಜೆ ನಾಲ್ಕಕ್ಕೆ ಬನಗಿರಿ ಗೆ ಬಂದುಬಿಡಿ. ಸರಿ ಮಾಡ್ಕೊಡ್ತಾರೆ.

ಅಮ್ಮ : ಅಲ್ಲಯ್ಯಾ...ಬನಗಿರಿಯ ದೇವಸ್ಥಾನ ಗೊತ್ತು, ಅಲ್ಲೆಲ್ಲಿದೆ ನಿಮ್ ಆಫೀಸು ?
ಅವರು : ಮೇಡಮ್ ದೇವಸ್ಥಾನದ ಪಕ್ಕದಲ್ಲೆ...ಯಾರನ್ನ ಕೇಳಿದರೂ ಹೇಳುತ್ತಾರೆ.
ಅಮ್ಮ :ಎಷ್ಟ್ ದಿನ ಅಲೆಸುತ್ತಾರಯ್ಯ ಆ ಆಫೀಸಿಂದ ಈ ಆಫೀಸಿಗೆ ?
ಅವರು : ಮೇಡಮ್ ಈಗ ಎಲ್ಲ ಕಂಪ್ಯೂಟರೈಸ್ಡ್ ! ಅರ್ಧ ಘಂಟೆ ನೂ ಆಗಲ್ಲ. ಗಾಬ್ರಿ ಆಗ್ಬೇಡಿ ಮೇಡಮ್...ಅಲೆಸಲ್ಲ ನಿಮ್ಮನ್ನ.
ಅಮ್ಮ : ನಾನ್ ಬರಲ್ಲ ಕಣಯ್ಯ...ಕೆಲ್ಸಕ್ಕೆ ಹೋಗ್ತಿನಿ. ನನ್ನ ಮಗಳನ್ನ ಕಳಿಸ್ತಿನಿ.
ಅವರು : ಸರಿ ಮೇಡಂ.

ನಾನು : ಇವನು ಹೋದ ಮುನ್ನೂರು ಸೆಕೆಂಡ್ ನಂತರ ನನ್ನ ಆಗಮನವಾಯ್ತು ಗಾಂಧಿ ಬಜಾರ್ ಇಂದ. ಬಂದದ್ದೇ ನಮ್ಮಮ್ಮ ಆದ ಹಗರಣದ ಪ್ರವರ ಊದಿದರು. ಈ ಸಮಸ್ಯೆಯ ಪರಿಹಾರಕ್ಕೆ ಸೋಮವಾರದ ಮಧ್ಯಾಹ್ನದ ನಿದ್ದೆ ತ್ಯಾಗ ಮಾಡಲೇಬೇಕಾಯ್ತು ನಾನು.

Z : ಹ್ಮ್ಮ್ಮ್ಮ್...........

ನಾನು : ಸರಿ ಇವತ್ತು ಮಧ್ಯಾಹ್ನ ನನ್ನ ಪಯಣ ಬನಗಿರಿಯ ಕಡೆ ಹೋಯ್ತು. ನನಗೆ BWSSB ಆಫೀಸಿಗೆ ರಸ್ತೆ ಗೊತ್ತಿರಲಿಲ್ಲ. ಪೆಟ್ಟಿಗೆ ಅಂಗಡಿಯವನ ಬಳಿ ವಿಚಾರಿಸಲು,ಅವರು- "ಮೇಡಮ್, ಈ ಅಪ್ಪನ್ನು ಹತ್ತಿಬಿಡೀ...ಅಲ್ಲೇ ಬಲಕ್ಕೆ ಕಾಣ್ಸತ್ತೆ." ಅಂತ horizontal ಗೆ ಸುಮಾರು 70 degrees ಅಷ್ಟು incline ಆಗಿರುವ ರಸ್ತೆಯನ್ನು ತೋರಿಸಿದ. ನನಗೆ ರಸ್ತೆ ನೋಡಿಯೇ ಗಾಬರಿ ಆಯ್ತು. ಚಾಮುಂಡಿ ಬೆಟ್ಟವನ್ನು ಕಾರಿನ ಬದಲು ಕಾಲಲ್ಲಿ ಹತ್ತಿ ಪ್ರಾಕ್ಟೀಸ್ ಮಾಡ್ಬೇಕಿತ್ತು ಅನ್ನಿಸಿತು. ಇರಲಿ ಏನಾದ್ರು ಆಗಿ ಹೋಗಲಿ, ಹತ್ತೇ ಬಿಡುವ ಅಂತ ಅಪ್ಪ್ ಹತ್ತಿ ಬಲಕ್ಕೆ ನೋಡಿದರೆ....

Z : ರೆ.....

ನಾನು : ಖಾಲಿ ಸೈಟು !

Z : ಹೆ ಹೆ....

ನಾನು : ಆಮೇಲೆ ಒಂದು ಮನೆ ಮುಂದಿರುವ ಸೆಕ್ಯೂರಿಟಿಯವರನ್ನ ಕೇಳಿದೆ. ಅವರು ಬಲಗಡೆ ತಿರುಗಿ ಇನ್ನೊಂದು ಅಪ್ಪ್ ಹತ್ತಿ ಮೇಡಮ್, ಬಲಕ್ಕೆ ಕಾಣಿಸುತ್ತದೆ ಅಂದರು. ಆ ಅಪ್ಪು 60 degrees ! ಶಿವನಾಮ ಜಪವನ್ನು ಎಡೆಬಿಡದೆ ಮಾಡುತ್ತಾ ಅಪ್ಪನ್ನು ಹತ್ತಿ ಕಡೆಗೂ bwssb ಆಫೀಸು ತಲುಪಿದೆ.ಅದು ಬನಗಿರಿಯ ದೇವಸ್ಥಾನದ ಪಕ್ಕದಲ್ಲಿರಲಿಲ್ಲ, ಪಕ್ಕದ ರಸ್ತೆಯಲ್ಲಿತ್ತು. ಸಾವಿವ ಅಂಚಿನಲ್ಲಿರುವ ಶ್ವಾನವೊಂದು ಬಾಲ ಅಲ್ಲಾಡಿಸುತ್ತಾ ನನಗೆ ಸ್ವಾಗತ ಬೇರೆ ಕೋರಿತು.

Z : ಆಮೇಲೆ ?

ನಾನು : ಒಳಗೆ ಹೋದ ತಕ್ಷಣ ಪ್ಯೂನೊಬ್ಬರು, "ಬನ್ನಿ ಮೇಡಮ್, ಕೂತ್ಕೋಳೀ...ಏನ್ ಆಯ್ತು ? " ಅಂತ ಡಾಕ್ತರ್ ಪೇಷೆಂಟ್ ನ ಕೇಳುವ ಹಾಗೆ ಕೇಳಿದರು.

ನಾನು :"ಸರ್, ಅದು ರೀಡಿಂಗ್ ತಪ್ಪಾಗಿ ತಗೊಂಡು ಬಿಲ್ಲು ಸಿಕ್ಕಾಪಟ್ಟೆ ಬಂದಿದೆ. ಕರೆಕ್ಷನ್ ಆಗ್ಬೇಕಿತ್ತು " ಅಂದೆ.
ಅವರು ಬಿಲ್ಲನ್ನು ನೋಡಿ..."ಏನ್ ಮೇಡಮ್ ಇದು, ಆಮೇಲೆ ತಗೊಂಡಿರೋ ರೀಡಿಂಗ್ ಗೂ ಮೊದ್ಲೆ ತಗೊಂಡಿರೋ ರೀಡಿಂಗ್ ಗೂ ಸಂಬಂಧನೇ ಇಲ್ವಲ್ಲ ? "

ನಾನು : "ಸಂಬಂಧ ಹುಡ್ಕಕ್ಕೇ ಬಂದಿರೋದು ಸರ್ ನಾನಿಲ್ಲಿ."

ಅಷ್ಟರಲ್ಲಿ ಮತ್ತೊಬ್ಬರು ಬಂದರು, ಅವರು ಬಿಲ್ಲನ್ನು ಪರೀಕ್ಷಿಸಿ ಹೀಗೇ ಅಂದರು. ಆಮೇಲೆ ಅದು ಮಗದೊಬ್ಬರ ಕೈ ಸೇರಿತು. ಹೀಗೆ ಒಂದೈದು ನಿಮಿಷ ಎಲ್ಲರು ಪಾಸಿಂಗ್ ದ ಪಾರ್ಸಲ್ ಆಟದ ವಿಸ್ತೃತ ಭಾಗವಾದ ಪಾಸಿಂಗ್ ದ ವಾಟರ್ ಬಿಲ್ಲ್ ಆಟ ಆಡಿದರು. ಕಡೆಗೆ ಅದು ಮುಖ್ಯ ಇನ್ಸ್ಪೆಕ್ಟರ್ ಕೈ ಸೇರಿತು. ಅವರು " ಮೇಲೆ ಹೋಗಿ ಮಾ...ನಿಮ್ ಏರಿಯಾ ಇನ್ಸ್ಪೆಕ್ಟರ್ ಮೇಲಿದಾರೆ " ಅಂದರು.

ನಾನು ಮೆಟ್ಟಿಲು ಹುಡುಕುತ್ತಿದ್ದೆ. ಆ ಪ್ಯೂನು, "ಮೇಡಂ, ಮೆಟ್ಟಿಲು ಹೊರಗಿದೆ " ಅಂತ ಹೇಳಿಕಳಿಸಿದರು.

ಮೆಟ್ಟಿಲು ಹತ್ತಿ ಆಫೀಸಿನ ಒಳಗೆ ಹೋಗಿ ನಮ್ಮ ಏರಿಯಾ ಇನ್ಸ್ಪೆಕ್ಟರ್ ಇದಾರ ಅಂತ ಕೇಳಿದರೆ ಅವರು " ಈಗ್ ತಾನೆ ನಿಮ್ ಕಣ್ಣ್ ಮುಂದೆ ನೇ ಹೊರಗೆ ಹೋದ್ರಲ್ಲಮ್ಮ...ಕೆಳ್ಗಡೆ ಇರ್ತಾರೆ ನೊಡಿ ! " ಅಂದರು.

ನಾನು : "ಮೇಡಮ್, ಅಲ್ಲಿಲ್ಲ ಅವ್ರು ಅಂತಾನೇ ನನ್ನನ್ನ ಮೇಲೆ ಕಳಿಸಿದರು "

ಅವರು : "ಸರಿ, ಹೊರಗೆ ಹೋಗಿ ನೋಡಿ, ಅಲ್ಲಿ ಇನ್ನೊಂದು ಆಫೀಸಿದೆ. ಅಲ್ಲಿರ್ಬಹುದು"

ನಾನು ಇನ್ನೊಂದು ಆಫೀಸಿನಲ್ಲಿ ವಿಚಾರಿಸಲು " ಇಲ್ಲಿಲ್ಲ " ಅನ್ನುವ ಉತ್ತರ ಬಂತು. ನಾನಿನ್ನು ಹೊರಗೆ ಬಲಗಾಲನ್ನು ಇಟ್ಟಿದ್ದೆ ಅಷ್ಟೆ , "ನಾನಿಲ್ಲೇ ಇದಿನಿ, ಇಲ್ಲ ಅಂತೀರಲ್ರಿ ? " ಎಂಬ ದನಿಯು ಕೇಳಿಸಿತು. ಪ್ರಿಂಟರ್ ಹಿಂದೆ ಮಹಾಶಯರು ಬ್ಯುಸಿಯಾಗಿದ್ದರು. ಎನೋ ಕಾರಣಕ್ಕೆ ಟೇಬಲ್ ಕೆಳಗಿದ್ದವರು ಆಗ ಮೇಲಕ್ಕೆ ತಲೆ ಎತ್ತಿದರು.

ನಾನು : ಸರ್ ಅದು ರಿಡಿಂಗ್ ತಪ್ಪಾಗಿ....

ನೀವು ಗಾಬರಿಯಾಗಿ ನನ್ನನ್ನು ಹುಡುಕಿಕೊಂಡು ಬಂದು ಸಿಕ್ಕಾಪಟ್ಟೆ ವಿಚಾರಿಸಿದರಲ್ಲ, ಅವರ ಮಗಳಾ ?

ನಾನು ನಮ್ಮಮ್ಮನ ಸಾಹಸವನ್ನು ಒಳಗೇ ಮುಕ್ತಕಂಠದಿಂದ ಶ್ಲಾಘಿಸಿ, ಹೌದು ಸಾರ್ ಅಂದೆ.

ಬನ್ನಿ ಬನ್ನಿ ಅಂತ ನನಗೆ ಹೇಳಿ ಆಫೀಸಿನ ಒಳಗೆ ಮಿಂಚಿನಂತೆ ಮಾಯವಾದರು !

Z : ಹೆಹೆಹೆಹೆ....

ನಾನು : ನಗ್ಬೇಡಾ ! ಅವರು ಇನ್ನರ್ಧ ಘಂಟೆ ಬರಲ್ಲ ಅಂದುಕೊಂಡು ನಾನು ಬೆಂಚಿನ ಮೇಲೆ ಕುಳಿತು ನಿದ್ದೆ ಮಾಡುವ ಪ್ಲಾನ್ ಹಾಕಿದ್ದೆ.

Z : ವರ್ಕ್ ಔಟ್ ಆಯ್ತ ?

ನಾನು : ಇಲ್ಲ...ಮೂರೇ ನಿಮಿಷಕ್ಕೆ ಮಹಾಶಯರು ಪುಸ್ತಕ ಸಮೇತ ಪ್ರತ್ಯಕ್ಷ ! ನಾನು ಕಣ್ಣು ಮುಚ್ಹಕ್ಕೇ ಆಗ್ಲಿಲ್ಲ !

Z : ಅಯ್ಯೋ ಪಾಪ ! ಆಮೇಲೆ ?

ನಾನು : ಅವರು ಬಂದದ್ದೇ, " ನೋಡಿ ಮೇಡಂ ಡಬ್ ಡಬಲ್ ಕೆಲ್ಸ ಮಾಡ್ಸ್ತಾರೆ, ನಾನು 1018000 ಅಂತ ಬರ್ದಿದ್ರೆ ಇವ್ರು 1081000 ಅಂತ ಟೈಪ್ ಮಾಡೋದೆ ? ನೋಡ್ಬಿಡಿ ನೀವೂ ಒಮ್ಮೆ" ಅಂತ ಲೆಡ್ಜರ್ ತೋರಿಸಿದರು.

Z : ನೀನು " ನೋಡಿ ನಮ್ಗೂ ಸಿಮ್ ಸಿಂಪ್ಲಿ ಬರೋ ಹಾಗಾಯ್ತು. ಸೀರ್ ಸೀರಿಯಸ್ಸಾಗಿ ಖಂಡಿಸ್ತಿನಿ ಇದನ್ನ " ಅಂತ ಅಂದೆಯ ?

ನಾನು : ಇಲ್ಲ, ಸುಮ್ಮನೆ ನೋಡಿದೆ.

Z : ಛೆ ! ಅನ್ಯಾಯ...ಈ ಡೈಲಾಗ್ ಹೇಳ್ಬೇಕಿತ್ತು ನೀನು !

ನಾನು : ತೋಚಲಿಲ್ಲ.

Z : ಸರಿ ಬಿಡು. ಆಮೇಲೆ ?

ಅವರು " ಒಳಗೆ ಬನ್ನಿ ಮೇಡಮ್, ಬೇರೆ ಬಿಲ್ಲನ್ನು ಹಾಕ್ಸಿ ಕೊಡ್ತಿನಿ " ಅಂತ ಇನ್ನೊಂದು ಆಫೀಸಿಗೆ ಕರೆದುಕೊಂಡು ಹೋದರು. ಅಲ್ಲಿ ಒಬ್ಬರು ಆಂಟಿ, " ಏನಪ್ಪಾ ? " ಅಂತ ವಿಚಾರಿಸಲು ಇವರು ನನ್ನ ಸಮಸ್ಯೆ ಮತ್ತು ನಮ್ಮಮ್ಮನೊಂದಿಗೆ ಆಡಿದ ಮಾತುಕಥೆಯನ್ನೆಲ್ಲ ಚಾಚೂ ತಪ್ಪದೆ ವಿವರಿಸಿದರು. ಅದಕ್ಕೆ ಆ ಆಂಟಿ, " ನನಗೂ ಅನುಮಾನ ಬಂತು ಬಿಲ್ಲನ್ನು ಸ್ಕ್ರೂಟಿನಿ ಮಾಡ್ಬೇಕಾದ್ರೆ, ಖರ್ಚು ಆಗಿದ್ರೂ ಇರ್ಬಹುದೇನೋ ಅಂತ ಹಾಗೇ ಬಿಟ್ಟೆ. ನೋಡಪ್ಪ, ಈ ತಿಂಗಳಲ್ಲಿ ಇದು ಮೂರನೆಯ ಕೇಸು. ಶುಕ್ರವಾರ ಇಬ್ಬರು ಬಂದು ಗಲಾಟೆ ಮಾಡಿದರು. ಇವತ್ತು ಇವರು ಬಂದಿದ್ದಾರೆ. ಡಾಟಾ ಎಂಟ್ರಿ ಮಾಡುವವರಿಗೆ ಹೇಳ್ಬೇಕಪ್ಪ ! ನನಗೆ ಡಬ್ ಡಬಲ್ ಕೆಲ್ಸ ! ಛೆ !" ಅನ್ನುತ್ತಲೇ ಬೇರೆ ಬಿಲ್ಲನ್ನು ಪ್ರಿಂಟ್ ಮಾಡಿ ಕೊಟ್ಟರು. ನಮಗೆ ತಿಂಗಳು ತಿಂಗಳು ಬಿಲ್ಲು ಬರುವಷ್ಟೆ ಈ ತಿಂಗಳೂ ಬಂದಿತ್ತು !

Z : ಸದ್ಯ !

ನಾನು : ಹು. ಆಮೇಲೆ ನಾನು ಅಲ್ಲಿಂದ ಹೊರಬಿದ್ದೆ.

Z : ಹೆ ಹೆಹೆಹೆಹ್ !

ನಾನು : ನನಗೆ ಮಾಚಿಸ್ ಚಿತ್ರದ ಹಾಡು ನೆನ್ಪಾಯ್ತು... " ಪಾನೀ ಪಾನಿ ರೆ, ಖಾರೆ ಪಾನಿ ರೆ, ...."

I think these mistakes are of immense value on marks cards :-) 81 instead of 18 can do wonders !!!

Sunday, September 7, 2008

ಅಥ ಉದ್ಯಾನೋಪಾಖ್ಯಾನಃ

ನಮಸ್ತೇಸ್ತು ಮಹಾಮಾಯೇ....ಲಕ್ಷ್ಮೀ ಏಳು...ಶ್ರೀಪೀಠೆ ಸುರಪೂಜಿತೆ....ಶಂಖ ಚಕ್ರಗದಾ ಹಸ್ತೇ...ಎದ್ದೇಳ್ತ್ಯೋ ಇಲ್ವೋ... ಮಹಾಲಕ್ಷ್ಮೀ ನಮೋಸ್ತುತೆ...ನಮಸ್ತೆ ಗರುಡಾರೂಢೆ ಕೋಲಾಸುರ...ಲಕ್ಷ್ಮೀ.....ಭಯಂಕರೀ...ಸರ್ವದುಃಖಹರೇ...ಏಳೇ......ದೇವೀ ಮಹಾಲಕ್ಷ್ಮೀ ನಮೋಸ್ತುತೆ...ಸರ್ವಜ್ಞೇ ಸರ್ವವರದೇ...ಎದ್ದೇಳೇ ಘಂಟೆ ಏಳೂಕಾಲು...ಸರ್ವದುಷ್ಟ...ಎದ್ದೇಳ್ತ್ಯೋ ಇಲ್ಲವೋ ಹೋಪ್ಲೆಸ್ಸ್ ಫೆಲ್ಲೋ...ಭಯಂಕರಿ....

Z : ಅಮ್ಮ ನಿನ್ನನ್ನ ಹೀಗೆ ಎಬ್ಬಿಸೋದಲ್ವ ದಿನಾ?

ನಾನು: ಯೆಸ್. ಇದೇ ನನ್ನ ಸುಪ್ರಭಾತ. high pitchನಲ್ಲಿ ಅಮ್ಮ ಹೀಗೆ ಸ್ತೋತ್ರ ಹೇಳ್ಕೋತಾ ನನ್ನನ್ನ ಬೈದು ಎಬ್ಬಿಸದಿದ್ದರೆ ನನಗೆ ಅದೇನೋ ಬೆಳಿಗ್ಗೆ ಅಂತ ಅನ್ನಿಸೋದೇ ಇಲ್ಲ.

Z : ನಿನ್ನದೂನೂ ಅತಿ ಅಂತ ಇಟ್ಕೋ. ನಾನ್ ಆರುವರೆಗೆ ಎದ್ದಿರ್ತಿನಿ. ನೀನ್ ಕಣ್ಮುಚ್ಕೊಂಡ್ ಅದ್ ಏನ್ ಯೋಚ್ನೆ ಮಾಡ್ತಿರ್ತ್ಯ ?

ನಾನು : ನಾನು ಮಲ್ಗಿದ್ರೆ ಲೋಕಕ್ಕೆ ಜಾಸ್ತಿ ಉಪಯೋಗನಾ...ಎದ್ದ್ರೆ ಲೋಕಕ್ಕೆ ಜಾಸ್ತಿ ಉಪ್ಯೋಗಾನಾ ಅಂತ !

Z :ಆಹಾ !

ನಾನು : ಹು.. see, instead of constructively destroying the world by getting up, working, studying etc., I can as well sleep ! ಅಲ್ವಾ ?

Z : ಥುಥ್ ! ಅಲಾರಂ ಇಟ್ಟು ನನ್ನನ್ನ ಎಬ್ಬಿಸಿ ನೀನು ಮಲ್ಗೋದನ್ನ ಏನಂತ ಕರೀತಾರೋ !!

ನಾನು : ಸಕ್ಕರೆ ನಿದ್ದೆ ಅಂತ ! ನಿನಗೆ ಅಲಾರಮ್ ಹೊಡಿಯೋದು ಕೇಳ್ಸತ್ತ ? ಸಂತೋಷ. ನನಗೆ ಕೇಳ್ಸಲ್ಲ. ನೀನು ಕೇಳ್ಸ್ಕೊ. ಆ ಮ್ಯೂಸಿಕ್ ನ ಎಂಜಾಯ್ ಮಾಡ್ತಾ ಮಜಾ ಮಾಡು. ನೀನ್ ಏಳ್ತ್ಯ...ಅಲಾರಮ್ ನ ಆಫ್ ಮಾಡ್ತ್ಯ...ಹರಿಹರ ಬ್ರಹ್ಮಾದಿಗಳನ್ನೆಲ್ಲಾ ನೆನ್ಸ್ಕೋತ್ಯಾ....ಗುಡ್...ಕೀಪ್ ಇಟ್ ಅಪ್. ಊಟ, ತಿಂಡಿ, ಪುಸ್ತಕ, ನಾಟಕ , ಕಾಫಿ ಬಿಟ್ಟು ನನಗೆ ಇನ್ನೇನಾದರೂ ಸಖತ್ ಇಷ್ಟ ಅಂದ್ರೆ ಅದು ನಿದ್ದೆ ನೆ. ನಾನು ಅರೆ ನಿದ್ದೆಲಿ ಮಾಡಿದ calculation, analysis and thinking perfect ಆಗಿರತ್ತೆ. ಈದಿನ ನಾನು ಎಷ್ಟೊತ್ತು ಮಲಗಬೇಕು ಅನ್ನೋದೆ ನನ್ನ ಪ್ರೈಮರಿ ಯೋಚ್ನೆ ಆಗಿರತ್ತೆ ಯಾವಾಗ್ಲು....

Z : ಶಿವ ಶಂಕರ ಸದ್ಯೋಜಾತ !

ನಾನು :ಸುಮ್ನೆ ಅವರನ್ನೆಲ್ಲಾ ಕರ್ದು disturb ಮಾಡ್ಬೇಡ. ಅವ್ರೂ ನಿದ್ದೆ ಮಾಡ್ತಿರ್ತಾರೆ.

Z : ರಾಮ ರಾಮ !

ನಾನು : ಹೇ...ಯಾರನ್ನ ಕರೆದರೂ ಪಾಪ ರಾಮನ್ನ ಮಾತ್ರ ಕರಿಬೇಡ. he is too busy ಪಾಪ.

Z : ಯಾಕೆ ?

ನಾನು : ಅವನು ಹುಟ್ಟಿದ ಅಯೋಧ್ಯೆಯಲ್ಲಿ ಗಲಾಟೆ. ಅವನು ಕಟ್ಟಿಸಿದ ರಾಮಸೇತುವೆಯಲ್ಲಿ ಗಲಾಟೆ. ಅವನೇ ಚಿಂತೆಯಲ್ಲಿ ಮುಳ್ಗೋಗಿದಾನಂತೆ...ನಾವ್ಯಾಕ್ ನಮ್ ಗೋಳನ್ನ ಹೇಳಿಕೊಂಡು ಅವನನ್ನ further ಚಿಂತಾಕ್ರಾಂತಗೊಳಿಸಬೇಕು ? dont trouble him.

Z : ok.

ನಾನು : ಅಮ್ಮನ ಸ್ತೋತ್ರಪೂರಿತ ಬೈಗುಳಯುಕ್ತ ಸುಪ್ರಭಾತ ಕೇಳಿ ನಾನು ಎದ್ದು ಫ್ರೆಶ್ಶಾಗಿ ಮೇಲಿಂದ ಧರೆಗಿಳಿದ ಮೇಲೆ ನನಗೆ ಕ್ಷೀರದ ನೈವೇದ್ಯವಾಗುತ್ತದೆ. ಅದಾದ ಮೇಲೆ ನನ್ನನ್ನು ವಾಕಿಂಗ್ ಗೆ ಹೊರಡಿಸಲಾಗುತ್ತದೆ.

Z : ಯಾಕ್ ವಾಕಿಂಗ್ ಮಾಡ್ಬೇಕು ?

ನಾನು : ದಿನಕ್ಕೆ ಏನಿಲ್ಲ ಅಂದ್ರೂ ಕಂಪ್ಯೂಟರ್ ಮುಂದೆ ಒಂಧತ್ತು ಘಂಟೆ ಕಾಲ ಕೂತು ಏನನ್ನೋ ಹುಡುಕುತ್ತಾ...ಸ್ಟಂಬಲ್ಲಿಸುತ್ತಾ, ಆರ್ಕುಟ್ಟುತ್ತಾ, ಬ್ಲಾಗಿಸುತ್ತಾ ಇರುತ್ತೇನಾದ್ದರಿಂದ, ನಮ್ಮಮ್ಮನಿಗೆ ನನ್ನ ಕಣ್ಣು ತೂತಾಗಿ ಹೋಗುತ್ತೆ ಅಂತ ಕನಸು ಬಿದ್ದಿರತ್ತೆ. ಅದಕ್ಕೆ ತಕ್ಕಂತೆ ಅಣ್ಣ ಕೂಡಾ ಅಮ್ಮನ್ನ ನಿನ್ ಮಗಳು ನೋಡು ಒಂದು ದಿನ ನಮ್ಮನ್ನೂ ಮಾನಿಟರ್ ಅಂತಾ ನೇ ಅಂದುಕೋತಾಳೆ ಅಂತ ಹೆದರ್ಸಿರ್ತಾರೆ. ಟೋಟಲಿ ಗಾಬ್ರಿಫೈಡ್ ಆದ ಅಮ್ಮ, ಸಿಟಿಯಲ್ಲಿ ಸಿಗುವ ಸ್ವಲ್ಪವೇ ಸ್ವಲ್ಪಹಸಿರು ಪ್ರದೇಶವಾದ ಪಾರ್ಕಿಗೆ ಹೋಗಿ ವಾಕಿಂಗ್ ಮಾಡಿ, ಹಸಿರನ್ನು ನೋಡು...ಕಣ್ಣು ಸರಿಹೋಗತ್ತೆ ಅಂತ ನನ್ನ ಮುಂದೆ ಕಿನ್ನರಿ ಬಾರಿಸುತ್ತಾರೆ.

Z : ಅಂದರೆ ನೀನು ಕೋಣ ಅಂತ ಆಯ್ತು.

ನಾನು : ನೋ ನೋ !! ಅವರು ಹೇಳಿದ್ದನ್ನೆಲ್ಲ ಲೇಟಾಗಾದ್ರೂ ಸರಿ, ಪಾಲಿಸಿಯೇ ಪಾಲಿಸುತ್ತೇನೆ. ಎಂಟು ಘಂಟೆ ಸುಮಾರಿಗೆ ನನ್ನ ಸವಾರಿ ಹೊರಡತ್ತೆ ಪಾರ್ಕಿಗೆ.

Z : ಹೇಗಿರತ್ತೆ ಪಾರ್ಕಲ್ಲಿ ವಾಕಿಂಗ್ ?

ನಾನು : glorified ಹೆಜ್ಜೆ ನಮಸ್ಕಾರ.

Z : ಹಾ ?

ನಾನು : ಹು ! ನೀನ್ ನೋಡ್ಬೇಕು Z... ನಡಿಯಕ್ಕೆ ಜಾಗಾನೇ ಇರಲ್ಲ....ಸದಾಕಾಲ ಪಾರ್ಕಲ್ಲಿ ಜನ ತುಂಬಿ ತುಳುಕ್ತಿರ್ತಾರೆ. ಆದ್ರೆ ಏನ್ ಸಿಗ್ಲಿ ಬಿಡ್ಲಿ...ಪಾರ್ಕಿನಲ್ಲಿ entertainment ಗೆ ಏನೂ ಕಮ್ಮಿ ಇಲ್ಲ.

Z : ಹ ಹ !! ಹೌದಾ ?

ನಾನು : ಹೂ...ನೋಡು ಬೆಳಿಗ್ಗೆ ಬೆಳಿಗ್ಗೆ ಎಂಟು ಘಂಟೆ ಗೆ ನಾನು ಹೋಗ್ತಿನಾ ? ಆಗ ಬರೀ ಅತ್ತೆಮಾವಂದಿರದ್ದೇ ಕಾರುಬಾರು. ಕೆಲವರು ಅರ್ಥರೈಟಿಸ್ ಗೋಳಿಂದ ನಿಧಾನಕ್ಕೆ ನಡೆಯುತ್ತಿದ್ದರೆ, ಇನ್ನು ಕೆಲವರು ವಾಕಿಂಗ್ ಟ್ರಾಕ್ನಲ್ಲಿ ಜಾಗಿಂಗ್ ಮಾಡುತ್ತಿರುತ್ತಾರೆ. ಮಧ್ಯವಯಸ್ಕರು ಪಾರ್ಕಿನ ಹೊರಗೆ ಜಾಗಿಂಗ್ ಕಮ್ ಪ್ರದಕ್ಷಿಣೆ ಹಾಕುತ್ತಿರುತ್ತಾರೆ. ಮಕ್ಕಳು (ಒಂದೆರಡು ವರ್ಷದವು) ಉಯ್ಯಾಲೆ ಮೇಲೆ ಹತ್ತಿ ಇಳಿಯಲು ಆಗದೆ ಗೊಳೋ ಎಂದು ಅಳತ್ತಿದ್ದರೆ, ಸ್ವಲ್ಪ ದೊಡ್ಡ ಮಕ್ಕಳು ಜಾರುವ ಬಂಡೆ ಹತ್ತಿ ಜಾರಲು ಹೆದರಿ ಅಮ್ಮ ಅಮ್ಮ ಅಂತ ಕಿರುಚುತ್ತಿರುತ್ತಾರೆ. ಕಾಲೇಜು ಮಕ್ಕಳು ಶಾಂತ (?) ವಾತಾವರಣಾದಲ್ಲಿ ಓದಲು ಬಂದರೆ, ಇನ್ನು ಕೆಲವರು ಮುಂಜಾನೆ ಪ್ರೇಮದ ಗುಂಗಲ್ಲಿರುತ್ತಾರೆ. ತೀರಾ ವಯಸ್ಸಾದವರ ಲಾಫಿಂಗ್ ಕ್ಲಬ್ಬು, ಯೋಗಪಟುಗಳ ಪ್ರಾಣಾಯಾಮ, ಇವೆಲ್ಲ ನೋಡಸಿಗುತ್ತವೆ ಪಾರ್ಕಿನಲ್ಲಿ. ಆದರೆ ಜಬರ್ದಸ್ತ್ ಮಜಾ ಸಿಗುವುದೆಂದರೆ ಒಂದು ರೌಮ್ಡ್ ಹಾಕುವುದರೊಳಗೆ ನನ್ನ ಕಿವಿಗೆ ಬೀಳುವ ಅರ್ಧಮರ್ಧ ಮಾತುಗಳು.

Z : ಹೆ ಹೆ...ಹೇಗಿರತ್ವೆ ಅವೆಲ್ಲಾ....

ನಾನು : ನಾನು ಇದುವರೆಗೂ ಕೇಳಿದ ಮಾತುಗಳಾನ್ನೆಲ್ಲಾ ಹಾಕಿದರೆ ಇದು ಮಹಾಕಾವ್ಯವಾಗುತ್ತದೆ. ನೆನಪಿದ್ದಷ್ಟು ಹಾಕುತ್ತೇನೆ. ಅಂದರೆ ಒಂದು ರೌಂಡಿನಲ್ಲಿ ನಮಗೆ ಕೆಳಸಿಗುವಷ್ಟು. ಒಂದೊಂದು ಲೈನೂ ಒಂದೊಂದು ಬೆಂಚಿನವರದ್ದು, ಮತ್ತು ಮಧ್ಯ ಮಧ್ಯ ನಡೆಯುತ್ತಾ ಮಾತಾಡುವವರದ್ದು.

.....ಏನ್ರೀ ಹೇಗಿದ್ದೀರಾ ?...ಏನ್ ಇಷ್ಟ್ ಬೇಗ..
....ಸತ್ತೋದ್ನಂತೆ ರೀ ಮೊನ್ನೆ.....ನನಗೆ ಇವತ್ತು....
...ವಾಕಿಂಗ್ ಆಧ್ಮೇಲೆ ಹೋಟೆಲಲ್ಲಿ ಬಜ್ಜಿ ಕೊಡಿಸುವುದನ್ನ ಮರೆಯಬೇಡಿ ಮಹಾರಾಯರೇ....
...ನಮ್ಮ ಯೆಡಿಯೂರಪ್ಪ ಮುಖ್ಯಮಂತ್ರಿಯಾದ ಮೇಲೆ....
...ಹೆಂಡತಿ ಮಾತ್ ಕೇಳಿ ಕೆಟ್ಟೋದಾ ರೀ ನನ್ನ ಮಗ.....
....ಸಂಸಾರ ಅಂದ್ರೆ ಏನಂತಾ ತಿಳ್ಕೊಂಡಿದೀರಾ ?
.....(a+b) (a-b) = a2 - b2......
....ನನ್ನ ಮಗಳು ಮದ್ವೆಯಾದ್ಮೇಲೆ ಈಕಡೆ ......
....ತ್ರಿಶಂಕು ಸ್ವರ್ಗ ಆಗೋಗಿದೆ ನನ್ನ ಸ್ಥಿತಿ.....
....ತೂ ಮಿಲೆ...ದಿಲ್ ಖಿಲೇ ಔರ್ ಜೀನೆ ಕೊ ಕ್ಯಾ ಚಾಹಿಯೇ...[ನಡೆಯುವವರ ಎಫ್ ಎಮ್ ಹೊಡೆದುಕೊಳ್ಳುತ್ತಿರುತ್ತದೆ]
...ಮೂರು ದಿನದಿಂದ ನೀರಿಲ್ಲದೇ ನರಳುತ್ತಿದ್ದೇವೆ ರಿ....ಆ ಕೊಳಾಯಿಯವ.....
....ದಿನ ಬೆಳಿಗ್ಗೆ ಒಂದೇ ಸಮನೆ ನನ್ನ ಮಗ ಸೊಸೆ...
...ವರ್ಣಮಾಲೆ ಹೇಳುತ್ತಾ ನಗಿ ಎಲ್ಲಾರು...ಅ ಆಆಆಆ.....ಇ ಈಈಈಈಈಈಈ........
......ನೆನ್ನೆ ಮುಕ್ತಾ ಮುಕ್ತಾ ಸೀರಿಯಲ್ಲಲ್ಲಿ ಏನಾಯ್ತು ರಿ ?
...ಅವ್ನು ಮಾಡಿರೋ ಪಾಪಕ್ಕೆ ನೆಗದ್ ಬಿದ್ದು ನಲ್ಲಿಕಾಯಾಗಿ ಹೋಗ !!......
....ಸ್ಟಾಕ್ ಮಾರ್ಕೆಟ್ಟು ಯಾವ್ ರೀತಿ ಮೊಗಚ್ಕೋತು ರಿ....
.....ನೆನ್ನೆ ಅಕ್ಸಾಲಿ ಹತ್ರ ನೆಕ್ಲೇಸಿಗೆ ಹಾಕ್ ಬಂದೆ ರಿ...ಮೂವತ್ತ್ ಗ್ರಾಮು....
....ಪ್ರಾಫಿಟ್ ಎಷ್ಟು ಅಂತ .....
....ನಾನೂರೈವತ್ತಕ್ಕಿಂತ ಹೆಚ್ಚ್ ಕೊಡ್ಕೂಡದು ರೀ ಕೆಲ್ಸದವರಿಗೆ.......
....ವಿದ್ಯಾರಣ್ಯಪುರದಲ್ಲಿ ನನ್ನ ತಂಗಿ.....
....ಯೆ......ಕ್ಯಾ ಹುಆ......[ರಿಂಗ್ ಟೋನು]
....ಹೊಸಾ ಕಾರ್ ತಗೊಳ್ಳಣಾ ಅಂತ ಹೋದೆ ನೆನ್ನೆ.....
....ಹತ್ತ್ ಸಾವ್ರ ಅಂತೆ ರೀ...ಏನ್ ಬೆಲೆ ಏನ್ ಕಥೆ......
...ನನಗೆ ನನ್ನ ಮನೆ ಪ್ರಾಬ್ಲೆಮ್ ಏ ಸಾಲ್ವ್ ಮಾಡಾಕ್ಕೆ ಆಗ್ತಿಲ್ಲಾ.... ಏನ್ ಹೇಳಲಿ ನನ್ನ ಮಗನಿಗೆ ?...
...I love you I love you !!!I really love you...pleeeeeeasssssssssseeeeeeeeeee......
...ಎಲ್ಲ್ಲಾರು ನಿಮ್ಮ ಇಷ್ಟದೇವತೆಯನ್ನ ನೆನೆಸುತ್ತಾ ಧ್ಯಾನ ಮಾಡಿ...ಓಂ....
..ಜಲಜಲಜಲಜಲಜಾಕ್ಷೀ ಮಿಣ ಮಿಣ ಮಿಣ ಮೀನಾಕ್ಷೀ ಕಮಕಮಕಮಕಮಲಾಕ್ಷೀ ಪಟ ಪಟಪಟ ಪಂಚರಂಗಿ ಬಾರೆ...ಐಥಲಕಡಿ ಬಾರೆ !...[ಮ್ಯೂಸಿಕ್ ಪ್ಲೇಯರ್ರು...ಎನ್ ಸೀರೀಸು]

Z : ಉಹಹಹಹಹ !!!!!!!!!!!!!!

ನಾನು : ಇನ್ನು ಇದೆ...ಎಲ್ಲರ ಮನೆಯ ಪ್ರಾಬ್ಲೆಂ ಗಳನ್ನು ಕೇಳಿ ಇವರಿಗೆ ಮನಶ್ಶಾಂತಿ ದೊರೆಯುತ್ತದೆ. ಹುಡುಗ ಹುಡುಗಿಯರು ಮದುವೆಗೆ ಇದ್ದರೆ ಆ ವಿಷಯವೆಲ್ಲವೂ ಪಾರ್ಕಿನಲ್ಲಿ ಗೊತ್ತಾಗುತ್ತದೆ. ಇದ್ದದ್ದನ್ನು ಇದ್ದಂತೆಯೇ ಇಲ್ಲಿ ಒಬ್ಬರೂ ಹೇಳಲೊಲ್ಲರು. ಕೆಲವರು ಅವರ ಮಕ್ಕಳು ಕೆಲಸ ಮಾಡುತ್ತಿರುವ ಕಂಪನಿಯ ಹೆಸರು ಹೇಳಲು ತಡವರಿಸುತ್ತಿದ್ದರೆ, ಮತ್ತೆ ಕೆಲವ job designation ಹೇಳಲಾಗದೇ ಒದ್ದಾಡುತ್ತಿರುತ್ತಾರೆ. ಇಲ್ಲಿ ಮೌನವಾಗಿ ವಾಕಿಂಗ್ ಮಾಡುವವರು ತೀರಾ ಕಮ್ಮಿ. ನಾನು ಮೌನವಾಗಿರಲು ಬಯಸಿ ಸ್ವಲ್ಪ ಲೇಟಾಗೇ ಹೋಗುತ್ತೇನೆ. ಆದರೂ ದುರಾದೃಷ್ಟಕ್ಕೆ ನಮ್ಮ ಅಮ್ಮನ ಶ್ರೋತೃಬಂಧುಗಳೋ, ಶಿಷ್ಯಕೋಟಿಗಳು, ಅಥವಾ ಅಣ್ಣನ ಸ್ನೇಹಿತರೋ ಸಿಕ್ಕರೆ ನನ್ನ ಗತಿ ಅಷ್ಟೆ. ನಾನು ಅವರ ಪ್ರಶ್ನೆಯ ಸುರಿಮಳೆಯನ್ನು ತಾಳಲಾಗದೇ, ಅವರ ಕಣ್ಣು ತಪ್ಪಿಸಲು ವಾಕಿಂಗ್ ಬದಲು ರನ್ನಿಂಗ್ ಶುರು ಮಾಡಬೇಕಾಗುತ್ತದೆ.


ಎಲ್ಲದಕ್ಕಿಂತಾ ದೊಡ್ಡ entertainment ಅಂದರೆ, ಕೆಲವರು ವಾಕಿಂಗ್ ಮಾಡತ್ತಾ ಕೈ ಕಾಲು ಅಲ್ಲಾಡಿಸುವುದು ಮತ್ತು ಚಪ್ಪಾಳೆ ತಟ್ಟುತಾ ವಾಕಿಂಗ್ ಮಾಡುವುದು. ಅವರನ್ನು ನೋಡುವ ಸಣ್ನ ಮಕ್ಕಳು ..."ಮಮ್ಮಿ...ಐ ವೋಂಟ್ ಕಮ್...ದೇರ್ ಇಸ್ ಪಿ ಟಿ ಟೀಚರ್ ದೇರ್...ಹಿ ವಿಲ್ಲ್ ಬೀಟ್"...ಎಂದು ಅಳುತ್ತಿರುತಾರೆ. ನನಗೆ ನಗು ತಡೆಯದಾಗುತ್ತದೆಯಾದರೂ ನಾನು ನಗುವ ಹಾಗಿಲ್ಲ.

Z : :-) :-) ನಗು ಬಂದಾಗ ನಗೋದಪ್ಪ...

ನಾನು : ಹಾಗಾಗಲ್ಲ Z ... ಲಾಫಿಂಗ್ ಕ್ಲಬ್ಬಿನಲ್ಲಿ ಪ್ರಯತ್ನಪೂರ್ವಕವಾಗಿ ನಕ್ಕರೆ ಅದು ತಪ್ಪಲ್ಲ .ಆದರೆ ಇದನ್ನೆಲ್ಲ ನೋಡಿ ನಾನು ಸಹಜವಾಗಿ ಹೊಟ್ಟೆ ಹಿಡಿದು ನಕ್ಕರೆ ಅದು ಸಖತ್ ದೊಡ್ಡ ತಪ್ಪು !

Z : pity !

ನಾನು : yes. ಒಮ್ಮೊಮ್ಮೆ ನಾನು ಸಾಯಂಕಾಲವೂ ವಾಕಿಂಗ್ ಹೋಗುತ್ತೇನೆ. ಆಗ ಯಂಗ್ ಜನರೇಷನ್ ಮಾತಿನಲ್ಲಿ ನಿರತವಾಗಿರುತ್ತದೆ.
ಆಗ ಕೇಳಸಿಗುವಂತಹ ಅಣಿಮುತ್ತುಗಳು.
i tell you....my project leader...
......extremely hot !!!!!!!!!!....i just cant...
...what do you think we can do about...
chuck the whole damn project man.....
...i was googling today about....
...man !! huge money in there !!....
...where's the party tonight ?...
...i quit the job....
...i just cant tell my parents that....
....money waste...no use..
....i love you....
...new MP4 ?
....man !! whatta car !!...
... I love his specs...
.....seriously....
...you are more important than my phone....
...i ransacked his room....
...hopeless cubicle life.....
....shut up !!!...
.....oops ! no shopping today ?...
...i really love you....
...i have decided to break up....
...life is never satisfying I tell you....
...all gyan...just gyaan...all meetings are about...
...good biscuits and hopeless coffee...
...when are you tying the knot ?....
...divorces are inevitable consequences of marriages....
....i am sick and tired....
...i am loving it !!...

ಇವೇ ಮುಂತಾದವು !!

Z : ROFL....

ನಾನು : ಸರಿ..ನಗ್ತಿರು ! ನಾನ್ ಹೊರಟೆ ವಾಕಿಂಗ್ ಗೆ !

ಅಥ ಉದ್ಯಾನೋಪಾಖ್ಯಾನಃ ಸಂಪೂರ್ಣಃ

Sunday, April 20, 2008

ಅಥ ಏಕೋನವಿಂಶತಿತಮ ಪುರಾಣಮ್ - ಆಟೋ ಪುರಾಣಮ್ - passport interview ಕಾಂಡಃ

Z : ಅರ್ರೆ ಹೌದು......ನಿನ್ ಕೈಗೆ ಪಾಸ್ ಪೋರ್ಟ್ ಬಂತಾ ? ನಿನ್ನ ಯಾವ್ದೋ application ಗೆ passport required ಅಂತಿತ್ತಲ್ವಾ ?

ನಾನು :ಹೌದು. For some purpose . ಕಡೆಗೂ ಬಂತು !! with great difficulty . interview ಆಯ್ತಲ್ಲ last sem exam time nalli. ಅಲ್ಲಿ ನಡೆದ ಕಥೆ ಉಪಪುರಾಣ ಆಗತ್ತೆ Z . ಈಗ ಈ ಆಟೋ ಕಥೆ continue ಮಾಡ್ತಿನಿ.

Z : ಹ ಹ....ಮುಂದುವರೆಸು !

ನಾನು : ಕೀರ್ತನಾರಂಭಕಾಲದಲ್ಲಿ....

Z : ಅದೆಲ್ಲ ನಾನೆ ಮನಸ್ಸಿನಲ್ಲಿ ಹೇಳ್ಕೊತಿನಿ....come to the point.

ನಾನು : ಲೇ !!! ಇದು ಪುರಾಣ !! ಇದಕ್ಕೆ ಸಿಕ್ಕ್ ಸಿಕ್ಕಾಪಟ್ಟೆ description, length ಇರ್ಬೇಕು ಅನ್ನೋದು ಪುರಾಣದ definition u . ಒಬ್ಬ physicist ಆಗಿ definition follow ಮಾಡ್ದೇ ಇದ್ರೆ ಗತಿ ಯೇನು ?????

Z : ನೀನು definition ನ follow ಮಾಡದೇ science ನ revolutionise ಮಾಡು head ruled !!! break the rules !!!


ನಾನು : ಆಗಲ್ಲ....chance ಎ ಇಲ್ಲ. ನಾನು ನಿನ್ ಥರ ಹೇಗ್ ಹೇಗೋ ಯೋಚನೆ ಮಾಡೋಕೆಲ್ಲ ಆಗಲ್ಲ. i am basically very organised in thought u see....


Z : ಜನ್ಮದಲ್ಲಿ ಹಠ ಬಿಡಲ್ಲ...ಸರಿ ಮಾ.....ಶುರು....


ನಾನು : ಕಲಿಯುಗದ ಪ್ರಥಮ ಪಾದದಲ್ಲಿ, ಶಾಲೀವಾಹನ ಶಕೆಯಲ್ಲಿ, 2007 ನೇ ವರ್ಷದಲ್ಲಿ, ಮಾರ್ಗಶಿರ ಮಾಸದಲ್ಲಿ(december 20th ) ರಂದು ಕಾಲೇಜಿನಲ್ಲಿ ಪರೀಕ್ಷೆ ಮುಗಿದ ಮಾರನೇ ದಿನದ [ಅ]ಶುಭ ಮುಹೂರ್ತದಲ್ಲಿ, ಭಾಗ್ಯದಾಯಕವಾದ ಬಲಗಾಲನ್ನು ತ್ರಿಚಕ್ರವಾಹನದಲ್ಲಿ ಮೊದಲು ಇಟ್ಟು ಕುಳಿತಿದ್ದೆಯಾದರೂ ಸಂಭವಿಸಿದ [ದುರ್]ಘಟನೆ ಇದು !


exam ಮುಗಿದು ಹೋಯ್ತು ಅಂತ ಸಖತ್ ಖುಷಿ ಆಯ್ತು !! ಮಧ್ಯಾಹ್ನ ಕೋರಮಂಗಲ ಪಾಸ್ಪೋರ್ಟ್ ಆಫೀಸಿಗೆ ಹೋಗಿ interview attend ಮಾಡೋದಿತ್ತು. ಅದಕ್ಕೆ ಕೆಲವು documents ಬೇಕಿತ್ತು. documents ತಗೊಂಡು, ಕತ್ರಿಗುಪ್ಪೆ ಇಂದ gandhi bazaar ಗೆ ಹೋಗಿ ಅಲ್ಲಿಂದ ಇನ್ನಷ್ಟು documents collect ಮಾಡಿಕೊಂಡು ಕೋರಮಂಗಲಕ್ಕೆ ಹೋಗಬೇಕಿತ್ತು. ಸರಿ, ಕತ್ರಿಗುಪ್ಪೆ ಇಂದ ಬಸ್ ನಲ್ಲಿ ಹೋಗಲು ಕಾದೂ ಕಾದೂ ಸಾಕಾಗಿ,ಕಡೆಗೆ ಆಟೋ ಹತ್ತಿದೆ.

Z : so far so good. continue.

ನಾನು : ಅವನು ಗಾಡಿ ಸರಿಯಾಗೇ ಓಡಿಸಿದ.....ಗಾಂಧಿ ಬಜಾರ್ನಲ್ಲಿ ನಿಲ್ಲಿಸಿದ. ಮೀಟರ್ ನಲವತ್ತು ತೋರ್ಸ್ತಿತ್ತು. ಕತ್ರಿಗುಪ್ಪೆ ಇಂದ exactly 3.5 kms ಇದೆ . 21 ಆಗ್ಬೇಕಿತ್ತು ಅಂತ ಕೇಳಿದೆ.


ಅವನು : ಮೇಡಮ್.....ಮೀಟರ್ ಸರೀಗಿದೆ. ನಿಮಗೆ ಮೀಟರ್ ಹೇಗೆ ಓಡತ್ತೆ ಅಂತ ಗೊತ್ತಿಲ್ಲ...ಸುಮ್ಮನೆ ಮಾತಾಡದೇ ನಲವತ್ತು ರೂಪಾಯಿ ಕೊಡಿ.

ನಾನು : ಮೀಟರ್ ಹೇಗೆ ಓಡತ್ತೆ ಅಂತ ನಮಗೆ ಗೊತ್ತಿಲ್ಲಾ ಅಂದುಕೊಂಡಿದೀರಾ ? ೨ ಕಿಲೊಮೇಟರ್ ಗೆ ಹನ್ನೆರಡು ರೂಪಾಯಿ,( last december nalli rates revise aagirlilla ) . ನಂತರ ಪ್ರತಿ ನೂರು ಮೀಟರ್ ಗೆ ಐವತ್ತು ಪೈಸೆ ತಾನೆ ?

ಅವನು :ನೂರು ಮೀಟರ್ ನ ಹೇಗೆ ಅಳಿತೀವಿ ಅಂತ ನಿಮ್ಗೆ ಗೊತ್ತಿಲ್ಲ ಮೇಡಮ್....ಗಲಾಟೆ ಮಾಡ್ಬೇಡಿ...ಈಗಿನ ಕಾಲದ ಮಕ್ಕಳು...ಬರೀ ಪುಸ್ತಕದ ಬದನೇಕಾಯಿ...ಒಂದು ಚೂರು common sense ಇಲ್ಲ.

ನಾನು : ಓಹ್ !! ನನ್ನ common sense and general knowledge ವರೆಗೂ ಬಂತಾ ಈ ವಿಷಯ ? ಸರಿ, ತಾವು ಸರ್ವಜ್ಞರಲ್ಲವೇ ? ಎರಡು light ಕಂಬಗಳ ನಡುವಿನ ಅಂದಾಜು ಅಂತರ ಯೆಷ್ಟು ?

ಅವನು : ಮೌನ.

ನಾನು : ಸರ್ವಜ್ಞರೇ...ಮರೆತುಹೋಗಿದ್ದೀರಿ ಅನ್ಸತ್ತೆ...ಹೋಗ್ಲಿ ಬಿಡಿ, ಎರಡು ಬಸ್ ಸ್ಟಾಪ್ ನಡುವಿನ ಅಂತರ ಯೆಷ್ಟು ?

ಅವನು : ಮೌನ continued.

ನಾನು : common sense ಇಲ್ಲ ಅಲ್ವಾ ನಮ್ಗೆ ? ಅದಕ್ಕೆ ನೋಡಿ ನಮ್ಗೆ ಗೊತಾಗಿರೋದು, ಎರಡು light ಕಂಬಗಳ ಅಂದಾಜು ಅಂತರ ಐವತ್ತು ಮೀಟರ್‍ ಮತ್ತು ಎರಡು ಬಸ್ ಸ್ಟಾಪ್ ನ ಅಂತರ ಅರ್ಧ ಕಿಲೋಮೀಟರ್ (ಕೆಲವೊಮ್ಮೆ ಒಂದು ಕಿಲೋಮೀಟರ್)ಅಂತ....ನಿಮ್ಗೆ common sense ಇದೆ...ಅದಕ್ಕೆ ಗೊತಾಗ್ಲಿಲ್ಲ.

ಅವನು : ಇರ್ಬಹುದು...ಅದಕ್ಕೂ ಇದಕ್ಕೂ ಏನ್ ಸಂಬಂಧ ? ಕೊಡಿ ದುಡ್ಡು.

ನಾನು : ನಾನು ಮೊದಲಿಂದಲೇ ಗಮನಿಸ್ತಾಯಿದೀನಿ...ನಿಮ್ಮ ಮೀಟರ್ರು ಒಂದೇ ಕಿಲೋಮೇಟರ್ ಗೆ ಓಡಕ್ಕೆ ಶುರು ಮಾಡಿದೆ...ಸೀತಾ ಸರ್ಕಲ್ಲಿಗೆ ಬರೋವಾಗ್ಲೇ ಮೀತರ್ ಓಡ್ತಿತ್ತು..(ಕತ್ರಿಗುಪ್ಪೆ ಇಂದ ಸೀತಾ ಸರ್ಕಲ್ಲು ಒಂದು ಕಾಲು ಕಿಲೋಮೀಟರ್ರು )...ಸೀತಾ ಸರ್ಕಲ್ ಎಲ್ಲಿ...ಗಾಂಧಿ ಬಜಾರ್ ಸರ್ಕಲ್ ಎಲ್ಲಿ ? ಹೇಗೂ ಪೋಲೀಸ್ ಸ್ಟೇಷನ್ ಮುಂದೆ ನೆ ಅನಾಯಾಸವಾಗಿ ಗಾಡಿ ನಿಲ್ಲಿಸಿದ್ದೀರಿ. ನಡಿರಿ ಒಳಗೆ...ಅಲ್ಲೇ ದುಡ್ದ್ settle ಮಾಡ್ತಿನಿ.

ಹತ್ತಿದೆ ಮೆಟ್ಟಿಲು ಪೊಲೀಸ್ ಸ್ಟೇಷನ್ ದು.


ಅವ ಹಿಂದಿನಿಂದ... ಮೇಡಮ್ !!!!!!!!!!!!!!!!!!

ನಾನು : ಏನು ? ಬರ್ತಿರಾ ಇಲ್ವಾ ಒಳಗೆ ?

ಅವನು : ಕ್ಷಮಿಸಿಬಿಡಿ ಮೇಡಮ್ ...ನಿಜ್ವಾಗ್ಲು ತಪ್ಪಾಯ್ತು. ನಿಮ್ಮಂಥವರಿಗೆ ಇದೆಲ್ಲ ಗೊತ್ತಿರಲ್ಲ ಅಂದುಕೊಂಡೆ....ಸಾರಿ. ಕೊಡಿ ಯೆಷ್ಟ್ ಕೊಡ್ತೀರೊ....

ನಾನು : ತಗೊಳ್ಳಿ ಇಪ್ಪತ್ತೊಂದು ರೂಪಾಯಿ. 3. 5 kms ಗೆ.

ಮರು ಮಾತಾಡದೇ ದುಡ್ಡು ತಗೊಂಡು ಹೊರಟ. document collect ಮಾಡಿ, ಬಸ್ ನಲ್ಲಿ ಕೋರಮಂಗಲಕ್ಕೆ ಹೋದೆ !!

Z : auto meter analogy ಮೇಲೆ sewing machineಗೆ bobbin thread level indicator fabricate ಮಾಡಿ, ದಾರ ಖಾಲಿ ಆದಾಗ ಗೊತ್ತಾಗೋ ಹಾಗೆ indicator ನ fabricate ಮಾಡಿ IIsc ಗೆ select ಆಗಿದ್ದೀ ನೀನು out of some 14 thousand people in the entire country...the lucky 42 under KVPY programme ...while graduation isn't it ? ನಿನ್ ಕೈಲಿ ಸಿಕ್ಕಾಕೊಂಡ !!!

ನಾನು : yeah ! its not that I know these things because I have fabricated meters which measure distances and length, but it is common sense which everybody ought to have Z . see, ನಮಗಿಂಥದ್ದು ಗೊತ್ತಿಲ್ಲಾ ಅಂತಾನೇ ಇವರು ನಮ್ಮನ್ನ ಆಟ ಆಡ್ಸೋದು. analogue meters ದು ಒಂದು ಥರಾ ಕಾಟ ಆದ್ರೆ digital ದು ಇನ್ನೊಂದು ಥರ. ಕೆಲವು ಮೀಟರ್ಗಳಲ್ಲಿ the money increases even before the meter records 100 meters. ಇಲ್ಲಿ calibration ಎ ಸರಿಗಿಲ್ಲ . As I had designed the meters in both versions, i know the drawbacks of them. analogue meters do not show the waiting time but keep running when the engine is on in a signal...(thats why most drivers do not switch off engines) . digital ones show the waiting time, but no calibration ( that is one does not know for how many seconds/minutes the meter runs to the next value ). ಹೀಗೆ ಒಂದನ್ನೂ ಸರೀಗೆ ಮಾಡ್ದೆ, ನಮ್ಮ ದುಡ್ದನ್ನ ಅನವಶ್ಯಕವಾಗಿ ಪೋಲು ಮಾಡಿಸ್ತಾರೆ really.

We need to educate ourselves !! Its all for us....and for our protection.

Z : ನಿಜ. ಒಪ್ಪುತೀನಿ . ನಾವು ಹುಷಾರಾಗಿರ್ಬೇಕು. ಹೋಗೋವಾಗ meter ಸರಿಗಿದಿಯಾ ಅಂತ ನಿನ್ನ ಥರ ಎರಡು light poles ಮಧ್ಯದ distance ಗೆ calibrate ಮಾಡ್ಬೇಕು ಮೀಟರ್ ನ. ಇವರು ಬೇಕೂ ಅಂತ ಹಳ್ಳ ದಿಣ್ಣೆಗಳಲ್ಲಿ ಓಡಿಸ್ತಾರೆ...ನಮಗೆ ಅದನ್ನ total distance ಇಂದ subtract ಮಾಡ್ಬೇಕು ಅಂತ ಗೊತ್ತಿರತ್ತೆ....ಅದ್ರೆ meter ಗೆ ? its a measurement too !! meter keeps running !! ಆದ್ದರಿಂದ...ಕಳಪೆ ರೋಡ್ ಗಳಲ್ಲಿ ಹುಷಾರಾಗಿರ್ಬೇಕು .

ನಾನು : good ಕಣೆ !! ನೀನು ತಕ್ಕಮಟ್ಟಿಗೆ ಕಲ್ತೆ physics and maths ನ !! i am happy !! ನಿನ್ನ ಥರ ಎಲ್ಲರ್ಗೂ ಇದು ಗೊತ್ತಾದ್ರೆ ಸಾಕು. ಪುರಾಣ ರಚನೆಯ ಉದ್ದೇಶ ಸಾರ್ಥಕವಾಗತ್ತೆ.

ಇತಿ ಆಟೋ ಪುರಾಣೇ ಪಾಸ್ಪೋರ್ಟ್ interview ಕಾಂಡಃ ಸಂಪೂಣಃ

(line on hold)

(ಸಶೇಷ)

Saturday, April 12, 2008

ಅಥ ಎಕೋನವಿಂಶತಿತಮ ಪುರಾಣಮ್- ಆಟೋ ಪುರಾಣಮ್- ಸೌತ್ ಎಂಡ್ ಸರ್ಕಲ್ ಕಾಂಡ

Z : ಇರೋ ಹದಿನೆಂಟು ಪುರಾಣಗಳನ್ನೇ ಜನರಿಗೆ ಓದಕ್ಕೆ time ಇಲ್ಲ...ಇನ್ನು ನೀನು ಹತ್ತೊಂಭತ್ತನೇ ಪುರಾಣ ನ ರಚನೆ ಮಾಡಿದ್ರೆ ಗತಿ ಎನು ?

ನಾನು : ಇದು ಹಾಗಲ್ಲ ವಿಷಯ Z .ಜನರು ಆ ಹದಿನೆಂಟು ಪುರಾಣಗಳನ್ನ ನಿಧಾನವಾಗಿ ಓದಲಿ. ಆದರೆ ಇದು current issue ಬಗ್ಗೆ ಇರೋದು. ಇದನ್ನ ಓದಲು ಜನ time ಮಾಡಿಕೊಂಡರೆ ಒಳ್ಳೆಯದು. ಪುರಾಣಗಳಂತೆ ಇದನ್ನು ಓದುವುದರಿಂದ ಉಪಯೋಗವಂತೂ ಖಂಡಿತಾ ಇದೆ. But let me make myself clear. ನನಗೆ ಯಾಜ್ಞವಲ್ಕ್ಯರಂತಾಗಲಿ, ನಾರದರಂತಾಗಲೀ ಆಗಲು ಖಂಡಿತಾ ಆಸೆ ಏನು ಇಲ್ಲ. but it so happens that, It just happens !!!!

Z : ಕರ್ಮಕಾಂಡ !! continue.

ನಾನು : correction. ಇದು ಸೌತ್ ಎಂಡ್ ಸರ್ಕಲ್ ಕಾಂಡ. Well, to start with....

Z : ಲೇ..................ಕನ್ನಡದಲ್ಲಿ ಶುರು ಮಾಡು !!


ನಾನು : ಹ ! ನೆನಪಿಸಿದ್ದಕ್ಕೆ ಧನ್ಯವಾದಗಳು ( ಥ್ಯಾಂಕ್ಸ್ ಅಂದ್ರೆ ಒದಿತಾಳೇ ಅನ್ಸತ್ತೆ ! )

ಕಲಿಯುಗದ ಪ್ರಥಮ ಪಾದದಲ್ಲಿ, ಶಾಲೀವಾಹನ ಶಕೆಯಲ್ಲಿ, ೨೦೦೮ ನೇ ವರ್ಷದಲ್ಲಿ, ಚೈತ್ರ ಶುದ್ಧ ದ್ವಿತೀಯಾ (ಏಪ್ರಿಲ್ ೯ )ರಂದು ಕಾಲೇಜಿನಲ್ಲಿ ಪರೀಕ್ಷೆ ಪ್ರಾರಂಭವಾದ ದಿನದ [ಅ]ಶುಭ ಮುಹೂರ್ತದಲ್ಲಿ, ಭಾಗ್ಯದಾಯಕವಾದ ಬಲಗಾಲನ್ನು ತ್ರಿಚಕ್ರವಾಹನದಲ್ಲಿ ಮೊದಲು ಇಟ್ಟು ಕುಳಿತಿದ್ದೆಯಾದರೂ ಸಂಭವಿಸಿದ [ದುರ್]ಘಟನೆ ಇದು !

Z : hmm...ಆಮೇಲೆ....

ಕೈಯಲ್ಲಿ ನನ್ನ ಅತಿ ಭಾರವಾದ ನೀಲಿ folder-ಉ....ಅದರೊಳಗೆ ಕಷ್ಟ ಪಟ್ಟು ಕುಳಿತಿರುವ ನನ್ನ astrophysics notes...[i seriously think astrophysics notes must be in "space" ....they can be better accessed and understood there and very well written ......ಇರ್ಲಿ ಇದು ಉಪಕಥೆ ಆಗೋಗತ್ತೆ....ಪುರಾಣದ ಬಗ್ಗೆ ಮಾತಾಡೋಣ]

ಇಟ್ಕೊಂಡು ಅಕ್ರಮ - ಸಕ್ರಮ ಗಲಾಟೆಯಲ್ಲಿ ತ್ರಿಶಂಕು ಸ್ಥಿತಿಯಲ್ಲಿರುವ, ಅರ್ಧ ನಿರ್ಮಿತವಾಗಿರುವ ರಶ್ಮಿ ಕಲ್ಯಾಣ ಮಂಟಪದ ಬಳಿ ಬಂದು ನಿಂತೆ. ಎಂದಿನಂತೆ ಹತ್ತು ನಿಮಿಷ ಕಾದಮೇಲೆ ಆಟೋ ಒಂದರ ದಿವ್ಯದರ್ಶನವಾಯಿತು. "South end circle ?" ಅಂದೆ. "ಹತ್ತಿ ಮೇಡಂ" ಅಂದ. ವಿದ್ಯಾಪೀಠದಿಂದ ಬನಶಂಕರಿ ೨ನೆ ಹಂತಕ್ಕೆ ಹೋಗುವ ರಸ್ತೆಯಲ್ಲಿ ಆಟೋ ತಿರುಗಿಸುತ್ತಿದ್ದ. ನಾನು last minute revision ಮಾಡುತ್ತಿದ್ದುದರಿಂದ ಅವನು ನನ್ನ ದಾರಿ ತಪ್ಪಿಸಲು ಕಾಯುತ್ತಿದ್ದ.....But ಸಿಕ್ಕಾಕೊಂಡ.

" ಹೇಗ್ರಿ ಹೋಗ್ತಿದ್ದೀರಿ ?" ಎನ್. ಆರ್. ಕಾಲೋನಿ ಮೇಲೆ ಹೋಗಿ...ಏನು ಜಯನಗರ full ಸುತ್ತಿಸಿ south end circle ಗೆ ಕರ್ಕೋಂಡ್ ಹೋಗ್ತೀರಾ ? ಅಂತ ಸಲ್ಪ light ಆಗಿ ಗದರಿದೆ. first shock ಅವನಿಗೆ. ಅವನಿಗೆ ನಂಗೆ ಕನ್ನಡ ಬರತ್ತೆ ಅಂತಾನೇ ಗೊತ್ತಿರ್ಲಿಲ್ಲ.ಕೈಯಲ್ಲಿ folder, ನೇತು ಹಾಕಿಕೊಂಡಿರುವ ಪರ್ಸ್ ಮತ್ತು handsfree mode ನಲ್ಲಿದ್ದ ಮೊಬೈಲ್ ನೋಡಿ ನನ್ನನ್ನು ಕಾಲ್ ಸೆಂಟರ್ employee ಎಂದು ಭಾವಿಸಿದ್ದನೇನೋ !! ಬ್ರಿಟೀಷರ ಬಳುವಳಿ " ಸಾರಿ" ಪದವನ್ನು ಬಿಟ್ಟಿ ಬಿಸಾಕಿ ಗಾಡಿ ನೇರ ನಡೆಸಿ ಎನ್. ಆರ್ ಕಾಲೋನಿಗೆ ಬಂದ.ಅಲ್ಲಿಂದ ನಾಗಸಂದ್ರ ವೃತ್ತದಲ್ಲಿ ತಿರುಗಿಸಿ ಮತ್ತಷ್ಟು ಸುತ್ತಿಸಲು ನೋಡಿದ. ನಾನು ಹೀಗೆ ಬೇಡ...ಸೀಧಾ ಹೋಗಿ ಅಂದೆ. ಅವನು ಕಣ್ಣು ಕೆಕ್ಕರಿಸಿ " ಏನ್ ಮೇಡಂ ನಮಗೆ ರೂಟ್ ಗೊತ್ತಿಲ್ಲ ಅಂತ ಅಂದುಕೊಂಡಿದ್ದೀರಾ ? ನಾವೂ ಬೆಂಗಳೂರಿಗರೇ !!! " ಆಂದ. ನಾನು " ಗೊತ್ತಾಯ್ತು ಬಿಡಿ ! ನೀವು ಬನಶಂಕರಿ ಸೆಕೆಂಡ್ ಸ್ಟೇಜ್ ಗೆ ಗಾಡಿ ತಿರುಗಿಸಿದಾಗ್ಲೇ ಗೊತಾಯ್ತು ನೀವು ಬೆಂಗಳೂರಿಗರೇ ಅಂತ. ನಾವು ಹೇಳಿದ ಹಾಗೆ ಓಡಿಸೋಕೆ ನೀವು ಇರದೋ ಅಥವಾ ನಿಮ್ಮ ಆಜ್ಞೆ ಆಣತಿ ಅಪ್ಪಣೆಗಳನ್ನ ಪಾಲಿಸೋಕೆ ನಾವೋ ? " ಅಂದೆ. ಕನ್ನಡ ಕೇಳಿ ಭಯ ಆಯ್ತು ಅನಿಸುತ್ತೆ....ಸುಮ್ನೆ ಮಾತಾಡದೇ ಸೌತ್ ಎಂಡ್ ಸರ್ಕಲ್ ಗೆ ಬಂದ. ಸಿಗ್ನಲ್ ಇತ್ತು. ಪೂರ್ತಿ ಮೂರು ನಿಮಿಷ. ನಾನು " ರಾಮಕೃಷ್ಣ ಆಸ್ಪತ್ರೆ ರಸ್ತೆಯಲ್ಲಿ ಹೋಗಿ ಅಂದೆ. ಬೆಂಗಳೂರಿಗ...ಗೊತ್ತಿದೆ ಅಂತ ಕೊಚ್ಚಿಕೊಳ್ಳುತ್ತಿದ್ದ ಭೂಪನಿಗೆ. ಅವನು ನೀಟ್ ಆಗಿ ಆರ್.ವೀ ರಸ್ತೆಯಲ್ಲಿ ಗಾಡಿ ತಿರುಗಿಸಿದ. ನನಗೆ ರೇಗೇ ಹೋಯ್ತು.


Z : ಹ್ಮ್ಮ್ಮ್.....ಕಾಳಿಯ ಅವತಾರವಾಯ್ತು....ಅದೂ ಬೆಳಗ್ಗೆ ಬೆಳಗ್ಗೆ !!
ನಾನು : I couldn't help it Z . internals tension ಬೇರೆ. ಸಮಯ ಎಂಟು ಇಪ್ಪತ್ತಾಗಿತ್ತು. ೮.೪೫ ಗೆ ಪರೀಕ್ಷೆ. "ನಿಲ್ಲಿಸಿ ಗಾಡಿ" ಎಂದೆ. "ಓಹ್ ...ಸಾರಿ ಮೇಡಂ....ನೀವು ರಾಮಕೃಷ್ಣ ನರ್ಸಿಂಗ್ ಹೋಮ್ ರಸ್ತೆ ಅಂದಿರಿ....ಇಲ್ಲೇ ವೆಸ್ಟ್ ಗೇಟ್ ಬಳಿ ಯು ಟರ್ನ್ ತಗೋಂಡು ವಾಪಸ್ ಬರ್ತಿನಿ" ಅಂದ. "ಗಾಡಿ ನ ಇಲ್ಲೇ ಲೆಫ್ಟ್ ನಲ್ಲಿ ನಿಲ್ಲಿಸ್ತೀರೋ ಇಲ್ಲವೋ...." ಗುಡುಗಿದೆ. ಮೊಬೈಲ್ ಇಂದ ಚೈತ್ರಳ ತಂದೆ ಲಾಯೆರ್ ಅಂಕಲ್ ಗೆ ಡಯಲ್ ಮಾಡಲು ನಂಬರ್ ರೆಡಿಯಾಗಿಟ್ಟಿದ್ದೆ. ಆದರೆ ಪರಿಸ್ಥಿತಿ ಅಲ್ಲಿಗೆ ಹೋಗಲಿಲ್ಲ. ಅವನು ಮರುಮಾತಾಡದೇ ನಿಲ್ಲಿಸಿದ. ಮಿನಿಮಮ್ ಈಗ ಹದಿನಾಲ್ಕಾದರೂ ಅವನು ಮೀಟರ್ ಅಪ್ಡೇಟ್ ಮಾಡಿಸಿರಲಿಲ್ಲ. ಮೂವತ್ತು ರೂಪಾಯಿ ಆಗಿತ್ತು. "ನಲವತ್ತು ಕೊಡಿ...ಫಾರ್ಟಿ ರುಪೀಸ್ " ಎಂದ.

ನಾನು : " ಮೀಟರ್ conversion table ಎಲ್ಲಿ ?"

ಅವನು : "ಮನೇಲಿದೆ "

ನಾನು : ತಿಜೋರಿಯಲ್ಲಿಟ್ಟು ಬೀಗ ಹಾಕಿ. ಕಳೆದು ಹೋಗದಂತೆ ಕಾಪಾಡಿಕೊಳ್ಳಿ. ಅದಿರಲಿ, ಮೀಟರ್ ಮೂವತ್ತು ತೋರಿಸುತ್ತಿದ್ದರೆ ನಾನು ಕೊಡಬೇಕಿರುವುದು ಮೂವತ್ತೈದಲ್ವಾ...ಹೇಗೆ ನಲವತ್ತಾಯಿತು ?

ಅವನು : ಮೇಡಮ್ ನಿಮಗೆ ಈ ಲೆಕ್ಕಚಾರಗಳೆಲ್ಲಾ ಅರ್ಥ ಆಗಲ್ಲ.... ಎಂಥೆಂಥದೋ ಲೆಕ್ಕ ಮಾಡ್ಬೇಡಿ. ಕೈಯ್ಯಲ್ಲಿ ಪುಸ್ತಕ ಇದ್ದರೆ ಸಾಲದು. ಬುದ್ಧಿ ಇರಬೇಕು.

ನಾನು : ನಾನು ಓದೋಕೆ ಬರೆಯೋಕೆ ಬರದವಳೇನಲ್ಲ. ನೋಡಿ ನೀವು ಮಿನಿಮಮ್ ನ ಎರಡು ರೂಪಾಯಿ ಏರಿಸಿದ್ದೀರಿ ಎರಡು ಕಿಲೋಮೀಟರ್ ಗೆ . ಅಂದರೆ ಹಳೇ ೧೨ ರೂಪಾಯಿ ಮಿನಿಮಮ್ ನ ಆರನೇ ಒಂದರಷ್ಟು. ಆದ್ದರಿಂದ ಈಗ ಮೀಟರ್ ರೀಡಿಂಗ್ ನ ಆರನೇ ಒಂದಷ್ಟು ಭಾಗವನ್ನು ನಾವು ಕಂಡುಹಿಡಿದು, ಈ ಮೊತ್ತಕ್ಕೆ ಸೇರಿಸಿ ಒಟ್ಟು ದುಡ್ಡು ಕೊಡಬೇಕು ತಾನೆ ? ಮೂವತ್ತರ ಆರನೇ ಒಂದು ಭಾಗ ಐದು ರೂಪಾಯಿ. ಆದ್ದರಿಂದ ನಿಮಗೆ ನಾನು ಮೂವತ್ತೈದು ಕೊಡಬೇಕು ತಾನೆ ?

ಅವನು : ನಾನು ಒಪ್ಪಲ್ಲ. ನಿಮಗೆ ಹೇಗೆ ಗೊತ್ತಾಯ್ತು ಇದು ?

ನಾನು : ಎಲ್ಲರನ್ನೂ ಕುರಿಗಳು ಅಂದುಕೊಂಡಿದ್ದೀರಾ ನೀವು ? ನಮಗೆ ದೇವರ ಕೃಪೆಯಿಂದ ಸ್ವಲ್ಪ ಬುದ್ಧಿ ಇದೆ.ನಿಮ್ಮ conversion table ನ line by line ಬರೆದು ತೋರಿಸಲಾ ? 12.50 ರಿಂದ ಹಿಡಿದು 15 ರೂಪಾಯಿ ವರೆಗೆ ನನ್ನ ಲೆಕ್ಕಾಚಾರದ ಪ್ರಕಾರ ಮೊಬೈಲ್ ನಲ್ಲಿ ಮಾಡಿ ತೋರಿಸಿದೆ. ಅವನಿಗೆ ಬೆವರಿಳಿಯಿತು. ಮೂವತ್ತೈದು ತಗೊಂಡು ಜಾಗ ಖಾಲಿ ಮಾಡಿ. ಏನಾದರೂ ಹೆಚ್ಚಿಗೆ ದುಡ್ಡು ಬೇಕಿದ್ದರೆ ಬಸವನಗುಡಿ ಪೋಲೀಸ್ ಸ್ಟೇಷನ್ ಗೆ ಬನ್ನಿ...ಮಾತಾಡೋಣ.
ಅವನು : " ಪೋಲಿಸ್ ಸ್ಟೇಷನ್ ವಿಷಯ ಎತ್ತಬೇಡಿ . ಸರಿ...ಐದು ರೂಪಾಯಿ ದಿಸ್ಕೌಂಟ್ ಕೊಡ್ತೀನಿ...ಕೊಡಿ ಮೂವತ್ತೈದೇ "
ನಾನು : ದಿಸ್ಕೌಂಟ್ ಪದದ ಅರ್ಥ ಗೊತ್ತಿದಿಯೇನ್ರಿ ನಿಮಗೆ ? ನಾನು ಕೊಡಲೇನು ದಿಸ್ಕೌಂಟ್ ? ಪೂರ್ತಿ 35 ರೂಪಾಯಿ ದಿಸ್ಕೌಂಟ್ . ಬಿಡಿಗಾಸು ಕೊಡಲ್ಲ...ಹೊರಡಿ.
ಅವನು : ಮೇಡಂ...ತಪ್ಪಾಯ್ತು. ಮೊದಲ ಬೋಣಿ ನೀವೇ ಮಾಡಬೇಕು. ಕೊಡಿ ಮೂವತ್ತೈದೆ.
ಮೂವತ್ತೈದು ರೂಪಾಯಿ ಕೊಟ್ಟು ಅಲ್ಲಿಂದ ನಮ್ಮ ಕಾಲೇಜಿಗೆ ಬರುವ ಹೊತ್ತಿಗೆ ಪರೀಕ್ಷೆಗೆ ಎಲ್ಲಾ ಸಿದ್ಧತೆ ನಡೆದಿತ್ತು. ಬಂದದ್ದೇ ನನ್ನ ಸ್ನೇಹಿತೆಯೊಬ್ಬಳು-
" what happened lakshmi ? Anything wrong ? you look upset . " ಅಂದಳು.

ನಾನು : No yaar..nothing. I had a fight with an auto driver and was stuck there for almost 10 minutes. That took my time. "
ಅವಳು : Is he there even now ? You want me to come down and talk to him ?
ನಾನು : No, he is gone. I thought I would be late. But thankfully... I am just in time.

Z : ರಾಮಾ....internals start ಆಗೋಗಿದ್ದಿದ್ರೆ ಗತಿ ಏನು ? ಪೋಲೀಸ್ ಸ್ಟೇಷನ್ ಅಂತೆಲ್ಲ ನೀನು ಒಬ್ಬೊಬ್ಬ್ಳೆ ಹೋಗೋದು ಸರಿ ಇಲ್ಲ head ruled !

ನಾನು : ಸುಮ್ಮನೆ ಇರು.ನಿನ್ನಂಥವರು ಹೀಗೆ ಹೆದರೋದರಿಂದಲೇ ಇಷ್ಟೆಲ್ಲ ಆಗಿ, ಇಂಥವರೆಲ್ಲ ಕೊಬ್ಬಿ ಹೋಗಿರೋದು. ನಾವು ಹೆದರಿದರೆ ನಮ್ಮನ್ನು ಹೆದರಿಸಲು ಲೋಕ ಕಾಯ್ತಾಯಿರತ್ತೆ. ಧೈರ್ಯಂ ಸರ್ವತ್ರ ಸಾಧನಮ್. ನೆನಪಿಟ್ಟುಕೋ. ಅಷ್ಟಕ್ಕು...ಬಸವನಗುಡಿಯಲ್ಲಿ ಮಹಿಳಾ ಪೋಲೀಸ್ ಠಾಣೆ ಇದೆ. ಸರ್ಕಲ್ ಇನ್ಸ್ಪೆಕ್ಟರ್ ಅಪ್ಪನಿಗೆ ಗೊತ್ತಿದ್ದಾರೆ. ನನಗೆ ಭಯ ಇಲ್ಲ. ಗೊತ್ತಲ್ಲ ನಿಂಗೆ ? ಜನ್ಮ ಜಾಲಾಡ್ಬಿಡ್ತೀನಿ ಯಾರಾದ್ರು ತಕರಾರು ಮಾಡಿದ್ರೆ. ಅದಕ್ಕೂ ಬಗ್ಗದಿದ್ದರೆ ಇವರೆಲ್ಲ ಇದ್ದಾರಲ್ಲ !!


Z : ನೀನು ಹೇಳೋದು ಸರಿನೇ. ನಾವು ಹೆದರಿ ಏನೂ ಪ್ರಯೋಜನ ಇಲ್ಲ. We have to learn to defend and protect ourselves. World is not a safe place anymore !!

ನಾನು : Very true ! ನಾವೂ ಸ್ವಲ್ಪ ಹುಶಾರಾಗಿರ್ಬೇಕು. ನಾವು ಏನೆ tension ನಲ್ಲಿ ಇರಲಿ, ಫೋನ್ ನಲ್ಲಿ ಮಾತು ಕಥೆಯಲ್ಲಿರಲಿ, ಓದುತ್ತಿರಲಿ, ಹೋಗುತ್ತಿರುವ ರಸ್ತೆಯ ಬಗ್ಗೆ ಎಚ್ಚರ ವಹಿಸಬೇಕು. ಗಮನ ವಹಿಸದೇ ಅವರು ನಮಗೆ ಮೋಸ ಮಾಡಲು ಪ್ರಚೋದನೆ ನೀಡಬಾರದು .

ಇತಿ ಅಟೋ ಪುರಾಣೇ ಸೌತ್ ಎಂಡ್ ಸರ್ಕಲ್ ಕಾಂಡಃ ಸಂಪೂರ್ಣಃ

ಇನ್ನೊಂದು ಕಾಂಡದ ಕಥೆಯನ್ನು ಅತಿ ಶೀಘ್ರದಲ್ಲಿ ಹೇಳುವೆ.
ಅಲ್ಲಿಯವರೆಗೂ ...Line on hold.

(ಸಶೇಷ)

ಉತ್ತರಾಯಣ ೩

ನಾನು: ಬೃಂದಾವನಕ್ಕೆ ಹೊರಡಲು ನಾಲ್ಕು ಘಂಟೆಯಷ್ಟೊತ್ತಿಗೆ ರೆಡಿ ಇರಬೇಕು ಎಂದು ಮ್ಯಾನೇಜರ್ ವೆಂಕಟೇಶ್ ಅವರು ಹೇಳಿದ್ದರು. ಇವರೆಲ್ಲರೂ ಊಟ ಮಾಡಿ, ಮಲಗಿ, ಎದ್ದು ರೆಡಿಯಾಗು...