Wednesday, July 23, 2008

ತಾಯಮ್ಮ- ೨

ನಾನು : ಎಲ್ಲಿಗೆ ನಿಲ್ಲಿಸಿದ್ದೆ ಕಥೆ ನ ಮೊನ್ನೆ ?

Z : ತಾಯಮ್ಮ ಬಯಾಪ್ಸಿ ಗೆ ಒಪ್ಪಿದ್ದು.

ನಾನು : ಹಾ.....ಕರೆಕ್ಟ್. ತಾಯಮ್ಮ ಮೂರು ದಿನಗಳ ಅಧಿಕೃತ ರಜೆ ಘೋಷಿಸಿ ಹೋಗಿ ಬಯಾಪ್ಸಿ ಮಾಡಿಸಿಕೊಂಡು ಬಂದರು. ರೆಪೋರ್ಟ್ ಬರಲು ಎರಡು ದಿನವಾಯ್ತು. ಆ ಶನಿವಾರ ನನಗೆ ಯಾವುದೋ ಹಬ್ಬದ ಪ್ರಯುಕ್ತ ರಜೆ ಇತ್ತು. ತಾಯಮ್ಮ ಓಡೋಡಿ ಹೆದರಿ ನಲುಗಿ ನಮ್ಮ ಮನೆಗೆ ಬಂದರು. ಬಂದದ್ದೇ " ಅಮ್ಮಾವ್ರೆ, ವೊಟ್ಟೆಯಲ್ಲಿ ಗಡ್ಡೆ ಇದೆಯಂತೆ...ಆಪರೇಷನ್ ಮಾಡಿಸಿಕೊಳ್ಳಬೇಕಂತೆ...ಹತ್ತು ಸಾವಿರವಾಗ್ತದಂತೆ, ಆದಷ್ಟು ಬೇಗ ಮಾಡಿಸಿಕೊಳ್ಳದಿದ್ದರೆ ನಾ ಬದ್ಕಕ್ಕಿಲ್ವಂತೆ..ಆರು ತಿಂಗಳು ಮನೆಯಾಗೆ ಬಿದ್ಕಂಡಿರ್ಬೇಕಂತೆ, ಭಾರ ಎತ್ತೋಹಾಗಿಲ್ವಂತೆ, ಜಾಸ್ತಿ ನಡಿಯೋ ಹಾಗಿಲ್ವಂತೆ ...ಕೈ ಕಾಲೇ ಕಟ್ಟಾಕ್ಬಿಟ್ಟ್ರಲ್ಲ ಹೊಟ್ಟೆ ಕುಯ್ದು !? ದುಡ್ಡು ಎಲ್ಲಿಂದ ತರದು ? ಕೆಲ್ಸ ಮಾಡ್ದೆ ಎಂಗ್ ಜೀವನ ಸಾಗ್ಸೋದು ? ಆಗಕ್ಕಿಲ್ಲ...ಏನ್ ಮಾಡೊದು ? " ಎಂದು ಒಂದೇ ಉಸಿರಿನಲ್ಲಿ ಆತಂಕ ವ್ಯಕ್ತಪಡಿಸಿದರು.

ಈಗ ಯೋಚನೆ ಮಾಡುವ ಸರದಿ ನಮ್ಮದಾಗಿತ್ತು. ತಾಯಮ್ಮನಿಗೆ ನಾನು ಸಾಂತ್ವನ ಹೇಳುವೆ, ದೊಡ್ದವರೆಲ್ಲ ದುಂಡು ಮೇಜಿನ ಪರಿಷತ್ತು ನಡಿಸಿ ಎಂದು ನಾರೀಮಣಿಯರನ್ನು ನೆರೆಮನೆಗೆ ಓಡಿಸಿ, ನಾನು ತಾಯಮ್ಮನನ್ನು ಸಂತೈಸಲು ಅನುವಾದೆ. ತಾಯಮ್ಮ ಕೊರಗುತ್ತಲೇ ಇದ್ದರು, " ದುಡ್ಡಿಲ್ಲ,ಕೆಲ್ಸ ಮಾಡ್ದೆ ಇದ್ರೆ ಏನ್ ಗತಿ, ಸಾಲ ಬೇರೆ ಅಷ್ಟೋಂದು... ಬದುಕಿ ಏನಾಗ್ಬೇಕಾಗೈತೆ...." ಅಂತೆಲ್ಲ. ನಾನಂದೆ-

"ತಾಯಮ್ಮ, ನಮ್ಮಮ್ಮ ನಮಗಾಗಿ ಬದುಕುತ್ತಿರುವ ಹಾಗೆ ನೀವು ನಿಮ್ಮ ಮಕ್ಕಳಿಗಾಗಿ ಬದುಕಬೇಕು. ಪಾಪ...ಚಿಕ್ಕವು ಇನ್ನು. ನೀವೇ ಹೊಟೋದ್ರೆ ಅವರ ಗತಿಯೇನು ? ಏನೋ ಚೆನ್ನಾಗಿ ಓದ್ಕೊಂಡು, ಆಟ ಗೀಟ ಆಡ್ಕೊಂಡ್ ಇದಾವೆ. ನೀವ್ ಹೊಟೋದ್ರೆ ಅವಕ್ಕೆ ಕೂಲಿ ನಾಲಿ ಬಿಟ್ಟರೆ ಬೇರೆ ಗತಿಯಿಲ್ಲ. ಅನ್ಯಾಯ ಅವುಗಳ ಭವಿಷ್ಯ ಹಾಳಾಗೋಗತ್ವೆ. ನೀವು ನಿಮ್ಮ ಮನೆ ಕಡೆ ಗಮನ ಕೊಡಿ. ನೀವು ಆರು ತಿಂಗಳು ಕೆಲಸ ಮಾಡಬಾರದು ಅಂದಿದ್ದಾರೆ ತಾನೆ , ನಿಮ್ಮ ಯಜಮಾನರಿಗೆ ಹೇಳಿ ಸಲ್ಪ ಜಾಸ್ತಿ ಹೊತ್ತು ದಿನಸಿ ಅಂಗಡಿಯಲ್ಲಿ ದುಡಿಯೋಕೆ...ಸಂಬಳ ಜಾಸ್ತಿಯಾಗತ್ತೆ. ದುಡ್ಡಿಗೆ ದೊಡ್ಡವರು ಏನೋ ಪರಿಹಾರ ಹೇಳ್ತಾರೆ. ಇನ್ನು ಆರು ತಿಂಗಳ ಮಟ್ಟಿಗೆ ನಮ್ಮೆಲ್ಲರ ಮನೆಗೆ ಇನ್ನೊಬ್ಬ ನಂಬಿಕಸ್ಥ ಕೆಲಸದವಳನ್ನು ಗೊತ್ತು ಮಾಡಿ. ಆಗಾಗ ನಿಮ್ಮ ಮಗನ ಕೈಲಿ ಫೋನ್ ಮಾಡಿಸಿ ಯೋಗಕ್ಷೇಮ ಹೇಳಿ . ಚೆನ್ನಾಗಿ ರೆಸ್ಟ್ ತಗೊಳ್ಳೀ...ಆಮೇಲೆ ನೋಡಿ ಜಿಂಕೆ ಮರಿ ಥರ ಓಡಾಡಬಹುದು. ಆಪರೇಷನ್ ಆದ ತಕ್ಷಣ ನೀವೇನಾದ್ರು ಕಿತ್ತೂರು ರಾಣಿ ಚೆನ್ನಮ್ಮನ ಥರ ಕೆಲ್ಸಕ್ಕೆ ಬಂದ್ರಿ....ಚೂರೂ ಪಾರೂ ಆರೋಗ್ಯ ನೂ ಹದಗೆಟ್ಟು ನೀವು ಕಂಗಾಲಾಗಿ ಹೋಗ್ತೀರಿ. ನನ್ನ ಮಾತು ಕೇಳಿ ತಾಯಮ್ಮ. ಡಾಕ್ಟರ್ ಆಂಟಿ ಆಸ್ಪತ್ರೆ ಲಿ ಇರೋದ್ರಿಂದ್ಲೇ ನಿಮಗೆ ಇಷ್ಟು ಕಡಿಮೆ ದುಡ್ಡಲ್ಲಿ ಆಪರೇಷನ್ ಆಗ್ತಿರೋದು. ಇಲ್ಲಾಂದ್ರೆ ಒಂದು ಲಕ್ಷದ ವರೆಗೂ ಬರತ್ತೆ ದೊಡ್ಡಾಸ್ಪತ್ರೆಗಳಲ್ಲಿ. ಆಗತ್ತ ನಿಮ್ ಕೈಲಿ ತೂಗ್ಸಕ್ಕೆ ? ನೋಡಿ, ಅವರು ಹೇಳಿದಾಗೆ ಕೇಳಿ . ಇದೇ ವಾರದಲ್ಲಿ ಹೋಗಿ ಆಸ್ಪತ್ರೆಗೆ ಸೇರ್ಕೊಳ್ಳೀ...ಖಂಡಿತಾ ನಿಮ್ಗೇನೂ ಆಗಲ್ಲ. ಧೈರ್ಯವಾಗಿರಿ...ದೇವರಿದ್ದಾನೆ."

ನಾನೀಥರ ಮಾತಾಡಿದ್ದನ್ನು ಕೇಳಿ ತಾಯಮ್ಮನ ಕಣ್ಣಲ್ಲಿ ಮೋಡಕವಿದ ವಾತಾವರಣ. ಆದ್ರೂ ಅವರು ಅಳಲಿಲ್ಲ. ನನ್ನ ಮಾತು ಅವರ ಮನಸ್ಸನ್ನು ಮುಟ್ಟಿದೆ ಎಂದು ತೋರಿಸಲು ಅವರು ಕೆಲಕಾಲ ಸುಮ್ಮನಿದ್ದರು. ನಂತರ ಏನೋ ಭಯಗೊಂಡಂತಾಗಿ, " ಅಮ್ಮಾ...ಆಪರೇಸನ್ ಮಾಡವಾಗ ಮತ್ತ್ ಬರ್ಸೋ ಔಸ್ಧ ಕೊಡೊವಾಗ ಜಾಸ್ತಿಕೊಟ್ಟು ಪಿರಾನಾ ನೇ ಒಂಟೋದ್ರೆ ? "

Z : ಓಹ್ ಪಾಪ ! anesthesia ಅಂದ್ರೆ ಭಯ ಅನ್ಸತ್ತೆ.

ನಾನು : naturally. ಸಿರಿಂಜು ನೋಡಿದರೇನೇ ಸೈರನ್ನ್ ಹಾಕುವ ತಾಯಮ್ಮ ಇನ್ನು anesthesia ಗೆ ಹೆದರದೇ ಇರ್ತಾರ ? ನಾನಂದೆ- "ಯಾರಿಗೆ ಯೆಷ್ಟ್ ಮತ್ತ್ ಬರ್ಸೋ ಔಷಧಿ ಕೊಡ್ಬೇಕು ಅಂತ ಅವರಿಗೆ ಗೊತ್ತಿರತ್ತೇ ತಾಯಮ್ಮ. ಅದನ್ನೇ ಓದಿ ತಿಳ್ಕೊಂಡಿರ್ತಾರೆ .ಪ್ರಾಣ ಹೋಗಲ್ಲ, ಹೆದರಬೇಡಿ. ಆಪರೇಷನ್ ಆದ ಒಂದೆರಡು ಘಂಟೆಗಳಲ್ಲಿ ಎಚ್ಚರ ಆಗತ್ತೆ. ಮುಖ್ಯ ನೀವು ಧೈರ್ಯಗೆಡಬಾರದು.ಆಪರೇಷನ್ ಮುಂಚೆ ಅತ್ತು ಕರ್ದು, ಕೊನೆ ಸರ್ತಿ ನೋಡ್ಬಿಡಿ, ಆಸೆ ಎಲ್ಲ ತೀರ್ಸ್ಬಿಡಿ ಅಂತೆಲ್ಲ ಡೈಲಾಗ್ ಹೊಡಿಬೇಡಿ. ಅದ್ರಿಂದ ಮನಸ್ಸಿನ ಮೇಲೆ ಪರಿಣಾಮ ಬೀರತ್ತೆ. ಶಾಂತವಾಗಿ ಈಶ್ವರನ್ನ ನೆನೆಸಿಕೊಳ್ಳಿ. ನಿಮ್ಮ ಗ್ರಾಮದೇವತೆ ಮದ್ದೂರಮ್ಮ ದೇವರಿಗೆ ಹರಸಿಕೊಳ್ಳಿ. ಕಾಪಾಡ್ತಾರೆ ಇಬ್ರು. ಆಯ್ತಾ ? ಆಮೇಲೆ ಇದೇ ವಾರ ಆಪರೇಷನ್ ಮಾಡ್ಸಿಕೊಳ್ಳೋ ಹಾಗಿದ್ರೆ ಎರಡು ದಿನ ಮುಂಚೆ ನಮಗೆ ಫೋನ್ ಮಾಡಿ ತಿಳಿಸಿ ."

ಸಮಾಧಾನವಾಯ್ತು ಅನ್ಸತ್ತೆ ಅವರಿಗೆ. ತಲೆಯಲ್ಲಾಡಿಸಿ ಸಮ್ಮತಿಸಿದರು. ಆದ್ರು ಅವರಿಗೆ ಔಷಧಿ ಚಿಂತೆ. ನಾನು ಡಾಕ್ಟರ್ ಆಂಟಿ ಅದಕ್ಕೂ ವ್ಯವಸ್ಥೆ ಮಾಡುತ್ತಾರೆ ಎಂದು ಹೇಳಿ ಸಮಾಧಾನಗೊಳಿಸಿದೆ. ಅಷ್ಟೊತ್ತಿಗೆ ಹಿರಿಯರ ದುಂಡು ಮೇಜಿನ ಪರಿಷತ್ತು ಮುಗಿದಿತ್ತು. ತಾಯಮ್ಮ ಒಟ್ಟು ಐದು ಮನೆಗಳಲ್ಲಿ ಕೆಲಸ ಮಾಡುತ್ತಿದ್ದರು. ಎಲ್ಲರೂ ತಲಾ ಒಂದೊಂದು ಸಾವಿರ ರುಪಾಯಿ ಕೊಡಲು ಮುಂದಾದರು. ಮಿಕ್ಕೈದು ಸಾವಿರಕ್ಕೆ ಅವರ ಯಜಮಾನರು ವ್ಯವಸ್ಥೆಮಾಡಬೇಕೆಂದೂ, ಅದಾಗಲಿಲ್ಲವೆಂದರೆ ಮುಂದೆ ಯೋಚನೆ ಮಾಡಬೇಕೆಂಬುದು ನಿರ್ಧಾರವಾಯಿತು.ಸಂಬಳದಲ್ಲಿ ಸದ್ಯಕ್ಕೆ ಹಿಡಿಯುವುದಿಲ್ಲ, ಕಂತು ಕಂತಾಗಿ ಆದಾಗ ತೀರಿಸು ಎಂದು ಎಲ್ಲರೂ ಹೇಳಿದರು. ಆದರೆ ತಾಯಮ್ಮ ನೀವು ಸಂಬಳದಲ್ಲಿ ದುಡ್ಡು ಹಿಡಿದುಕೊಳ್ಳುವುದಾದರೆ ಮಾತ್ರ ದುಡ್ಡು ತೆಗೆದುಕೊಳ್ಳುವುದಾಗಿ ಹೇಳಿದರು. ನಾನು ಅವರ ಸ್ವಭಿಮಾನ ಕಂಡು ಬೆರಗಾದೆ.ನನ್ನ ದೃಷ್ಟಿಯಲ್ಲಿ ತಾಯಮ್ಮ ಬಹಳ ಉನ್ನತಸ್ಥಾನ ತಲುಪಿದರು. ಎಲ್ಲರೂ ಒಪ್ಪಿದರು. ತಾಯಮ್ಮ ಕೃತಜ್ಞತಾಪೂರ್ವಕವಾಗಿ ಅತ್ತು ಕಣ್ಣೀರಿಟ್ಟರು. ಮೆಗಾಸೀರಿಯಲ್ಲು ನೋಡಿ ಅತ್ತು ಅತ್ತು ಪಳಗಿದ್ದ ತಾಯಂದಿರೂ ಕಣ್ಣೀರ ಕೋಡಿಯನ್ನು ಸಮೃದ್ಧವಾಗಿಯೇ ಹರಿಸಿದರು.

Z : i see.... ಆಮೇಲೆ ?

ನಾನು : ಆಮೇಲೆ ಇನ್ನೇನು ? ತಾಯಮ್ಮ ಇನ್ನು ಮಾರನೇ ದಿನವೇ ಬಂದು ದುಡ್ಡು ತೆಗೆದುಕೊಳ್ಳುವುದಾಗಿ ಹೇಳಿ, ಮಾರನೇ ದಿನವೇ substitute ಕೆಲಸದವಳನ್ನ ಹುಡುಕಿ ತರುತ್ತೇನೆಂದು ಭಾಷೆಯಿತ್ತರು. ಮಹಿಳೆಯರು, ಆ ಕೆಲಸದವಳು ನಿನ್ನಂತೆಯೇ ನಂಬಿಕಸ್ಥಳಾಗಿರಬೇಕೆಂದು ತಾಕೀತು ಮಾಡೀದರು. ಯಾಕಂದರೆ ಕೆಲವರು ತಾಯಮ್ಮನಿಗೆ ಅವರ ಮನೆಯ ಬೀಗ ಕೊಟ್ಟು ಕೆಲಸಕ್ಕೆ ಹೋಗುತ್ತಿದ್ದರು.ತಾಯಮ್ಮ ಮನೆಯ ಕೆಲಸವೆಲ್ಲ ಮಾಡಿ ನಂತರ ಬೀಗ ಹಾಕಿ ಅವರ ಬಳಿಯೇ ಇಟ್ಟುಕೊಂಡಿರುತ್ತಿದ್ದರು. ಆದ್ದರಿಂದ ತಾಯಮ್ಮನ ಬಿಟ್ಟು ಬೇರೆ ಯಾರನ್ನೂ ನಂಬಲು ಮಾತಾಮಣಿಯರು ತಯಾರಿರಲಿಲ್ಲ. ಪರಿಸ್ಥಿತಿಯ ಗಾಢತೆಯನ್ನು ಅರಿತ ತಾಯಮ್ಮ ಅಂಥಾ ಮನೆಯವರಿಗೆ ಕೆಲಸದವಳನ್ನು ಅವರೇ ಹುಡುಕಿಕೊಳ್ಳಬೇಕೆಂದು ಬೇಡಿಕೊಂಡರು. ಯಾಕಂದರೆ ಹೊಸೊಬ್ಬರಿಗೆ ಬೀಗ ಕೊಡಲು ಸ್ವಯಂ ತಾಯಮ್ಮನೂ ಹಿಂಜರಿಯುತ್ತಿದ್ದರು. ಮೂರು ಮನೆಯ ಬೀಗ ತಾಯಮ್ಮನ ಸುಪರ್ದಿಯಲ್ಲಿದ್ದವು. ಅವರೆಲ್ಲರೂ ಬೇರೆ ವ್ಯವಸ್ಥೆ ಮಾಡಿಕೊಳ್ಳಲು ನಿರ್ಧರಿಸಿದರು. ನಮ್ಮ ಮನೆ ಮತ್ತು ನಮ್ಮ ಎದಿರು ಮನೆಗೆ ಕೆಲಸದವಳನ್ನು ತರುವ ಜವಾಬ್ದಾರಿ ತಾಯಮ್ಮ ಹೊತ್ತರು. ನನ್ನ ಪ್ರಾಬ್ಲೆಮ್ ಸಾಲ್ವ್ ಆಯ್ತೆಂದು ನಾನು ಸಂತೋಷ ಪಟ್ಟೆ. ಆದರೂ ಅಮ್ಮ ಹೊಸೊಬ್ಬಳು ಬರ್ತಾರೆ, ಮನೆ ಕಡೆ ನಿಗಾ ಇರಲಿ, ವಸ್ತುಗಳು ಭದ್ರ ಎಂದು ಕಿವಿಮಾತು ಹೇಳಿದರು. ಆದರ್ಶ ಮಕ್ಕಳಂತೆ ನಾನು ಮತ್ತು ನನ್ನ ತಂಗಿ ಆ ಕಿವಿಮಾತನ್ನು ಈ ಕಿವಿಯಲ್ಲಿ ಕೇಳಿ ಆ ಕಿವಿಯಲ್ಲಿ ಹೊರಹಾಕಿದೆವು.

Z : so far so good. ಆಮೇಲೆ ?

ನಾನು : ಈಗ ಪಾತ್ರೆ ತೊಳೆಯುವುದಿದೆ. ನಾಳೆ continue ಮಾಡುವೆ.

line on hold.

2 comments:

ಅಂತರ್ವಾಣಿ said...

oLLe kelsa maaDideera nerehoreyavaru sEri...

Padma said...

olle kelsa madidare narimanigalu ....

Anthu Thayamma na krupe indha neenu Pathre tholeyuvudannu kalithe alwa lakshmi.

ಉತ್ತರಾಯಣ ೩

ನಾನು: ಬೃಂದಾವನಕ್ಕೆ ಹೊರಡಲು ನಾಲ್ಕು ಘಂಟೆಯಷ್ಟೊತ್ತಿಗೆ ರೆಡಿ ಇರಬೇಕು ಎಂದು ಮ್ಯಾನೇಜರ್ ವೆಂಕಟೇಶ್ ಅವರು ಹೇಳಿದ್ದರು. ಇವರೆಲ್ಲರೂ ಊಟ ಮಾಡಿ, ಮಲಗಿ, ಎದ್ದು ರೆಡಿಯಾಗು...