ನಾನು : ಅದು ಯಾವ ಘಳಿಗೆಯಲ್ಲಿ ನನಗೆ ಒಂದು ಚೂರು ಕೆಲ್ಸ ಇಲ್ಲ ಅಂತ ಹೇಳಿದೆನೋ...ಈಗ ಒಂದು ಚೂರೂ ಬಿಡುವು ಸಿಗದಷ್ಟು ಕೆಲ್ಸ ಮಾಡುವ ಹಾಗಾಗಿದೆ !
Z : ಯಾಕೇ ? ಏನಾಯ್ತು ?
ನಾನು : ತಾಯಮ್ಮ ....ಅದೇನಮ್ಮ ಮನೆಯ ಕೆಲ್ಸದವರು....
Z : ಹುಷಾರಾಗಿದ್ದಾರೆ ತಾನೆ ? ಪಾಪ ಅವರಿಗೆ ಏನಾಯ್ತು ?
ನಾನು : ಅದೊಂದು ದೊಡ್ದ ಕಥೆ.
Z : ಹೇಳಿಬಿಡು, ಕೇಳುತ್ತೇನೆ.
ನಾನು : ಹೋದ ವರ್ಷ ಡಿಸೆಂಬರ್ ವರೆಗೂ ಏನೂ ತೊಂದರೆ ಇರಲಿಲ್ಲ. ಜನವರಿ ತಿಂಗಳ ಕೊನೆಯಲ್ಲಿ ಅಚಾನಕ್ಕಾಗಿ ತಾಯಮ್ಮ ಒಂದು ದಿನ ಕೆಲಸಕ್ಕೆ ಬರಲಿಲ್ಲ. ಏಳು ವರ್ಷದಿಂದ ಒಂದು ದಿನವೂ ತಪ್ಪಿಸದೆ, ಮದುವೆ ಮುಂಜಿ ಮುಂತಾದ ಸಮಾರಂಭಗಳಿದ್ದರೂ ಕೆಲ್ಸ ಮುಗಿಸಿಕೊಂಡೆ ಹೋಗುತ್ತಿದ್ದ ತಾಯಮ್ಮ ಗಾಯಬ್ಬಾಗಿದ್ದು ನಮಗೆ ಭಯ ತರಿಸಿತು. ಅವರಿದ್ದ ಮನೆಯ ಯಜಮಾನ ರಾತ್ರೋ ರಾತ್ರಿ ಗಲಾಟೆ ತೆಗೆದು ಅವರನ್ನು ಓಡಿಸಿದನೋ, ಅವರಿಗೆ ಹುಷಾರಿರಲಿಲ್ಲವೋ, ಮಕ್ಕಳು ಶಾಲೆಗೆ ಹೋಗುವಾಗ ಏನಾದರೂ ಅಪಘಾತವಾಯಿತೋ, ಊರಿನಲ್ಲಿದ್ದ ಅವರ ಅತ್ತೆ ಮಾವಂದಿರು ಸೀರಿಯಸ್ಸಾದರೋ, ....ಹೀಗೆ ನಮಗೆ ಯೋಚನೆಗಳು ಅಲೆಯಲೆಯಾಗಿ ಹುಟ್ಟಿಬಂದು ತಲೆಕೊಳವನ್ನು ರಾಡಿಯಾಗಿಸಿದವು. ಯೋಚನೆಯಲ್ಲಿದ್ದುಕೊಂಡೇ ಅಮ್ಮ ಕಷ್ಟ ಪಟ್ಟು ಪಾತ್ರೆ ತೊಳೆದುಕೊಂಡರು. ನನಗೆ ಕಾಲೇಜು, ತಂಗಿ ಹತ್ತನೇ ಕ್ಲಾಸು.ಅಮ್ಮ, ನಮ್ಮನ್ನ ಮಾತಾಡಿಸಲೇ ಬೇಡವೆಂದು ನಾವು ಹೇಳಿಬಿಟ್ಟಿದ್ದೆವು. ಅಮ್ಮ ಅವರ ಸಂಗೀತ ಕಚೇರಿಗಳ ಕಡೆಗೂ ಗಮನ ಹರಿಸಬೇಕಿತ್ತು. ತಾಯಮ್ಮ ದಿನಗಳ ಗಟ್ಟಲೆ ನಾಪತ್ತೆಯಾದರೆ ಗತಿಯೇನೆಂಬುದು ಡೈನಿಂಗ್ ಟೇಬಲ್ ಮೇಲಿನ ಬಿಸಿ ಬಿಸಿ ಚರ್ಚೆಯಾಯಿತು.
ಅಮ್ಮನಿಗೆ ಪಾತ್ರೆ ತೊಳೆಯುವುದು ಕೆಲವು ಮುಖ್ಯ ಕಾರಣಗಳಿಂದ ಅಸಾಧ್ಯ. ಅಮ್ಮ ಹಾಗಂತ ಸುಮ್ಮನಿರುವ ಪೈಕಿ ಅಲ್ಲ...ತೊಳೆದು ಒದ್ದಾಡುತ್ತಾರೆ. ಜೋಶ್ ಅಲ್ಲಿ ಕೆಲಸ ಮಾಡಿ ನಂತರ ಸುಸ್ತಾದರೆ ಮನೆ ಅಲ್ಲೋಲ ಕಲ್ಲೋಲವಾಗುತ್ತದೆ ಎಂಬುದು ನಮಗೆ ಗೊತ್ತಿತ್ತು. ಬೆಳಗ್ಗೆ ಅಮ್ಮ ಎಬ್ಬಿಸದಿದ್ದರೆ ನಮಗೆ ಎಚ್ಚರವಾಗುವುದೇ ಇಲ್ಲ..ಯಾರು ಎಷ್ಟೇ ಜೋರಾದ ಅಲಾರಮ್ ಇಟ್ಟರೂ ಅದು ಅಮ್ಮನ ಕೂಗಿನ ಮುಂದೆ ಏನೇನೂ ಇಲ್ಲ. ಅಪರ್ಣನಿಗೆ ಊಟ ಶಾತಾಯ ಗತಾಯ ಸ್ಕೂಲಿಗೆ ಆಗಲೇ ಬೇಕು. ಅಮ್ಮನ ಮೇಲೆ ಅಷ್ಟು dependent ನಾವು. ಹೀಗಿರುವಾಗ ಅಮ್ಮ ಸುಸ್ತಾದರೆ ನಮ್ಮ ಗತಿಯೇನು ಎಂಬುದು ನಮ್ಮ ದೊಡ್ದ ಸಮಸ್ಯೆಯಾಯಿತು.
ನಾನೊಂದು ನಿರ್ಧಾರಕ್ಕೆ ಬಂದೆ. ಲೈಬ್ರರಿಯಲ್ಲಿ ಸಾಯಂಕಾಲ ಕೂತು ಓದುವ ಬದಲು ಬೇಕಿದ್ದನ್ನು ಜೆರಾಕ್ಸ್ ಮಾಡಿಸಿಡುವುದು. ಮನೆಗೆ ಬಂದು ಅಮ್ಮನಿಗೆ ಸಹಾಯ ಮಾಡಿ ನಂತರ ಓದುವುದೆಂದು ನಿರ್ಧರಿಸಿ ಅಮ್ಮನಿಗೆ ನಾನು ಸಾಯಂಕಾಲ ಬಂದ ತಕ್ಷಣ ಪಾತ್ರೆ ತೊಳೆಯುವುದಾಗಿ ಹೇಳಿದೆ. ಇದೊಂದು ತಾತ್ಕಾಲಿಕ ಪರಿಹಾರವಾಗಿ ಗೋಚರಿಸಿತು.ಥಟ್ಟನೆ ಒಪ್ಪಿದರು.
ಮಾರನೆಯ ದಿನ ತಾಯಮ್ಮ ನಾನು ಕಾಲೇಜಿಗೆ ಹೋದಾಗ ಪ್ರತ್ಯಕ್ಷಳಾಗಿದ್ದಾಳೆ. ಹಿಂದಿನ ದಿನ ಬೆಳಿಗ್ಗೆ ವಿಪರೀತ ಹೊಟ್ಟೆನೋವು ಬಂದು ನೋವು ತಾಳಲಾಗದೇ ಆಸ್ಪತ್ರೆಗೆ ದೌಡಾಯಿಸಿದ್ದಾಳೆ. ಅದೂ ಗವರ್ನಮೆಂಟ್ ಆಸ್ಪತ್ರೆ, ಬನಶಂಕರಿ ಎರಡನೇ ಸ್ಟೇಜಿನಲ್ಲಿರುವಂಥದ್ದು. ಯಾಕಂದರೆ, ಅಲ್ಲಿಯ ಡಾಕ್ಟರು ನಮ್ಮನೆಯ ಬೀದಿಯ ಕಡೆಯ ಮನೆಯ ನಿವಾಸಿ. ಇವಳು ಆ ಮನೆಯಲ್ಲೂ ಕೆಲ್ಸ ಮಾಡೂತ್ತಾಳೆ...ದುಡ್ದು ಕಡಿಮೆಯಾಗತ್ತೆ ಅಂತ ಹೋಗಿದ್ದಾಳೆ. ಅವರು ಇವಳ ಸ್ಥಿತಿ ನೋಡಿ ಬಯಾಪ್ಸಿ ಗೆ ಬರೆದುಕೊಟ್ಟಿದ್ದಾರೆ. ಸೂಜಿಯೆಂದರೆ ಮೈಲಿದೂರ ಓಡುವ ತಾಯಮ್ಮ ನಾನು ಹೀಗೆ ಸಾಯುತ್ತೇನೆ, ಚುಚ್ಚಿಸಿಕೊಳ್ಳುವುದಿಲ್ಲ ಎಂದು ಭೀಷ್ಮಪ್ರತಿಜ್ಞೆ ಮಾಡಿ ಮಾರನೆಯ ದಿನ ಯಮಯಾತನಾ ಸದೃಶ ನೋವಲ್ಲಿಯೂ ಕೆಲಸಕ್ಕೆ ಬಂದಿದ್ದಾಳೆ.
Z : ಛೆ ! ಬಯಾಪ್ಸಿ ಏನ್ ಮಹಾ ? ಏನೂ ತೊಂದರೆಯಾಗಲ್ಲ ಅಲ್ಲವಾ ?
ನಾನು : ಅದು ನನಗೆ ಗೊತ್ತು, ನಿನಗೆ ಗೊತ್ತು, ಡಾಕ್ಟರ್ ಆಂಟಿಗೆ ಗೊತ್ತು. ಹೆಬ್ಬೆಟ್ಟು ತಾಯಮ್ಮನಿಗೆ ಏನ್ ಗೊತ್ತು ?
Z : right ! ಆಮೇಲೆ ?
ನಾನು : ರಸ್ತೆಯ ಮನೆಯೊಡತಿಯರೆಲ್ಲ ತುರ್ತು ಸಭೆ ಕರೆದು, ತಾಯಮ್ಮನ್ನು ಕೂರಿಸಿ shift ನಲ್ಲಿ ಧೈರ್ಯ ಹೇಳಲು ಪ್ರಯತ್ನಿಸಿದ್ದಾರೆ. ದುಡ್ದು ನಾವು ಕೊಡುವೆವೆಂದೂ, ಬಯಾಪ್ಸಿಯ ಬಗ್ಗೆ ಭಯ ಬೇಡವೆಂಡು ತರತರಹ ರೀತಿಯಲ್ಲಿ ಧೈರ್ಯ ಹೇಳಲು ಪ್ರಯತ್ನಿಸಿದ್ದಾರೆ. ಆದರೆ ತಾಯಮ್ಮ, ಈಗಾಗಲೆ ಮನೆಗೆ ಭೋಗ್ಯಕ್ಕೆ ತೆಗೆದುಕೊಳ್ಳಲು ಮಾಡಿರುವ ಸಾಲವೇ ತೀರಿಲ್ಲ, ಇನ್ನು ಮತ್ತೆ ಸಾಲ ಮಾಡುವುದಿಲ್ಲ , ತನಗೆ ಆಪರೇಷನ್ ಅಂದರೆ ಪ್ರಾಣಭಯವಿರುವ ಕಾರಣ ತಾನೇನು ಮಾಡಿದರೂ ಆಪರೇಷನ್ ಮಾಡಿಸಿಕೊಳ್ಳುವುದಿಲ್ಲ ವೆಂದು ಬಿಕ್ಕಿ ಬಿಕ್ಕಿ ಅತ್ತು ಹೋಗಿದ್ದಾಳೆ. ಇದಾದದ್ದು ಒಂದು ಶನಿವಾರದಂದು.
ಶನಿವಾರ ರಾತ್ರಿ ನಮ್ಮಮ್ಮ ಕಥೆಯನ್ನ ನನಗೆ ಸವಿವರವಾಗಿ ತಿಳಿಸಿದರು. ತಾಯಮ್ಮನಿಗೆ ನನ್ನ ಕಂಡರೆ ವಿಷೇಷ ಪ್ರೀತಿ. ನನ್ನ book rack ನೋಡಿ ನಾನು ಮಹಾಬುದ್ಧಿವಂತಳೆಂದುಕೊಂಡಿದ್ದಾರೆ. ಬೀದಿಯ ಬುದ್ಧಿಜೀವಿಗಳು ಒಂದು ಉಪಾಯ ಮಾಡಿದರು. ನನ್ನ ಕೈಲಿ ಹೇಳಿಸಿ ನೋಡಲು sketch ಹಾಕಿದರು . ನಾನೂ ಸರಿ try ಮಾಡುವ ಎಂದು ಒಪ್ಪಿಕೊಂಡೆ.
ಭಾನುವಾರ ತಾಯಮ್ಮ ಎಂದಿನಂತೆ ಬಂದರು. ಮುಖದಲ್ಲಿ ರೋಗ ಲಕ್ಷಣ ಎದ್ದುಕಾಣುತ್ತಿತ್ತು.
ನಾನು : ಏನು ತಾಯಮ್ಮ...ಹೇಗಿದ್ದೀರಿ ?
ತಾಯಮ್ಮ : ಪರ್ವಾಗಿಲ್ಲ...ಮಾತ್ರೆ ತಿಂದು ಸಲ್ಪ ಗೆಲ್ವಾಗಿದ್ದೀನಿ ಅಮ್ಮಾವ್ರೆ....
ನಾನು : ಡಾಕ್ಟರ್ ಆಂಟಿ ಬರೆದುಕೊಟ್ಟ ಹಾಗೆ ಬಯಾಪ್ಸಿ ಮಾಡಿಸಿಕೊಳ್ಳಿ.
ಅವರು : ಆಗಕ್ಕಿಲ್ಲ ಅಮ್ಮೌ...ಆಗಕ್ಕಿಲ್ಲ. ಹೊಟ್ಟೆ ಕುಯ್ದ್ರೆ ನೋವಾಗಲ್ವ ? ನಂಗೆ ಮೊದ್ಲೇ ಆಸ್ಪತ್ರೆ ವಾಸ್ನೆ ಆಗಕ್ಕಿಲ್ಲ. ವುಟ್ಟ್ದಾಗಿಂದ ನಾನು ಆಸ್ಪತ್ರೆ ಗೆಲ್ಲ ಓದವ್ಳೇ ಅಲ್ಲ...ಹೆರಿಗೇ ನೂ ಸೂಲ್ಗಿತ್ತೀರೆ ಮಾಡವ್ರೆ ನಮ್ಮೂರ್ನಾಗೆ... ಈಗ್ ಎಂಗ್ ಓಗ್ಲಿ ಯೋಳೀ...ಆಗಕ್ಕಿಲ್ಲ ತಗಳಿ ! ಇಂಗೆ ಒಂಟೋಓಓಓಗ್ಲಿ ಪಿರಾನ.
ನಾನು ಬರುತ್ತಿದ್ದ ನಗುವನ್ನ ಕಷ್ಟ ಪಟ್ಟು ತಡೆದೆ. ನಾನಂದೆ,
"ತಾಯಮ್ಮ...ಹೊಟ್ಟೆ ಕುಯ್ಯಬೇಕೋ ಇಲ್ವೋ ಅಂತ ನೋಡೊಕೆ ನೆ ಈ ಬಯಾಪ್ಸಿ ಮಾಡೊದು...ಸುಮ್ ಸುಮ್ನೆ ಹೊಟ್ಟೆ ಕುಯ್ಯೋಕೆ ನೀವೇನು ನೀವು ತಿನ್ನೋ ಕೋಳಿಯೋ ಅಥವ ನಾವು ತಿನ್ನೋ ಕುಂಬಳಕಾಯೋ ? ಗೊತ್ತಿರೋ ಡಾಕ್ಟರ್ರೇ ಇರೋವಾಗ ಎಂಥಾ ಭಯ ? ನರ್ಸ್ ಗಳೆಲ್ಲ ಚೆನ್ನಾಗ್ ನೋಡ್ಕೋತಾರೆ ಡಾಕ್ಟರ್ ಭಯದಿಂದ. ಹೆದ್ರುಕೋಬೇಡಿ.. ಏನಾಗಲ್ಲ...ಮೊದ್ಲು ಊರಿಗೆ ಟೆಲಿಗ್ರಾಂ ಕಳಿಸಿ ನಿಮ್ಮ ವಾರಗಿತ್ತಿಯನ್ನೋ ಯಾರಾರ್ನು ಕರ್ಸ್ಕೊಳ್ಳಿ. ಒಬ್ಬರೆ ಆಸ್ಪತ್ರೆಗೆಲ್ಲ ಹೋಗ್ಬೇಡಿ. ಹೋಗಿ ಬೇಗ ಬಯಾಪ್ಸಿ ಮಾಡಿಸಿ.... ಹೀಗೆ ನರಳಬೇಡಿ.
ಆಆಆಆಅಂ೦೦೦೦೦೦೦೦ ಅಂದರು ತಾಯಮ್ಮ...ಜ್ಞಾನೋದಯವಾದಂತೆ. ಪುಳಕ್ಕಂತ ಒಂದು ಡೌಟು ಬಂದು ನನ್ನನ್ನ ಮತ್ತೆ ಕೇಳಿದರು -
"ಅಲ್ಲಾ.....ಹೊಟ್ತೆ ಕುಯ್ದೇ ಇದ್ರೆ ಏನಾಗದೆ ಒಳಾಗೆ ಅಂತ ಎಂಗ್ಗೊತಾಯ್ತದೆ ?"
ನನಗೆ ಬಯಾಪ್ಸಿ ಬಗ್ಗೆ ಏನೂ ಗೊತ್ತಿರಲಿಲ್ಲ...ಇವರಿಗೆ ಹೇಗೆ ಹೇಳದು ? ನನ್ನ ಮಾನದ ಪ್ರಶ್ನೆ! ಸರಿ ನಾನಂದೆ -
"ಏನಿಲ್ಲ ತಾಯಮ್ಮ, ಕುಯ್ಯದೇ ನೋಡುವ ಹಾಗೆ ಈಗ ಬೇಕಾದಷ್ಟು ಮೆಷಿನ್ನುಗಳನ್ನ ಈಗ ಕಂಡುಹಿಡಿದಿದ್ದಾರೆ. ಅದಕ್ಕೆ ಕುಯ್ಯದೇ ನೋಡಿ ತಿಳಿದುಕೊಳ್ಳಬಹುದು."
ಅವರು : "ಟಿವಿ ನೋಡಿ ಮಗು ಇಂಗದೇ ಅಂತ ಬಸುರಿಗಳಿಗಳಿಗೆ ತೋರ್ಸ್ತವ್ರಲ್ಲ..ಅಂಗಾ ?"
ನಾನು : "ಹೂ...ಒಂಥರಾ ಹಂಗೇ..."
Z : ultrasound scanning ಹಾಗೂ biopsy ಯನ್ನ ಎಷ್ಟು ಚೆನ್ನಾಗಿ confuse ಮಾಡ್ಕೊಂಡಿದಾರೆ ನೋಡು !
ನಾನು : ಹೂ....ಮತ್ತೆ ತಾಯಮ್ಮ ತಮ್ಮ questionnaire ತೆಗೆದರು. ನಾನು ಸರ್ವಜ್ಞೆ ಅಂದುಕೊಂಡು.
ತಾಯಮ್ಮ : ಅಲ್ಲ ಅಮ್ಮಾವ್ರೆ, ಈಗ ವೊಟ್ಟೇಲಿ ಏನಾದ್ರು ಅದೆ ಅಂದ್ರೆ ಕುಯ್ಯದೇ ತೆಗ್ಯಕ್ಕಾಗಕ್ಕಿಲ್ವಾ ? ನೀವು ಟಿವಿ ನೋಡ್ಕೊಂಡು ಅಮೇರಿಕದಲ್ಲಿರೋ ನಿಮ್ಮ ದೊಡ್ಡಪ್ಪನ ಜೊತೆ ಮಾತಾಡ್ತಿರಾ ಫೋನಿಲ್ಲದೇ ....ಅಂಗೇ ತೆಗ್ಯಕ್ಕಾಗಕ್ಕಿಲ್ವಾ ?
Z : excellent mess up of monitor with web cam and scanner ! uhahahaha !!!
ನಾನು : ನಗು ! ನಾನು ಅಲ್ಲಿ ಇವರಿಗೆ ಹೇಗಪ್ಪಾ ಹೇಳದು ಅಂತ ಯೋಚನೆಮಾಡುತ್ತಿದ್ದರೆ....
ಸರಿ, ನಾನಂದೆ,
ನಾವು ಮಾತಾಡೋದು ಬೇರೆ ಟಿವಿ, ಇದು ಬೇರೆ ಟಿವಿ ತಾಯಮ್ಮ...ಹಂಗೆಲ್ಲ ತೆಗ್ಯಕ್ಕಾಲ್ಲ, ಸಣ್ಣದಿದ್ದರೆ ಮಾತ್ರೆಯಲ್ಲೇ ಕರಗಿಸುತ್ತಾರೆ....ನೀವು ಹೋಗಿ ಬನ್ನಿ...ಗಾಬರಿಯಾಗಬೇಡಿ...ನಿಮಗೆ ಸೂಜಿ ಚುಚ್ಚಲ್ಲ.
ಅವರು : ಏನೋ ನೀವ್ ಯೋಳ್ತಿದೀರಾ ಅಂತ ಎದೆ ಗಟ್ಟಿಮಾಡ್ಕಂಡ್ ಓಯ್ತಿವ್ನಿ....ನಮ್ಮೂರ್ನಾಗೆ ಪಟೆಲ್ರ ಮೊಬೈಲ್ ಗೆ ಮಗನ ಕೈಲಿ ಫೋನ್ ಮಾಡ್ಸಿ ಕರ್ಸ್ಕೊತಿನಿ ವಾರ್ಗಿತ್ತೀನ.... ನಾನ್ ಈಟ್ ದಿನ ಜೀವಾ ತೇಯ್ದಿವ್ನಿ...ಈಗ ಅವ್ರೂ ಸಲ್ಪ ತೇಯ್ಲಿ ಅತ್ಲಾಗೆ....
ಅಂತೂ ಆಸ್ಪತ್ರೆಗೆ ಹೋಗಲು ಗಟ್ಟಿ ಮನಸ್ಸು ಮಾಡಿದರಲ್ಲ, ಸದ್ಯ ಅಂದುಕೊಂಡೆ. ಮುಗಿಯಿತಪ್ಪಾ ರಗಳೆ ಅಂದರೆ ಮತ್ತೆ ಶುರುವಾಯ್ತು ಅವರ ಪ್ರಶ್ನಾವಳಿ.
"ಅಲ್ಲಾ ಅಮ್ಮಾವ್ರೆ....ಇದೆಂಥದ್ದು ಮಾತ್ರೆ...ಡುಮ್ಮಕ್ಕೆ ? ಏನಕ್ಕೆ ತಗಬೇಕು ಅಂತ ಗೊತ್ತಿಲ್ಲ....ಏಟ್ ದುಡ್ಡು ಅಂತೀರಿ ...ಇನ್ನೂರು ರುಪಾಯಿ ಬರೀ ಮಾತ್ರೆ ಗೇ ಆಗ್ ಓಯ್ತ್ ತಗಳಿ....ಇದು ನೋಡಿ ಏನಕ್ಕೆ "ಅಂತ ಎಂದು ತಂದಿದ್ದ ಮಾತ್ರೆಗಳು, ಪ್ರಿಸ್ಚ್ರಿಪ್ಷನ್ನು ನನ್ನ ಮುಂದಿಟ್ಟರು.
ನಾನು ನೋಡಿದೆ. ನಿಶ್ಶಕ್ತಿಗೆ ಗೆ ಆ ಮಾತ್ರೆಗಳು ಅಂತ ಗೊತ್ತಾಯ್ತು. ಇನ್ನು ಬಿ ಕಾಂಪ್ಲೆಕ್ಸ್ ಮಾತ್ರೆಗಳು..ವಿಟಮಿನ್ ಕೊರತೆಗೆ. ರಕ್ತಹೀನತೆಗೊಂದಿಷ್ಟು. ಇದನ್ನೆಲ್ಲಾ ಹೇಗೆ ಹೇಳೋದಿವರಿಗೆ ? ದುಡಿದು ಹಣ್ಣಗಾದರೂ, ಉಪವಾಸ ಮಾಡಿದರು ತಾನು ಗಟ್ಟಗಿತ್ತಿ ಅನ್ನೋ ಅಚಲವಾದನಂಬಿಕೆ ಇವರಿಗೆ. ಇದನ್ನೆಲ್ಲ ನಾನು ಹೇಳಿದರೆ ಇವರು ನಂಬೋ ಪೈಕಿಯಲ್ಲ." ಎಂಟೆಂಟು ಮನೆಲಿ ಡುಡಿತಿನಿ..ನಂಗೆಂಥದ್ದು ನಿಶ್ಶಕ್ತಿ ಇವ್ರ ಮನೆಯಾಳಾಗ...ವೋಗಿ ನಾನ್ ವೋಗಕ್ಕಿಲ್ಲ...ಸುಳ್ಳು ಯೋಳಿ ದುಡ್ದ್ ತಿಂತಾರೆ ಬಡ್ಡಿಮಕ್ಳು ! ಕಾಲ ಕೆಟ್ಟೋಗದೆ ! ಸುಮ್ಸುಮ್ನೆ ವೊಟ್ಟೆ ಕುಯ್ತಾರೆ ನೋಡಿ...ನಂಗೊತ್ತು ಎಲ್ಲಾ ! ಟಮೇಟೋ ಮನೇಲಿ ಬೆಳೆದು ತಿಂತಿವಿ, ರಕ್ತ ಇಲ್ವಂತೆ....ಏನ್ ಕಂಡವ್ರೆ ಅಂತ ? ಇನ್ನು ಈ ಡುಮ್ಮು ಮಾತ್ರೆ...ಗಂಟ್ಲಲ್ಲಿ ಇಳಿಯದೇಲ್ಲಾ ಅನ್ನತ್ತೆ...ಯೆಂಗ್ ತಿನ್ನೋದವ್ವಾ ? ನಾನ್ ಓಗಕ್ಕಿಲ್ಲ...ಮಾತ್ರೆ ನೂ ತಗಳಾಕ್ಕಿಲ್ಲಾ " ಅಂತೆಲ್ಲ ಉಲ್ಟಾ ಹೊಡಿದರೆ ಏನ್ ಗತಿ ? ನಾನಂದೆ-
ವಯಸ್ಸು ನಲ್ವತ್ತಾಯ್ತಲ್ಲ ತಾಯಮ್ಮ....ದೇಹದಲ್ಲಿ ಬದಲಾವಣೆ ಆಗಕ್ಕೆ ಶುರುವಾಗತ್ತೆ...ನಿಮ್ಗೂ ಗೊತ್ತಿದೆ ಅಲ್ವಾ ? ಅದು ತೊಂದ್ರೆ ಕೊಡದೇ ಇರ್ಲಿ ಅಂತ ಇಷ್ಟ್ ಮಾತ್ರೆ ಕೊಟ್ಟಿದ್ದಾರೆ.
ಓ............ ಅಂಗೆ ! ಈಗ್ ಏನೋ ಒಂಥರಾ ಧೈರ್ಯ ಬರ್ತಿದೆ....ಏನೂ ಆಗಲ್ಲ ಅಂತೀರಾ ?
ನಾನು : ಏನೂ ಆಗಲ್ಲ !
ಅವರ ರೋಗಪೀಡಿತ ಮುಖದಲ್ಲಿ ಎಲ್ಲೋ ಸಮಾಧಾನದ ನಗುವೊಂದು ಮಿಂಚಿ ಮಾಯವಾಯ್ತು. ನಾಳೇ ಕೆಲಸಕ್ಕೆ ಬರಬೇಡಿ, ಇಂಡು ಕೆಲಸ ಮಾಡಬೇಡಿ ಎಂದು ಹೇಳಿಯೇ ಕಳಿಸಿದೆವು. ತಾಯಮ್ಮ ಡಾಕ್ಟರ್ ಬಳಿ ಹೊರಡಲನುವಾದರು.
Z : ಒಳ್ಳೇ ತಾಯಮ್ಮ ! ಆಮೇಲೆ ? ಮಾಡಿಸಿದರಾ ಬಯಾಪ್ಸಿ ? ಏನ್ ಬಂತು ರೆಪೋರ್ಟ್ ?
ನಾನು : ಈಗ ನಂಗೆ ಸಲ್ಪ ಕೆಲ್ಸ ಇದೆ. second round ಪಾತ್ರೆ ತೊಳಿಬೇಕು. ನಾಳೆ ಕಥೆ ಮುಂದುವರಿಸುವೆ.
line on hold.
ಜೀವನದೊಂದಿಗಿನ ನಮ್ಮ ಮಾತು lifetime ! ಇದರಲ್ಲಿ incoming -ಊ free outgoing -ಊ free !
ನನ್ನ ज़िंदगीಯೊಂದಿಗಿನ nonstop ಗುಸುಗುಸುವನ್ನು ಇಲ್ಲಿ ಬಿಚ್ಚಿಟ್ಟಿದ್ದೇನೆ.
Monday, July 21, 2008
Subscribe to:
Post Comments (Atom)
ಉತ್ತರಾಯಣ ೩
ನಾನು: ಬೃಂದಾವನಕ್ಕೆ ಹೊರಡಲು ನಾಲ್ಕು ಘಂಟೆಯಷ್ಟೊತ್ತಿಗೆ ರೆಡಿ ಇರಬೇಕು ಎಂದು ಮ್ಯಾನೇಜರ್ ವೆಂಕಟೇಶ್ ಅವರು ಹೇಳಿದ್ದರು. ಇವರೆಲ್ಲರೂ ಊಟ ಮಾಡಿ, ಮಲಗಿ, ಎದ್ದು ರೆಡಿಯಾಗು...
-
ನಾನು : There is always a next time. Z : ಹೌದಾ ? ನಾನು : ಹೌದು. Z : ಪ್ರತೀ ಸಲವೂ ಹೀಗೆ ಆದರೆ ಗತಿಯೇನು ? ನಾನು : ಅದಕ್ಕೆ ನಿನ್ನ pessimistic ಅಂತ ಬೈಯ್ಯ...
-
ನಾನು: ಬೃಂದಾವನಕ್ಕೆ ಹೊರಡಲು ನಾಲ್ಕು ಘಂಟೆಯಷ್ಟೊತ್ತಿಗೆ ರೆಡಿ ಇರಬೇಕು ಎಂದು ಮ್ಯಾನೇಜರ್ ವೆಂಕಟೇಶ್ ಅವರು ಹೇಳಿದ್ದರು. ಇವರೆಲ್ಲರೂ ಊಟ ಮಾಡಿ, ಮಲಗಿ, ಎದ್ದು ರೆಡಿಯಾಗು...
-
ಎಲ್ಲರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು. ಈ ಬ್ಲಾಗಿನ ಹುಟ್ಟು ಹಬ್ಬ ಮತ್ತು ಹೊಸ ವರ್ಷ ಯಾವಾಗ್ಲು ಒಟ್ಟಿಗೆ ಬರತ್ತೆ. ಆದರೆ, ಮತ್ತೆ ಅದೇ flash back ಗೆ ಹೋಗಿ, ಅದೇ ...
2 comments:
ತಾಯಮ್ಮ ಈಗ ಹೇಗಿದಾರೆ? ತುಂಬ ಒಳ್ಳೆಯ ವಿಷಯ ಎತ್ಕೊಂಡಿದ್ಯಾ. ಇಷ್ಟ ಆಯ್ತು.
Thayamma na purana chennagi idhe. Mundhyenaithu..........
Post a Comment