Sunday, November 8, 2009

journey to ಜಿಲೇಬಿನಾಡು - ಭಾಗ ೮

ನಾನು : ಜನವರಿ ಒಂದರ ಸುಪ್ರಭಾತ ಒಂಥರಾ ವಿಚಿತ್ರ ರೀತಿಯಲ್ಲಿ ಆಯ್ತು. ನಾನು ಮುಸುಕು ಹೊದ್ದು ಮಲಗಿದ್ದೆ. ಅಪರ್ಣ ನನ್ನ ಭುಜದ ಮೇಲೆ ಆರಾಮಾಗಿ ಸೆಟಲ್ ಆಗಿದ್ದಳು. ಬೆಳಗ್ಗಿನ ಜಾವವೋ, ರಾತ್ರಿಯೋ ಗೊತ್ತಿರಲಿಲ್ಲ, ಬಸ್ಸಂತು ಮುಂದಿರುವ ಕತ್ತಲನ್ನು ಭೇದಿಸಿಕೊಂಡು ಸಾಗುತ್ತಿತ್ತು. ನನಗೆ ಅಚಾನಕ್ಕಾಗಿ ಸೀಟೇ ಅಲ್ಲಾಡಿದ ಅನುಭವ ಆಯ್ತು. ನನ್ನ ಪ್ರಾಣ ಹೊರಟೇ ಹೋಯ್ತು ಅನ್ನೋ ಭಯದಲ್ಲಿ ಕಣ್ಬಿಟ್ಟೆ. ಸುತ್ತ ಕಗ್ಗತ್ತಲು.ಆಮೇಲೇ ಗೊತ್ತಾಗಿದ್ದು. ನನ್ನ ಫೋನು ವೈಬ್ರೇಟ್ ಆಗ್ತಿದೆ, ಅದಕ್ಕೆ ಸೀಟ್ ಅಲ್ಲಾಡುತ್ತಿದೆ ಅಂತ. ಮುಸುಕು ತೆಗೆದು, ಹುಡುಕಾಡಿ, ಫೋನ್ ಕಾಲ್ ಗೆ ಉತ್ತರಿಸಿದೆ. ಅಣ್ಣ ಫೋನಿಸಿದ್ದರು.

ಅಣ್ಣ: ಎಲ್ಲಿದಿರಿ ?

ನಾನು : ಗೊತ್ತಿಲ್ಲ.

ಅಣ್ಣ: ಕಾಲಟಿ ಬಂತಾ ?

ನಾನು: ಇಲ್ಲಾ ಅನ್ಸತ್ತೆ.

ಅಣ್ಣ: ಕಣ್ಬಿಟ್ಟು ಸುತ್ತ ಮುತ್ತ ನೋಡು.

ನಾನು: ಉಹು...ಕತ್ತಲು.

ಅಣ್ಣ: ಮುಸುಕನ್ನು ತೆಗಿ !

ನಾನು: ತೆಗ್ದೆ.....ಆದ್ರು ಕತ್ತಲೆ ಇದೆ.

ಅಣ್ಣ: ಕಾಲಟಿ ತಲುಪಿದ ಮೇಲೆ ಫೋನ್ ಮಾಡು. ಇಲ್ಲಿನ ಬೆಳವಣಿಗೆಗಳ ಬಗ್ಗೆ ನಾವು ಆಮೇಲೆ ಹೇಳ್ತಿವಿ.

ನಾನು: ಅಂಕಲ್ ಸ್ಥಿತಿ ಹೇಗಿದೆ ?

ಅಣ್ಣ: out of danger.

ನಾನು: ಸರಿ.

ಫೋನ್ ಇಟ್ಟ ಮೇಲೆ ನನಗೆ ಎಚ್ಚರ ಆಗಿದ್ದು ಕಾಲಟಿ ಅಂತ ಬುಸ್ ನಾಗ ಕಿರುಚಿ ನಮ್ಮನ್ನು ಎಬ್ಬಿಸಿದ ಮೇಲೆ.ಆಗ ಸಮಯ ೭ ಘಂಟೆ. ಅಣ್ಣ ಫೋನ್ ಮಾಡಿದ್ದು ಐದು ವರೆಗೆ !

Z : ಹೆಹೆಹೆ.

ನಾನು : ಅಲ್ಲಿ ನಾವು ನದಿಯಲ್ಲಿ ಸ್ನಾನ ಮಾಡಬೇಕಿತ್ತು. ಆ ನದಿಯ ಹೆಸರು ಪೂರ್ಣಾ ಅಂತ. ಎಂಥಾ ಶಾಂತ ಹರವು ಅಂದರೆ, ಅದರಿಂದ ಹೊರಗೆ ಬರುವ ಮನಸ್ಸೇ ಬರೋದಿಲ್ಲ. ಆದರೆ ನಮ್ಮ ಸಹಪ್ರಯಾಣಿಕರ ದುರ್ವರ್ತನೆ ಮಾತ್ರ ನನಗೆ ತೀವ್ರ ಬೇಜಾರನ್ನು ಉಂಟು ಮಾಡಿತು.

Z :ಏನಾಯ್ತು.

ನಾನು : ನದಿಯಲ್ಲಿ ಸೋಪು ಹಾಕಿ ಸ್ನಾನ ಮಾಡುವುದು ಎಷ್ಟರಮಟ್ಟಿಗೆ ಸರಿ ? ದಿನಾ ಮನೆಯಲ್ಲಿ ಸ್ನಾನವೇ ಮಾಡದಿರುವವರ ತರಹ ಸೋಪು ಕರಗಿ ಮುಗಿದು ಹೋಗುವ ವರೆಗೂ ಅದನ್ನು ಉಜ್ಜಿ ಉಜ್ಜಿ ನೊರೆ ನೋಡಿ ಸಂತೋಷ ಪಡುವುದು ನೋಡಿದರೆ ನನಗೆ ನಿಜವಾಗಲು ಸಿಟ್ಟು ಬರತ್ತೆ.ನದಿಯ ಹರವೇ ನಮ್ಮ ದೇಹದ ಕೊಳೆಯನ್ನು ಹೋಗಲಾಡಿಸಬಹುದಾಗಿರುವಾಗ ಅದಕ್ಕೆ ಸೋಪಿನ ಅವಶ್ಯಕತೆ ಇದೆಯೇ ? ಜನಕ್ಕೆ ಅಷ್ಟೂ ಪ್ರಜ್ಞೆ ಇರಲ್ವಾ ?

Z : ಒಂದ್ ಪ್ರಶ್ನೆ ಬಿಟ್ಟುಬಿಟ್ಟೆ ನೀನು.

ನಾನು : ಯಾವ್ದು ?

Z : ನಾವೇಕೆ ಹೀಗೆ ?

ನಾನು : :)) ನಾನು ಎಲ್ಲರಿಗಿಂತ ಚಿಕ್ಕವಳು, ಮಾತಾಡಿದರೆ ಅಧಿಕಪ್ರಸಂಗಿ ಅನ್ನಿಸಿಕೊಳ್ಳಬೇಕಾಗತ್ತೆ ಅನ್ನೋ ಒಂದೇ ಒಂದು ಕಾರಣಕ್ಕೆ ಸುಮ್ಮನಿದ್ದೆ. ಸೋಪನ್ನು ತಂದಿದ್ದರೂ ಅದನ್ನು ಉಪಯೋಗಿಸದ ನಾನು ಮತ್ತು ಅಪರ್ಣ exactly ಹತ್ತತ್ತು ಚೊಂಬು ತಲೆಯ ಮೇಲೆ ಸುರಿದು ಕೊಂಡೆವು. ಆಮೇಲೆ ರೆಡಿಯಾಗಿ ನಮ್ಮ ಫೋಟೋ ತೆಗೆಯಲು ಯಾರು ಇರದಿದ್ದುದರಿಂದ ನಾವೆ self timer experiment ಮಾಡಿಕೊಂಡೆವು. ಕಛಡವಾಗಿ ಬಂತು.

Z : naturally.

ನಾನು : ಇರ್ಬಹುದು. ಆದರೂ, ಇರಲಿ ದಾಖಲೆಗೆ ಬೇಕಾಗತ್ತೆ ಅಂತ ಅದನ್ನು ಡಿಲೀಟ್ ಮಾಡದೇ ಹಾಗೆ ಬಿಟ್ಟೆವು. ಅಲ್ಲಿಂದ ತಾಯಿ ಶಾರದಾಂಬೆಯ ದೇವಸ್ಥಾನಕ್ಕೆ ಬಂದೆವು.

Z : ಹೇಗಿದೆ ದೇವಸ್ಥಾನ ?

ನಾನು : ವಿಶಿಷ್ಟವಾಗಿದೆ. ಕಾಲಟಿ ಎಲ್ಲರಿಗೂ ಗೊತ್ತಿರುವಂತೆ ಆಚಾರ್ಯ ಶಂಕರರ ಜನ್ಮಸ್ಥಳ. ತಾಯಿಗೆ ನೀರು ಬೇಕಾದಾಗ ನದಿಯವರೆಗೂ ನಡೆಯುವುದು ತಪ್ಪಲಿ ಎಂದು ಪೂರ್ಣಾ ನದಿಯ ಹರಿವನ್ನು ಮನೆಯ ಕಡೆಗೆ ತಿರುಗಿಸಿದ ಮಹಾತ್ಮರ ಜನ್ಮಭೂಮಿ. ಇಲ್ಲಿ ಕಟ್ಟಿರುವ ಶಾರದಾಂಬೆಯ ದೇವಸ್ಥಾನದಲ್ಲಿ ಒಂದು ವಿಶೇಷ ಇದೆ. ದೇವಸ್ಥಾನದ ಹೊರಗೋಡೆಗಳಲ್ಲಿ ಅಲ್ಲಲ್ಲಿ ಗೂಡುಗಳನ್ನು ಮಾಡಿ ನವದುರ್ಗೆಯರಯರ ಮೂರ್ತಿಗಳನ್ನು ಕೆತ್ತಲಾಗಿದೆ. ಈ ದೇವಸ್ಥಾನದ ಒಂದೊಂದು ಕೋನದಲ್ಲೂ ಒಂದೊಂದು ದೇವಿಯ ವಿಗ್ರಹವಿದ್ದು, ಮಧ್ಯದಲ್ಲಿ ಶಾರದಾಂಬಾ ವಿಗ್ರಹ ಪ್ರತಿಷ್ಟಾಪಿಸಲ್ಪಟ್ಟಿದೆ. ಹೇಗೆ ಗೊತ್ತಾ ?

Z : ಹೇಗೆ ?

ನಾನು : ನಕ್ಷತ್ರಕ್ಕೆ ಐದು ಕೋನಗಳು ಇರತ್ತೆ. ಹೌದು ತಾನೆ ?

Z : ಹು.

ನಾನು : ಕೋನಗಳಲ್ಲಿ ಮತ್ತು ಅದರ ಮಧ್ಯದಲ್ಲಿರುವ ಸ್ಥಳಗಳಲ್ಲಿ front and back ಶೈಲಿಯಲ್ಲಿ ಈ ದೇವಸ್ಥಾನ ಕಟ್ಟಲಾಗಿದೆ.

Z : ನೈಸ್...

ನಾನು : ಹು. ನಾವು ದೇವಸ್ಥಾನವನ್ನು, ಶಂಕರ ಭಗವತ್ಪಾದರ ತಾಯಿ ಅರ್ಯಾಂಬೆಯವರ ಸಮಾಧಿಯನ್ನು, ಪಚ್ಚೆ ಲಿಂಗವನ್ನು ಮತ್ತು ಶಂಕರರ ಕುಲದೇವರಾದ ಕೃಷ್ಣನ ದೇವಸ್ಥಾನವನ್ನು ನೋಡಿಕೊಂಡು ಗುರುವಾಯೂರಿಗೆ ಪಯಣ ಬೆಳೆಸಿದೆವು. ನಾನು ಅಣ್ಣನಿಗೆ ಫೋನ್ ಮಾಡಿದೆ. ಅಣ್ಣ ಸುಧಾ ಆಂಟಿ ಮತ್ತು ಅಂಕಲ್ ನ ಅವರ ಮಗ ಬೆಂಗಳೂರಿಗೆ ವಿಮಾನದಲ್ಲಿ ಕರೆದುಕೊಂಡು ಹೋಗಿರುವುದಾಗಿಯೂ, ಇವರಿಬ್ಬರೂ ಎರ್ನಾಕುಲಂ ನ ಟ್ರೈನ್ ಹತ್ತಿ, ಆಲ್ವೇ ಎಂಬಲ್ಲಿ ಇಳಿದು ಅಲ್ಲಿಂದ ಕಾಲಟಿಗೆ ಆಟೋದಲ್ಲಿ ಬಂದು, ಕಾಲಟಿಯಿಂದ ಗುರುವಾಯೂರಿಗೆ ಬಸ್ಸಿನಲ್ಲಿ ಬರುವುದಾಗಿ ಹೇಳಿದರು. ಒಟ್ಟಿನಲ್ಲಿ ಅವರು ಜನವರಿ ಒಂದರ ರಾತ್ರಿ ಅವರು ನಮ್ಮೊಂದಿಗೆ ಇರುವುದಾಗಿ ಹೇಳಿದರು. ಅಣ್ಣ ಮೊದಲು ನಾನು ಅಪರ್ಣ ಇಬ್ಬರೇ ಬೆಂಗಳೂರು ಸೇರಬೇಕಾಗಬಹುದೆಂದು ಅನುಮಾನ ಪಟ್ಟಿದ್ದರು. ನಾನೂ ನಿರ್ಭಯವಾಗಿ ಆಗಲಿ ಎಂದಿದ್ದೆ. ಅವರು ನಮ್ಮೊಟ್ಟಿಗೆ ಬಂದು ಸೇರುತ್ತೇವೆ ಎಂದಾಗ ಅದೇಕೋ ಒಂಥರಾ ನಿರಾಳ ಅನಿಸಿತು.

Z : ಹ್ಮ್ಮ್ಮ್......ಅದೊಂಥರಾ ಹಾಗೇನೆ. ಮುಂದೆ ?

ನಾನು : ಕಾಲಟಿಯ ಬುಕ್ ಸ್ಟಾಲಿನಲ್ಲಿ ಬ್ರಹ್ಮ ಸೂತ್ರಕ್ಕೆ ಭಗವತ್ಪಾದರ ಭಾಷ್ಯದ ಸಂಸ್ಕೃತ ಪಠ್ಯ ಮತ್ತು ಅದಕ್ಕೆ ಆಂಗ್ಲ ಅನುವಾದ ತೆಗೆದುಕೊಂಡ ಮೇಲೆನೇ ನನಗೆ ಜನವರಿ ಒಂದು ಸಾರ್ಥಕ ಆಯ್ತು ಅನ್ಸಿದ್ದು.

Z : ಅಲ್ವೇ ಮತ್ತೆ ? ಹೋದ ಕಡೆ ಎಲ್ಲ ನಿನ್ನ ಪುಸ್ತಕದ ಅಂಗಡಿಯ ಕಡೆ ಮುಖ ಹಾಕಿಸದೇ ಇರ್ಬೇಕಾದ್ರೆ ನಿನಗೆ ಹೆಂಗನಿಸಿರಬೇಡ.

ನಾನು : ಹೂಂ. ಅಪರ್ಣ ಗೊಣಗಿದಳು -"ದುಡ್ಡಿಟ್ಟುಕೋ" ಅಂತ.

ನಾನಂದೆ - "ಸಾಕಷ್ಟಿದೆ, ಹೆದರಬೇಡ."

ಅವಳು - " ಈ ಜನ್ಮದಲ್ಲಿ ನೀನು ಉದ್ಧಾರ ಆಗಲ್ಲ " ಅನ್ನೋ ಲುಕ್ ಕೊಟ್ಟಳು. ನಾನದನ್ನು ವಾಪಸ್ return ಮಾಡಿದೆ.

Z : :)

ನಾನು : ಗುರುವಾಯೂರಿಗೆ ಹೊರಟಾಗ ದಾರಿಯಲ್ಲಿ ಸಿಕ್ಕ ಚಿನ್ನದ ಅಂಗಡಿಗಳ ಕಡೆ ನಾನು ಅಪರ್ಣ ಬಹಳ ಗಮನ ಹರಿಸಿ ನೋಡಿದೆವು. ಪ್ರತಿಯೊಂದು ಹೋರ್ಡಿಂಗಿನ ಮೇಲಿರುವ ಪ್ರತಿಯೊಂದು ಆಭರಣದ pattern ಗೆ ಧಾರಾಳವಾಗಿ ಕಮೆಂಟ್ಸ್ ಕೊಟ್ಟೆವು.

Z : ರಿಯಾಲಿಟಿ ಶೋ ಜಡ್ಜ್ ಥರ.

ನಾನು : ಹು.ಗುರುವಾಯೂರನ್ನು ತಲುಪಿದ್ದು ಸಾಯಂಕಾಲ. ಲಾಡ್ಜಿನಲ್ಲಿ ನಾನು ಅಪರ್ಣ ಒಂದು ರೂಮಲ್ಲಿದ್ದು, ಅಣ್ಣ ಅಮ್ಮನಿಗೆ ನಮ್ಮ ಪಕ್ಕಕ್ಕೇ ರೂಮೊಂದು ಇರಲಿ ಎಂದು ಕೊಡಿಸಿಕೊಂಡು, ಲಗೇಜೆಲ್ಲಾ ನಮ್ಮ ರೂಮಿನಲ್ಲೇ ಇಟ್ಟು, ಮೊಬೈಲುಗಳನ್ನು ಚಾರ್ಜಿಗೆ ಹಾಕಿ ಸ್ವಲ್ಪ ಹೊತ್ತು ಸುಧಾರಿಸಿಕೊಂಡೆವು. ಅಪರ್ಣಾ ನಿದ್ದೆ ಹೊಡೆದಳು, ನಾನು ಎಸ್. ಎಲ್. ಭೈರಪ್ಪ ಅವರ ಧರ್ಮಶ್ರೀ ಓದಲು ಪ್ರಾರಂಭಿಸಿದ್ದೆ ಬಸ್ಸಿನಲ್ಲಿ, ಅದನ್ನ ಮುಂದುವರೆಸಿದೆ. ಕಾಫಿ ಕುಡಿದು ಎಲ್ಲರೂ ಗುರುವಾಯೂರಪ್ಪನ ದರ್ಶನಕ್ಕೆ ಹೊರಟೆವು. ಸಿಕ್ಕಾಪಟ್ಟೆ ದೊಡ್ಡ ಕ್ಯೂ !!!

Z : ಒಹ್ಹೋ...

ನಾನು : ಎರಡು ಘಂಟೆಕಾಲ ನಿಂತಮೇಲೆ ನಮಗೆ ಕಡೆಗೂ ಗುರುವಾಯೂರಪ್ಪನ ದರ್ಶನವಾಯ್ತು. ಗುರು ಬೃಹಸ್ಪತಿ ಮತ್ತು ವಾಯು ದೇವ ಇಬ್ಬರೂ ಸ್ಥಾಪಿಸಿದ ಈ ಮಹಾವಿಷ್ಣುವಿನ ಮೂರ್ತಿಗೆ ಗುರುವಾಯೂರಪ್ಪ ಎಂದು ಹೆಸರು. ಇದು ದ್ವಾಪರ ಯುಗದಲ್ಲಿ ಸ್ವಯಂ ಶ್ರೀಕೃಷ್ಣನೇ ಪೂಜೆ ಮಾಡಿದ ಮಹಾವಿಷ್ಣುವಿನ ಮೂರ್ತಿಯಂತೆ.

Z : ಹೌದಾ ?

ನಾನು : ಹು. ಕೃಷ್ಣ ಪರಮಾತ್ಮ ತನ್ನ ಪರಮಾಪ್ತ ಶಿಷ್ಯ ಉದ್ಧವನಿಗೆ ಈ ಮೂರ್ತಿಯನ್ನು ಕಾಪಾಡಲು ಹೇಳಿದ್ದನಂತೆ. ದ್ವಾರಕೆ ಮುಳುಗಿದಾಗ ಅದು ನೀರಲ್ಲಿ ತೇಲುತ್ತಿದ್ದು ಇದು ದೇವಗುರು ಬೃಹಸ್ಪತಿಗೆ ಕಂಡು, ಅವರು ಮತ್ತು ಅವರ ಶಿಷ್ಯ ವಾಯುದೇವ ಇದನ್ನು ಕಂಡು, ಭರತ ಖಂಡದಲ್ಲೆಲ್ಲಾ ಸುತ್ತಾಡಿ, ಕಡೆಗೆ ತಾವರೆ ತುಂಬಿದ ಕೆರೆಯಿದ್ದ ಈಗಿನ ಗುರುವಾಯೂರಿನಲ್ಲಿ ಪ್ರತಿಷ್ಟಾಪಿಸಿದರಂತೆ ಮೂರ್ತಿ ನ.

Z : I see.

ನಾನು : ಹು. ಅದಾದ ಮೇಲೆ ಶಾಪಿಂಗ್ ಹೊರಟೆವು.

Z : ಇನ್ನೇನ್ ಕೆಲ್ಸ.

ನಾನು : ಅಲ್ವಾ ಮತ್ತೆ. ನಾನು ಅಮ್ಮಂಗೆ ಅಂತ ತಾಳಗಳನ್ನ ತಗೊಂಡೆ. ಯಾತ್ರೆಗೆ ಹೋದರೆ ಪಾತ್ರೆ ತಗೋಬೇಕು ಅಂತ ಗಾದೆಯಿದೆ ಆದ್ದರಿಂದ ನಾನೊಂದು ರೈಲ್ಚೊಂಬು ನೋಡಿದ್ದೆ. ತಗೊಳ್ಳೋಣ ಅಂತ ನನಗೆ ಅಪರ್ಣಂಗೆ ಇಬ್ಬರಿಗೂ ಆಸೆಯಾಯ್ತು. ಆದರೆ ದುಡ್ಡು ಶಾರ್ಟೇಜ್ ಆಗೋಯ್ತು. ವಾಪಸ್ ಬಂದ್ವಿ

Z : :(

ನಾನು : ಅಲ್ಲಿ ಒಂದು ಕಡೆ ಲಿಂಬೂ ಸೋಡಾ ಕುಡಿದು ವಾಪಸ್ ಬಂದಮೇಲೆ ಅಣ್ಣ ಅಮ್ಮ ಆಟೋ ಲಿ ಬಂದಿಳಿದರು. ಮತ್ತೆ ಅವರ ಜೊತೆ ದೇವಸ್ಥಾನಕ್ಕೆ ಹೋಗೋ ಅಷ್ಟೊತ್ತಿಗೆ ದೇವಸ್ಥಾನ ಬಾಗಿಲು ಹಾಕಿತ್ತು. ರೈಲ್ ಚೊಂಬು ಕೊಡ್ಸಿ ಅಂತ ಕೇಳಿ, ಇವ್ರು ಕೊಡ್ಸಲ್ಲ ಅಂದು, ನಾನು ಸಪ್ಪೆ ಮುಖ ಹಾಕೊಂಡು ವಾಪಸ್ ಲಾಡ್ಜಿಗೆ ಬರೋ ಅಷ್ಟೊತ್ತಿಗೆ ಹತ್ತು ಘಂಟೆ. ನಾನು ಯಥಾ ಪ್ರಕಾರ ನನ್ನ ಮೊಸರನ್ನ ವ್ರತ ಮಾಡಿದೆ. ಮಾರನೆಯ ದಿನ ನಾವಿನ್ನು ಮತ್ತೆ ಬೆಂಗಳೂರಿನ ಕಡೆ ಪ್ರಯಾಣ ಬೆಳೆಸಬೇಕಿತ್ತು.

Z : ಆಹಾ ! ಇಷ್ಟು ಬೇಗ !

ನಾನು : ಹು ! ಮಾರನೆಯ ದಿನ ನಾವು ನಮ್ಮ ಲಗೇಜುಗಳನ್ನು ಎಣೆಸಿಕೊಳ್ಳುತ್ತಿದ್ದೆವು. ನಮ್ಮದು ಸುಧಾ ಆಂಟಿ ದು ಇಬ್ಬರದ್ದು ಸೇರಿ ಒಟ್ಟು ಮೂವತ್ತು ಬ್ಯಾಗ್ ಗಳು !!

Z : ಯಪ್ಪಾ !!!!!!!!!!!!

ನಾನು : ಹು! ಅಣ್ಣ ಸರಿಯಾಗಿ ಬೈದ್ರು. ಇಡೀ ಸೌತ್ ಇಂಡಿಯಾ ನೇ ಹೊತ್ಕೊಂಡ್ ಬಂದಿದಿರ ಅಂತ.

Z : ಇನ್ನೇನ್ ಮತ್ತೆ !

ನಾನು : :( ಗುರುವಾಯೂರಿಂದ ಹೊರಟು ಕಾಲಿಕಟ್ ಘಾಟ್ ಹತ್ತಿ, ಗುಂಡ್ಲುಪೇಟೆನಲ್ಲಿ ಕನ್ನಡ ಫಲಕ ಓದಿದ ತಕ್ಷಣ ನನಗಾದ ಆನಂದಕ್ಕೆ ಮಿತಿಯೇ ಇರಲಿಲ್ಲ. ಅಪರ್ಣಾ " ಸಮಾಧಾನ ಸಮಾಧಾನ ! " ಅಂದರೂ ಕಿಟಕಿಯಿಂದ ತಲೆ ಹೊರಗೆ ಹಾಕಿ ಯೇ ಅಂತ ಕಿರುಚಿದೆ.

Z : ಆಹ !

ನಾನು : ಹು. ಇಷ್ಟು ದಿನ ಬರೀ ಜಿಲೇಬಿ ನೋಡಿ ನೋಡಿ ಸಾಕಾಗೋಗಿತ್ತು. ಕನ್ನಡ ಕಂಡೇನಾ ಅನ್ಸಿತ್ತು. ನಂಜನಗೂಡು ಮತ್ತು ಶ್ರೀರಂಗಪಟ್ಟಣ ನೋಡಿಕೊಂಡು ಬೆಂಗಳೂರಿಗೆ ಬಂದು ಮನೆಗೆ ತಲುಪಿದಾಗ ರಾತ್ರಿ ಹನ್ನೊಂದು. ಘಾಟ್ ಸೆಕ್ಷನ್ ನಲ್ಲಿ ಧರ್ಮಶ್ರೀ ನಾವೆಲ್ಲು ಓದಿ, ಬೆಂಗಳೂರು ತಲುಪುವ ಮುಂಚೆಯೇ ಮುಗಿಸಿದ್ದಕ್ಕೆ ನನಗೆ " ಗಟ್ಟಿಗಿತ್ತಿ" ಅನ್ನೋ ಬಿರುದು ಬಂತು. ಬಸ್ಸಿನಲ್ಲಿ ನಾವೆಲ್ಲರು ಒಂದೇ ಮನೆಯವರ ತರಹ ಆಗೋಗಿದ್ದೆವು. ಬೀಳ್ಕೊಡುವಾಗ ಎಲ್ಲರ ಕಣ್ಣಂಚಲ್ಲೂ ನೀರು. ಧರ್ಮಶ್ರೀ ಕಾದಂಬರಿ ಓದಲು ಕೊಟ್ಟ ನಾಗಾಭರಣ, ಸದಾ ಜೋಕ್ ಮಾಡುತ್ತಿದ್ದ ಪ್ರಸಾದ್ ಅಂಕಲ್, ಸದಾ ಆಟ ಅಡಿಕೊಂಡಿದ್ದ ಲೋಹಿತ್ ಮತ್ತು ಚಂದನ, ಎಲ್ಲರೂ ಈಗಲೂ ನೆನಪಾಗ್ತಾರೆ.


Left- driver, right-bus naga.

Z : ಅಂತು ಮುಗಿತು ಟ್ರಿಪ್ಪು.

ನಾನು : ಹು ! ಮಾರನೆಯ ದಿನ ಯಾರೂ ಎಬ್ಬಿಸದೇ ಮೂರುವರೆಗೆ ಎದ್ದೆ ನಾನು ! ನೋಡಿದರೆ ಎಲ್ಲರೂ ಸುಸ್ತಾಗಿ ಮಲಗಿದ್ದರು. ಆಮೇಲೇ ನೆನಪಾದದ್ದು ನನಗೆ, ನಾವು ಬೆಂಗಳೂರಿನಲ್ಲಿದ್ದೇವೆ ಅಂತ !

Z : ಎಹೆಹೆಹೆಹೆ !!!

ನಾನು : ನನಗಂತೂ ಈ ಊರುಗಳಿಗೆ ಮತ್ತೊಮ್ಮೆ ಹೋಗಬೇಕು ಅನ್ನಿಸಿದೆ. ತಿರುವಣ್ಣಾಮಲೈ ನ ರಮಣಮಹರ್ಷಿ ಬೆಟ್ಟದ ಹದಿನಾಲ್ಕು ಕಿಲೋಮೀಟರ್ ಪ್ರದಕ್ಷಿಣೆ ಹಾಕಿಲ್ಲ, ಚಿದಂಬರ ರಹಸ್ಯ ಭೇದಿಸಿಲ್ಲ, ಸಾರಂಗಪಾಣಿಯ ತಲೆಯ ಮೇಲಿನ ಆದಿಶೇಷನನ್ನ ಸರಿಯಾಗಿ ನೋಡಿಲ್ಲ, ಆದಿಕುಂಭೇಶ್ವರ ದೇವಸ್ಥಾನದಲ್ಲಿ ಲಿಂಗದ ಮೇಲಿನ ಪಾಟ್ ನ ಇನ್ನೊಂದ್ ಸರ್ತಿ ನೋಡ್ಬೇಕು, ತಿರುನಲ್ಲಾರಿನಲ್ಲಿ ಶನಿ ಮಹಾತ್ಮನ ಹತ್ತಿರ ಸ್ವಲ್ಪ ಕಷ್ಟ ಸುಖ ಮಾತಾಡ್ಬೇಕು, ಶ್ರೀರಂಗನಾಥನನ್ನ detail ಆಗಿ ನೋಡ್ಬೇಕು, ಕಾಲಟಿಯಲ್ಲಿ ಧ್ಯಾನ ಮಾಡಬೇಕು, ಗುರುವಾಯೂರಪ್ಪನನ್ನೂ detail ಆಗಿ ನೋಡ್ಬೇಕು. not to forget, ಸುಂದರೇಶ್ವರನ ಸನ್ನಿಧಿಯಲ್ಲಿ ಕಣ್ಣು ಮಿಟುಕಿಸದೇ ಒಂದೆರಡು ಮೂರು ಘಂಟೆಕಾಲ ಲಿಂಗವನ್ನೇ ನೋಡುತ್ತಿರಬೇಕು !

Z : ಅಷ್ಟೇನ ಅಥ್ವಾ ಇನ್ನು ಇದಿಯಾ ?

ನಾನು :ಇದೆ.

Z : ಮುಂದುವರೆಸು.

ನಾನು : ಕನ್ಯಾಕುಮಾರಿಯಲ್ಲಿ ಸನ್ ರೈಸ್ ನೋಡ್ಬೇಕು.

Z :ಮತ್ತೆ ಟ್ರಿಪ್ಪಾ ಹಾಗಾದ್ರೆ ?

ನಾನು : ಯೆಸ್. ಯಾವಾಗ ಅಂತ ಗೊತ್ತಿಲ್ಲ. ನಾನಂತೂ ಹೇಳ್ಬಿಟ್ಟಿದಿನಿ. ಈ ಸರ್ತಿ ಒಂದು ಬಾಡಿಗೆ ಇನ್ನೋವಾ ಲಿ ಹೊಗೋದು, ನಾವೇ ಡ್ರೈವ್ ಮಾಡ್ಕೊಳ್ಳೋದು, ಅವಲಕ್ಕಿ ಮೊಸರು ತಿನ್ನೋದು, ದೇವರ ದರ್ಶನ ಮತ್ತೆ ಫೋಟೋಗ್ರಫಿಯನ್ನ ಮನಃಪೂರ್ತಿ ಮಾಡೋದು ಅಂತ.

Z : ಅಣ್ಣ ಏನಂದ್ರು ?

ನಾನು :ಗೋಣಲ್ಲಾಡಿಸಿದರು as usual. But he knows, ಅದು ಸುಲಭ ಅಲ್ಲ ಅಂತ ! ನನಗೂ ಗೊತ್ತು. ಆದರೂ, I want to go back to these places again !

Z : :) :) ಇನ್ನು ಬೇಜಾನ್ ಟೈಂ ಇದೆ ಜೀವನದಲ್ಲಿ, ಹೋಗ್ತೀಯಂತೆ.

ನಾನು :ಯೆಸ್. ಹೋಗ್ತಿನಿ ಮತ್ತೆ. ಇದರೊಂದಿಗೆ ನನ್ನ ದೊಡ್ಡ್ಡ್ಡ್ಡ್ಡ್ಡ್ಡ್ಡ್ಡ್ಡ್ಡ್ಡ್ಡ್ಡ್ಡ್ಡ ಪ್ರವಾಸ ಪುರಾಣ ನ ಮುಗಿಸುತ್ತಿದ್ದೇನೆ.

ಅಥ ಜಲೇಬಿನಾಡು ಪುರಾಣಂ ಸಂಪೂರ್ಣಂ !
*************************************************************

ಕೆಲವು ಮುಖ್ಯವಾದ ಡೈಲಾಗುಗಳು-

"ಲಗೇಜುಗಳು ಮರಿ ಹಾಕ್ತಿವೆ !"-ಪ್ರಸಾದ್ ಅಂಕಲ್

" ಮರ್ನೆ ಕೆ ಟೈಂ ಮೆ ಪಡ್ನೇ ಕೋ ಗಯಾ !"- ಅರ್ಧ ರಾತ್ರಿಲಿ ಲೈಟ್ ಹಾಕಿದ್ದರು, ನಾನು ಪ್ರಸಾದ್ ಅಂಕಲ್ ಗೆ - " ನೋಡಿ ಅಂಕಲ್, ಇದೇ ಸೂರ್ಯ ಅಂದುಕೊಂಡು ಸನ್ ರೈಸ್ ನೋಡ್ಬಿಡೀ ಅಂದಾಗ ಹೇಳಿದ್ದು.

" ಪತ್ರ ಬರೆಯಲಾ ಇಲ್ಲಾ ಪಾತ್ರೆ ತೊಳೆಯಲಾ ಹಾಡು ಇದೆಯಲ್ಲಾ ಸಾರ್...."----ಅಣ್ಣ ಅನಂತ್ ಅಂಕಲ್ ಗೆ ಹೇಳಿದ್ದು- with reference to the current generation songs.(he has combined 3 songs in this ! ನಾನು ಅಪರ್ಣಾ ನಕ್ಕು ನಕ್ಕು ಸುಸ್ತು ! )

ಚಿತ್ರಗಳ ಸ್ಲೈಡ್ ಶೋ.

3 comments:

ವಿ.ರಾ.ಹೆ. said...

ಆಗಿದ್ದಾಗೋಗ್ಲಿ ಅಂತ ಇದನ್ನೂ ಓದ್ಬಿಟ್ಟೆ !

PaLa said...

ಪಾಪ ಶಂಕರಾಚಾರ್ಯರ ನದೀ ಪಾತ್ರದಲ್ಲಿದ್ದ ಮನೆಯವ್ರು :(

ಆದ್ರೂ ನಿಮ್ ಪುರಾಣ ಇಶ್ಟ್ ಬೇಗ ಮುಗಿಸ್ಬಾರ್ದಿತ್ತು..

ವಿ.ರಾ.ಹೆ. said...

ಗುರುವಾಯೂರಲ್ಲಿ ಎರಡುಗಂಟೆ ಕ್ಯೂನಲ್ಲಿ ನಿಂತಾಗ ಏನ್ ಮಾಡಿದ್ರಿ ಅಂತ ವಿವರಗಳೇ ಇಲ್ವಲ್ಲ! ಯಾವ್ದಾದ್ರೂ ಫಿಸಿಕ್ಸ್ ಫಾರ್ಮುಲಾ ಕಂಡು ಹಿಡಿಬೇಕಿತ್ತಲ್ಲ!

ಉತ್ತರಾಯಣ ೩

ನಾನು: ಬೃಂದಾವನಕ್ಕೆ ಹೊರಡಲು ನಾಲ್ಕು ಘಂಟೆಯಷ್ಟೊತ್ತಿಗೆ ರೆಡಿ ಇರಬೇಕು ಎಂದು ಮ್ಯಾನೇಜರ್ ವೆಂಕಟೇಶ್ ಅವರು ಹೇಳಿದ್ದರು. ಇವರೆಲ್ಲರೂ ಊಟ ಮಾಡಿ, ಮಲಗಿ, ಎದ್ದು ರೆಡಿಯಾಗು...