Friday, April 5, 2013

ಉತ್ತರಾಯಣ ೩

ನಾನು: ಬೃಂದಾವನಕ್ಕೆ ಹೊರಡಲು ನಾಲ್ಕು ಘಂಟೆಯಷ್ಟೊತ್ತಿಗೆ ರೆಡಿ ಇರಬೇಕು ಎಂದು ಮ್ಯಾನೇಜರ್ ವೆಂಕಟೇಶ್ ಅವರು ಹೇಳಿದ್ದರು. ಇವರೆಲ್ಲರೂ ಊಟ ಮಾಡಿ, ಮಲಗಿ, ಎದ್ದು ರೆಡಿಯಾಗುವಷ್ಟರ ಹೊತ್ತಿಗೆ ನಾನು ಮತ್ತು ಅಣ್ಣ ಹಾಗೇ ಸುಮ್ಮನೆ ಆಗ್ರಾದಲ್ಲಿ ಬೀದಿ ಅಲೆಯಲು ತೀರ್ಮಾನಿಸಿದ್ದೆವು.

Z:ಯಾಕೆ ?

ನಾನು: ನನ್ನ ಕ್ಯಾಮೆರಾದಲ್ಲಿ ಇದ್ದ ಮೆಮೋರಿ ಕಾರ್ಡನ್ನು empty ಮಾಡಲು ಮರೆತಿದ್ದೆ. ಅದರಲ್ಲಿ ಕೆಲವು ಮುಖ್ಯ ಫೋಟೋಗಳು ಮತ್ತು ವಿಡಿಯೋಗಳು ಇದ್ದವು. ಅಣ್ಣ laptop  ತರಬೇಡ ಎಂದು ಒಂದೇ ಸಮ ಹಠ ಹಿಡಿದ ಕಾರಣ, ಬೇರೆ ಯಾವ ದಾರಿಯೂ ಕಾಣದೇ, cyber cafe ನಲ್ಲಿ ಸಿ.ಡಿ. ಮಾಡಿಸುವ ಹಾಗಾಯಿತು. ಅದಕ್ಕಾಗಿ, ಮಟಮಟ ಮಧ್ಯಾಹ್ನದ ಬಿಸಿಲನ್ನೇ ತಂಪು ಬೆಳದಿಂಗಳು ಎಂದುಕೊಂಡು ಅಗ್ರಾದ ಬೀದಿಗೆ ಕಾಲಿಟ್ಟೆವು. ಪುಣ್ಯಕ್ಕೆ, ನಾವು ತಂಗಿದ್ದ ಹೋಟೆಲ್ ಪಕ್ಕದಲ್ಲಿಯೇ cyber cafe ಇತ್ತು. ಅವನು Art and Craft Emporium ಸಹ ನಡೆಸುತ್ತಿದ್ದನು.ಸಿಡಿ write  ಮಾಡಿಸುವ ಹೊತ್ತಿಗೆ ಅಂಗಡಿಯಲ್ಲಿ ಒಂದು ಸುತ್ತು ಹಾಕಿದೆವು.

Z:ಎಷ್ಟು ಬಿತ್ತು ಟ್ಯಾಕ್ಸ್ ಅಣ್ಣನಿಗೆ ?

ನಾನು: ಒಂದು ಪೈಸಾನೂ ಇಲ್ಲ. ಆ ಅಂಗಡಿಯವನು ತಾಜ್ ಮಹಲ್ ತಗೊಳ್ಳೀ ಅಂತ ಒಂದೇ ಸಮನೆ ದುಂಬಾಲು ಬಿದ್ದ. ನನಗೆ ತಾಜ್ ನೋಡುವ ಆಸೆಯಿತ್ತೇ ಹೊರತು ಅದನ್ನು ಕೊಳ್ಳುವ ಆಸೆ ಇರಲಿಲ್ಲ.ಮತ್ತೆ, ಅವನು ಅದಕ್ಕೆ ಹೇಳಿದ ಬೆಲೆ ಮೂರು ಸಾವಿರ ! ಮಿಕ್ಕೆಲ್ಲದರ ಬೆಲೆಯೂ ಹೆಚ್ಚೇ ಇತ್ತು. ಅದಕ್ಕೆ, ಇನ್ನು ಸ್ವಲ್ಪ ಹೊತ್ತಿನಲ್ಲಿ ನಮ್ಮ ಹೋಟೆಲ್ ನವರನ್ನೆಲ್ಲಾ ಕರೆದುಕೊಂಡು ಬರುತ್ತೇನೆ ಎಂದು ಹೇಳಿ ಅಲ್ಲಿಂದ ಕಾಲ್ಕಿತ್ತೆ.

Z: ಹಿಹಿಹಿಹಿ....

ನಾನು: ಮತ್ತೆ ಸ್ವಲ್ಪ ಓದು ಬರಹ ಎಲ್ಲ ಆದ ನಂತರ ರೆಡಿಯಾಗಿ ಎಲ್ಲರೂ ಬಸ್ ಹತ್ತಲು ಅನುವಾದೆವು. ಅಲ್ಲೇ ಶುರುವಾಗಿದ್ದು ಎಡವಟ್ಟು.

Z: ಯಾಕೆ ? ಏನಾಯ್ತು ?

ನಾನು: ದೀಪು ಹೆಂಡತಿ ನಂದಿನಿಯ ತಂದೆ ತಾಯಿಗೆ ಕಡೆಯಿಂದ ಎರಡನೆಯ ಸೀಟ್ ಕೊಟ್ಟಿದ್ದರು. ಅವರಿಬ್ಬರಿಗೂ ವಯಸ್ಸು ಎಪ್ಪತ್ತು ಮೀರಿತ್ತು. ಆಶ್ಚರ್ಯ ಏನಪ್ಪಾ ಅಂದರೆ, ಅವರಿಗೆ ಅಲಾಟ್ ಆದ ಸೀಟಿನ ಮುಂದೆ ಎರಡು ಸೀಟ್ ಗಳು ಖಾಲಿ ಇದ್ದವು. ದೀಪು ಅವರಿಗೆ ಸ್ವಲ್ಪ ಮುಂದಿನ ಸೀಟ್ ಕೊಡಿ ಎಂದು ಕೇಳಲು ಹೋಗಿದ್ದಕ್ಕೆ ಆ ಮ್ಯಾನೇಜರ್ ವೆಂಕಟೇಶ್ ಅವರು ನಿರಾಕರಿಸಿದರು. ಯಾರೋ ಇಬ್ಬರು ಪ್ರಯಾಣಿಕರು ಬೆಂಗಳೂರಿನಿಂದ ಹತ್ತುವ ಬದಲು ಅಲಹಾಬಾದ್ ನಿಂದ ನಮ್ಮ ಜೊತೆ ಸೇರಿಕೊಳ್ಳಲಿದ್ದಾರೆ, ಅವರಿಗೆ ಆ ಸೀಟು ಕೊಡಬೇಕು, ನಿಮಗೆ ಕೊಡೋದಿಲ್ಲ ಅಂತ ಹೇಳಿಬಿಟ್ಟರು.ಆದರೆ ನಾವು ಅಲಹಾಬಾದ್ ಗೆ ಮೂರು ದಿನಗಳ ನಂತ ತಲುಪಲಿದ್ದೆವು. ಅವರಿಗೂ ಕೈಯಲ್ಲಿ ಆಗಲ್ಲ ಸರ್, ಅದಕ್ಕೆ ಕೊಡೋಕೆ ಆಗಲ್ಲ ಅಂದರು. ದೀಪು ಎಷ್ಟು ದೈನ್ಯತೆಯಿಂದ ಕೇಳಿಕೊಂಡರೂ ಅವರು ಕೇಳುವಮಟ್ಟಿಗೆ ಕಾಣಲಿಲ್ಲ.ಸಹಜವಾಗಿ ಧ್ವನಿ ಏರಿತು. ಮಿಕ್ಕವರೆಲ್ಲರೂ ನಿಧಾನಕ್ಕೆ ಬಸ್ಸು ಹತ್ತುತ್ತಿದ್ದರು. ದೀಪುವಿನ ಏರಿದ ಧ್ವನಿಯನ್ನು ಮಾತ್ರ ಕೇಳಿಸಿಕೊಂಡ ಮಿಕ್ಕವರು ಪರಿಸ್ಥಿತಿಯ ಅರಿವಿಲ್ಲದೇ ದೀಪುವಿಗೆ ದೊಡ್ಡವರ ಬಗ್ಗೆ ಗೌರವವಿಲ್ಲ ಎಂದು ಅಣಕವಾಡಿದರು. ದೀಪುವಿಗೆ ಮತ್ತು ನಂದಿನಿಗೆ, ಬೇಜಾರಾಯಿತು. ಅವರು ಇವರೆಲ್ಲರ  ಮೇಲೆ ಹರಿಹಾಯ್ದರು. ಸುಧಾ ಆಂಟಿ ಇವೆಲ್ಲದಕ್ಕೆ ವಿಪರೀತ ಬೇಜಾರು ಮಾಡಿಕೊಂಡರು. ಆದರೂ ಚಲ ಬಿಡದ ದೀಪು ಅವನ ಅತ್ತೆ ಮಾವರನ್ನು ಮುಂದುಗಡೆಯ ಸೀಟುಗಳಲ್ಲಿಯೇ ಕೂರಿಸಿಬಿಟ್ಟನು. ಮ್ಯಾನೇಜರ್ ಹೌಹಾರಿದರು. ಕಡೆಗೆ, ಬಸ್ಸಿನವರು ಎಲ್ಲಾ ಸೇರಿ ರಾಜಿ ಮಾಡಿಸಿದರು.

Z: ಉಫ್ಫ್ಫ್ಪ್.....

ನಾನು: ನಾನೂ ಹೀಗೆ ನಿಟ್ಟುಸಿರು ಬಿಟ್ಟೆ. ಆನಂತರ ಬಸ್ಸಿನಲ್ಲಿರುವವರೆಲ್ಲರ ಪರಿಚಯ ಆಯಿತು. ಬಸ್ಸಿನಲ್ಲೆ ಮೈಕ್ ಇಟ್ಟಿದ್ದರು, ಅನೌನ್ಸ್ ಮಾಡಲು ಅನುಕೂಲವಾಗಲಿ ಅಂತ. ಪರಿಚಯವೆಲ್ಲ ಮುಗಿದ ನಂತರ ನಾವು ಹೋಗುತ್ತಿರುವ ಸ್ಥಳಗಳ ಸ್ಥೂಲ ಪರಿಚಯ ಮಾಡಿಕೊಡಲಾಯಿತು.ನೀವು ಟೂರನ್ನು ಬಹಳ ಆನಂದಿಸುತ್ತೀರಿ ಎಂದು ಆಶ್ವಾಸನೆ ಇತ್ತ ಆ ಮ್ಯಾನೇಜರ್ ನಮ್ಮನ್ನು ಮೊಟ್ಟಮೊದಲು ಕರೆದೊಯ್ದದ್ದು ವೃಂದಾವನಕ್ಕೆ . ವೃಂದಾವನದಲ್ಲಿ ನಮಗೆ ಗೈಡ್ ಒಬ್ಬರನ್ನ ಟ್ರಾವಲ್ಸ್ ನವರು ವ್ಯವಸ್ಥೆ ಮಾಡಿದರು. ದುಡ್ಡನ್ನು ನಾವೆಲ್ಲಾ ಸೇರಿ ಭರಿಸಬೇಕು ಎಂದು ಮಾತಾಯ್ತು. ವೃಂದಾವನದಲ್ಲಿ ವಿಜಯನಗರ ಶೈಲಿಯ ಗೋಪುರವನ್ನು ನೋಡಿ ನಮಗೆಲ್ಲಾ ಆಶ್ಚರ್ಯವಾಯಿತು . ಆಗ ಆ ಗೈಡು ಅದನ್ನು ಒಬ್ಬ ದಕ್ಷಿಣ ಭಾರತೀಯರೇ ಕಟ್ಟಿಸಿದ್ದು ಎಂದು ವಿವರಿಸುತ್ತಾ ಅವರೇ ಈ ವೃಂದಾವನದ ಮಹಾ ಪೋಷಕರೆಂದು, ಅವರ ವಂಶಸ್ಥರೇ ಈಗ ದೇವಸ್ಥಾನವನ್ನು ನಡೆಸುತ್ತಿರುವರು ಎಂದು ವಿವರಿಸಿದರು. ಆನಂತರ ಅಲ್ಲಿನ ತುಳಸಿ ವನವನ್ನು ತೋರಿಸುತ್ತಾ ಅಲ್ಲಿ ರಾತ್ರಿ ಯಾರು ಹೋಗಬಾರದಂತೆ, ತುಳಸಿವನದಲ್ಲಿ ರಾತ್ರಿ ಪ್ರತಿಯೊಂದು ತುಳಸಿ ಗಿಡವು ರಾಧೆ ಮತ್ತು ಕೃಷ್ಣ ನಾಗಿ ಬದಲಾಗಿ ನಾಟ್ಯವಾಡುತ್ತವಂತೆ , ಅದನ್ನು ನೋಡಿದವರ ಬುದ್ಧಿ ಭ್ರಮಣೆಯಾಗುತ್ತದಂತೆ ಅಂತ ಹೇಳಿದರು  .

Z: ನೀನು ದೊಡ್ಡ ವಿಜ್ಞಾನಿ ಥರ ನಾನು experiment ಮಾಡೇ ಮಾಡ್ತೀನಿ ಅಂತ ಹೊರಟಿರ್ತಿಯಾ.

ನಾನು :  ಹು. ಆದರೆ ನಾವು ವಾಪಸ್ ಆಗ್ರಾ ಗೆ ಬರಲೇ ಬೇಕಿತ್ತು.  ಎಂದಾದರು ಒಂದು ದಿನ  ಈ ಪ್ರಯೋಗ ಮಾಡೇ ಮಾಡ್ತೀನಿ  ಅಂತ  ಅಂದುಕೊಂಡು ವಾಪಸ್ ಬಂದೆ. ಅಲ್ಲಿ ಏಳು ಅಂತಸ್ತಿನ ಒಂದು ಅದ್ಭುತವಾದ ದೇವಸ್ಥಾನ ಇದೆ. ಗೋವಿಂದರಾಜ ದೇವಸ್ಥಾನ ಅಂತ. ಔರಂಗಜೇಬ ದಾಳಿ ಇಟ್ಟು ಏಳಂತಸ್ತಿನಲ್ಲಿ ನಾಲ್ಕಂತಸ್ತನ್ನು ಸುಟ್ಟು ಹಾಕಿದ ಎಂದು ಗೈಡ್ ವಿವರಿಸಿದರು.  ಕೆಲವು ವೃದ್ಧ ವಿಧವೆಯರಿಗೆ  ಅಲ್ಲಿನ ಒಂದು ಆಶ್ರಮದಲ್ಲಿ ಪುನರ್ವಸತಿ ಮತ್ತು ಆಶ್ರಯವನ್ನು ಕಲ್ಪಿಸಲಾಗಿದೆ. ಅಲ್ಲಿಗೆ ದಾನ ಮಾಡಿ ಎಂದು ಕೇಳಿದರು. ಒಂದಿಷ್ಟು ದಾನ ಮಾಡಿದೆವು. ಆನಂತರ ಕೃಷ್ಣ, ನಂದಗೋಪ ಯಶೋದೆ ಎಲ್ಲ ಇರುವ ದೇವಸ್ಥಾನಕ್ಕೆ ಹೋದೆವು. ಅಲ್ಲಿ ಕೃಷ್ಣನಿಗೆ ಪ್ಯಾಂಟ್ ಶರ್ಟ್ ತರಹದ ಬಟ್ಟೆ ಹಾಕಿದ್ದರು. ಅಣ್ಣ.."ಇದೇನು ಕೃಷ್ಣನಿಗೆ ಪ್ಯಾಂಟ್ ಶರ್ಟ್ ಹಾಕ್ಬಿಟ್ಟಿದಾರೆ ! ರಾಧೆಗೆ ಸ್ಕೂಲ್ ಯೂನಿಫಾರಮ್ ತರಹದ ಸ್ಕರ್ಟ್ ಹಾಕ್ಬಿಟ್ಟಿದ್ದಾರೆ ! ಸೀರೆ ಮತ್ತು ಪಂಚೆಲಿ ಇದ್ರೇನೆ ದೇವ್ರು ದೇವ್ರು ಅಂತ ಅನ್ನಿಸ್ಕೊಳ್ಳೋದು. " ಅಂದರು. ನಾನು ಮತ್ತು ಅಪರ್ಣ " ಇದು ಉತ್ತರ ಭಾರತದ ಶೈಲಿ ಅಣ್ಣ. ಇಲ್ಲೆಲ್ಲಾ ಹಿಂಗೇ ಮಾಡೋದು " ಅಂದೆವು. ಅಣ್ಣ ಯಾಕೋ ಕನ್ವಿನ್ಸ್ ಆದ ಹಾಗೆ ಕಾಣಲಿಲ್ಲ. ನಾವು " ಹೋಗ್ಲಿ ಬಿಡು" ಮಂತ್ರವನ್ನು ಪಠಿಸಿದೆವು.  ದಾರಿಯಲ್ಲಿ ಬಿರ್ಲಾ ಟೆಂಪಲ್ ಶೈಲಿಯ ಮತ್ತೊಂದು ದೇವಸ್ಥಾನಕ್ಕೆ ಭೇಟಿ ಕೊಟ್ಟು  ಮಥುರಾ ಗೆ ಹೋಗಲು ಅನುವಾದೆವು. ಮಥುರಾ ಗೆ ಹೋಗುವ ಹೊತ್ತಿಗೆ ಸುಮಾರು ಕತ್ತಲಾಗಿತ್ತು.

ಮಥುರೆಗೆ ಹೋಗಬೇಕಾದರೆ ಬಸ್ಸನ್ನು ಒಂದು ಕಡೆ ನಿಲ್ಲಿಸಿ ನಾವು ಅಲ್ಲಿಂದ ಸುಮಾರು ದೂರ ನಡೆಯಬೇಕಿತ್ತು. ಅಷ್ಟಲ್ಲದೇ ಅಲ್ಲಿ ಕ್ಯಾಮೆರಾ ಕೊಂಡೊಯ್ಯುವ ಹಾಗಿಲ್ಲ , ಬೆಲ್ಟು, ಪರ್ಸು ಮುಂತಾದ leather ಇಂದ ಮಾಡಿರುವ ವಸ್ತುಗಳಿಗೆ ಪ್ರವೇಶ ಇರಲಿಲ್ಲ. ಅಷ್ಟೇ ಯಾಕೆ hair pin ಕೂಡಾ ಬಿಡುತ್ತಿರಲಿಲ್ಲ. ಪರ್ಸುಗಳನ್ನು ಬಸ್ಸಿನಲ್ಲಿ ಬಿಟ್ಟು ಹೋದರೆ ನೋಡಿಕೊಳ್ಳುವವರು ಯಾರೂ ಇರಲಿಲ್ಲ. ಅಣ್ಣ ಈ ಹಿಂದೆ ಮಥುರಾವನ್ನು ನೋಡಿದ್ದರು ಆದ್ದರಿಂದ ಅವರು ಬಸ್ಸಿನಲ್ಲಿಯೇ ಉಳಿದರು. ನಾವೆಲ್ಲಾ ಮಥುರೆಯ ಕೃಷ್ಣನನ್ನು ನೋಡಲು ಹೊರಟೆವು.

Z : ಹೇಗಿದೆ ದೇವಸ್ಥಾನ ?

ನಾನು : ದೇವಸ್ಥಾನದ ಭವ್ಯತೆಗಿಂತಾ ಸೆಕ್ಯೂರಿಟಿ ಭವ್ಯವಾಗಿದೆ !

Z: ಹಾಂ ?

ನಾನು : ಹು. ಅಡಿಗಡಿಗೂ ಪೋಲೀಸ್ ಕಾವಲು. ಹಿಂದೂ ಮುಸ್ಲಿಮ್ ಸ್ಮಾರಕಗಳು ಎಲ್ಲೆಲ್ಲಿ ಒಟ್ಟೊಟ್ಟಿಗೆ ಇರತ್ತೋ, ಅಲ್ಲೆಲ್ಲಾ ಅರಿಭಯಂಕರವಾದ ಸೆಕ್ಯೂರಿಟಿ ಇರತ್ತೆ. ಬರುವವರೆಲ್ಲರೂ ಉಗ್ರಗಾಮಿಗಳು ಎನ್ನುವ ರೀತಿಯಲ್ಲಿ ನಿರ್ದಾಕ್ಷಿಣ್ಯವಾಗಿ ಪರೀಕ್ಷೆ ಮಾಡುತ್ತಾರೆ.ಹಾವಿನ  ತರಹ ಸುರುಳಿ ಸುತ್ತುವ ಕ್ಯೂ. ಅದೆಲ್ಲಾ ಆದ ಮೇಲೆ ನಾವು ಒಳಪ್ರಾಂಗಣ ತಲುಪಿದ್ದು.  ಮಥುರೆಯ ಕಾರಾಗೃಹದಲ್ಲಿ ಅಲ್ಲವೇ ನಮ್ಮ ಕೃಷ್ಣ ಜನಿಸಿದ್ದು ?  ಔರಂಗಜೇಬನು ಆ ಕಾರಾಗೃಹವನ್ನು ಒಡೆಸಿ ಅಲ್ಲಿ ಒಂದು ಮಸೀದಿಯನ್ನು ಕಟ್ಟಿಸಿದ್ದಾನೆ. ಆದರೂ ಹಿಂದೂಗಳು ಕೃಷ್ಣನು ಹುಟ್ಟಿದ  ಜನ್ಮಸ್ಥಳದ ಒಂದು ಭಾಗವನ್ನು ಮಾತ್ರ ಉಳಿಸಿಕೊಂಡು ಅದನ್ನು ಜೀರ್ಣೋದ್ಧಾರ ಮಾಡಿದ್ದಾರೆ. ಮಸೀದಿಗೂ ಕೃಷ್ಣನ ಜನ್ಮಸ್ಥಳಕ್ಕೂ ಇರುವುದು ಒಂದೇ  common wall.

Z: ಹೌದಾ ? This is interesting.

ನಾನು: ಹು. ಮಥುರೆಯ ದೇವಸ್ಥಾನವನ್ನು ಒಂದು ಪ್ರಸಿದ್ಧ ಸ್ಥಳವನ್ನಾಗಿ ಮಾಡಬೇಕು ಎಂದು ಕೃಷ್ಣನ ಬಾಲ ಲೀಲೆಗಳನ್ನೆಲ್ಲಾ ಬಿಂಬಿಸುವ ಬೊಂಬೆಗಳನ್ನು ಇಟ್ಟಿದ್ದಾರೆ. ದೊಡ್ಡದೊಂದು ದೇವಸ್ಥಾನದಲ್ಲಿ ರಾಧಾ ಕೃಷ್ಣನ ಬೃಹತ್ ಮೂರ್ತಿಗಳನ್ನು ಸ್ಥಾಪಿಸಿದ್ದಾರೆ. ಪಾದರಸದಲ್ಲಿ ಶಿವಲಿಂಗ ಮೂರ್ತಿಯನ್ನುಕೂಡಾ ಮಾಡಿದ್ದಾರೆ. its a challenge to chemistry...ನನಗೆ ತುಂಬಾ ಇಷ್ಟ ಆಯ್ತು ಅದು.

Z: ಅದು ಹೇಗೆ ಪಾದರಸವನ್ನ  ಲಿಂಗ ಮಾಡಿದರಂತೆ ಅವರು ?

ನಾನು : ನಾನು ಆ ಗೈಡ್ ನ ಹೀಗೆ ಕೇಳಿದೆ. ಅದಕ್ಕೆ ಅವರು ಮಂತ್ರಶಕ್ತಿಯಿಂದ ಯಾರೋ ಸ್ವಾಮಿಜಿ ಮಾಡಿದ್ದಾರೆ ಅಂತ ಹೇಳಿದ. ನನಗೆ ನಂಬಲು ಕಷ್ಟವಾಯಿತು. ಇದರ ಮೂಲಕ್ಕೆ ಕೈ ಹಾಕಲೇಬೇಕೆಂದು ಯೋಚಿಸಿದೆ. ಅಣ್ಣನ blackberryಯಲ್ಲಿ ಗೂಗಲ್ ಮಾಡಿದೆನಾದರೂ, ಹೆಚ್ಚು ಕ್ಲೂ ಏನೂ ಸಿಗಲಿಲ್ಲ. ಇನ್ನೂ ಉತ್ತರ  ಹುಡುಕುತ್ತಿದ್ದೇನೆ. 

Z: ಯಮುನೆ ಕಂಡಳೇ ?

ನಾನು : ಆ ಕಾರ್ಗತ್ತಲಲ್ಲಿ ಎಲ್ಲಿ ಹುಡುಕಲಿ ಯಮುನೆಯನ್ನ ? ಆಗ್ರಾದಲ್ಲೇ ನೋಡಬೇಕು ಎಂದುಕೊಂಡು ಬಂದೆ.ಮಥುರೆಯನ್ನು ನೋಡಿ ಮತ್ತೆ ಬಸ್ಸು ಹತ್ತಿ ಹೋಟಲ್ಲಿಗೆ ಬರುವ ಹೊತ್ತಿಗೆ ಸುಮಾರು ತಡವಾಗಿತ್ತು. ಮಾರನೆಯ ದಿನ ತಾಜ್ ಮಹಲು ಮತ್ತು ಆಗ್ರಾ ಕೋಟೆಯನ್ನು ನೊಡಲಿದ್ದೇವೆ ಎಂದು ಗೈಡ್ ಹೇಳಿದರು. ಊತ ಪರವಾಗಿಲ್ಲ. ಎಲ್ಲರೂ ಅವರವರ ರೂಮಿಗೆ ಹೋಗಿ ಮಾರನೆಯ ದಿನದ ಬಗ್ಗೆ ಯೋಚಿಸುತ್ತಾ ಮಲಗಿದರು. ನನಗೆ ಆ ರಾತ್ರಿ ತಾಜ್ ಮಹಲಿನದ್ದೇ ಕನಸು !

3 comments:

Unknown said...

bahaLa dinagaLa nantara blaagisiddeera. bahaLa santhoshavaaytu :) heege bartirli nimma zindagiyodagina maatu

VENU VINOD said...

ಬರೋಬ್ಬರಿ 2 ವರ್ಷ ಬಳಿಕ ಜಿಂದಗಿ ಮತ್ತೆ ಕರೆಯುತ್ತಿದೆ...ವೆರಿಗುಡ್ :)
ಪ್ರವಾಸಕಥನ ಸಂಭಾಷಣೆ ಶೈಲಿ ಚೆನ್ನಾಗಿದೆ...

Anaamika said...

bahaLa samayavAgittu annisatte zindagiyu call meLaisi. Agra-dalli nimmibbara sambhAshaNe hEgirabahudu amta kalpisikoLLuttidde... :)

ಉತ್ತರಾಯಣ ೩

ನಾನು: ಬೃಂದಾವನಕ್ಕೆ ಹೊರಡಲು ನಾಲ್ಕು ಘಂಟೆಯಷ್ಟೊತ್ತಿಗೆ ರೆಡಿ ಇರಬೇಕು ಎಂದು ಮ್ಯಾನೇಜರ್ ವೆಂಕಟೇಶ್ ಅವರು ಹೇಳಿದ್ದರು. ಇವರೆಲ್ಲರೂ ಊಟ ಮಾಡಿ, ಮಲಗಿ, ಎದ್ದು ರೆಡಿಯಾಗು...