Sunday, March 14, 2010

Back to ಜಲೇಬಿ within 365 days ! - 1

Z : ಏನಿದು....ಈ ಲೆವೆಲ್ ನಲ್ಲಿ ಊರೂರು ತಿರುಗುತ್ತಿದ್ದೀಯ ?

ನಾನು : ಊರೂರಲ್ಲ....ಊರು ಮಾತ್ರ. ಜಲೇಬಿನಾಡಿನ ರಾಜಧಾನಿ ಜಲೇಬಿ-ಚೆನ್ನೈ ಗೆ.

Z : ಯಾತಕ್ಕೆ ?

ನಾನು : Department of Science and Technology, Govt. of India, National Science and Technology Communication and Tamilnadu Centre for Science and Technology ಇವರೆಲ್ಲಾ ಸೇರಿ Master Resource Training Programme on Annular Solar Eclipse-2010 ಅನ್ನೋ ಮೂರುದಿನದ ಕಾರ್ಯಕ್ರಮವೊಂದನ್ನ ಆಯೋಜಿಸಿದ್ದರು. ನನ್ನನ್ನು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಈ ಕಾರ್ಯಕ್ರಮಕ್ಕೆ ಆಯ್ಕೆ ಮಾಡಿತು.

Z : ಹ್ಮ್ಮ್....ಯಾವತ್ತಿಂದ ಯಾವತ್ತಿನವರೆಗೆ ?

ನಾನು : ೨೨, ೨೩ ಮತ್ತು ೨೪ ಡಿಸಂಬರ್2009.

Z : ಹೇಗಾಯ್ತು ಕಾರ್ಯಕ್ರಮ ?

ನಾನು : ಸಕತ್ತಾಗಿತ್ತು. ಸಾಮಾನ್ಯ ಜನರಿಗೆ ಗ್ರಹಣದ ಮೇಲಿರುವ ಭಯ ಮತ್ತು ಮೂಢನಂಬಿಕೆಗಳನ್ನು ಹೋಗಲಾಡಿಸುವುದು ಹೇಗೆ ಎಂಬುದರ ಬಗ್ಗೆ ಈ ಕಾರ್ಯಾಗಾರದಲ್ಲಿ ಹೆಚ್ಚು ಒತ್ತು ನೀಡಲಾಯ್ತು. ಗ್ರಹಣದ ಸುರಕ್ಷಿತ ವೀಕ್ಷಣೆಯ ರೀತಿಗಳನ್ನು ನಮಗೆ ವಿವರವಾಗಿ ತಿಳಿಸಲಾಯ್ತು.ನಾನಂತು ಇದುವರೆಗೂ ಯಾವುದೇ ಕಾರ್ಯಗಾರಗಳನ್ನು ಅಟೆಂಡ್ ಮಾಡಿರಲಿಲ್ಲ. ಒಳ್ಳೆ ಅನುಭವ.
ಜನವರಿ ಹದಿನೈದು ೨೦೧೦ ಕನ್ಯಾಕುಮಾರಿಗೆ ಹೋಗಬೇಕಾಗಿತ್ತು. ನಾನು ಹೋಗೋಣ ಅಂದುಕೊಂಡಿದ್ದೆ.ಆದರೆ ಟಿಕೆಟ್ ಸಿಗಲಿಲ್ಲ. ಟ್ರೈನು, ಬಸ್ಸು ಮತ್ತು flight ನಲ್ಲೂ ಸಹ !

Z : ಪಾಪ. ಮತ್ತೆ ಗ್ರಹಣಕ್ಕೆ ಏನು ಮಾಡಿದೆ ?

ನಾನು : ಬೆಂಗಳೂರಿನ ಬಸವನಗುಡಿ ನ್ಯಾಷನಲ್ ಕಾಲೇಜಿನಲ್ಲಿ ಗ್ರಹಣದ ಬಗ್ಗೆ ಗ್ರಹಣದ ದಿನವೇ ಒಂದು ಕಾರ್ಯಾಗಾರ ಇತ್ತು. ಅಲ್ಲಿ ಹೋಗಿ, ಗ್ರಹಣ ವೀಕ್ಷಿಸಿದೆ.

Z : ಹ್ಮ್ಮ್...

ನಾನು : ನೋಡು....ವರ್ಷಕ್ಕೊಂದು ಸರ್ತಿ ಜಲೇಬಿನಾಡಿನ ದರ್ಶನ ಖಾಯಂ ಆಗೋಹಾಗೆ ಕಾಣತ್ತೆ ಕಣೆ...

Z : ಹೂ...ಹೋದಲ್ಲ ಹೋದ ವರ್ಷ(೨೦೦೮) ಆಯ್ತು, ಕಳೆದ ವರ್ಷ ನು ಆಯ್ತು...

ನಾನು : ಈ ವರ್ಷನೂ ಆಗತ್ತೆ...

Z : ಯೆಸ್. ಏನ್ ಏನ್ ಮಾಡಿದೆ ಚೆನ್ನೈ ನಲ್ಲಿ ?

ನಾನು : ಲೋಕಲ್ ಟ್ರೈನುಗಳಲ್ಲಿ ಪ್ರಯಾಣ ಮತ್ತು ಟಿ.ನಗರದಲ್ಲಿ ಸಿಕ್ಕಾಪಟ್ಟೆ ಶಾಪಿಂಗ್, ಶರವಣ ಭವನದಲ್ಲಿ ದೋಸೆ ಮತ್ತು ಮರಿನಾ ಬೀಚಿನಲ್ಲಿ ಒಂದು ಸುತ್ತು.

Z : ಸಾರ್ಥಕ ಆಯ್ತು.

ನಾನು : ಅಲ್ವಾ ? ಆದ್ರೆ ಲೋಕಲ್ ಟ್ರೈನಲ್ಲಿ ನಾವು ಹೋಗಿದ್ದು ಬರಿ ಎರಡೇ ಸ್ಟಾಪು.ಟಿ.ನಗರದಲ್ಲಿ ಶಾಪಿಂಗ್ ಮಾಡಿದ್ದು ನನಗಂತೂ ತೃಪ್ತಿ ಆಗಲಿಲ್ಲ, ಶರವಣ ಭವನದ ಎಲ್ಲಾ ದೋಸೆಗಳನ್ನು ಟ್ರೈ ಮಾಡಲಾಗಲಿಲ್ಲ ಮತ್ತು ಮರೀನ ಬೀಚಿನಲ್ಲಿ ನೀರಿಗೆ ಇಳಿಯಲಿಲ್ಲ.

Z : !!!!!!!!!!!!!!!!! ಸಾಲ್ದೆನೆ ಇಷ್ಟು ?

ನಾನು : ಉಹು ! ಚೆನ್ನೈ ಇಂದ ಅಣ್ಣನಿಗೆ ಏನೂ ತರಲಾಗಲಿಲ್ಲ :( ಅಮ್ಮ, ಅಪರ್ಣ ಮತ್ತು ನನಗಾಗಿ ಮಾತ್ರ ಶಾಪಿಂಗ್ ಮಾಡಕ್ಕೆ ಟೈಂ ಸಿಕ್ಕಿದ್ದು. ಮೈಲಾಪುರದ ಶರವಣ ಭವನ ತಲುಪಿದಾಗ ರಾತ್ರಿ ಎಂಟು. ಇನ್ನೊಂದು ಘಂಟೆ ಮುಂಚೆ ತಲುಪಿದ್ದಿದ್ದರೆ ಇನ್ನೊಂದು ದೋಸೆಯನ್ನಾದ್ರೂ ಗಡದ್ದಾಗಿ ಲಗಾಯ್ಸಬಹುದಿತ್ತು. ಒಂದು ದೋಸೆ ತಿಂದಿದ್ದು ಸಾಕಾಗಲಿಲ್ಲ. ಮರೀನ ಬೀಚು ತಲುಪಿದಾಗ ಸಾಯಂಕಾಲ ಏಳು. ಮೊದಲೇ ಕತ್ತಲಾಗಿಹೋಗಿತ್ತು. ಮತ್ತೂ, ನಾನು ಉಟ್ಟ ಸೀರೆ ಹಾಳಾಗಬಾರದು ಅನ್ನೋ ಉದ್ದೇಶದಿಂದ ನಾನು ನೀರಿಗೆ ಇಳಿಯಲಿಲ್ಲ.ಅಷ್ಟೇ.

Z : ಹಾಗೆ.

ನಾನು : ಹೂ. ನನ್ನ ಜೀವನದ ಹೆಬ್ಬಯಕೆಗಳಲ್ಲಿ ಒಂದಾದ ಐಐಟಿ ಮಡ್ರಾಸ್ ನ ವೀಕ್ಷಣೆ ಸಂಪನ್ನಗೊಂಡಿದ್ದು ವಿಶೇಷ.

Z : ಗುಡ್.

ನಾನು : ಮಿಕ್ಕಿದ್ದೇನೂ ನೋಡಕ್ಕೆ ಆಗ್ಲಿಲ್ಲ. ಹಾಗಾಗಿ ಇನ್ನೊಂದು ಲಾಂಗ್ ವೀಕೆಂಡ್ ಸಿಕ್ಕರೆ ಯಾರದೇ ಮುಲಾಜು ನೋಡದೇ ಬಸ್ ಹತ್ತಿಕೊಂಡು ನಾನೊಬ್ಬಳೇ ಚೆನ್ನೈಗೆ ಸವಾರಿ ಹೋಗಲು ನಿರ್ಧರಿಸಿದ್ದೇನೆ.

Z : ಏನೇನು ನೋಡೋ ಆಸೆ ಇತ್ತು ತಮಗೆ ?

ನಾನು : ಕಂಚಿ, ಮಹಾಬಲಿಪುರಂ, ಗಿಂಡಿ ನ್ಯಾಷನಲ್ ಪಾರ್ಕು, ಗಾಂಧಿ ಮಂಟಪ, ವಡಪಳನಿ...ಸಿಕ್ಕಾಪಟ್ಟೆ ದೊಡ್ಡ ಲಿಸ್ಟಿದೆ.

Z : ಸದ್ಯೋಜಾತ ! ಹಾಗಿದ್ದರೆ ಶಾಪಿಂಗಿನ ಲಿಸ್ಟು ಇನ್ನೂ ದೊಡ್ಡದಿರತ್ತೆ.

ನಾನು : Of course.

ಈ ಟ್ರಿಪ್ಪಿನ ಡಿಟೈಲ್ಡ್ ಪ್ರವಾಸ ಕಥನ ಬೇಕಲ್ಲಾ...

ನಾನು : ಸಧ್ಯಕ್ಕೆ ಅದು ಸಾಧ್ಯವಿಲ್ಲ.

ಯಾಕೆ ?

ನಾನು : ಸಮಯದ ಸಿಕ್ಕಾಪಟ್ಟೆ ಅಭಾವದಿಂದ .

Z : ಆದದ್ದಾಗೋಗಲೀ ಅಂತ ಇದನ್ನೂ ಹೇಳಿಬಿಡು. ಪರ್ವಾಗಿಲ್ಲ.

ನಾನು : ಹಂಗಂತ್ಯಾ ?

Z : ಹು.

ನಾನು : ಸರಿ. ಕೇಳ್ಸ್ಕೊ.

ಇಪ್ಪತ್ತೊಂದನೆಯ ತಾರೀಖು ಮಧ್ಯಾಹ್ನ ಒಂದು ಘಂಟೆಗೆ ಚೆನ್ನೈಗೆ ಹೊರಡುವ ಐರಾವತ ವೋಲ್ವೋ ಬಸ್ಸನ್ನು ಹತ್ತಿದೆವು. ಮಂಡ್ಯದಿಂದ ಒಬ್ಬರು ಅಧ್ಯಾಪಕರು, ನಮ್ಮ ಲೆಕ್ಚರರ್ರು ಮತ್ತು ನಾನು. ನಮ್ಮಮ್ಮ ಮೂವತ್ಮೂರು ಕೋಟಿ ದೇವತೆಗಳ ಬಳಿ "ಚೆನ್ನೈಗೆ ಹೋಗ್ತಿದಾಳೆ-ನಾವ್ ಬೇರೆ ಇಲ್ಲ...ಸಿಕ್ಕಾಪಟ್ಟೆ ಬಿಸಿಲಿದ್ರೆ ಗತಿಯೇನು? ನೀವೇ ಕಾಪಾಡಿ ! "ಅಂತೆಲ್ಲಾ ಸಿಕ್ಕಾಪಟ್ಟೆ ಪ್ರಾರ್ಥನೆ ಮಾಡಿದ್ದರು ಅಂತ ಕಾಣತ್ತೆ-ಚೆನ್ನೈ ನಲ್ಲಿ ಸುಡುಬಿಸಿಲಿರದೇ ಧಾರಾಕಾರವಾದ ಮಳೆ ಬರುತ್ತಿತ್ತು.

Z : ಅಮ್ಮ....You are great.

ನಾನು : ಹು. ನಮ್ಮಮ್ಮ ಏನು ಸಾಮಾನ್ಯಾ ನಾ ?ಎಷ್ಟೇ ಆಗಲಿ ನಮ್ಮಮ್ಮ ! ಸರ್ಯಾಗಿ ಹೆದರ್ಸಿದಾರೆ ದೇವರುಗಳನ್ನ. ಅವರು ಹೆದರ್ಕೊಂಡು ಸೂರ್ಯಂಗೆ instructions ಕೊಟ್ಟಿದ್ದಾರೆ, "ನೋಡು ಸೂರ್ಯ...ನಿನ್ನ ಗ್ರಹಚಾರ ಕೆಡೋದು ಜನವರಿ ಹದಿನೈದರಂದು. ಸುಮ್ನೆ ಎಡವಟ್ಟು ಮಾಡ್ಕೊಂಡು ಈಗ್ಲೆ ಗ್ರಹಚಾರ ಕೆಡಸ್ಕೋಬೇಡ. ಸುಮ್ನೆ ಮೋಡದ ಮರೆಯಲ್ಲಿ ಮುಸುಕು ಹೊದ್ದು ಮಲಗು "ಅಂತ . ಅವನು ಪಾಪ ಯೆಸ್ ಅಂದಿರ್ಬೇಕು, ಆ ಸಂತೋಷಕ್ಕೆ ವರುಣ ಫುಲ್ ಜೋಷಲ್ಲಿ ಮಳೆ ಸುರಿಸ ತೊಡಗಿದ್ದ. ಶೆಖೆ ಅಂತ ಕೂಗಾಡೋದನ್ನ practice ಮಾಡಿಕೊಂಡು ಹೋಗಿದ್ದ ನಾನು ಜಲೇಬಿನಾಡಲ್ಲಿ ಇಳಿಯುತ್ತಲೇ ನೆನೆದು ತೊಪ್ಪೆಯಾಗಿ ಹೋಗಿದ್ದೆ.

Z : ಎಹೆಹೆಹೆಹೆ.....

ನಾನು : ನಮ್ಮ ವಸತಿ ವ್ಯವಸ್ಥೆ ಉಸ್ತುವಾರಿ ವಹಿಸಿದ್ದ ಗೋಪಿನಾಥ್ ಅವರು ಬಂದು ನಮ್ಮನ್ನು ಟಾಟಾ ಸೂಮೋದಲ್ಲಿ ನಾವು ಇಳಿದುಕೊಳ್ಳಬೇಕಿದ್ದ ಹಾಸ್ಟೆಲ್ ಬಳಿ ಕರೆದುಕೊಂಡು ಹೋದರು. ಬೆಂಗಳೂರು ಬಸ್ ನಿಲ್ದಾಣದಿಂದ ನೆಲಮಂಗಲಕ್ಕೆ ಹೋದಷ್ಟು ದೂರ, ಆ ಯೂನಿವರ್ಸಿಟಿ ಕ್ಯಾಂಪಸ್ಸು.

Z : ಹಾ ?!!

ನಾನು : ಹು. ನಾವು ಬಸ್ಸಿಂದ ಇಳಿದಿದ್ದು ಎಂಟುವರೆಗೆ. ನಾವು ಇಳಿದುಕೊಳ್ಳಬೇಕಿದ್ದ ಜಾಗದ ಹೆಸರು ವೇಲ್ಸ್ ಯೂನಿವರ್ಸಿಟಿ,ಪಲ್ಲಾವರಂ ಅಂತ. ಅಲ್ಲಿಗೆ ಹೋದಾಗ ಹತ್ತುವರೆ.

Z : ಊಟ ?

ನಾನು : ಊಟ ಮಾತ್ರ ಸಕತ್ತಾಗಿತ್ತು ನೋಡು. ರಸಗುಲ್ಲ ಬೇರೆ ಇತ್ತು. ಚೆನ್ನಾಗಿ ಲಗಾಯ್ಸಿದೆ.

Z : ಎಹೆಹೆಹೆ. ಆಮೇಲೆ ?

ನಾನು : ರೂಮು ಅಂತ ನಮ್ಮನ್ನ ಲೇಡೀಸ್ ಹಾಸ್ಟೆಲ್ಲಿಗೆ ತಂದುಬಿಟ್ಟರು. ಮಲಗಕ್ಕೆ ಜಾಗ ಇತ್ತು ಬಿಟ್ಟರೆ ಇನ್ನೇನೂ ವ್ಯವಸ್ಥೆ ಇಲ್ಲದ ಜಾಗ. ನಾವು ಸಾಂಗವಾಗಿ ಪಕ್ಕದ ರೂಮಿನವರಿಂದ ಪೊರಕೆ ಇಸ್ಕೊಂಡು, ಗುಡಿಸಿ, ಧೂಳು ಕೊಡವಿ, ಮಲಗುವ ಅಷ್ಟೊತ್ತಿಗೆ ಹನ್ನೊಂದು ಮುಕ್ಕಾಲು.

Z : ರಾಮಾ...

ನಾನು : ಹು. ಮಾರನೆಯ ದಿನಬೆಳಿಗ್ಗೆ ಎದ್ದರೆ ಥಣ್ಣೀರು ಸ್ನಾನ ಮಾಡಬೇಕೆಂದು ಜ್ಞಾನೋದಯವಾಯ್ತು. ನನಗೋ, ಥಣ್ಣೀರು ನೋಡಿದರೇನೇ ಶೀತವಾಗತ್ತೆ. ಮತ್ತೆ ಪಕ್ಕದ ಮನೆಯವರ ಬಳಿ ಹೀಟಿಂಗ್ ಕಾಯಿಲ್ಲನ್ನ ಸಾಲ ಕೇಳಿ, ಬಿಸಿನೀರು ಕಾಯಿಸಿಕೊಂಡು, ಸ್ನಾನದ ಶಾಸ್ತ್ರ ಮುಗಿಸಿದೆವು. ರೆಡಿಯಾಗಿ ವ್ಯವಸ್ಥಾಪಕರು ಕಳಿಸಿದ್ದ ಬಸ್ ಹತ್ತಿ ಹೊರಡಲನುವಾದೆವು. ನಾವು ಭಾಗವಹಿಸಬೇಕಿದ್ದ ಕಾರ್ಯಾಗಾರ ನಡಿಯುತ್ತಿದ್ದುದು ತಾರಾಲಯದಲ್ಲಿ. ಅದು ಅಣ್ಣಾ ವಿಶ್ವವಿದ್ಯಾನಿಲಯದ ಪಕ್ಕದಲ್ಲಿದೆ. ಅಂದರೆ, ನಗರದ ಹೃದಯಭಾಗದಲ್ಲಿ. ಹತ್ತುವರೆಗೆ ಉದ್ಘಾಟನಾ ಸಮಾರಂಭವಿತ್ತು. ನಾವು ತಲುಪಿದ್ದು ಹತ್ತುಮುಕ್ಕಾಲಿಗೆ. ಪುಣ್ಯಕ್ಕೆ, ಅತಿಥಿಗಳ ಆಗಮನವೂ ತಡವಾಗಿತ್ತು. ಹಾಗಾಗಿ, ನಾವೇನೂ ಭಯಪಡುವಂತಿರಲಿಲ್ಲ. ಸಾಂಗವಾಗಿ ಉದ್ಘಾಟನಾ ಭಾಷಣಗಳು ನಡೆದವು. ನಾನು ಅದನ್ನು ರೆಕಾರ್ಡ್ ಕೂಡಾ ಮಾಡಿಕೊಂಡೆ. ಅದಾದಮೇಲೆ ಚಹಾವಿರಾಮವಿತ್ತು. ಮತ್ತೆ ಭಾಷಣಗಳು. ನಂತರ ಊಟ. ಪೊಗದಸ್ತಾಗಿತ್ತು. ಚೆನ್ನೈ ನ ಸಾಂಬಾರ್ ಮಾತ್ರ ಅದ್ಭುತವಾಗಿತ್ತು. ಅವತ್ತೊಂದು ದಿನ ಪುಣ್ಯಾತ್ಮ ಬೆಳ್ಳುಳ್ಳಿ ಹಾಕಿರಲಿಲ್ಲ. ಹಾಗಾಗಿ ಸಾಂಗವಾಗಿ ಸಾರನ್ನ ಮೊಸರನ್ನ ತಿಂದೆ. ಮಿಕ್ಕಿದ ದಿನವೆಲ್ಲ ಬರೀ ಮೊಸರನ್ನ ನೇ !!


Z : ಎಹೆಹೆಹ್ಹೆ...

ನಾನು : ಸೂರ್ಯ ಮೋಡದ ಮರೆಯಲ್ಲಿ ಬಚ್ಚಿಟ್ಟುಕೊಂಡಿದ್ದ ಆದ್ದರಿಂದ ನಮಗೆ ಕೆಲವು observations ಮಾಡಲಾಗಲಿಲ್ಲ. ಈಗ ನಾನು ವಿಚಾರಿಸಿಕೊಂಡೆ ಸೂರ್ಯನ್ನ. " What is this Surya? ಬರದೇ ಬರದೇ ಕರ್ನಾಟಕದಿಂದ ಹೊರಗೆ ನಾನು ಕಾಲಿಟ್ಟಿರೋ ಈ ಶುಭ ಸಂದರ್ಭದಲ್ಲಿ ನೀನು ಹಿಂಗೆ escape ಆದ್ರೆ ಹೆಂಗೆ ? ನೀಟಾಗಿ ಮೋಡದಿಂದ ಹೊರಗೆ ಬಂದ್ರೆ ಸರಿ" ಅಂದೆ. ಪಾಪ ಸೂರ್ಯ ತಾಯಿ ಮಗಳ ಪ್ರಾರ್ಥನೆಗಳ ಮಧ್ಯ sandwich ಆಗಿಹೋದ.

Z : :) ಹೊರಗೆ ಬಂದನಾ ?

ನಾನು : ಬಂದ. ಆದರೆ ಹೆಚ್ಚು ಹೊತ್ತು ಇರಲಿಲ್ಲ :(

ಆವತ್ತು ಸಾಯಂಕಾಲ ನಾವು ರೂಮಿಗೆ ಮರಳಿದ ಮೇಲೆ ನಾನು ನಮ್ಮ ಲೆಕ್ಚರರ್ರು ಹೀಗೆ ಊರಾಚೆ ಇದ್ದರೆ ಊರು ಸುತ್ತಕ್ಕೆ ಆಗಲ್ಲ, ಹಾಗಾಗಿ ನಾವು ಬೇರೆಯ ಕಡೆಗೆ ಹೋಗುವುದು ಉಚಿತವೆಂದು ನಿರ್ಧರಿಸಿದೆವು. ನಾವು ಹಾಗೆ ಯೋಚಿಸಲು ಇದ್ದ ಮತ್ತೊಂದು ಮುಖ್ಯ ಕಾರಣ ಅಲ್ಲಿನ ವಾತಾವರಣ ನಮಗೆ ಸರಿಬರದಿದ್ದುದು. ವ್ಯವಸ್ಥಾಪಕರೊಡನೆ ಮಾತಾಡಿದಾಗ ನಮಗೆ ಬೇರೆ ಕಡೆ ಇಳಿದುಕೊಳ್ಳುವ ವ್ಯವಸ್ಥೆ ಮಾಡುವುದಾಗಿ ಅವರು ಹೇಳಿದರು. ನಾವು ಮಾರನೆಯ ದಿನ ಲಗೇಜನ್ನು ಪ್ಯಾಕ್ ಮಾಡಿ ಅಲ್ಲಿಂದ ಹೊರಟೆವು.

Z : ಹ್ಮ್ಮ್ಮ್......

ನಾನು : ಆವತ್ತಿನ ದಿನ ನಮ್ಮ ಕಾರ್ಯಾಗಾರದಲ್ಲಿ ಒಂದು ರಸಪ್ರಶ್ನೆ ಸ್ಪರ್ಧೆ ಏರ್ಪಡಿಸಲಾಗಿ, ನಾನು ಇದ್ದ ತಂಡ ಮೊದಲ ಬಹುಮಾನ ಗೆದ್ದಿತು. ಸಂತೋಷದಿಂದ ಆವತ್ತಿನ ಸಾಯಂಕಾಲ ನಾವು ನಗರ ಪರ್ಯಟನೆ ಮಾಡಲು ಯೋಚಿಸಿದ್ದೆವು. ಕಾರಣಾಂತರಗಳಿಂದ ನಮ್ಮ ಅಂದಿನ ದಿನದ ಕಾರ್ಯಕಲಾಪಗಳು ಮುಗಿಯುವುದು ತಡವಾಗಿ, ನಮ್ಮ ವಸತಿ ವ್ಯವಸ್ಥೆ ಡೋಲಾಯಮಾನವಾಗಿ ಹೋಯಿತು. ಕಾರ್ಯಕ್ರಮದ ಆಯೋಜಕರಲ್ಲಿ ಒಬ್ಬರು ತುರ್ತಾಗಿ ದಿಲ್ಲಿಗೆ ಹೋಗಬೇಕಾಯ್ತು. ಅವರು ಎಮ್.ಎಸ್ ಸ್ವಾಮಿನಾಥನ್ ಗೆಸ್ಟ್ ಹೌಸಿನಲ್ಲಿ ಇಳಿದುಕೊಂಡಿದ್ದರು. ಅದು ಐಐಟಿ ಮದ್ರಾಸಿನ ಹಿಂಭಾಗದಲ್ಲಿತ್ತು. ತಾರಲಯ ಐಐಟಿಯಿಂದ ಹತ್ತು ನಿಮಿಷ ದೂರ ಆಟೋದಲ್ಲಿ. ಅಲ್ಲಿ ನಿಮ್ಮನ್ನು ಕಳಿಸಬಹುದೇ ಅಂದರು. ನಾವು ಕಣ್ಣು ಮುಚ್ಚಿಕೊಂಡು ಒಪ್ಪಿ ಅಲ್ಲಿ ಹೋಗಿ ತಂಗಿದೆವು. ಅದು ಜೆ.ಆರ್.ಡಿ. ಟಾಟಾರವರು ಅನುದಾನಕೊಟ್ಟು, ಎಮ್.ಎಸ್ ಸ್ವಾಮಿನಾಥನ್ ಅವರ ಗೌರವಾರ್ಥ ಕಟ್ಟಿಸಿದ ಗೆಸ್ಟ್ ಹೌಸ್. ಐ ಐ ಎಸ್ ಸಿ ಲಿ ದಿನಾಗಲು ಜೆ. ಎನ್ ಟಾಟಾ ಗೆ ನಮಸ್ಕಾರ ಹೊಡಿಯುತ್ತಿದ್ದುದರ ಪರಿಣಾಮ, ಟಾಟಾರವರ ವಂಶಸ್ಥರು ಅವರು ನನ್ನ ಕೈಬಿಟ್ಟಿರಲಿಲ್ಲ.

Z : ಆಹಾ....

ನಾನು : ಹು. ಐ ಐ ಎಸ್ ಸಿ ಲೆವೆಲ್ಲಲ್ಲಿ ಇತ್ತು ಗೆಸ್ಟ್ ಹೌಸು. ಅಲ್ಲಿ ಲಗೇಜಿಟ್ಟು ಲೋಕಲ್ ಟ್ರೈನ್ ಹತ್ತಿ ಟಿ. ನಗರದಲ್ಲಿ ಇಳಿದು ಒಂದು ರೌಂಡ್ ಸುತ್ತಿದ್ದಾಯ್ತು.

Z : ಏನ್ ಏನ್ ತಗೊಂಡೆ ?

ನಾನು : ಇದು flying visit. ವೀಕ್ಷಣೆ ಮಾತ್ರ. ಅಲ್ಲಿಂದ ಮತ್ತೆ ಗಿಂಡಿ ಗೆ ವಾಪಸ್. ಸುಸ್ತಾಗಿತ್ತು. ಸಕತ್ತಾಗಿ ನಿದ್ದೆ ಬಂತು. ಬೆಳಿಗ್ಗೆ ಎದ್ದು ವಾಕಿಂಗ್ ಮಾಡಿದೆವು. ನಾನೊಂದಿಷ್ಟು ಫೋಟೋ ತೆಗೆದೆ.

Z : ಹ್ಮ್ಮ್...ಆಮೇಲೆ ?

ನಾನು : ಮೂರನೆಯ ದಿನವಾದ ಅಂದು ಸಮಾರೋಪ ಸಮಾರಂಭ ಇತ್ತು. ನಾವೆಲ್ಲ ಒಂದು ನಾಟಕ ಆಡಿದೆವು. ಗ್ರಹಣ, ವಿಜ್ಞಾನ ಮತ್ತು ಮೂಢನಂಬಿಕೆ ಮೇಲೆ.

Z : ನೀನು ಯಾವ ಪಾತ್ರ ಮಾಡಿದೆ ?

ನಾನು : ಚಂದ್ರನ ಪಾತ್ರ :)

Z : :D :D ಆಮೇಲೆ ?

ನಾನು : ಸರ್ಟಿಫಿಕೇಟು, ಟಿ.ಎ ಡಿ. ಯೆಗಳನ್ನು ಪಡೆದಾದ ಮೇಲೆ ನಾವೆಲ್ಲರೂ ಒಬ್ಬರನ್ನೊಬ್ಬರು ಬೀಳ್ಕೊಂಡು ಗಿಂಡಿ ಸ್ಟೇಷನ್ನಲ್ಲಿ ಮತ್ತೆ ಲೋಕಲ್ ಹತ್ತಿ ಟಿ. ನಗರದಲ್ಲಿ ಇಳಿದು ಜೋರಾಗಿ ಶಾಪಿಂಗ್ ಮಾಡಿದೆವು.

Z : ಲಗೇಜುಗಳು ಮರಿಹಾಕಿದವು ಹಾಗಾದ್ರೆ.

ನಾನು : ಹು. ನಾನಂತು "ನಲ್ಲಿ" ಸೀರೆ ಅಂಗಡಿಯಲ್ಲಿ ಸೀರೆಗಳನ್ನು ನೋಡುತ್ತಾ ಕಳೆದೇ ಹೋಗಿದ್ದೆ. ನಮ್ಮ ಟೀಚರ್ರು, "ಲಕ್ಷ್ಮೀ, ಹೊರಡೋಣವಾ ? ಮರೀನಾ ಬೀಚಿಗೆ ಹೋಗ್ಬೇಕು" ಅಂದಾಗ್ಲೆ ನಾನು ಈ ಲೋಕಕ್ಕೆ ವಾಪಸ್ ಬಂದಿದ್ದು.

Z : ಸೀರೆಪ್ರಿಯೆ !

ನಾನು : ಎಹೆಹೆಹ್ಹೆ :)

Z : ನಗೋದ್ ನೋಡು ! ಎಷ್ಟ್ ಸೀರೆ ತಗೊಂಡೆ ?

ನಾನು : ಎರಡೇ ಎರಡು. ಒಂದು ಅಮ್ಮಂಗೆ, ಒಂದು ನಂಗೆ.

Z : ಸಧ್ಯ. ನಾನು ಮಿನಿಮಮ್ ಐದು ಸೀರೆ ತಗೊಂಡಿರ್ತೀಯಾ ಅಂದುಕೊಂಡಿದ್ದೆ...

ನಾನು : ಮೂರು ಸೀರೆಳನ್ನ ಬೆಂಗಳೂರಿಗೆ ಬಂದ ಮೇಲೆ, "ಕಾಂಪನ್ಸೇಷನ್" ಅಂತ ತಗೊಂಡೆ.

Z : ಯಪ್ಪಾ !!!

ನಾನು : ಹು. coming back to ಕಥೆ, ಮರೀನಾ ಬೀಚು ಗಿಜಿಗಿಜಿಗುಡುತ್ತಿತ್ತು. ನನಗೆ ನೀರಿಗಿಳಿಯಲು ಮನಸ್ಸಾಗಲಿಲ್ಲ.

Z : ಸೀರೆ ಹಾಳಾಗೋಗತ್ತಲ್ಲಾ ಅಂತ ಇಳಿಲಿಲ್ಲ ಅಂತ ನಿಜ ಹೇಳು ಪರ್ವಾಗಿಲ್ಲ.

ನಾನು : ಹು. ಅದೇ ನಿಜ.

Z : ಪೆದ್ದಿ ! ಮದ್ರಾಸಿಗೆ ಹೋಗಿ ಬೀಚಿಗೆ ಇಳಿಯದಿರೆ ಎಂತಯ್ಯ ?

ನಾನು : ನನಗೆ ಮಂಗಳೂರೇ ಇಷ್ಟ.

Z : ಸರಿ.

ನಾನು : ಅದಕ್ಕೆ ಬೇರೆ ಬೀಚುಗಳಿಗೆಲ್ಲಾ ಹೋಗಲ್ಲ.

Z : ಆಯ್ತು. ಆಮೇಲೆ ?

ನಾನು : ಅಲ್ಲಿ ನನ್ನ ಸಕಲ ಆಪ್ತಮಿತ್ರವರ್ಗಕ್ಕೂ, ಕಲೀಗ್ ಗಳಿಗೂ ಕೀಚೈನುಗಳ ಶಾಪಿಂಗ್ ಆಯ್ತು. ಅಲ್ಲಿಂದ ಮೈಲಾಪುರಕ್ಕೆ ಬಂದು, ಕಾಪಾಲೇಶ್ವರ ದೇವಾಲಯಕ್ಕೆ ಭೇಟಿ ನೀಡಿ, ಅಲ್ಲಿಂದ ಶರವಣ ಭವನಕ್ಕೆ ದಯಮಾಡಿಸಿ, Dry fruit dosa ಲಗಾಯ್ಸಿ, ಮತ್ತೆ ಬಸ್ಸು ಹತ್ತಿ, ಗಿಂಡಿ ತಲುಪಿ, ಅಲ್ಲಿಂದ ಗೆಸ್ಟ್ ಹೌಸಿಗೆ ಆಟೋದಲ್ಲಿ ಬಂದಿಳಿದು, ಸಾಂಗವಾಗಿ ನಿದ್ದೆ ಮಾಡಿದೆವು.

Z : ಯಪ್ಪಾ...ಎಷ್ಟ್ಟು ಸುತ್ತಿದಿರಾ .....

ನಾನು : ಇನ್ನೇನ್ ಮತ್ತೆ ?ಸಿಕ್ಕಿರೋ ಚಾನ್ಸನ್ನ ಬಿಡಕ್ಕಾಗತ್ತಾ ?

Z : ಅಲ್ವಾ....ಆಮೇಲೆ ?

ನಾನು : ಮಾರನೆಯ ದಿನ ಬೆಂಗಳೂರಿಗೆ ಹೊರಡಲನುವಾದೆವು. ಕೊಯಂಬೀಡಿನ ಬಸ್ ಸ್ಟೇಷನ್ನಿಗೆ ಬಂದು ಐರಾವತವನ್ನು ಹತ್ತುಗ್ ಘಂಟೆಗೆ ಹತ್ತಿದ್ದಕ್ಕೆ ಬೆಂಗಳೂರು ತಲುಪಿದ್ದು ನಾಲ್ಕಕ್ಕೆ. ಅಲ್ಲಿ ಅಮ್ಮ, ಅಣ್ಣ ನನ್ನ ರಿಸೀವ್ ಮಾಡಲು ಬಂದಿದ್ದರು. ಲಗೇಜು ಹೆಚ್ಚು ಮರಿಹಾಕಿರಲಿಲ್ಲ ಆದ್ದರಿಂದ ಅಪ್ಪ ಅಮ್ಮನ ಕೆಂಗಣ್ಣಿನಿಂದ ಬಚಾವಾದೆ.

Z : ಜಾಣೆ.

ನಾನು : ಹು. ಒಟ್ಟಿನಲ್ಲಿ ಚೆನ್ನಾಗಿತ್ತು ರಾಜಧಾನಿ ಜಲೇಬಿ.

Z : :) ಅಲ್ಲಿ ನಿನಗೆ ಮರಿಯಕ್ಕೆ ಆಗದ ಪ್ರಸಂಗ ಯಾವುದು ?

ನಾನು : ತಮಿಳು ಮಾತಾಡುತ್ತಿದ್ದ ಆಟೋ ಡ್ರೈವರ್ ನ ಜೊತೆಗೆ ಹಿಂದಿಯಲ್ಲಿ ಜಗಳ ಆಡಿದ್ದು !

Z : ಶಿವನೇ ಸದ್ಯೋಜಾತ !!!!

ನಾನು : :) :) :) :)

ಫೋಟೋಸ್ ಇಲ್ಲಿ...




ಉತ್ತರಾಯಣ ೩

ನಾನು: ಬೃಂದಾವನಕ್ಕೆ ಹೊರಡಲು ನಾಲ್ಕು ಘಂಟೆಯಷ್ಟೊತ್ತಿಗೆ ರೆಡಿ ಇರಬೇಕು ಎಂದು ಮ್ಯಾನೇಜರ್ ವೆಂಕಟೇಶ್ ಅವರು ಹೇಳಿದ್ದರು. ಇವರೆಲ್ಲರೂ ಊಟ ಮಾಡಿ, ಮಲಗಿ, ಎದ್ದು ರೆಡಿಯಾಗು...