Thursday, May 6, 2010

Just ಮಾತ್ ಮಾತಲ್ಲಿ.....

Z : No one stole me away........

ನಾನು : ಅದು ಗೊತ್ತಿದೆ.

Z :ಮತ್ತಿನ್ನೇನು ಹಾಡೆಲ್ಲಾ ಹೇಳ್ತಿದಿಯಾ ?

ನಾನು : ಎರಡು ವಾರಗಳ ಹಿಂದೆ ಬಸ್ ನಲ್ಲಿ ಒಂದು ವಿಚಿತ್ರ ನಡಿತು.

Z :ಒಂದು ತಿಂಗಳು ಕಳೆಯುವ ಮುಂಚೆ ಇದನ್ನ ನನಗೆ ಹೇಳ್ಬೇಕು ಅಂತ ಅನಿಸಿತಲ್ಲ, ಪವಾಡ ಇದು. ಏನಾಯ್ತು ?

ನಾನು : ನಾನು ಬಸ್ಸಿನಲ್ಲಿ ಸಹಪ್ರಯಾಣಿಕರೊಂದಿಗೆ ಸ್ವಲ್ಪ ಹೊತ್ತು ಮಾತಾಡಿದೆ.

Z :................!!!!!!!!!!!!!!!!!!!!!!!!!!?????????????????????????????

ನಾನು : ಸಿಕ್ಕಾಪಟ್ಟೆ ಶಾಕ್ ಆಗಿದಿಯ. ಸುಧಾರಿಸಿಕೊ.

Z :ಇನ್ನೇನ್ ಮತ್ತೆ ? ಬೆಂಗಳೂರು ಜನ ಬಸ್ಸಿನಲ್ಲಿ ಪ್ರಯಾಣ ಮಾಡುವಾಗ ಮಾಡುವ ನಾಲ್ಕು ಪ್ರಮುಖ ಕೆಲಸಗಳನ್ನು ಮಾಡದೆ ನೀನು ಸಹಪ್ರಯಾಣಿಕರೊಂದಿಗೆ ಮಾತಿಗೆಲ್ಲಾ ಇಳಿದುಬಿಟ್ಟಿದಿಯಲ್ಲಾ...ನ್ಯಾಯ ನಾ ಇದು ? ನೀನು ಹೀಗೆ ಮಾಡಬಹುದಾ? ನೀನು ಮಾಡಿದ್ದು ಸರಿನಾ ?

ನಾನು : ಸಾಕು ಸಾಕು ಡೈಲಾಗು. ನಾನು ಏನು ಮಾಡಬಾರದ್ದನ್ನು ಮಾಡಿದೆ ಅಂತ ?

Z : ೧. ಜನ ಸಾಮಾನ್ಯವಾಗಿ ಬಸ್ಸು ಹತ್ತಿದಾಗ ನ್ಯೂಸ್ ಪೇಪರ್ರೋ, ವಿಷ್ಣು ಸಹಸ್ರನಾಮ ನೋ ಓದ್ತಾರೆ. ನೀನು ವಿಚಿತ್ರ ಪ್ರಾಣಿ,ಫಿಸಿಕ್ಸ್ ಪುಸ್ತಕ ನೋ, ಥ್ರಿಲ್ಲರ್ ಕಾದಂಬರಿ ನೋ ಓದ್ತಿಯ.ಅದನ್ನ ಮಾಡಿಲ್ಲ ನೀನು.

೨. ಬಸ್ಸಿನ ಟಾಪ್ ಎಗರಿಹೋಗುವ ಹಾಗೆ ಜನ ಫೋನ್ ನಲ್ಲಿ ಮಾತಾಡ್ತಿರ್ತಾರೆ, ಇಲ್ಲಾಂದ್ರೆ ಆ ಕಡೆ ಫೋನ್ ನಲ್ಲಿ ಇರೋರು ಕೇಳಿಸಿಕೊಳ್ಳಕ್ಕೆ ಆಗದಿರುವ ಹಾಗೆ ಮೆಲ್ಲ ದನಿಯಲ್ಲಿ ಹ್ಯಾಂಡ್ಸ್ ಫ್ರೀ ಲಿ ಪಿಸುಗುಟ್ಟಿತ್ತಿರುತ್ತಾರೆ.ಕರೆನ್ಸಿ ಇಲ್ಲಾ ಅಂದ್ರೆ ಬಿಟ್ಟಿ ಎಸ್ ಎಮ್ ಎಸ್ಸು ಕಳಿಸುತ್ತಿರುತ್ತಾರೆ. ನೀನು ಯಾರಿಗೂ ಫೋನ್ ಮಾಡಿಲ್ಲ, [ಇದು ಪ್ರಪಂಚದ 7.001 ನೇ ಅದ್ಭುತ]ಹಾಗೂ ಪುಣ್ಯವಶಾತ್ ನಿನಗೂ ಯಾರು ಫೋನ್ ಮಾಡಿಲ್ಲ[ಸಧ್ಯ].ನಿನಗೆ ಮೆಸೇಜ್ ಮಾಡೋ ಅಷ್ಟು ತಾಳ್ಮೆ ಇಲ್ಲ, ಅದು ಲೋಕಕ್ಕೆಲ್ಲಾ ಗೊತ್ತಿದೆ.

೩.ಐಪಾಡು, ಎಮ್.ಪಿ ಥ್ರೀ ಪ್ಲೇಯರ್ರು, ಫೋನ್ ನಲ್ಲಿರೋ ಪ್ಲೇಯರ್ರು, ಎಫ್.ಎಮ್ಗಳನ್ನು ಹಾಕೊಂಡು, ಕಿವಿಗೆ ಇಯರ್ಫೋನ್ ನೇತಾಕೊಂಡು ಜನ ಕೇಳಿದ್ದೇ ಹಾಡುಗಳನ್ನ, ಮತ್ತದೇ ದರಿದ್ರ ಪಿಜೆಗಳನ್ನ ಕೇಳಿಕೊಂಡು ಜಮಾಯಿಸುತ್ತಿರುತಾರೆ. ಸೀಟ್ ಸಿಗದಿದ್ದರೆ ನೀನು ಸಾಮಾನ್ಯವಾಗಿ ಇದನ್ನೇ ಮಾಡ್ತಿರ್ತ್ಯಾ. ನೀನು ಇದನ್ನೂ ಮಾಡಿಲ್ಲ.

೪.ಕೆಲವರು ನಿಂತಲ್ಲೇ ತೂಕಡಿಸುತ್ತಿರುತ್ತಾರೆ, ಕೆಲವರು ಸೀಟಲ್ಲಿ ಕುಳಿತೇ ನಿದ್ರಾಲೋಕಕ್ಕೆ ಹಾರಿರುತ್ತಾರೆ. ನೀನು ಅದೂ ಮಾಡಿಲ್ಲ.

ಇಂಥಾ ಒಳ್ಳೆ ಕೆಲಸಗಳನ್ನ ಮಾಡೋದ್ ಬಿಟ್ಟು ಅಕ್ಕ ಪಕ್ಕದವರ ಜೊತೆಗೆ ಮಾತಾಡಿ,ಬೆಂಗಳೂರು ಜನರ ಟಿಪಿಕಲ್"we don't trust anyone","why waste time talking to others ?", "Whatever happens to anybody, we don't care" attitude ಬಿಟ್ಟು ಜನರ ಜೊತೆಲೆಲ್ಲಾ ಮಾತಿಗೆಲ್ಲಾ ಇಳಿದುಬಿಟ್ಟಿದ್ದಿಯಾ. ಪಕ್ಕಾ ಬೆಂಗಳೂರಿಗರು ಹೀಗೆ ಮಾಡಾಬಹುದಾ ?

ನಾನು : ಎಷ್ಟ್ ದಿನದಿಂದ ಕಾಯ್ತಿದ್ದೆ ನೀನು ನನ್ನ ಬೈಯ್ಯೋ ಚಾನ್ಸಿಗೆ ?

Z : ಲೆಖ್ಖ ಇಟ್ಟಿಲ್ಲ.

ನಾನು : ಹಾಳಾಗೋಗು. ನೀನು ಮೊದಲು ಕಥೆ ಕೇಳು. ಆಮೇಲೆ ಇದೇ ಡೈಲಾಗ್ ನ ನೀನು ವಾಪಸ್ ತಗೊಳ್ಳಿಲ್ಲಾ ಅಂದ್ರೆ, ನಾನು ನಾನಲ್ಲ.

Z : ಓಹೋ. ಹಾಗೋ ? ಕಥೆ ಹೇಳಿಬಿಡು.

ನಾನು : ನನ್ನ ವಿದ್ಯಾರ್ಥಿವರ್ಗ ನನಗೆ ಟ್ರೀಟ್ ಕೊಡಿಸಲು ಮನಸ್ಸು ಮಾಡಿತ್ತು.

Z : ಏನು ಟ್ರೀಟು ?

ನಾನು : ಈರುಳ್ಳಿ ಇಲ್ಲದಿರುವ ಭೇಲ್ ಪುರಿ.

Z : ಹಾಂ ?!ಯಾಕೆ ?

ನಾನು : ಹಾಗೆ ಸುಮ್ಮನೆ. ನನಗೆ ಭೇಲ್ ಪುರಿಯಲ್ಲಿ ಈರುಳ್ಳಿ ಇರಬಾರದು.ಮತ್ತು, ನನಗೆ ಈರುಳ್ಳಿ ಅಂದ್ರೆ ಇಷ್ಟ ಬೇರೆ ಇಲ್ಲ. ನನ್ನ ಶಿಷ್ಯಕೋಟಿ " ನೀವು ಕೇಳಿದ್ದನ್ನು ಕೊಡಿಸದಿದ್ದರೆ ನಾವು ನಿಮ್ಮ students ಆಗಿ ಏನು ಪ್ರಯೋಜನ ಮೇಡಮ್ ? ಈರುಳ್ಳಿ ಇಲ್ಲದ ಭೇಲ್ ಪುರಿ ತಾನೆ ? ಕೊಡಿಸೋಣ ನಡಿರಿ" ಅಂದ್ರು.ನಾನು ಈ ವಾನರ ಸೇನೆಯ ಬಲ ಪರೀಕ್ಷೆ ಮಾಡಲು ಹೊರಟೆ.

ಟೌನ್ ಹಾಲಿನ ಬಸ್ ಸ್ಟ್ಯಾಂಡ್ ನಲ್ಲಿ ನಾಲ್ಕು ಘಂಟೆ ಸಾಯಂಕಾಲದ ಸುಡುಬಿಸಿಲಿನಲ್ಲಿ ಲೈಟ್ ಆಗಿ ರೋಸ್ಟ್ ಆದ ನಂತರ ಬಸ್ ಬಂತು. ಅದು ನಾವು ಹೋಗಬೇಕಿದ್ದ ಜಾಗಕ್ಕೆ ನೇರವಾಗಿ ಹೋಗುತ್ತಿದ್ದ ಬಸ್ ಆಗಿರಲಿಲ್ಲ. ನನ್ನ ಶಿಷ್ಯವರ್ಗಕ್ಕೆ ನಾನಂದೆ, "ದಾರಿ ಮಧ್ಯದಲ್ಲಿ ಬಸ್ ಬದಲಿಸೋಣ.ಈ ಬಸ್ಸಿನಲ್ಲಿ ರಶ್ ಕಡಿಮೆ ಇದೆ.ಹತ್ತಿಬಿಡೋಣ". ಅವರು ನನ್ನ ಸುಗ್ರೀವಾಜ್ಞೆಯನ್ನು ಸಾಂಗವಾಗಿ ಪಾಲಿಸಿದರು.

Z : ಪರ್ವಾಗಿಲ್ಲ. ಮುಂದೆ ?

ನಾನು : ಬಸ್ ಹತ್ತಿದೊಡನೆಯೇ ಪುಣ್ಯವಶಾತ್ ನನಗೆ ಸೀಟು ಸಿಕ್ಕಿತು. ಕಂಡಕ್ಟರ್ ಬಸ್ ಪಾಸನ್ನು ತೋರಿಸಲು ಕೇಳಿದರು. ನಾನು ಪಾಸನ್ನು ತೋರಿಸಿದೆ. ಇನ್ನೇನು ಅದನ್ನು ಮತ್ತೆ ಬ್ಯಾಗಿಗೆ ಹಾಕಿಕೊಳ್ಳಬೇಕು, ಆಗ ಎದುರಿಗಿದ್ದ ವಯಸ್ಸಾದ ಸಹಪ್ರಯಾಣಿಕ ದಂಪತಿಗಳು " ಏನಮ್ಮಾ ಅದು ಚೀಟಿ ?" ಅಂದರು. ಅವರನ್ನು ನೋಡಿದೊಡನೆಯೇ ನನಗೆ ಇವರು ಈ ಊರಿನವರಲ್ಲ ಎಂದು ಗೊತ್ತಾಯಿತು.

ನಾನು: " ಇದು ಬಸ್ ಪಾಸು."

ಅವರು: "ಇಲ್ಲಿ ಕೊಡಮ್ಮ, ನೋಡುತ್ತೇನೆ."

ನಾನು ಕೊಟ್ಟೆ.ಅವರು ಅದನ್ನೊಮ್ಮೆ ವೀಕ್ಷಿಸಿ ವಾಪಸ್ಸು ಕೊಟ್ಟರು.

ಅವರು: ಕೆಲಸದಲ್ಲಿದಿಯಾ ಮಾ ?

ನಾನು:ಹು.

ಅವರು: ಏನು ಕೆಲಸ?

ನಾನು:ಟೀಚರ್.

ಅವರು: ಎಲ್ಲಿ ?

ನಾನು: ಕಾಲೇಜು.

ಅವರು: ಈ ಪಾಸಿಗೆ ದುಡ್ಡು ಸ್ವಲ್ಪ ಜಾಸ್ತಿಯಾಯ್ತಲ್ವಾ ?

ನಾನು: ಇಲ್ಲ, ದಿನಾಗಲೂ ಓಡಾಟ ಇರತ್ತೆ ನಮಗೆ, ಬೇಕಾಗತ್ತೆ.

ಅವರು: ಅದು ಸರಿನೇ.ಎಷ್ಟಮ್ಮಾ ಸಂಬಳ? ಒಂದು ಇಪ್ಪತ್ತೈದು ಸಾವಿರ ?

ನಾನು:ಇಲ್ಲ, ಅಷ್ಟಿಲ್ಲ.

ಅವರು: ಹೌದಾ ? ಕಡಿಮೆಯನ್ನಿಸಲಿಲ್ಲವೇ ?

ನಾನು: ಇಲ್ಲ, ಎಲ್ಲಾ ಕಡೆ ಇಷ್ಟೇನೆ.ಇರಲಿ, ನೀವು ಯಾವ ಊರಿನವರು ?

ಅವರು: ಹೊಸಪೇಟೆ.

ನಾನು: ಇಲ್ಲಿ ನೆಂಟರನ್ನು ನೋಡಲು ಬಂದಿರಾ ?

ಅವರು: ನಮ್ಮ ಮಗಳನ್ನು ಇಲ್ಲಿಯವರಿಗೆ ಮದುವೆ ಮಾಡಿಕೊಟ್ಟಿದ್ದೇವೆ.ಹೋದ ತಿಂಗಳು ಇಪ್ಪತ್ತನೆಯ ತಾರೀಖಿನಂದು ಮದುವೆಯಾಯಿತು. ಅವಳನ್ನು ಗಂಡನ ಮನೆಗೆ ನೆನ್ನೆ ಬಿಟ್ಟು ಬಂದೆವು.ಆಮೇಲೆ ನಮ್ಮ ಅಣ್ಣನ ಮನೆಗೆ ಹೋದೆವು. ಇವತ್ತು ಬೀಗರು ಕರೆದಿದ್ದಾರೆ. ಅದಕ್ಕೆ ಅಲ್ಲಿಗೆ ಹೊರಟಿದ್ದೀವಿ.

Z : ಪೂರ್ತಿ ಪುರಾಣ ಹೇಳಿಬಿಟ್ಟರು ಅನ್ನು.

ನಾನು : :)ನನಗೆ ಅವರ ಮುಗ್ಧತೆಯನ್ನು ನೋಡಿ ಖುಷಿಯಾಯ್ತು.ಹೊರ ಊರಿನವರಿಗೂ ನಮಗೂ ಎಷ್ಟು ವ್ಯತ್ಯಾಸ ನೋಡು!ಬಸ್ಸಿನಲ್ಲಿ ಗೊತ್ತಿದ್ದವರು ಎದುರಾದರೇನೇ ಮಾತನಾಡಿಸದ ಬೆಂಗಳೂರಿಗರು ನಾವು. ಆದರೆ ಇವರನ್ನು ನೋಡು,ಅವರು ನನ್ನನ್ನ ನೋಡುತ್ತಿರುವುದೇ ಮೊದಲನೆಯ ಬಾರಿ. ಇವರು ನನ್ನೊಟ್ಟಿಗೆ ಇಷ್ಟೋಂದು ಹೇಗೆ ಮಾತಾಡಿದರು ಅನ್ನೋದೆ ದೊಡ್ಡ ಆಶ್ಚರ್ಯ ನನಗೆ.

Z : ನಿಜ. ಅವರೂ ಸುಮ್ಮನಿರಬಹುದಿತ್ತು. ನೀನು ಸುಮ್ಮನಿರೋದನ್ನ practice ಬೇರೆ ಮಾಡ್ತಿದ್ಯಾ ಇತ್ತೀಚೆಗೆ.

ನಾನು : ಹು. ಇನ್ನೂ ಕಥೆ ಮುಗಿದಿಲ್ಲ, ಕೇಳು.

Z : ಮುಂದುವರೆಸು.

ಅವರು:ಏನ್ ಪಾಠ ಮಾಡ್ತ್ಯಾ ಮಾ ನೀನು ಕಾಲೇಜಲ್ಲಿ ?

ನಾನು : ಭೌತಶಾಸ್ತ್ರ.

ಅವರು: ಕಷ್ಟ ಅಲ್ವಾ ವಿಜ್ಞಾನ ?

ನಾನು: ನನಗನಿಸಲಿಲ್ಲ.

ಅವರು: ಬುದ್ಧಿವಂತೆ!

Z : ಅವರೊಬ್ಬರೇ ಹೇಳ್ಬೇಕು ಇದನ್ನ.

ನಾನು : ಸುಮ್ನೆ ಕಥೆ ಕೇಳಿದ್ರೆ ಸರಿ ನೀನು.

Z : ಸಾರಿ...continue.

ಅವರು: ನನ್ನ ಮಗಳು ಬಿ.ಎ. ಮಾಡಿದಾಳೆ.

ನಾನು: ಸಂತೋಷ.

ಅವರು: ಪಾಠ ಎಲ್ಲಾ ಎಂಥಾದ್ದೂ ಮಾಡಲ್ಲ ಅವಳು, ಆದರೆ ಕಂಪ್ಯೂಟರ್ ನಲ್ಲಿ ಅದೆಂಥದ್ದೋ ಒಂದಿಷ್ಟು ಮಾಡ್ಕೊಂಡಿದಾಳೆ.ಕೆಲ್ಸಕ್ಕೆ ಸೇರೋ ಅಷ್ಟ್ರಲ್ಲಿ ಮದ್ವೆ ಆಗೋಯ್ತು. ಇಲ್ಲಿಗೆ ಬಂದುಬಿಟ್ಟಳು.

ನಾನು: ಓಹ್.

ನಾನು : ನಾನು ಪುಸ್ತಕ ತೆಗೆಯಲು ಅನುವಾದೆ.

Z : ಮುಗಿದೇ ಹೋಯ್ತಾ ಮಾತುಕಥೆ ?

ನಾನು : ಇನ್ನೇನ್ ಇರತ್ತೆ ಮಾತಾಡಕ್ಕೆ ಅಂತ ? ನಾನು ಪುಸ್ತಕ ತೆಗೆಯೋ ಅಷ್ಟ್ರಲ್ಲಿ ಯಾವ್ದೋ ಸ್ಟಾಪ್ ಬಂತು. ಮಕ್ಕಳ ಕೂಟ ಅನ್ಸತ್ತೆ. ಅಲ್ಲಿ ಒಬ್ಬ ಹೆಂಗಸು ಒಂದು ದೊಡ್ಡ ಬ್ಯಾಗನ್ನು ಹೊತ್ತು ತಂದರು. ನನ್ನ ಎದಿರಿಗೆ ಈ ದಂಪತಿಗಳು ಆಸೀನರಾಗಿದ್ದರು.ಈ ಹೆಂಗಸು ಬಂದದ್ದೇ "ಜಾಗ ಬಿಡಿ" ಅಂದ್ರು.ಆತನಿಗೆ ಬೆಂಗಳೂರಿನಲ್ಲಿ ಲೇಡಿಸ್ ಸೀಟ್ ನಲ್ಲಿ ಕೂತರೆ ದಂಡ ತೆರಬೇಕಾದೀತು ಅನ್ನೋದು ಗೊತ್ತಿರಲಿಲ್ಲ. ಆತ ಸ್ವಲ್ಪ ಗಟ್ಟಿಯಾಗಿಯೇ " ನಾವು ಈ ಜಾಗ ನ ಖರೀದಿ ಮಾಡಿದಿವಿ, ನಿಮಗೆ ಬಿಟ್ಟು ಕೊಡಲ್ಲ" ಅಂದರು. ಈಕೆ " ಸಾರ್ ಇದು ಲೇಡಿಸ್ ಸೀಟು. ಬಿಟ್ಟುಕೊಡಿ" ಅಂದರು. ಈತನ ಹೆಂಡತಿಗೆ ಸ್ವಲ್ಪ ಭಯ ಆಯ್ತು. ಗೊತ್ತಿಲ್ಲದ ಊರು. ಗೊತ್ತಿಲ್ಲದ ರೂಲ್ಸು.ಗಂಡ ಹಿಂದೆಲ್ಲೋ ಹೋಗಿಬಿಟ್ಟರೆ ಈಕೆಯ ಗತಿಯೇನೆಂದು ಮುಖದಲ್ಲಾಗಲೇ ಚಿಂತೆ ಕಾಣತೊಡಗಿತ್ತು. ಆದರೆ ಈತ ಜಗಳಕ್ಕೆ ಇಳಿದುಬಿಟ್ಟಿದ್ದರು. "ಇಲ್ಲಮ್ಮ, ನಮ್ಮ ಸ್ಟಾಪ್ ಬರುವ ವರೆಗೂ ನಾವು ಜಾಗ ಖಾಲಿ ಮಾಡೊಲ್ಲ."

Z : ರಾಮಾ...ಆ ಬೆಂಗಳೂರಿನ ಹೆಂಗಸಿಗೆ ಸುಮ್ಮನಿರಕ್ಕೆ ಏನಾಗಿತ್ತೂ ಅಂತ. ಯಾರಾದರೂ ಒಬ್ಬರು ಇಳಿಯುತ್ತಿದ್ದರಪ್ಪಾ ಚಾಮರಾಜಪೇಟೆ ಲಿ.ಕುಳಿತಿದ್ದರೆ ಆಗ್ತಿತ್ತು. ಏನ್ ಆಕಾಶ ತಲೆ ಮೇಲೆ ಕಳಚಿ ಹೋದ ಹಾಗೆ ಆಡಿದ್ದು ಅಂತ ?

ನಾನು : ನೋಡು, ಅಲ್ಲೇ ವ್ಯತ್ಯಾಸ ಇರೋದು. ಈಕೆ ಇಳಿಯಬೇಕಿದ್ದಿದ್ದು ನಿರ್ಮಲ ಸ್ಟೋರ್ಸ್ ನಲ್ಲಿ. ಹತ್ತಿದ್ದು ಮಕ್ಕಳ ಕೂಟದಲ್ಲಿ. ಆಶ್ರಮದಲ್ಲಿ ಜಾಗ ಸಿಕ್ಕೇ ಸಿಕ್ಕಿರೋದು. ಕಾಯಲು ತಾಳ್ಮೆ ಇಲ್ಲ, ಮತ್ತೆ, ನಾವು ಯಾರೊಟ್ಟಿಗೆ ಮಾತಾಡುತ್ತಿದ್ದೇವೆ ಅನ್ನೋ ಪರಿವೆ ಕೂಡಾ ಇಲ್ಲ,ಸುಮ್ಮನೆ ಹಕ್ಕು ಬಾಧ್ಯತೆ ಅಂತ ಜಗಳಕ್ಕೆ ಇಳಿದುಬಿಟ್ಟರು. ಇದೇ ಈಕೆ ಬೇರೆ ಊರಲ್ಲಿ ತನ್ನ ಪತಿಯೊಡನೆ ಹೋದಾಗ ಅಲ್ಲಿಯವರು ಹಾಗೇ ಮಾಡಿದ್ದಿದ್ದರೆ ಆಗಿನ ಪರಿಸ್ಥಿತಿ ಹೇಗಿರೋದು ಅಂತ ಒಂದು ಕ್ಷಣ ಕೂಡ ಯೋಚನೆ ಮಾಡ್ಲಿಲ್ಲ.ಹೋಗಲಿ, ಆಕೆಯ ಪತ್ನಿಯ ದುಗುಡವನ್ನೂ ಸಹ ಅರ್ಥ ಮಾಡಿಕೊಳ್ಳಲಿಲ್ಲ.ಬೇರೆಯೂರಿನವರಿಗೆ ಬಸ್ಸಲ್ಲಿ ಸ್ವಲ್ಪ ಸ್ನೇಹಮಯ ವಾತವರಣ ಇದ್ದರೆ ಅವರ ಅರ್ಧ ದುಗುಡ ಕಡಿಮೆಯಾಗತ್ತೆ. ಅದು ಬಿಟ್ಟು ಇವರು ಬಾವುಟ ಇಟ್ಕೊಂಡು ಹೋರಾಟಕ್ಕಿಳಿದರೆ ? ಪ್ರಜ್ಞೆ, ತಾಳ್ಮೆ ನೇ ಇಲ್ಲದೇ ಕಂಡಕ್ಟರ್ ಆಂಟಿ ನ ಕರೆದುಬಿಟ್ಟರು ಆ ಹೆಂಗಸು.Just ಮಾತ್ ಮಾತಲ್ಲಿ ಜಗಳ ಆರಂಭವಾಗೋಗಿತ್ತು.

Z : ಆಮೇಲೆ ?

ನಾನು : ಕಂಡಕ್ಟರ್ ಆಂಟಿ ಬಂದು " ಸಾರ್, ಎದ್ದೇಳಿ.ಇಲ್ಲಾಂದ್ರೆ ದಂಡ ಕಟ್ಟಬೇಕಾಗತ್ತೆ. "

ಅವರು:"ನೋಡಮ್ಮ, ನೀನೆ ನಾವು ಬಸ್ ಹತ್ತಿದಾಗ ಇಲ್ಲಿ ಕರ್ಕೊಂಡ್ ಬಂದು ಕೂರಿಸಿದೆ. ಈಗ ನೀನೆ ಎದ್ದೇಳಿ ಅಂತಿದ್ಯಲ್ಲಾ, ಇದನ್ನ ಮುಂಚೆನೆ ಹೇಳಕ್ಕಿಲ್ವಾ ?"

ಕಂಡಕ್ಟರ್ ಆಂಟಿ: " ಅಣ್ಣ, ನೋಡಿ, ಆಗ ಬಸ್ ನಲ್ಲಿ ಜನ ಇರ್ಲಿಲ್ಲ. ಕೂತ್ಕೊಳಿ ಅಂತ ಬಿಟ್ಟೆ. ಈಗ ಜನ ಜಾಸ್ತಿಯಾಗವ್ರೆ. ಎದ್ದೇಳಿ."
ಅವರು ಏಳಲೇಬೇಕಾಯ್ತು. ಎದ್ದು ಪಾಪ ಹಿಂದೆಗಡೆ ಸೀಟಿಲ್ಲದೇ ಜನರ ಮಧ್ಯೆ ನುಸುಳಿ ನಿಲ್ಲಬೇಕಾಯ್ತು. ಸಾಲದಕ್ಕೆ ಹಿಂದಿದ್ದ ಗಂಡಸರೆಲ್ಲಾ ಮುಖ ಒಂಥರಾ ಮಾಡಿದರು. ನನಗೆ ಬೇಜಾರಾಯ್ತು.

Z : ಯಾಕೆ ?

ನಾನು : ಇಲ್ಲಿ ತಪ್ಪು ಮೂರೂ ಜನರದ್ದಿದೆ. ಕಂಡಕ್ಟರ್ ಆಂಟಿ ಮೊದಲೇ ಅವರನ್ನ ಹಿಂದೆ ಕೂರಿಸಬೇಕಿತ್ತು.ಈ ಬೆಂಗಳೂರಿನವರು ಆತನ ವಯಸ್ಸಿಗಾದರೂ ಬೆಲೆಕೊಟ್ಟು ಸುಮ್ಮನಿರಬೇಕಿತ್ತು.ಮತ್ತೆ ಆತ ತಾನು ಪರವೂರಿನಲ್ಲಿರುವುದರಿಂದ ತೀರ ವ್ಯಂಗ್ಯ ಭರಿತ ಮಾತನ್ನು ಆಡದಿದ್ದರೆ ಚೆನ್ನಾಗಿರ್ತಿತ್ತು. ಇವೆಲ್ಲಾ ಜಸ್ಟ್ ಮಾತ್ ಮಾತಲ್ಲಿ ಆಗೋ ತಪ್ಪುಗಳು.ಮಾತಲ್ಲಿ ಸ್ವಲ್ಪ ಹಿಡಿತ ಇದ್ದಿದ್ದ್ರೆ, ಮತ್ತು ಆಡಬೇಕಾಗಿರೋ ಮಾತನ್ನ ಸಮಯಕ್ಕೆ ಸರಿಯಾಗಿ ಆಡಿದ್ದಿದ್ದರೆ ಈ scene create ಆಗ್ತಿರ್ಲಿಲ್ಲ.ಅಲ್ವಾ ? ನಾವು ಬೇರೆಯವರೊಟ್ಟಿಗೆ ಹೇಗೆ ಮಾತಾಡೂತ್ತೀವಿ ಅನ್ನೋದರ ಮೇಲೆ ನಮ್ಮ ಸಂಬಂಧಗಳು ಏರ್ಪಾಡಾಗುತ್ತವೆ, ಮಾರ್ಪಾಡಾಗುತ್ತವೆ, ಉಳಿಯುತ್ತವೆ ಇಲ್ಲಾ ಕಡಿದುಹೋಗುತ್ತದೆ.ಎಲ್ಲಾ ಬರೀ ಮಾತಲ್ಲೇ ಆಗೋಗತ್ತೆ.

Z : ಹ್ಮ್ಮ್ಮ್....ನಿಜ.

ನಾನು : ಆತ ಹಿಂದೆ ಹೋಗಿ ನಿಂತೊಡನೆ ಈ ಬೆಂಗಳೂರಿನ ಹೆಂಗಸು ವಿಜಯದ ನಗೆ ಬೀರಿದರು.ನನಗಂತೂ ತೀರಾ ಸಿಟ್ಟು ಬಂತು. ನಾನು ಎದ್ದು ಜಾಗ ಕೊಡೋಣ ಅನಿಸಿತು. ಆದರೆ ಅಷ್ಟರಲ್ಲಾಗಲೇ ನಾನು ಇಳಿಯಬೇಕಿದ್ದ ಸ್ಟಾಪ್ ಬಂದಿತು, ಹಾಗೂ ಮತ್ತೊಬ್ಬ ಹಣ್ಣು ಹಣ್ಣು ಮುದುಕಿ ಬಸ್ ಹತ್ತಿದರು. ನನಗೆ ಯಾಕೋ ನಾವು ತೀರ commercial and opportunist ಆಗೋಗಿದಿವಿ ಅನಿಸಿತು. ನಮ್ಮ ಸುಖಕ್ಕೆ ಇಡೀ ಜಗತ್ತನ್ನೇ ಆಪೋಶನ ತಗೊಳ್ಳಕ್ಕೆ ಹೊರಟ್ಬಿಟ್ಟಿದ್ದೀವಿ,ಇದೇ ಜಗತ್ತಲ್ಲಿ ನಾವೂ ಇದಿವಿ ಅನ್ನೋದನ್ನ ಮರೆತು.ಸುಮ್ನೆ ಜಾಸ್ತಿ ಮಾತಾಡೋದ್ರಿಂದ ಏನೂ ಪ್ರಯೋಜ್ನ ಇಲ್ಲ. ಮಾತಲ್ಲಿ ಮಿತ, ಹಿತ, ಘಾತ ಮೂರು ಇರ್ಬೇಕು. ಇವೆಲ್ಲ ಸಮಯಕ್ಕೆ ಸರಿಯಾಗಿ ಮಾತಲ್ಲಿ ಮಿಳಿತವಾಗುತ್ತಿರಬೇಕು. ಜಸ್ಟ್ ಮಾತ್ ಮಾತಲ್ಲಿ ಈ ಸತ್ಯ ಜ್ಞಾನೋದಯವಾಯ್ತು ನನಗೆ.ಬಸ್ ನಿಂದ ಇಳಿದು, ಬೇರೇ ಬಸ್ ಹತ್ತಿ,ತಲುಪಬೇಕಿದ್ದ ಜಾಗ ತಲುಪಿ, ಈರುಳಿ ರಹಿತ ಭೇಲ್ ಪುರಿಯನ್ನು ತಿನ್ನುತ್ತಿರುವಾಗಲೂ ನನಗೆ ಪಾಪ ಆ ವಯಸ್ಸಾದ ದಂಪತಿಗಳ ಮುಖವೇ ನೆನಪಾಗ್ತಿತ್ತು.

Z : ತಲೆ ಮೇಲೆ ಬಲ್ಬ್ ಉರ್ದಿರ್ಬೇಕು.

ನಾನು : ನೋಡ್ಲಿಲ್ಲ.

Z : ಇರ್ಲಿ ಬಿಡು,ಪರ್ವಾಗಿಲ್ಲ. ಸೋ ಈ ಜ್ಞಾನೋದಯ ಆದ್ಮೇಲೆ ನೀನು ಏನ್ ಡಿಸೈಡ್ ಮಾಡಿದೆ ?

ನಾನು : ಮೊದಲು, ಸುಮ್ನೆ ಇರೋದು, ಲೋಕನ constant ಆಗಿ observe ಮಾಡೋದು.Situations Analyse ಮಾಡೋದು. ನಮ್ಮ ಮಾತಿನ ಅವಶ್ಯಕತೆ ಇದ್ದರೆ ಮಾತ್ರ ಮಾತಾಡೋದು. ಸುಮ್ ಸುಮ್ನೆ ನಾವು ಫ್ರೀ ಇರ್ತಿವಿ ಅಂತ ಜನಕ್ಕೆ ಫೋನ್ ಮಾಡದೇ ಮೊದಲು ಮೆಸೇಜ್ ಮಾಡಿ, ಫ್ರೀ ಇದ್ರೆ ಮಾತ್ರ ಫೋನ್ ಮಾಡೋದು.

Z : ನಿನಗೆ ಮೆಸೇಜ್ ಮಾಡಕ್ಕೆ ತಾಳ್ಮೆ ನೆ ಇಲ್ವಲ್ಲೇ ?

ನಾನು : ಕಲಿಯೋದಪ್ಪಾ...ಅದೇನ್ ಬ್ರಹ್ಮ ವಿದ್ಯೆ ಏನಲ್ಲ. ಆವತ್ತಿಂದ ನಾನು ಬಹಳ ಹುಷಾರಾಗಿದಿನಿ ಮಾತಿನ ವಿಷಯದಲ್ಲಿ.

Z : ಎಹೆಹೆಹೆ...

ನಾನು : By the way, ನಿನಗೆ ಇನ್ನೊಂದೆರಡು ವಿಷಯ ತಿಳಿಸಬೇಕು.

Z :ಗೊ ಅಹೆಡ್.

ನಾನು : ೧. ನಾನು ಮೇ ಎಂಟನೆಯ ತಾರೀಖಿನಿಂದ ಒಂದು ತಿಂಗಳು ಉತ್ತರ ಭಾರತದ ಪ್ರವಾಸಕ್ಕೆ ಹೋಗ್ತಿದಿನಿ.

Z : ಪ್ರವಾಸ ಕಥನ ನ ಚಾಚೂ ತಪ್ಪದೇ ಹೇಳ್ಬೇಕು. ಇಲ್ಲಾಂದ್ರೆ ಕಪ್ಪು ಬಾವುಟ ಪ್ರದರ್ಶನ ಸಮೇತ ಉಗ್ರವಾದ ಹೋರಾಟ ನಡೆಯತ್ತೆ.

ನಾನು : ನೋಡೋಣ.ಬಂದ ತಕ್ಷಣ ಎಮ್.ಫಿಲ್ ಎಕ್ಸಾಮ್ ಇದೆ. ಟ್ರೈನ್ ನಲ್ಲಿ ಎಮ್.ಫಿಲ್ ಎಕ್ಸಾಮ್ ಗೆ ಓದೋ ಹಣೆ ಬರಹ ನ ಬರ್ಸ್ಕೊಂಡ್ ಬಂದಿದಿನಿ ನಾನು. ಟೈಂ ಸಿಕ್ರೆ ಖಂಡಿತಾ ಹೇಳ್ತಿನಿ.

Z :ಎರಡನೆಯ ವಿಷಯ ?

ನಾನು : ೨. ನಾನು mp3 ಪ್ಲೇಯರ್ ತಗೊಂಡೆ. ಅಮ್ಮಂಗೆ ಒಂದು ಕೊಡಿಸಿದ್ನಲ್ಲಾ...ಅಂಥದ್ದೇ.

Z : ನಾಮಕರಣ ಮಹೋತ್ಸವ ಆಗಿರ್ಬೇಕಲ್ಲ.

ನಾನು : ಯೆಸ್.ಶ್ರಾವ್ಯ ಅಂತ ಹೆಸರು.

Z : ಏನು technical details?

ನಾನು : 8 GB ಅಷ್ಟು ಸ್ಟೋರೇಜು. ವಾಯಿಸ್ ರೆಕಾರ್ಡಿಂಗ್ ಮಾಡತ್ತೆ, ರೇಡಿಯೋ ಇದೆ. ಹಾಡುಗಳು ಚೆನ್ನಾಗಿ ಕೇಳತ್ವೆ. ಅಷ್ಟೆ.

Z : ಓಕೆ. ಜಸ್ಟ್ ಮಾತ್ ಮಾತಲ್ಲೇ ಎಲ್ಲಾ ಹೇಳಿ ಮುಗಿಸಿಬಿಟ್ಟಳು.

ನಾನು : ;)

ಉತ್ತರಾಯಣ ೩

ನಾನು: ಬೃಂದಾವನಕ್ಕೆ ಹೊರಡಲು ನಾಲ್ಕು ಘಂಟೆಯಷ್ಟೊತ್ತಿಗೆ ರೆಡಿ ಇರಬೇಕು ಎಂದು ಮ್ಯಾನೇಜರ್ ವೆಂಕಟೇಶ್ ಅವರು ಹೇಳಿದ್ದರು. ಇವರೆಲ್ಲರೂ ಊಟ ಮಾಡಿ, ಮಲಗಿ, ಎದ್ದು ರೆಡಿಯಾಗು...