Saturday, June 12, 2010

ಉತ್ತರಾಯಣ - ೧

ನಾನು : ಟ್ರೈನ್ ತನ್ನಷ್ಟಕ್ಕೆ ತಾನು ಚಲಿಸುತ್ತಿತ್ತು,ಆಗ್ರಾ ಕಡೆಗೆ.ಕೋಟಿ ಭಾವನೆಗಳನ್ನು ಹೊತ್ತ ಜನರನ್ನ ಹೊತ್ತುಕೊಂಡು ತಾನು ನಿರ್ಭಾವುಕವಾಗಿ ಚಲಿಸುತ್ತಿತ್ತು.

Z : ನಿನ್ನ styleನಲ್ಲಿ ಒಂದು ಮಾತು ಹೇಳಲಾ ?

ನಾನು : ಹು.

Z :It is the characteristic feature of the train to move at its speed to the destination.As it is a non-living thing, we cannot attribute emotions to it.So,what is so big about it ?

ನಾನು : :) ಕಳ್ಳಿ ! ನನ್ನ ಥರ ಯೋಚ್ನೆ ಮಾಡ್ತ್ಯಾ ?

Z : ನೀನು ನನ್ನ ಥರ ಯೋಚ್ನೆ ಮಾಡಿದ್ರೆ ನಾನು ನಿನ್ನ ತರಹ ಮಾಡ್ಬೇಕಾಗತ್ತೆ, balance ಮಾಡಕ್ಕೆ :P ಮುಂದುವರೆಸು.

ನಾನು : ಎಂಟು ಗಂಟೆಯ ಸುಮಾರಿಗೆ ಕಾಫಿ ಟೀ ಸಮಾರಾಧನೆ ಪ್ರಾರಂಭವಾಯ್ತು. ಕಾಫಿಯ ಹಿಂದೆಯೇ ಟೀ ಬಂತು. ನಮ್ಮಮ್ಮ, " ಲಕ್ಷ್ಮೀ ಕಾಫಿ ?" ಅಂದ್ರು. ನಾನು " ಬೇಡ" ಅಂದೆ. ಇಡೀ ಬೋಗಿ ಸ್ಥಬ್ದ.

Z : ಅಲ್ವಾ ಮತ್ತೆ? ಕಾಫಿಯ ಆರಾಧಕಿಯಾದ ನೀನು, ಸ್ವತಃ ಸ್ವಯಂ ಸಾಕ್ಷಾತ್ ನೀನು ಕಾಫಿ ಬೇಡಾ ಅಂದ್ರೆ, ಇರೋರ್ಗೆಲ್ಲಾ ಶಾಕ್ ಆಗಲ್ವ ? ಹೈ ಟೆನ್ಷನ್ ವೈರ್ ಮುಟ್ಟಿದ ಹಾಗಾಗಿರತ್ತೆ ಪಾಪ.

ನಾನು : ನೋಡು, ಕಾಫಿ ಅನ್ನೋ ಪೇಯ ಹೇಗಿರ್ಬೇಕು ಗೊತ್ತ ?

Z : ಹೇಗಿರ್ಬೇಕು ?

ನಾನು : ಚಿಕ್ಕಮಗಳೂರಿಂದ ಕಾಫಿ ಬೀಜ ತಂದು, ಪುಡಿ ಮಾಡಿಸಿ, ಚಿಕೋರಿ ೨೦ ಪೆರ್ಸೆಂಟ್ ಹಾಕಿ, ಸೇಲಂ ಸ್ಟೀಲಿನ ಕಾಫಿ ಫಿಲ್ಟರ್ ನಲ್ಲಿ ಡಿಕಾಕ್ಷನ್ ಹಾಕಿ, ನಂದಿನಿ ಹಾಲು ಬೆರೆಸಿ, ಪ್ಯಾರಿಸ್ ಶುಗರ್ ಹಾಕಿ ಕರಗಿಸಿ,ಪೋರ್ಸಿಲೇನ್ ಕಪ್ ನಲ್ಲಿ ಕುಡಿದರೇನೆ ಅದು ಕಾಫಿ ಅನ್ಸ್ಕೊಳ್ಳೋದು.

Z : ಮತ್ತೆ ಟ್ರೈನ್ ನಲ್ಲಿ ಕೊಡೋದು ?

ನಾನು : ಕಾಫಿ ಪ್ಲೇವರ್ ಇರೋ ಬಿಸಿಯಾದ ಸಕ್ಕರೆ ಪಾನಕ.

Z : ಅದಕ್ಕೆ ಬೇಡಾ ಅಂದ್ಯಾ ?

ನಾನು : ಯೆಸ್. ನಾನು ಬೇಗ ಮುನ್ನೆಡೆಯುತ್ತಿದ್ದ ಟೀಯವನನ್ನ ನಿಲ್ಲಿಸಿ ಟೀ ತೆಗೆದುಕೊಂಡೆ. ಪಾಪ ನಮ್ಮ gang ಗೆ ಗಾಬರಿ ನೆ ಆಗೋಯ್ತು.

Z : ಯಾಕೆ ಹಿಂಗೆಲ್ಲಾ ಶಾಕ್ ಕೊಡ್ತ್ಯಾ ?

ನಾನು : ಚೆನ್ನಾಗಿರೋ ಕಾಫಿ ಕುಡಿದು ಅಭ್ಯಾಸ ಆಗಿರೋ ನಾಲಗೆಗೆ ಈ ಪಾನಕ ಕುಡಿಸಿ ಕಾಫಿಯ ರುಚಿಯನ್ನ ಮರೆಯಿಸುವುದಕಿಂತ ರುಚಿ ಎಂತಹುದೇ ಆದರೂ,ಹೇಗೆಯೇ ಇದ್ದರೂ ಸೈಲೆಂಟಾಗಿ ಹೊಟ್ಟೆ ಸೇರುವ ಟೀ ಉತ್ತಮ ಅನ್ನಿಸಿತು ನನಗೆ.

Z : ಎಂಥಾ ಲಾಜಿಕ್ಕು !

ನಾನು : ಹೆಂಗೆ ? ನಾನು ಅಣ್ಣ ಹೀಗೇ ಮಾಡೋದು. ನಮ್ಮ ಮನೆ, ಕಲ್ಮನೆ, ಎಸ್.ಎಲ್.ವಿ, ಎಮ್.ಟೀ.ಆರ್, ಮೈಯ್ಯಾಸ್ ಇವೇ ಮುಂತಾದ ಹೋಟೆಲುಗಳಲ್ಲಿ ಕಾಫಿ ಕುಡಿಯುತ್ತೇವೆ ಬಿಟ್ಟರೆ, ಮಿಕ್ಕೆಲ್ಲಾ ಕಡೆ ಟೀ ನೆ.

Z : ಐ ಸೀ. ಆಮೇಲೆ ?

ನಾನು : ಕರ್ನಾಟಕ ಬಿಡುವ ಮುನ್ನವೇ ನಾನು ಕಾಫಿ ಬಿಟ್ಟದ್ದು ನಮ್ಮ ಕುಟುಂಬಕ್ಕೆ ಶಾಕ್ ತಂದಿತಾದರೂ, ಅದನ್ನು ಸಹಿಸಿಕೊಂಡು ಲಗೇಜ್ ಸರಿ ಇಟ್ಟುಕೊಳ್ಳುವ ಕೆಲಸಕ್ಕೆ ಮುಂದಾಯ್ತು. ನಾನು ಶ್ರಾವ್ಯ ದಲ್ಲಿ ಹಾಡು ಕೇಳಲು ಪ್ರಾರಂಭಿಸಿದೆ, ಎಲ್ಲ ಚೈನ್ ಗಳಿಗೆ ಬೀಗ ಜಡಿಯೋಣ ಅಂತಿದ್ದೆ, ಅಣ್ಣ-" ನಾವ್ ಮಾಡ್ಕೊತಿವಿ, ನೀನು ಸುಮ್ನಿರು" ಅಂದ್ರು. ನಾನು ಓಕೆ ಅಂದೆ. ಅಣ್ಣ ಮತ್ತೆ ದೀಪು ಪಾಪ ಎಲ್ಲರ ಲಗೇಜ್ ಸರಿ ಮಾಡಿಟ್ಟರು. ಅಮ್ಮ ಚಪಾತಿ ತಂದಿದ್ದರು, ಎದುರು ಮನೆಯವರು ಚಿತ್ರಾನ್ನ, ಮೊಸ್ರನ್ನ ತಂದಿದ್ರು. ಎಲ್ಲವನ್ನು ಸಕತ್ತಾಗಿ ಲಗಾಯ್ಸಿದೆವು.ಅಲ್ಲಿಗೆ ಊಟ ಅನ್ನೋ ದೊಡ್ಡ ಕಾರ್ಯಕ್ರಮ ಸದ್ದು ಗದ್ದಲದೊಂದಿಗೆ ಶುರುವಾಗಿ, ಶಾಂತವಾಗಿ ಸಾಂಗವಾಗಿ ನೆರವೇರಿತು.

Z : ಗುಡ್.

ನಾನು : ಆದರೆ ನನಗೆ ನಿದ್ದೆ ಮಾಡೋದು ಕಷ್ಟ ಆಗೋಯ್ತು.

Z : ಎ.ಸಿ. ಇತ್ತಲ್ಲ, ಇನ್ನೆಂತ ತೊಂದರೆ ?

ನಾನು : ಅದೇ ತೊಂದರೆ. ಪುಣ್ಯಾತ್ಮ ಟ್ರೈನಿನವ, ರೆಗ್ಯುಲೇಟ್ ಮಾಡ್ಬೇಡ್ವಾ temperature ನ ? cool mode ನಲ್ಲಿ ಎ.ಸಿ. ಹಾಕಿಟ್ಟು ತಾನು ಕೂಲಾಗಿ ಎಸ್ಕೇಪ್ ಆಗಿದಾನೆ. ನಾನು ನಾಲ್ಕು ಬೋಗಿಯಲ್ಲಿ ಹುಡುಕಾಡಿದೆ ಅವನಿಗೆ, ಅವ ನಾಪತ್ತೆ.ಕಡೆಗೆ ಸ್ವೆಟರ್ರು, ಶಾಲು, ಸ್ಕಾರ್ಫು, ಎಲ್ಲ ಹಾಕೊಳ್ಳೋ ಹಾಗೆ ಆಯ್ತು !

Z : ಛೆ !

ನಾನು : ಹು. ಎಲ್ಲಕ್ಕಿಂತಾ ತೊಂದರೆ ಆಗಿದ್ದು ಏನಪ್ಪ ಅಂದ್ರೆ, ನನ್ನ ಅಪರ್ಣನ್ನ ಅಪ್ಪರ್ ಬೆರ್ತ್ ನಲ್ಲಿ ಮಲ್ಗಕ್ಕೆ ಹೇಳಿದ್ದು.

Z : ಹೋ...ಹತ್ತೋದು ಕಷ್ಟ ಆಗಿರತ್ತೆ.

ನಾನು : ಹು. ಬೆರ್ತ್ ಹತ್ತಲು ಇರುವ ಸಪ್ಪೋರ್ಟ್ ಎಲ್ಲ ಮುರ್ದಿರೊ "ಸುವ್ಯವಸ್ಥಿತ" ಬೋಗಿ ಅದು. ನಾವು ದಿಕ್ಕೆಟ್ಟು ಕಂಗಾಲಾಗಿ, ಕಡೆಗೆ ಆಂಜನೇಯನ್ನ ನೆನೆಸಿಕೊಂಡು, ಅವನ ಕೃಪೆಯಿಂದ, ಕೋತಿ ಮರ ಹತ್ತಿದ ಹಾಗೆ ಅಪ್ಪರ್ ಬೆರ್ತ್ ಹತ್ತಿದೆವು.

Z : ಎಹೆಹೆ.retrogressive evolution :)

ನಾನು : ಹೂಂ. ಡಾರ್ವಿನ್ ನ ನೆನೆಸಿಕೊಂಡೆ ನಾನು.

Z : :) ಆಮೇಲೆ ?

ನಾನು : ಒಂದೊಂದು ಘಂಟೆಗೂ ಎಚ್ಚರ ಆಗ್ತಿತ್ತು ನನಗೆ.

Z : ಯಾಕೆ ?

ನಾನು : ನನ್ನ ಫೋನ್ ಹಿರಣ್ಮಯಿ ನ ಯಾರೋ ಕದಿತಾರೆ ಅನ್ನೋ ಭಯ ಹತ್ತಿಕೊಂಡಿತು ನನಗೆ.

Z : ಮೇಲಿನ ಬೆರ್ತ್ ತನಕ ಬಂದು ಫೋನ್ ಕದಿಯೋ ಅಷ್ಟೆಲ್ಲಾ ಕಳ್ಳರು ಶ್ರದ್ಧಾವಂತರಾಗಿರ್ತಾರಾ ?

ನಾನು : ಯಾರಿಗೆ ಗೊತ್ತು ? ಪ್ರತಿಯೊಂದು ಘಂಟೆಗೂ ಏಳು, ಫೋನ್ ಇದೆಯಾ ನೋಡು, ಮಲ್ಕೊ. ಇಷ್ಟೇ ಆಗೋಯ್ತು.

Z : ಪಾಪ.

ನಾನು : ಇದು ಮೊದಲ ದಿನದ ಕಥೆ.

Z : ಮುಂದೆ ?

ನಾನು : ಸೂರ್ಯ ಯಥಾ ಪ್ರಕಾರ ಪೂರ್ವದಲ್ಲಿ ಎದ್ದ ಮಾರನೆಯ ದಿನ.ಆದರೆ, ನಾನು ಸೂರ್ಯನಿಗಿಂತ ಮುಂಚೆನೆ ಎದ್ದಿದ್ದೆ.

Z : ವೆರಿ ಗುಡ್. ಆಮೇಲೆ ?

ನಾನು : Hi Surya! Good morning! Whats up ? ಅಂದೆ.

Z : ಅದಕ್ಕೆ ಅವನೇನಂದ ?

ನಾನು : Hi!Good morning !Well, all is well here, but you be careful when you get down ಅಂದ.

Z : ಆಹ !

ನಾನು :ಹತ್ತೋದು ಹತ್ತಿದ್ದೆ, ಈಗ ಇಳೀಯೋಕೆ ಒದ್ದಾಡಿದೆ.

Z : :)

ನಾನು : ಮತ್ತೆ ಹನುಮಂತನನ್ನ ಪ್ರಾರ್ಥಿಸಿ, ಇಳಿದೆ.ಅಮ್ಮ ಅಣ್ಣ ಎಲ್ಲ ಎದ್ದಿದ್ದರು. ಅಮ್ಮಂಗೆ ವಿಪರೀತ ಗಂಟಲು ನೋವು ಬಂದಿತ್ತು. ಹಾಗಾಗಿ ಅವರು ಮೌನ ವ್ರತ ಮಾಡುತ್ತಿದ್ದರು.

Z :ನೀನು sign language ನಲ್ಲಿ ಮಾತಾಡಿದ್ಯಾ ?

ನಾನು : ಹು. ಅವರೂ ಅದರಲ್ಲೇ ಉತ್ತರಿಸಿದರು.

Z :ಗುಡ್.

ನಾನು : ಹಲ್ಲುಜ್ಜಿ, ಟೀ ಕುಡಿದು, ಪುಸ್ತಕ ತೆಗೆದೆ, ಓದೋಣ ಅಂತ.

Z : ಒಹೊಹೊಹೊಹೊಹೊ.

ನಾನು : ಹೂಂ ! ಒಂದುವರೆ ಚಾಪ್ಟರ್ ಓದಿದ್ದೆ. ಅಮ್ಮ ತಿಂಡಿ ತಿನ್ನೋಣ ಅಂದರು. ಚಪಾತಿ ಸೇವನೆ ನಡೆಯಿತು. ಮತ್ತೆ ಟೀ ಸಮಾರಾಧನೆ. ನಂತರ, ನಿದ್ದೆ.

Z : ಮತ್ತೆ ಓದಲಿಲ್ಲವಾ ?

ನಾನು : ಟ್ರೈನ್ ಸಿಕ್ಕಾಪಟ್ಟೆ shaky ಆಯ್ತು.ನನ್ನ text book font size ಚಿಕ್ಕದು. ಕನ್ನಡಕದ ಪವರ್ರು ಹೆಚ್ಚಾದ್ರೆ ಚೆನ್ನಾಗಿರಲ್ಲ ಅನ್ನಿಸಿತು ನನಗೆ.road humps ಜಾಸ್ತಿ track ನಲ್ಲಿ ಅಂತ ದೀಪು, ನಂದಿನಿ ಮತ್ತು ನಾನು ಆಡಿಕೊಂಡು ನಕ್ಕೆವು. ಮತ್ತೊಂದಿಷ್ಟು ಜೋಕುಗಳು ಮೊಬೈಲಲ್ಲಿ ವಿನಿಮಯಗೊಂಡವು. ಪುಸ್ತಕ ಮುಚ್ಚಿಟ್ಟು ಮಲಗಿದೆ. ಮೂರು ಘಂಟೆಗಳ ಕಾಲ ಸೊಂಪಾದ ನಿದ್ದೆ.

Z : ವೆರಿ ಗುಡ್ !

ನಾನು : ಹಾಂ, ಮಲಗೋ ಮುಂಚೆ, ಇಂಡಿಯಾ ಅಟ್ಲಾಸ್ ತೆಗೆದು, ಸಿಗುತ್ತಿದ್ದ ಸ್ಟೇಷನ್ ಹೆಸರುಗಳನ್ನ ಹುಡುಕುತ್ತಾ, ನಾವೆಲ್ಲಿದ್ದೇವೆ ಅಂತ ಹುಡುಕಿದೆ. ನಾವು ಮಹಾರಾಷ್ಟ್ರದಲ್ಲಿದ್ದೆವು. ಒಂದು ದೊಡ್ಡ ನದಿ ಸಿಕ್ಕಿತು ದಾರಿಯಲ್ಲಿ. ಬಹಳಾ ಚೆನ್ನಾಗಿದೆ ಅಂತೆಲ್ಲಾ ಮಾತಾಡಿಕೊಂಡು ನೋಡಿ ನಮಸ್ಕಾರ ಎಲ್ಲಾ ಮಾಡಿದೆವು. ಆದರೆ ಅದು ಯಾವ ನದಿ ಅಂತ ಗೊತ್ತಾಗಲಿಲ್ಲ. ನಾನು ಅಟ್ಲಾಸ್ ತೆಗೆದು, ನಮ್ಮ ಟ್ರೈನ್ ಅನುಸರಿಸುವ ದಾರಿಯ ರೇಲ್ವೇ ಮ್ಯಾಪ್ ತೆಗೆದು ನೋಡಿದಾಗ ಗೊತ್ತಾಯ್ತು...

Z : ತು...

ನಾನು : ಅದು ಭೀಮಾ ನದಿ ಅಂತ.

Z :ಹೌದಾ ? ಹೆಸರಿಗೆ ತಕ್ಕನಾಗಿದೆಯಾ ?

ನಾನು : ಓಹೋ...ಸಿಕ್ಕಾಪಟ್ಟೆ ಚೆನ್ನಾಗಿ ಸೂಪರ್ರಾಗಿ ಸಕ್ಕತ್ತಾಗಿದೆ.ಏನು ದೊಡ್ಡ ಪಾತ್ರ, ಎಂಥಾ ರಭಸದ ಹರಿವು...

Z : ಹೌದಾ ?

ನಾನು : ಹು. ಆದರೂ ಮಹಾರಾಷ್ಟ್ರದಲ್ಲಿ ಬೆಳೆಗಳು ಕಡಿಮೆ. ಬಿಸಿಲಿನ ಬೇಗೆಯೋ ಏನೋ, ನೆಲದಲ್ಲಿ ಬೆಳೆಗಳಿಗಿಂತ ಬಿರುಕುಗಳು ಹೆಚ್ಚಾಗಿ ಕಂಡವು. ಇದೆಲ್ಲಾ ನೋಡಿ, ತೃಪ್ತಳಾಗಿ, ನಿದ್ದೆ ಮಾಡಿ, ಎದ್ದೆ. ಅಣ್ಣನ blackberryಯಲ್ಲಿ ಈಮೈಲ್ ನೋಡಿದೆ. ಅಂಥಾದ್ದೇನು ಮುಖ್ಯವಾಗಿರಲಿಲ್ಲ ಅಂತ ಸಂತೋಷ ಪಟ್ಟೆ. ಆಮೇಲೆ, ಕರಿಸಿರಿಯಾನ ಕಾದಂಬರಿ ತೆಗೆದೆ, ಓದಿ ಮುಗಿಸಿಯೇ ಬಿಡೋಣ ಅಂತ.

Z : ಒಹ್ಹೊ...text book ಓದಕ್ಕೆ ಆಗ್ಲಿಲ್ಲ, ಇದು ಹೇಗೆ ಆಯ್ತು ?

ನಾನು : ಇದರ ಫಾಂಟ್ ಸೈಜ್ ದಪ್ಪ ಇತ್ತು.

Z : ಕಳ್ಳಿ !

ನಾನು : :)ಕಾದಂಬರಿಯಲ್ಲಿ ಅಹಮದಾನಗರ್ ನ ಉಲ್ಲೇಖ ಬರುತ್ತದೆ. ಕಾದಂಬರಿಯ ಮುಖ್ಯ ಪಾತ್ರಕ್ಕೂ, ಆ ನಗರಕ್ಕೂ ನಿಕಟವಾದ ಸಂಬಂಧ ಇದೆ. ನಾನು ಅಹಮದಾನಗರ್ ದಾಟಿದ ಮೇಲೆ ಆ ಅಧ್ಯಾಯಕ್ಕೆ ಬಂದೆ, ಕೈ ಕೈ ಹಿಸುಕಿಕೊಂಡೆ.

Z : ಒಳ್ಳೇದಾಯ್ತು ಆ ಅಧ್ಯಾಯ ಆಮೇಲೆ ಬಂದದ್ದು. ಇಲ್ಲಾಂದ್ರೆ ನೀನು ಟ್ರೈನ್ ಇಂದ ಇಳಿದು, ಆಟೋ ಹತ್ತಿ, Archeological Survey of India Museum ಗೆ ಹೋಗಿ, ಅವರನ್ನ ನೀನು ಓದಿದ ಕಥೆಯ ಸತ್ಯಾಸತ್ಯತೆಗಳ ಬಗ್ಗೆ interview ಮಾಡಕ್ಕೆ ಹೊರಡ್ತಿನಿ ಅಂತ ಹಠ ಹಿಡಿತಿದ್ದೆ, ಅಮ್ಮ ಅಣ್ಣ ಬೈದಿರೋರು. ಒಂದು ಸೀನ್ ಕ್ರಿಯೇಟ್ ಆಗೋದು ತಪ್ಪಿತು.

ನಾನು : ಎಂಥೋಳೇ ನೀನು ? ಒಂದು ಚೂರು ಕ್ರಿಯೇಟಿವ್ ಮೈಂಡ್ ಇಲ್ಲ ! ಎಂಥಾ ಚಾನ್ಸ್ ಸಿಕ್ಕಿತ್ತು facts confirm ಮಾಡ್ಕೊಳ್ಳೋಕೆ. ಬಿಟ್ಟುಬಿಡಕ್ಕೆ ಆಗತ್ತಾ ? ಮತ್ತೆ ಹೋಗಕ್ಕಾಗತ್ತಾ ಹಂಗೆಲ್ಲಾ ?

Z : ಆಗತ್ತೆ.

ನಾನು : ಹೆಂಗೆ ?

Z : ನೀನು ಈ ಥರ ಕಾದಂಬರಿಗಳನ್ನೆಲ್ಲಾ ಓದಿ ಗುಡ್ಡೆ ಹಾಕು. ಆಮೇಲೆ ಒಂದು ಎತ್ತಿನ ಗಾಡಿಲಿ All India Tour ಮಾಡು. In fact world tour ಮಾಡು.

ನಾನು : ಎತ್ತಿನ ಗಾಡಿ ಯಾಕೆ ?

Z : ದಾರಿ ಮಧ್ಯ ಸಿಗೊ ಕಾಗೆ, ಕುರಿ, ಬೆಕ್ಕು ನಾಯಿದೆಲ್ಲಾ ಫೋಟೋ ಬೇರೆ ತೆಗಿಬೇಕಲ್ಲಾ ನೀನು. ಸಾಲದು ಅಂತ ಪ್ರತಿಯೊಂದು ಹಳ್ಳಿಯ ಇತಿಹಾಸನೆಲ್ಲಾ ದಾಖಲೆ ಮಾಡ್ಬೇಕಲ್ಲಾ.ಜಾನಪದ ಕಲೆಗಳ ಅಧ್ಯಯನ, ಅಂಥಿಂಥವೆಲ್ಲಾ ಮಾಡ್ಬೇಕಲ್ಲ. ಎತ್ತಿನ ಗಾಡೀನೇ ಸರಿಯಾದ ವಾಹನ ನಿನಗೆ.

ನಾನು :ಎಷ್ಟ್ ಆಡ್ಕೊತಿಯೋ ಆಡ್ಕೊ. ನನಗೂ ಒಂದು ಕಾಲ ಬರತ್ತೆ.

Z : ಬರಲಿ.

ನಾನು : ಟೀ ಕುಡಿಯುತ್ತಾ ಕಾದಂಬರಿ ಓದಲು ಪ್ರಾರಂಭಿಸಿದೆನಾ...ರಾತ್ರಿ ಆಗಿದ್ದೇ ಗೊತ್ತಾಗಲಿಲ್ಲ. ಊಟ ಆರ್ಡರ್ ಮಾಡಿ, ಅದು ಚೆನ್ನಾಗಿರದೆ, ಉದರ ನಿಮಿತ್ತಂ ಎಂದು ಸೇರಿದಷ್ಟು ತಿಂದು, ಮತ್ತೆ ಕಾದಂಬರಿ ಒಳಗೆ ಧುಮುಕಿದೆ. ಆಮೇಲೆ, ತಿರುಪತಿ ವೆಂಕಟರಮಣನ ವಿಗ್ರಹದ ಸುತ್ತ ಇರುವ ವಿವಾದದ ಬಗ್ಗೆ ಆ ಕಾದಂಬರಿಯಲ್ಲಿ ಬರೆದಿರೋದನ್ನ ಜೋರಾಗಿ ಓದುತ್ತಾ ನಾನು ಆಶ್ಚರ್ಯ ವ್ಯಕ್ತಪಡಿಸಿದೆ. ಅಮ್ಮ-"ನಂಗೆ ಗೊತ್ತಿತ್ತು ಇದು" ಅಂತ ಹೇಳಿ ಸಿಂಗಲ್ ಲೈನಲ್ಲಿ ಶಾಕ್ ಕೊಟ್ಟರು.

Z : :D

ನಾನು : ಆ ಕಾದಂಬರಿಯನ್ನು ಮುಗಿಸಲು ಆಗಲಿಲ್ಲ. ಇಪ್ಪತ್ತು ಪೇಜುಗಳಿದ್ದವು. ಮಾರನೆಯ ದಿನ ಬೆಳಿಗ್ಗೆ ಆರು ಮುಕ್ಕಾಲಿಗೆ ನಾವು ಆಗ್ರ ತಲುಪಲಿದ್ದೆವು.ಅದಕ್ಕೆ ಐದಕ್ಕೆ ಅಲಾರಂ ಇಟ್ಟು ಮತ್ತೆ ಕಷ್ಟಪಟ್ಟು ಮೇಲಕ್ಕೆ ಹತ್ತಿ, ಮಲಗಿದೆ. ಈ ರಾತ್ರಿಯೂ ನಿದ್ದೆ ಇಲ್ಲ.

Z : ಅದೇ ಭಯಾನಾ ?

ನಾನು : ಹು. ಜೊತೆಗೆ ಇನ್ನೊಂದು. ಅಲಾರಂ ಯಾಕೆ ಹೊಡಿತಿಲ್ಲಾ ಅಂತ.ಫೋನ್ ಕಳೆದು ಹೋಯ್ತಾ ? ಕೆಟ್ಟು ಹೋಯ್ತಾ ಅಂತೆಲ್ಲಾ ಭಯ.

Z : ಯಪ್ಪಾ !

ನಾನು : ನಾಲ್ಕು ಮುಕ್ಕಾಲಿಗೆ ಎಚ್ಚರ ಆಯ್ತು. ಕಾಲು ಘಂಟೆ ಕಣ್ಣು ಪಿಳಿ ಪಿಳಿ ಮಿಟುಕಿಸಿ,ಅಲಾರಂ ನ ಆಲಿಸಿ, ಆರಿಸಿ, ಮೇಲಿಂದ ಕೆಳಗೆ ಬೇಗನೆ ಇಳಿದು, fresh ಆಗಿ, ಲಗೇಜ್ ಎಲ್ಲಾ ಎತ್ತಿಟ್ಟು, ರೆಡಿಯಾಗುವ ಅಷ್ಟೊತ್ತಿಗೆ ಆರುವರೆ. ಇನ್ನೊಂದು ಸರ್ತಿ ಟೀ ಕುಡಿಯುವ ಅಷ್ಟೊತ್ತಿಗೆ ಆಗ್ರಾ ಬಂದೇ ಬಿಟ್ಟಿತು. ನೂಕುನುಗ್ಗಲುಗಳನ್ನೆಲ್ಲಾ ನಿಭಾಯಿಸಿ,ನಾನು ಅಪರ್ಣ ದೀಪು ನಂದಿನಿ ಇಳಿದು,ಮಿಕ್ಕವರನ್ನೆಲ್ಲಾ ಇಳಿಸಿಕೊಂಡು ಲಗೇಜ್ ಇಳಿಸಿದೆವು.

Z : ಅಬ್ಬಾ !

ನಾನು : ನಿನಗೆ ಕೇಳಿ ಇಷ್ಟು ಸುಸ್ತು. ನನ್ನ ಕಥೆ ಇನ್ನೇನಾಗಿರಬೇಡ ?

Z : ಅದು ಕರೆಕ್ಟು. ಮುಂದೆ ?

ನಾನು :ಸಧ್ಯಕ್ಕೆ ಇಷ್ಟು ಸಾಕು. ಮುಂದಿನ ಕಥೆ ಆಮೇಲೆ.

Thursday, June 3, 2010

ಉತ್ತರಾಯಣ - ಪ್ರಸ್ತಾವನೆ.

Z : ಇದು ಗ್ಯಾರಂಟೀ ಒಂದು ಗ್ರಂಥ ಆಗತ್ತೆ ಅಂತ ಗೊತ್ತಾಗಿ, ಪ್ರಸ್ತಾವನೆ, ವಂದನಾರ್ಪಣೆ ಎಲ್ಲಾ ಹಾಕ್ತಿದಿಯಾ ?

ನಾನು : ಇನ್ನು ಶುರುವೇ ಮಾಡಿಲ್ಲ ನಾನು, ಆಗ್ಲೆ ವಂದನಾರ್ಪಣೆಗೆ ಹೋಗ್ಬಿಟ್ಳು...

Z :ಇಲ್ಲಾ....ಸುಮ್ಮನೆ ಹೇಳಿದೆ ಅಷ್ಟೆ.ಸರಿ ಈಗ ಮೊದಲು ಪ್ರಾರ್ಥನೆ ಮಾಡು.

ನಾನು : ನಂ ನ್ಯಾಷನಲ್ ಕಾಲೇಜ್ ಪ್ರಾರ್ಥನೆ ಹಾಡ್ತಿನಿ.

Z : ಜೈ.

ನಾನು :ಯಂಬ್ರಹ್ಮಾವರುಣೇಂದ್ರರುದ್ರಮರುತಃ ಸ್ತುನ್ವಂತಿ ದಿವ್ಯೈಸ್ತವೈಃ
ವೇದೈಃಸಾಂಗಪದಕ್ರಮೋಪನಿಷದೈಃ ಗಾಯಂತಿ ಯಂ ಸಾಮಗಾ:|
ಧ್ಯಾನಾವಸ್ಥಿತತದ್ಗತೇನಮನಸಾ ಪಶ್ಯಂತಿ ಯಮ್ ಯೋಗಿನಃ
ಯಸ್ಯಾಂತಂ ನಮಿದಃ ಸುರಾಸುರಗಣಾಃ ದೇವಾಯ ತಸ್ಮೈ ನಮಃ||

ಇಷ್ಟು ಸಾಕು.

Z : ಸರಿ. ಈಗ ಕಥೆ ಶುರು ಮಾಡಮ್ಮ.

ನಾನು :ಕಥೆ ೨೦೧೦ ಫೆಬ್ರುವರಿಯಲ್ಲಿ ಪ್ರಾರಂಭ ಆಗತ್ತೆ. ನಮ್ಮ ಎದುರು ಮನೆಯವರಿಗೆ ಯಾರೋ ನಾರ್ತ್ ಇಂಡಿಯಾ ಟ್ರಿಪ್ಪಿನ ಬ್ರೋಷರ್ ತಂದೊಪ್ಪಿಸುತ್ತಾರೆ. ಅರೆಕ್ಷಣದಲ್ಲಿ ಅದು ನಮ್ಮ ಮನೆ ತಲುಪುತ್ತದೆ. ಹೋಂ ಮಿನಿಸ್ಟರ್ ಗಳು ಒಪ್ಪಿ ಹೈ ಕಮಾಂಡಿಗೆ ಮನವಿ ಸಲ್ಲಿಸಿಯೇ ಬಿಡುತ್ತಾರೆ. ಎದುರು ಮನೆಯ ಹೈ ಕಮಾಂಡ್ ಸಮ್ಮತಿಸುತ್ತದೆ, ನಮ್ಮನೆ ಹೈ ಕಮಾಂಡ್ ಸಾರಾಸಗಟಾಗಿ ನಿರಾಕರಿಸದೇ "request under process"ಎಂದು ಹೇಳಿ ಯೋಚನಾಮಗ್ನವಾಗುತ್ತದೆ.

Z :Quite natural. 22 ದಿನ ಅಣ್ಣ ಆಫೀಸು ಬಿಟ್ಟು ಬರೋದು ಸಾಧ್ಯವೇ ಇರ್ಲಿಲ್ಲ.

ನಾನು :ಹೂಂ. ಹತ್ತು ದಿನಗಳ ಸೌತ್ ಇಂಡಿಯಾ ಟೂರಿಗೆ ಅಣ್ಣನ ಬ್ರೈನ್ "ಯೆಸ್" ಅನ್ನಲು ಒಂದು ಕೋಟಿ ಸರ್ತಿ ಯೋಚನೆ ಮಾಡಿತ್ತು. ಅಣ್ಣ ಒಪ್ಪಿದ ಮೇಲೆ ನನ್ನ ಹತ್ತಿರ ಮಾತಾಡಲು ಯೋಜನೆ ಹಾಕಿದ್ದ ಮಿನಿಸ್ಟ್ರಿ ನನಗೆ ವಿಷಯವನ್ನೇ ತಿಳಿಸಿರಲಿಲ್ಲ. ನಾನು ಜೂನ್ ವರೆಗೂ ಎಲ್ಲಾ ದಿನಗಳನ್ನು ನನ್ನ ಕೆಲಸಕ್ಕೆ ತಕ್ಕನಾಗಿ ಫಿಕ್ಸ್ ಮಾಡಿಟ್ಟುಕೊಳ್ಳುತ್ತಿದ್ದೆ, ಇದ್ಯಾವುದರ ಪರಿವೆಯೇ ಇಲ್ಲದೇ.

Z : ಪಾಪ.

ನಾನು :ಹೈ ಕಮಾಂಡು ಈ ಸರ್ತಿ ಇಪ್ಪತ್ತು ಕೋಟಿ ಸರ್ತಿ ಯೋಚನೆ ಮಾಡಿರಬಹುದು ಅಂತ ನನ್ನ ಅಂದಾಜು. ಕಡೆಗೂ ಹೈ ಕಮಾಂಡ್ ಓಕೆ ಅಂದಿದ್ದು ಎರಡು ಮನೆಗೂ ಸಂತೋಷವಾಯ್ತು. ನನಗೆ ವಿಷಯ ಕೇಳಿ ಆಶ್ಚರ್ಯವಾಯ್ತು.

Z : ಅದು ಹೇಗೆ ಅಣ್ಣ ಹೂ ಅಂದರು ಅಂತನಾ ?

ನಾನು :ಅದೊಂದು. ಎರಡನೆಯ ಮುಖ್ಯ ವಿಷಯ ಏನಂದರೆ,ನನಗೆ ಇವರು ಅಣ್ಣ ಹೂ ಅಂದ ಮೇಲೆ ಯಾಕೆ ತಿಳಿಸಿದರು ಅನ್ನೋದು.

Z : ನೀನ್ ಏನ್ ಮಹಾ, ಕೇಳಿದ ತಕ್ಷಣ ಹು ಅಂತಿಯಾ ಅಂತ ಸುಮ್ಮನಾದ್ರೂ ಅನ್ಸತ್ತೆ. ನಿನಗೆ ವಿಷಯ ಹೇಳಿದಾಗ ನಿನ್ನ ಪ್ರತಿಕ್ರಿಯೆ ಹೇಗಿತ್ತು ?

ನಾನು :ಸಿಂಗಲ್ ಲೈನ್ ನಲ್ಲಿ ಉತ್ತರ ಕೊಟ್ಟೆ. ನಾನು ಬರೋದಕ್ಕೆ ಆಗಲ್ಲ, ನೀವುಗಳು ಹೋಗಿ ಬನ್ನಿ ಅಂತ.

Z : ನಿನ್ನನ್ನ ಏನು ಅಂದುಕೊಂಡುಬಿಟ್ಟಿದ್ದೀಯಾ ನೀನು ?

ನಾನು :ಯಾಕಮ್ಮ ?

Z :ಈ ವಯಸ್ಸಲ್ಲಿ ಬದ್ರಿ ಕೇದಾರಕ್ಕೆ ಹೋದರೆ ಎಷ್ಟು ಪುಣ್ಯ ಏನು ಕಥೆ. ಕೆಲಸವನ್ನೆಲ್ಲಾ ಬದಿಗಿಟ್ಟು ಶ್ರದ್ಧೆಯಿಂದ ಹೋಗಿ ಮಜಾ ಮಾಡಿಕೊಂಡು ಭಗವಂತನನ್ನು ನೋಡಿಕೊಂಡು ಬರೋದನ್ನ ಬಿಟ್ಟು ದೊಡ್ಡ ಹೀರೋಯಿನ್ ಥರ ಜಂಭ ತೋರ್ಸಿದಾಳೆ. ಬ್ಯುಸಿ, ಟೈಮಿಲ್ಲ ಅಂತೆಲ್ಲಾ. ಅಣ್ಣನಿಗಿಂತಲೂ ಬ್ಯುಸಿ ನಾ ನೀನು ?

ನಾನು : I dont know if I may say that, but I was definitely not free.ಜೂನ್ ಮೊದಲನೆಯ ತಾರೀಖು ಎಮ್.ಫಿಲ್ ಎಕ್ಸಾಮು. ನನ್ನ ಎಮ್.ಫಿಲ್ ಪ್ರಾಜೆಕ್ಟು ಕಳೆದ ಆರು ತಿಂಗಳಿನಿಂದ ಸಿಕ್ಕಲ್ಲೆಲ್ಲಾ ಅಲೆದಾಡಿ ಆಗಷ್ಟೆ ನೆಲೆ ಅಂತ ಒಂದು ಕಂಡುಕೊಳ್ಳತೊಡಗಿತ್ತು.ಮೇ ತಿಂಗಳಿನಲ್ಲಿ ಅದು ತನ್ನ ಪ್ರೌಢಾವಸ್ಥೆಗೆ ತಲುಪಲಿತ್ತು. ಸಾಲದ್ದಕ್ಕೆ ಡಿಗ್ರಿ ಮಕ್ಕಳ ಎಕ್ಸಾಮು, ನಮ್ಮ invigilation. ನನಗೆ ಗೊತ್ತಿತ್ತು ಮಿನಿಮಮ್ ಎಂಟು ಮ್ಯಾಕ್ಸಿಮಮ್ ಹತ್ತು ಡ್ಯೂಟಿಗಳು ಬರತ್ವೆ ಅಂತ,ಯುನಿವರ್ಸಿಟಿಯ ರೂಲ್ಸ್ ಪ್ರಕಾರ ನಾವು ಅದಕ್ಕೆ ಗೈರುಹಾಜರಿ ಆಗುವಂತಿಲ್ಲ.ಇವೆಲ್ಲ ಮೇ ತಿಂಗಳಲ್ಲೇ ಇದ್ದವು. ಇಷ್ಟನ್ನು ಇಟ್ಟುಕೊಂಡು ನಾನು ಹೆಂಗೆ ಊರಿಗೆ ಹೋಗೋದು ?

Z : ಇದು ಸ್ವಲ್ಪ ಕಷ್ಟನೆ.

ನಾನು :ಈಗ ಗೊತ್ತಾಯ್ತ ? ನಾನು ಏನು ಜಂಭ ಕೊಚ್ಚುತ್ತಿರಲಿಲ್ಲ, ವಾಸ್ತವವನ್ನೇ ಹೇಳುತ್ತಿದ್ದೆ.

ಅಣ್ಣ: " ನಿಮ್ಮ ಪ್ರಿನ್ಸಿಪಲ್ ಹತ್ರ ನಾನು ಅಮ್ಮ ಬಂದು ಮಾತಾಡುತ್ತೇವೆ" ಅಂದರು. ನಾನು "ಅಣ್ಣ, ನಾನೀಗ ಸ್ಟೂಡೆಂಟ್ ಅಲ್ಲ, ಲೆಕ್ಚರರ್ರು.Students can bunk, lecturers can't."ಅಂದೆ. ಅಣ್ಣನಿಗೆ ಆಗಲೇ ಪರಿಸ್ಥಿತಿಯ ಅರಿವಾಗಿದ್ದು.

ಅಮ್ಮ: "ನಿನ್ನನ್ನೊಬ್ಬಳೇ ಎಲ್ಲಿ ಬಿಟ್ಟು ಹೋಗೋದು ? ಬೇರೆ ಯಾರು ಬೆಂಗಳೂರಿನಲ್ಲಿರೊಲ್ಲ" ಅಂದರು.

"ನಾನು ಮಗುವಲ್ಲ. ಒಬ್ಬಳೇ ಇರಬಲ್ಲೆ".

ಅಮ್ಮ:"ನೀನು ಮಗುವಲ್ಲ ಅನ್ನೋದಕ್ಕೇ ಭಯ ಆಗಿರೋದು ನಮಗೆ."

ನಾನು: "ಕರ್ಮಕಾಂಡ.ನೀವು ಹೋಗಿಬನ್ನಿ, ನಾನು ಬರೊಲ್ಲ."

ನಾನು :ಇವರು ಬೇರೆ ದಾರಿಯಿಲ್ಲದೇ ಒಪ್ಪಿದರು. ಅಣ್ಣ, ಅಪರ್ಣ, ಅಮ್ಮ, ಎದಿರು ಮನೆಯ ಎಂಟು ಜನ ಹನ್ಸಾ ಟ್ರಾವೆಲ್ಸಿನಲ್ಲಿ ಇಪ್ಪತ್ತೆರಡು ದಿನದ ತೀರ್ಥ ಯಾತ್ರೆ ಪ್ಯಾಕೇಜಿಗೆ ಬುಕ್ ಮಾಡಿಸಿದರು.

Z :ಮತ್ತೆ ನೀನು ಹೆಂಗೆ ಸೇರ್ಕೊಂಡೆ ?ಯಾರಾದ್ರು ಬರ್ಲಿಲ್ವಾ ?

ನಾನು :ಎಲ್ಲರೂ ಬಂದ್ರು. ಫೆಬ್ರವರಿಯಲ್ಲಿ ಭೀಕರವಾಗಿದ್ದ ನನ್ನ ದಿನಚರಿ ಮಾರ್ಚಲ್ಲಿ ಬ್ಯುಸಿಯ ತುತ್ತ ತುದಿಯನ್ನು ತಲುಪಿತು. ನಮ್ಮ ಗೈಡು ಅಮೇರಿಕಕ್ಕೆ ಹೊರಡಲನುವಾದರು, ಕೋಗೈಡು ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾದರು.ಮಾರ್ಚಿಯ ಕಡೆಯಲ್ಲಿ ಆಸ್ಪತ್ರೆಗೆ ದಾಖಲಾದ ನನ್ನ ಕೋಗೈಡು ಮೇ ಕಡೆಯವರೆಗೂ ಬೆಡ್ ರೆಸ್ಟ್ ನಲ್ಲಿರಬೇಕಾಗಿಬಂತು. ನನ್ನ ಗೈಡ್ ಏಪ್ರಿಲ್ ನಲ್ಲಿ ಹೊರಟು ಜೂನ್ ನಲ್ಲಿ ಬರುವವರಿದ್ದರು. ಅವರು ಬರುವವರೆಗೂ ಪರೀಕ್ಷೆಯಿಲ್ಲ ಅಂತ ಖಾತ್ರಿಯಾಯ್ತು. ನಾನು ನಮ್ಮಮ್ಮನಿಗೆ ಸಾಂಗವಾಗಿ ಇವೆಲ್ಲ ವಿಷಯ ತಿಳಿಸಿದೆ.ಅಮ್ಮ ಟ್ರಾವೆಲ್ಸಿನವರಿಗೆ ಫೋನ್ ಮಾಡಿ ಇನ್ನೊಂದು ಸೀಟ್ ಸಿಗಬಲ್ಲುದೇ ಎಂದು ಕೇಳಲು, ನೀವು ನಾಳೆ ಸಾಯಂಕಾಲದೊಳಗೆ ನಮಗೆ ಹೇಳಿದರೆ ನಾವು ಯೋಚಿಸಬಹುದು ಎಂದರು. ನಮ್ಮಮ್ಮ ನನಗೆ ಬಲವಂತ ಮಾಡಲು ಸಜ್ಜಾದರು. "ನೀನಿಲ್ಲದೇ ಇದ್ದರೆ ನಮ್ಮ ಗತಿಯೇನು? ಹಿಂದಿ ನಿನಗೊಬ್ಬಳಿಗೇನೆ ಬರೋದು ನಮ್ಮನೇಲಿ. ನನಗಂತೂ ನಿನ್ನ ಬಿಟ್ಟು ಹೋದರೆ ಖಂಡಿತಾ ಮನಶ್ಶಾಂತಿ ಇರಲ್ಲ.ಬಂದು ಬಿಡು"ಅಂತೆಲ್ಲಾ ಟಿಪಿಕಲ್ ಅಮ್ಮಂದಿರ ತರಹ ಎಮೋಷನಲ್ ಆದರು. ನಾನು ನಮ್ಮ ಎಚ್. ಓ.ಡಿ ಗೆ ಫೋನ್ ಮಾಡಿ ವಿಷಯ ತಿಳಿಸಿದೆ. ಅವರು ಮಾರನೆಯ ದಿನ ಪ್ರಿನ್ಸಿಪಾಲರ ಬಳಿ ಮಾತನಾಡೆಂದು ಹೇಳಿದರು.

Z : ಇಷ್ಟೆಲ್ಲಾ ಆಯ್ತಾ ?

ನಾನು :ಇದಿನ್ನೂ ಪ್ರಾರಂಭ. ಮುಂದೆ ಕಥೆ ಕೇಳು. ಪ್ರಿನ್ಸಿಪಾಲ್ ಸರ್ invigilation slot exchange ಗೆ ಎಸ್ ಅಂದರು. ತಕ್ಷಣ ಒಂದಿಷ್ಟು ಪತ್ರಗಳ ಮೂಲಕ ಎಕ್ಸಾಂ ಕೆಲಸದ ತಲೆನೋವು ತೀರಿತು. ನಮ್ಮ ಗೈಡ್ ಮತ್ತು ಕೋಗೈಡ್ ಗೆ ವಿಷಯ ತಿಳಿಸಲು ಅವರು ಒಂದೇ ಏಟಿಗೆ ಎಸ್ ಅಂದುಬಿಟ್ಟರು.ಅಮ್ಮ ನನಗೆ ಹೋಗುವಾಗ ಅವರೊಟ್ಟಿಗೆ ಟ್ರೈನು, ವಾಪಸ್ ಬರ್ತಾ ಎಮ್.ಫಿಲ್ ಎಕ್ಸಾಮಿಗೆ ಪ್ರೆಪೇರ್ ಆಗಬೇಕು ಅಂತ ಫ್ಲೈಟಿಗೆ ಬುಕ್ ಮಾಡಿಸಿಯೇ ಬಿಟ್ಟರು. ನಾನು ಜೈ ಕೇದಾರ್ ನಾಥ್ ಕೀ ಅಂತ ಹೊರಡಲನುವಾದೆ.

Z : :)

ನಾನು :ಆದರೆ ಹೊರಡೋ ದಿನ ಸಿಕ್ಕಾಪಟ್ಟೆ ಟೆನ್ಷನ್ನು.ಇನ್ವಿಜಿಲೇಷನ್ ಮುಗಿಸಿದ ತಕ್ಷಣ ನಾನು ಟಾಟಾ ಇನ್ಸ್ಟಿಟ್ಯೂಟ್ ಗೆ ಭೇಟಿ ನೀಡಬೇಕಿತ್ತು. ಸಾಲದ್ದಕ್ಕೆ ಲಾಸ್ಟ್ ಮಿನಿಟ್ ಶಾಪಿಂಗು.ಟ್ರೈನ್ ಇದ್ದದ್ದು ಏಳು ಇಪ್ಪತ್ತಕ್ಕೆ. ನಾವು ಸ್ಟೇಷನ್ ನಲ್ಲಿ ಇರಬೇಕಿದ್ದಿದ್ದು ಆರುವರೆಗೆ. ಮನೆ ಬಿಡಬೇಕಿದ್ದಿದ್ದು ಐದಕ್ಕೆ. ನಾನು ಬಂದಿದ್ದು ನಾಕುವರೆಗೆ.

Z : ಇದು ವಿಪರೀತ ಅತಿಯಾಯ್ತು.

ನಾನು :I couldn't help it. I just couldn't help it.

Z : ಸರಿ. ಹೇಳಿದ್ದನ್ನೇ ಮತ್ತೆ ಹೇಳದೆ ಕಥೆ ಮುಂದುವರೆಸು.

ನಾನು :ಮನೆಗೆ ಬಂದ ಮೇಲೆ ನನಗೆ ಜ್ಞಾನೋದಯವಾದ ಮುಖ್ಯ ವಿಷಯ ಏನಪ್ಪ ಅಂದರೆ, ಬಟ್ಟೆಗಳೆಲ್ಲ ಅರ್ಧ ಪ್ಯಾಕ್ ಆಗಿದ್ದವು, ಪುಸ್ತಕಗಳು ಪ್ಯಾಕೇ ಆಗಿರಲಿಲ್ಲ.

Z :ಶಭಾಶ್. ಆಮೇಲೆ ?

ನಾನು :ಎಮ್.ಫಿಲ್ ನೋಟ್ಸ್ ಇದ್ದ ಫೈಲನ್ನ ಬ್ಯಾಗ್ ಪ್ಯಾಕ್ ಗೆ ಸೇರಿಸಿ ಗ್ರಂಥಗಳನೆಲ್ಲಾ ಸೂಟ್ ಕೇಸಿಗೆ ಹಾಕಿದೆ. ಅಣ್ಣ-" ಟ್ರೈನ್ ಸ್ವಲ್ಪ ದೊಡ್ಡದಾಗಿದ್ದಿದ್ದರೆ ಕಪಾಟನ್ನೇ ತರ್ತಿದ್ಲು ಇವ್ಳು" ಅಂದ್ರು.

Z : ತಮ್ಮ ಪ್ರತಿಕ್ರಿಯೆ ?

ನಾನು :ಮೌನ.

Z : ನಂಗೊತ್ತಿಲ್ವಾ.ಮುಂದೆ ?

ನಾನು :ಬಟ್ಟೆಗಳನ್ನೆಲ್ಲಾ ಸರೀಗೆ ಇಟ್ಟುಕೊಳ್ಳೋ ಅಷ್ಟೊತ್ತರಲ್ಲಿ ಐದು ಹತ್ತು.ಎಲ್ಲ ದೇವರಿಗೂ ಒಂದೊಂದು ನಮಸ್ಕಾರ ಹಾಕಿದೆ.ಐದು ಹನ್ನೊಂದು. ಅಣ್ಣ ಲ್ಯಾಪ್ ಟಾಪ್ ತರಲೇಕೂಡದೆಂದು ಹೇಳಿಬಿಟ್ಟರು.ಐದು ಹನ್ನೆರಡು.

Z : ನಿನ್ನ ಕೈಯೇ ಮುರಿದುಹೋದ ಹಾಗಾಗಿರತ್ತೆ.

ನಾನು : ಅಲ್ವಾ ಮತ್ತೆ ! ಅಣ್ಣ- black berry ಇದೆ, adjust ಮಾಡ್ಕೊ ಅಂದ್ರು.ನಾನು ಒಪ್ಕೊಂಡೆ.ಐದು ಹನಿನಾಲ್ಕು.

ಅಮ್ಮ ಐದು ಹದಿನೈದಕ್ಕೆ ಮನೆಯ ಬೀಗ ಹಾಕಿದರು. ಐದು ಹದಿನೈದು ನಲವತ್ತೈದನೆಯ ಸೆಕೆಂಡಿಗೆ ನಮ್ಮ ಗಾಡಿ ಸ್ಟೇಷನ್ಗೆ ಹೊರಟಿತು,ಅಣ್ಣನ ಸಾರಥ್ಯದಲ್ಲಿ.

ನಾವು ಸ್ಟೇಷನ್ ತಲುಪಿದಾಗ ಆರು ಇಪ್ಪತ್ತಿನ ಆಸುಪಾಸು. ಅಣ್ಣ ಗಾಡಿ ನಿಲ್ಲಿಸಿ ಡ್ರೈವರ್ ಅಂಕಲ್ ಗೆ ಗಾಡಿ ತೆಗೆದುಕೊಂಡು ಹೋಗಲು ಹೇಳಿದ ಮೇಲೆ ಟ್ರೈನ್ ಹುಡುಕುವ ಕೆಲಸಕ್ಕೆ ಇಳಿದೆವು.ಮೊದಲನೆಯ ಪ್ಲಾಟ್ ಫಾರ್ಮ್ ನಲ್ಲಿ ಟ್ರೈನ್ ನಿಂತಿತ್ತು. ಬೋಗಿ ಹುಡುಕುವ ಹೊತ್ತಿಗೆ ಅರ್ಧ ಶಕ್ತಿ ಹೋಗಿತ್ತು, ಕಾರಣ ನಮ್ಮಗಳ ಲಗೇಜು !

Z : ಎಹೆಹೆಹ್ಹೆ...ಅರ್ಧ ಮನೆ ಪ್ಯಾಕ್ ಮಾಡಿದ್ರೆ ಇನ್ನೇನಾಗತ್ತೆ.

ನಾನು : ಏನಿಲ್ಲ. ನಮ್ಮ ಲಗೇಜು ಎಲ್ಲರಿಗಿಂತ ಕಡಿಮೆ. ಎಲ್ಲರು ಕಿಟ್ ಬ್ಯಾಗ್ ಗಳನ್ನು ತಂದಿದ್ದರು, ತಲೆಗೆ ಎರಡರ ಲೆಖ್ಖದಲ್ಲಿ.ನಾವು ಎರಡು ಕಿಟ್ ಬ್ಯಾಗ್ = ಒಂದು ಸೂಟ್ಕೇಸ್ ಎಂಬ ಸಮೀಕಣ ಉಪಯೋಗಿಸಿ ತಲೆಗೆ ಒಂದು ಸೂಟ್ಕೇಸ್ ತಂದಿದ್ವಿ. ನನ್ನದು ಅಮ್ಮನದ್ದು ಒಂದು ಬ್ಯಾಗ್ ಪ್ಯಾಕ್ ಮತ್ತು ವ್ಯಾನಿಟಿ ಬ್ಯಾಗ್ respectively.ಅಷ್ಟೇ.

Z : ಸಾಲ್ದಾ ?

ನಾನು :ಸಾಕು.ಜೈ ಗಣೇಶ ಅಂತ ಎಲ್ಲರೂ ಟ್ರೈನ್ ಹತ್ತಿದೆವು. ಅವರೆಲ್ಲಾ ಒಂದು ಕಡೆ, ನಾನೊಬ್ಬಳೇ ಒಂದುಕಡೆ.

Z :ಅದು ಯಾಕೆ ?

ನಾನು :ಲಾಸ್ಟ್ ನಲ್ಲಿ ಅಲ್ವಾ ನನ್ನ ರೆಸರ್ವೇಷನ್ ಆಗಿದ್ದು. ಟಿಕೆಟ್ ವೈಟಿಂಗ್ ಲಿಸ್ಟ್ ನಲ್ಲಿತ್ತು. ನಾನು ಸ್ಟೇಷನ್ ತಲುಪುವ ಹೊತ್ತಿಗೆ ಪುಣ್ಯಕ್ಕೆ ಕನ್ಫರ್ಮ್ ಆಗಿತ್ತು. ಅಮ್ಮ -"ಅಣ್ಣನ ಅಲ್ಲಿಗೆ ಕಳಿಸಿ ನೀನು ನಮ್ಮ ಜೊತೆಗೆ ಬಾ. ಒಬ್ಬೊಬ್ಬಳೇ ಎಲ್ಲೆಲ್ಲೋ ಇರ್ಬೇಡ."ಅಂದರು.

Z : ನೀನು ದುರುಗುಟ್ಟಿಕೊಂಡು ನೋಡಿರ್ತ್ಯ.

ನಾನು :ಹು.ಒಂದು ಚಾನ್ಸ್ ಸಿಕ್ಕಿತ್ತು.

Z : ಏನಕ್ಕೆ ?

ನಾನು : ದೀರ್ಘಾಲೋಚನೆ ಮತ್ತು ಆತ್ಮಾವಲೋಕನಕ್ಕೆ.

Z :cough cough cough....ಈ ಥರ ಎಲ್ಲ ಶಾಕ್ ಕೊಡ್ಬೇಡ. ಎಮ್.ಫಿಲ್ ಗೆ ಓದಕ್ಕೆ ಅನ್ನು, ನಂಬ್ತಿನಿ.

ನಾನು : actually ಅದಕ್ಕೇನೆ. ನಾನು ನನ್ನ ಸೀಟಿನಲ್ಲಿ ಕುಳಿತ ತಕ್ಷಣ "ಅಲ್ಲಾಹ್" ಅಂತ ಉದ್ಗರಿಸಿದೆ. ಯಾಕೆ ಅಂತ ಗೊತ್ತಿಲ್ಲ.

Z : ಹೋಗ್ತಿರೋದು ಆಗ್ರಾ ಗೆ ಅಂತ ಇಲ್ಲಿಂದಲೇ ಪ್ರಾಕ್ಟೀಸಾ ?ಕಳ್ಳಿ !

ನಾನು : ಹೇ ನನಗೆ ನಿಜವಾಗಲೂ ಗೊತ್ತಿಲ್ಲ ಹಾಗ್ ಯಾಕೆ ಅಂದೆ ಅಂತ. ಅದಾದ ಎರಡು ನಿಮಿಷಕ್ಕೆ, "ಮೇಡಮ್, ನೀವು ಸೀಟ್ ನಂಬರ್ ೪೩ ಗೆ ಹೋಗಿ ನಮಗೆ ಈ ಸೀಟ್ ಕೊಡ್ತಿರಾ? ನನ್ನ ಹೆಂಡತಿ ಇಲ್ಲಿ ಬರ್ತಾಳೆ, ನಾನು ಅವಳು ಬೇರೆ ಆಗೋಗಿದಿವಿ" ಅಂತ ಒಬ್ಬರು ವೃದ್ಧರು ಬಂದು ಕೇಳಿಕೊಂಡರು. ನಾನು ಓಕೆ ಅಂದು ಲಗೇಜ್ ತಗೊಂಡು ಸೀಟ್ ನಂಬರ್ ೪೩ ಹತ್ರ ಬಂದು ನೋಡ್ತಿನಿ, ನಮ್ಮನೆ gang !

Z : :) :) :) :)

ನಾನು : ಲಕ್ಷ್ಮೀ ಬಂದ್ಲು ಅಂತ ಖಷಿ ಪಟ್ಕೊಂಡು ಲಗೇಜ್ ಇಡುವಷ್ಟರಲ್ಲಿ ಏಳು ಇಪ್ಪತ್ತು. ಜೋರಾಗಿ ಸೀಟಿಯನ್ನು ಊದುತ್ತಾ ಆಗ ತಾನೆ ಬೆಂಗಳೂರನ್ನು ಆವರಿಸುತ್ತಿದ್ದ ಕತ್ತಲನ್ನು ಭೇದಿಸುತ್ತಾ ಕರ್ನಾಟಕ ಎಕ್ಸ್ ಪ್ರೆಸ್ ಟ್ರೈನ್ ಹೊರಟಿತು ಆಗ್ರಾದ ಕಡೆಗೆ, ನಮ್ಮ ಇಪ್ಪತ್ತೆರಡು ದಿನದ ಉತ್ತರ ಭಾರತದ ಪ್ರವಾಸದ ಆರಂಭವನ್ನು ಸೂಚಿಸುತ್ತಾ ...

Z :ಮುಂದೆ ?

ನಾನು : ಮುಂದಿನ ಕಥೆ ಆಮೇಲೆ. :)

ಉತ್ತರಾಯಣ ೩

ನಾನು: ಬೃಂದಾವನಕ್ಕೆ ಹೊರಡಲು ನಾಲ್ಕು ಘಂಟೆಯಷ್ಟೊತ್ತಿಗೆ ರೆಡಿ ಇರಬೇಕು ಎಂದು ಮ್ಯಾನೇಜರ್ ವೆಂಕಟೇಶ್ ಅವರು ಹೇಳಿದ್ದರು. ಇವರೆಲ್ಲರೂ ಊಟ ಮಾಡಿ, ಮಲಗಿ, ಎದ್ದು ರೆಡಿಯಾಗು...