Sunday, October 4, 2009

journey to ಜಲೇಬಿನಾಡು ಭಾಗ ೭

ನಾನು : ರಾಮೇಶ್ವರಂ ನಲ್ಲಿ ರಾತ್ರಿ ಊಟ ಮಾಡಬೇಕಾದರೆ ನಮ್ಮ ಬುಸ್ ನಾಗ ಮಾರನೆಯ ಬೆಳಿಗ್ಗೆ ಹತ್ತುವರೆ ಘಂಟೆಗೆ ಹೊರಡುವುದಾಗಿ ಹೇಳಿದರು. ಧನುಷ್ಕೋಟಿಗೆ ನಮಗೆ ಹೋಗಲಾಗುವುದಿಲ್ಲ ಎಂದು ಹೇಳಿದರು.

Z : ತಾವು ಇದಕ್ಕೆ ಮುಖ ಊದಿಸಿಕೊಂಡಿರಿ.

ನಾನು : of course ! ಆದರೆ ಅಣ್ಣ, ಅಪರಕರ್ಮ(ಶ್ರಾದ್ಧ) is priority ಅಂದರು. ನಾನು ಓಕೆ ಅಂದೆ.

ನಾನು : ಬುಸ್ ನಾಗ "ಹಾಂ...ಇಪ್ಪತ್ತೆರಡು ಬಾವಿ ನೀರಿನ ಸ್ನಾನಕ್ಕೆ ದುಡ್ಡು ಕೊಡಿ" ಅಂದರು. ನಾವು ಮಠದ ಮೂಲಕ ಹೋಗುವುದಾಗಿ ಹೇಳಿದೆವು. ಅದಕ್ಕೆ ಅವರು ಮುಖ ಊದಿಸಿಕೊಂಡರು.

Z : :)

ನಾನು : ನಾವು ಲಾಡ್ಜಿಗೆ ಬಂದು ಮಲಗಿದೆವು. ಬೆಳಿಗ್ಗೆ ಅಮ್ಮ ಮೂರಕ್ಕೆ ಎಬ್ಬಿಸಿದರು. ತಣ್ಣೀರಿನ ಸ್ನಾನ ಮಾಡಿದೆವು. ಮೂರುವರೆಗೆ ಮಠ ತಲುಪಿದೆವು. ಅಲ್ಲಿನ ಅಧಿಕಾರಿಯೊಬ್ಬರು ನಮ್ಮೊಟ್ಟಿಗೆ ಬಂದು ನಮ್ಮನ್ನು ದೇವಾಲಯಕ್ಕೆ ಕರೆದುಕೊಂಡು ಹೋದರು, ಸ್ಫಟಿಕಲಿಂಗದ ದರ್ಶನಕ್ಕೆ.

Z : what it eez ?

ನಾನು : ನಮ್ಮ ಆಚಾರ್ಯ ಶಂಕರ ಭಗವತ್ಪಾದರು ಇದ್ರಲ್ಲಾ...

Z : ಹೂಂ...

ನಾನು : ಅವರು ಕಾಶ್ಮೀರದಿಂದ ಕನ್ಯಾಕುಮಾರಿ ವರೆಗೂ travel ಮಾಡಿದ್ರಂತಲ್ಲಾ...

Z : ಹುಂ...

ನಾನು : ಆವಾಗ ಅವರು ರಾಮೇಶ್ವರಕ್ಕೂ ಬಂದಿದ್ದರಂತೆ.

Z : I see. ಆಮೇಲೆ ?

ನಾನು : ಅಲ್ಲಿ ಅವರು ರಾಮೇಶ್ವರ ಲಿಂಗದ ದರ್ಶನವಾದ ಮೇಲೆ ಅಲ್ಲೊಂದು ಸ್ಫಟಿಕಲಿಂಗವನ್ನು ಪ್ರತಿಷ್ಟಾಪಿಸಿದ್ದಾರೆ. ಅದು ಬೆಳಿಗ್ಗಿನ ಯಾಮ ಸರಿಯಾಗಿ ೪.೩೦ ಕ್ಕೆ ದರ್ಶನಕ್ಕೆ ಇಡಲಾಗುತ್ತದೆ. ಅದಕ್ಕೆ ಅಭಿಷೇಕವಾಗುವುದರ ಜೊತೆಗೇ ರಾಮೇಶ್ವರ ಲಿಂಗಕ್ಕೂ ಅಭಿಷೇಕವಾಗುತ್ತದೆ.ಎಂಥಾ ಶುದ್ಧ ಸ್ಫಟಿಕ ಅಂದರೆ, ಬಿಳುಪು ಅಂದರೆ ಅದು ! ಎಂಥಾ ಲಿಂಗ ಅಂತಿಯಾ ? ಸೂಕ್ಷ್ಮಾತಿ ಸೂಕ್ಷ್ಮ ರೇಖೆ ಕೂಡಾ ಇಲ್ಲದ flawless crystal ಅದು. ಅದರ ಮೇಲೆ ಹಾಲು ಮೊಸರು ಬಿದ್ದರೆ ನಮಗೆ, ನೋಡುಗರಿಗೆ ಎಂಥಾ ರೋಮಾಂಚನವಾಗುತ್ತದೆ ಅಂದರೆ...ಅದನ್ನು ವರ್ಣಿಸಲು ಸಾಧ್ಯವೇ ಇಲ್ಲ !

Z : :)

ನಾನು : ಇನ್ನು ರಾಮೇಶ್ವರದ ಕಥೆ ಎಲ್ಲರಿಗೂ ಗೊತ್ತಿದೆ. ರಾಮ ತಾನು ಲಂಕೆಯಿಂದ ವಿಜಯಿಯಾಗಿ ಸೀತೆಯ ಸಮೇತ ಇಲ್ಲಿಗೆ ಬಂದು, ಬ್ರಹ್ಮಹತ್ಯಾದೋಷವನ್ನು ನಿವಾರಿಸಿಕೊಳ್ಳಲು ಶಿವನ ಪೂಜೆಮಾಡಲು ಇಚ್ಛಿಸಿದನು. ಅದಕ್ಕಾಗಿ ಹನುಮಂತನನ್ನು ಕಾಶಿಗೆ ಕಳಿಸಿ ವಿಶ್ವನಾಥನ ಲಿಂಗವನ್ನು ಇಲ್ಲಿ ತರಬೇಕೆಂದು ಆಜ್ಞಾಪಿಸಿದನು. ಆದರೆ, ಆಕಾಶದಲ್ಲಿ ಟ್ರಾಫಿಕ್ ಜಾಂ ಇತ್ತು ಅಂತ ಕಾಣತ್ತೆ, ಹನುಮಂತ ಬರುವುದು ತಡವಾಯ್ತು. ಅಷ್ಟೊತ್ತಿಗಾಗಲೇ ಸೀತಾದೇವಿ ಮರಳಿನಲ್ಲಿ ಲಿಂಗವನ್ನು ಮಾಡಿದ್ದಳು. ರಾಮ ಅದಕ್ಕೆ ಪೂಜೆ ಸಲ್ಲಿಸಿ ಆದಮೇಲೆ ಹನುಮಂತ ಲಿಂಗದ ಸಮೇತ land ಆದನು. ಅವನಿಗೆ ತಾನು ತಂದ ಲಿಂಗಕ್ಕೆ ಪೂಜೆಯಾಗಲಿಲ್ಲವಲ್ಲ ಅಂತ ಬೇಜಾರು ಆಯ್ತು. ಅವನನ್ನು ಸಮಾಧಾನ ಪಡಿಸಲು ರಾಮ ಹೇಳಿದ, ಎರಡೂ ಲಿಂಗಕ್ಕೆ ಪೂಜೆ ಸಲ್ಲಿಸಬೇಕು ಇಲ್ಲಿಗೆ ಬಂದವರೆಲ್ಲರೂ ಅಂತ. ಅದು ಈಗಲೂ ಚಾಲನೆಯಲ್ಲಿದೆ.

Z : ಹಾಗೆ.

ನಾನು : ಹೂ. ಮತ್ತು, ರಾಮೇಶ್ವರ ಚಾರ್ ಧಾಂ ಗಳಲ್ಲಿ ಒಂದು. ಕಾಶಿಯಿಂದ ಗಂಗೆಯನ್ನು ತಂದು ಇಲ್ಲಿ ರಾಮೇಶ್ವರನಿಗೆ ಅಭಿಷೇಕ ಮಾಡಲಾಗುತ್ತದೆ. ಮತ್ತು ಇಲ್ಲಿಂದ ಮರಳನ್ನು ತೆಗೆದುಕೊಂಡು ಹೋಗಿ ಕಾಶಿ ವಿಶ್ವನಾಥನಿಗೆ ಅರ್ಪಿಸುವುದು ಆಚಾರ. ಮೊದಲು ರಾಮೇಶ್ವರಕ್ಕೆ ಹೋಗಿ, ಮರಳನ್ನು ತೆಗೆದುಕೊಂಡು, ಕಾಶಿಗೆ ಹೋಗಿ, ವಿಶ್ವನಾಥನಿಗೆ ಅರ್ಪಿಸಿ, ಅಲ್ಲಿಂದ ಗಂಗೆಯನ್ನು ತಂದು ಇಲ್ಲಿ ರಾಮೇಶ್ವರನಿಗೆ ಅರ್ಪಿಸಿದರೇನೆ ಯಾತ್ರೆಯ ಪೂರ್ಣ ಫಲ ಸಿಗೋದು.

Z : ಜೀವನಪರ್ಯಂತ ಓಡಾಡ್ತಾನೇ ಇರ್ಬೇಕಾಗತ್ತೆ ಅಷ್ಟೇ !

ನಾನು : ಹಿಂದಿನ ಕಾಲದಲ್ಲಿ ಹಾಗಿದ್ದಿರಬಹುದು. ಈಗ package tours ಇವೆ. ಒಂದು ವರ್ಷದಲ್ಲಿ ಎರಡೂ ಕಡೆ ಹೋಗಿ ಬರಬಹುದು.plan ಮಾಡಬೇಕು ಅಷ್ಟೇ.

Z : ಅದೂ ಸರೀನೆ. ಆಮೇಲೆ ?

ನಾನು : ದೇವರ ದರ್ಶನವಾದ ನಂತರ ಇಪ್ಪತ್ತೆರಡು ಬಾವಿಗಳ ಸ್ನಾನಕ್ಕೆ ಹೊರಟೆವು. ಒಂದೊಂದು ವಿಚಿತ್ರ ತರದ ಬಾವಿಗಳು. ಒಂದು ಬಿಸಿನೀರು, ಒಂದು ತಣ್ಣೀರು, ಒಂದು ಸಿಹಿನೀರು, ಒಂದು ಉಪ್ಪಿನ ನೀರು...ಹೀಗೆ. ದುಬುಕ್ ದುಬುಕ್ ಅಂತ ನೀರು ತಲೆ ಮೇಲೆ ಬಿದ್ದು ಬಿದ್ದು ಕಿವಿ ಹೂತುಹೋಗಿತ್ತು. ಅಪರ್ಣ ನನ್ನ ವೇಲನ್ನ, ನಾನು ಅಮ್ಮನ ಸೆರಗನ್ನ ಹಿಡಿದಿದ್ದೆವು, ಕಳೆದುಹೋಗಬಾರದು ಅಂತ. ಅಣ್ಣ ಮಠದಿಂದ ಬಂದವರನ್ನ ಹಿಂಬಾಲಿಸುತ್ತಿದ್ದರು, ಅಮ್ಮ ಅಣ್ಣನನ್ನು ಮತ್ತು ನಾವು ಅಮ್ಮನನ್ನು ಹಿಂಬಾಲಿಸಿ,ಇಪ್ಪತ್ತೆರಡು ಬಾವಿಗಳ ಸ್ನಾನವನ್ನು ಸಂಪನ್ನವಾಗಿಸಿದೆವು.ಅಲ್ಲಿಂದ,ಮಠಕ್ಕೆ ಶ್ರಾದ್ಧಕ್ಕಾಗಿ ನಡೆದೆವು. ಶಂಕರ ಮಠದವರು ಬಹಳ ಅಚ್ಚುಕಟ್ಟಾಗಿ ಶ್ರಾದ್ಧ ಮಾಡಿಸಿಕೊಟ್ಟರು. ಅಲ್ಲಿಂದ ಲಾಡ್ಜಿಗೆ ಬಂದಾಗ ಗೊತ್ತಾಯ್ತು, ಊಟ ಮುಗಿಸಿಕೊಂಡು ರಾಮೇಶ್ವರವನ್ನು ಬಿಡುತ್ತಿದ್ದೇವೆ ಅಂತ. ನೆಮ್ಮದಿಯಾಗಿ ಒಂದು ಘಂಟೆ ನಿದ್ದೆ ಮಾಡಿ, ಊಟ ಮಾಡಿ ಹೊರಟೆವು.

Z : ತಾವೇನು ತಿಂದಿರಿ ?

ನಾನು : ಮೊಸರನ್ನ. ಅಷ್ಟೇ.

Z : ಕರ್ಮಕಾಂಡ !

ನಾನು : ಅಲ್ಲಿಂದ ಹೊರಟು ಸಾಯಂಕಾಲ ತಿರುಚೆಂದೂರು ತಲುಪಿದೆವು. ಅಲ್ಲಿ ಸುಬ್ರಹ್ಮಣ್ಯ ಸ್ವಾಮಿಯ ದೇವಸ್ಥಾನವಿದೆ. ಇಲ್ಲಿ ದೇವಸ್ಥಾನದ ವಿಶೇಷವೇನೆಂದರೆ, ಸುಬ್ರಹ್ಮಣ್ಯರ ಪತ್ನಿಯಾದ ದೇವಸೇನೆ ಮತ್ತು ವಲ್ಲಿದೇವಿಯರಿಗೆ ಪ್ರತ್ಯೇಕ ದೇವಸ್ಥಾನವಿದೆ. ಸಮುದ್ರ ತೀರದಲ್ಲಿದೆ ಈ ದೇವಸ್ಥಾನ. ಸುಬ್ರಹ್ಮಣ್ಯ ವಿವಾಹಾನಂತರದಲ್ಲಿ ಇಲ್ಲಿ ನೆನೆಸಿದರು ಎಂದು ಸ್ಥಳಪುರಾಣ. ಇಲ್ಲಿ ಸಮುದ್ರದಲೆಗಳು ದೇವಸ್ಥಾನದ ಗೋಡೆಗಳನ್ನು ಅಪ್ಪಳಿಸಿದಾಗ "ಓಂ" ಶಬ್ದ ಕೇಳಿಸುತ್ತದೆ. ನಾನು ಕಿವಿಗೊಟ್ಟು ಕೇಳಿಸಿಕೊಂಡೆ.low frequency om. but very clear. ಇದರ physics ಏನಿರಬಹುದು ಅಂತ ಯೋಚನೆ ಮಾಡುತ್ತಿದ್ದೆ, ಅಷ್ಟರಲ್ಲಿ ನಮ್ಮನ್ನು ಹೊರಡಿಸಲಾಯ್ತು !

Z : ಅಯ್ಯೋ ಪಾಪ !

ನಾನು : :( ಅನಂತ್ ಅಂಕಲ್ ಗೆ ಸ್ವಲ್ಪ ನೆಗಡಿಯಿತ್ತು. ತಲೆಭಾರ ಶುರುವಾಗಿತ್ತು, ಹಾಗಾಗಿ ಅವರು ಬೇಗ ಹೊರಟರು. ನಾವು ತಿರುಚೆಂದೂರಿನ ಬೀಚ್ ನಲ್ಲಿ ಫೋಟೋ ತೆಗೆಸಿಕೊಂಡು ಬಸ್ಸು ಹತ್ತಿದೆವು.ಕನ್ಯಾಕುಮಾರಿಯಲ್ಲಿ ಹಾಲ್ಟು ಅಂದರು.ನಾವು ತಿರುಚೆಂದೂರು ಬಿಟ್ಟಾಗ ಏಳು ಘಂಟೆ. ಈಗ ಬರಬಹುದು, ಆಗ ಬರಬಹುದು ಕನ್ಯಾಕುಮಾರಿ ಅಂದುಕೊಂಡರೆ ನಾವು ತಲುಪಿದಾಗ ಹನ್ನೊಂದುವರೆ ! ನಾನು ಒಂದು ಪ್ಯಾಕೆಟ್ ಬಿಸ್ಕೆಟ್ಟು ತಿಂದಿದ್ದೆ, ಊಟ ಮಾಡೊಲ್ಲ ಅಂತ ಹೇಳಿ ರೂಮಲ್ಲಿ ಮಲಗಿದೆ ಅಷ್ಟೇ. ಬೆಳಿಗ್ಗೆ ಎದ್ದು ಸೂರ್ಯೋದಯ ನೋಡುವುದಿತ್ತು ಬೇರೆ. ಅಪರ್ಣಾ ಕೂಡಾ ಊಟ ಬೇಡವೆಂದು ಮಲಗಿದಳು. ಅಮ್ಮ ಅಣ್ಣ ಊಟ ಮಾಡಿ ಬಂದು ಮಲಗಿದಾಗ ಗಂಟೆ ಒಂದಂತೆ !

Z : :)) ಮುಂದೆ ?

ನಾನು : ಬೆಳಿಗ್ಗೆ ಯಥಾಪ್ರಕಾರ ನಾಲ್ಕಕ್ಕೆ ಎದ್ದು, ರೆಡಿಯಾಗಿ ಸೂರ್ಯೋದಯ ನೋಡಲು ಹೊರಟೆವು. ಆದರೆ ದುರದೃಷ್ಟವಶಾತ್ ನಮಗೆ ಸೂರ್ಯೋದಯ ನೋಡಲಾಗಲಿಲ್ಲ. ಪೂರ್ತಿ ಮೋಡ ಕವಿದಿತ್ತು. ನಮಗೆ ಸಿಕ್ಕಾಪಟ್ಟೆ ನಿರಾಸೆಯಾಯ್ತು. ಕನ್ಯಾಕುಮಾರಿ ದೇವಸ್ಥಾನಕ್ಕೆ ಹೋಗಿ, ಸ್ಪೆಷಲ್ ದರ್ಶನದ ಟಿಕೆಟ್ಟು ಕೊಂಡು ದೇವಿ ಕನ್ಯಾಕುಮಾರಿಯನ್ನು ನೋಡಿ ಧನ್ಯರಾದೆವು. ಎಂಥಾ ಸೌಂದರ್ಯ ! ಎಂಥಾ ಮೂರ್ತಿ ! ಮೂಗುತ್ತಿ ನಿಜವಾಗಲು ಎಷ್ಟು ಪಳ ಪಳ ಹೊಳಿತಿತ್ತು ಗೊತ್ತಾ, ಕಣ್ಣು ಮುಚ್ಚುವಷ್ಟು ಪ್ರಖರತೆಯಿದೆ ! ಕನ್ಯಾಕುಮಾರಿಯ ದರ್ಶನದ ನಂತರ ನಮಗೆ ಟೈಂ ಇತ್ತು.ಆಟೋ ಹಿಡಿದು ಸುಚಿಂದ್ರಂಗೆ ಹೋಗಿ ಬಂದೆವು. ಸುಚಿಂದ್ರಂ ನಲ್ಲಿ ಇಂದ್ರನು ಪಾಪದಿಂದ ಶುಚಿಗೊಂಡನು ಎಂದು ಪ್ರತೀತಿ. ಮಹಾಪತಿವ್ರತೆ ಅನಸೂಯೆ ತ್ರಿಮೂರ್ತಿಗಳನ್ನು ಮಕ್ಕಳಾಗಿಸಿದಳಲ್ಲಾ, ಅದೇ ಸ್ಥಳವೇ ಇದು. ಇಲ್ಲಿನ ಲಿಂಗದ ಆದಿಯಲ್ಲಿ ಬ್ರಹ್ಮ, ಮಧ್ಯದಲ್ಲಿ ವಿಷ್ಣು, ಮೇಲ್ಭಾಗದಲ್ಲಿ ಶಿವ ವಾಸಿಸುತ್ತಾರೆ ಎಂದು ನಂಬಿಕೆ. ದತ್ತಾತ್ರೇಯ ಮೂರ್ತಿ ಮತ್ತು ಬೃಹತ್ ಆಂಜನೇಯ ಮೂರ್ತಿ ಇಲ್ಲಿನ ಆಕರ್ಷಣೆಗಳು. ರಾಮ ಸೀತೆಯರ ದೇವಾಲಯವೂ ಇಲ್ಲಿದೆ, ಮತ್ತು ಈ ದೇವಾಲಯ ತುಂಬಾ ಕಲಾತ್ಮಕವಾಗಿದೆ. ಒಳಗಡೆ ಛಾಯಾಗ್ರಹಣ ನಿಷೇಧ.ಅಲ್ಲಿಂದ ಮತ್ತೆ ಕನ್ಯಾಕುಮಾರಿಗೆ ಹೋಗಿ ವಿವೇಕಾನಂದ ರಾಕ್ ಮೆಮೋರಿಯಲ್ ಗೆ ಹೋದೆವು.

Z : ಆಹ ? ಹೇಗಿದೆ ಜಾಗ ?

ನಾನು : ಸಿಕ್ಕಾಪಟ್ಟೆ ಚೆನ್ನಾಗಿದೆ. ಅಮ್ಮ ಉಪಾಸನೆ ಚಿತ್ರದ ಕಥೆಯನ್ನು ಸಾವಿರ ಸರ್ತಿ ನೆನಪಿಸಿಕೊಂಡರು.

Z : :))

ನಾನು : ಅಲ್ಲಿ ರಾಕ್ ಮೆಮೋರಿಯಲ್ ಹೊರಗೆ ಭಾರತ ಭೂಶಿರ ಹಾಡನ್ನೂ ಹಾಡಿದರು.

Z : :))))

ನಾನು : ಬೋಟ್ ರೈಡ್ ಸಖತ್ತಾಗಿತ್ತು. ವಿವೇಕಾನಂದರ ಮೂರ್ತಿ ಮಾತ್ರ ಎಲ್ಲರಿಗೂ ಸ್ಪೂರ್ತಿದಾಯಕ.ಕಣ್ಣಲ್ಲಿ ಏನು ಕಾಂತಿ, ಎಂಥಾ ಶಾಂತಿ ! ನಾನಂತು ಮೂಕವಿಸ್ಮಿತಳಾಗಿ ನಿಂತಿದ್ದೆ ! ಆಮೇಲೆ ಅಣ್ಣ ಎಚ್ಚರಿಸಿ ನನ್ನನ್ನು ಹೊರಬರಲು ಹೇಳಿದರು. ನನ್ನನ್ನು ಬೇಕಂತಲೇ ಪುಸ್ತಕದ ಅಂಗಡಿಯಿಂದ ದಾರಿತಪ್ಪಿಸಲಾಯ್ತು.

Z : ಎಹೆಹೆಹೆ.

ನಾನು : ಆನಂತರ ನಾವು ಮತ್ತೆ ಬೋಟ್ ನಲ್ಲಿ ವಾಪಸ್ಸು ಬಂದೆವು. ನಮಗೆ ತಿರುವಳ್ಳವರ್ ಮೂರ್ತಿಯ ಬಳಿಹೋಗಲಾಗಲಿಲ್ಲ. ದೂರದಿಂದಲೇ ಫೋಟೋ ತೆಗೆದೆ. ಜೋರಾಗಿ ಬೀಸುತ್ತಿದ್ದ ಗಾಳಿಯಿಂದಾಗಿ ನನ್ನ ಟೋಪಿ ಹಾರೋಯ್ತು !

Z : ಪಾಪ. ಆಮೇಲೆ ?

ನಾನು : ಅಲ್ಲಿಂದ ಬಂದು ಕನ್ಯಾಕುಮಾರಿಯಲ್ಲಿ ಸೀರೆ ಚೆನ್ನಾಗಿ ಸಿಗುತ್ತದೆ ಎಂದು ಕೇಳ್ಪಟ್ಟೆವು ಆದ್ದರಿಂದ ಸೀರೆಗಳನ್ನು ಕೊಂಡೆವು. ಸುಧಾ ಆಂಟಿ ರೂಮಲ್ಲೇ ಇದ್ದರು, ಅನಂತ್ ಅಂಕಲ್ ಗೆ ಆರೋಗ್ಯ ಹದಗೆಡುತ್ತಿತ್ತು.

Z : ಪಾಪ.

ನಾನು : ನಾವು ಶಾಪಿಂಗ್ ಮಾಡಿ ರೂಮಿಗೆ ಬಂದು, ತಿಂಡಿ ತಿಂದು, ತಿರುವನಂತಪುರಕ್ಕೆ ಹೊರಟೆವು.ಅಲ್ಲಿನ ದೇವಸ್ಥಾನಕ್ಕೆ ಹೆಂಗಸರು ಸೀರೆಯಲ್ಲೇ ಹೋಗಬೇಕಿತ್ತು ಆದ್ದರಿಂದ ಸೀರೆ ಉಟ್ಟು ಬಸ್ಸು ಹತ್ತಿದೆವು.

Z : ಆಮೇಲೆ ?

ನಾನು : ತಿರುವನಂತಪುರಂ ತಲುಪಿದಾಗ ಸಾಯಂಕಾಲ ಎಂಟು. ದೇವರ ದರ್ಶನ ಸುಲಭವಾಗಿ ಆಯ್ತು.ನಾನು ಅಮ್ಮ ಮೊದಲಿಗರಾಗಿದ್ದರಿಂದ ನಮಗೆ ಬೇಗ ದರ್ಶನವಾಯ್ತು. ಅನಂತ ಪದ್ಮನಾಭ ಎಂಥಾ ದೊಡ್ಡ ಮೂರ್ತಿ ಅಂದರೆ ಮೂರುಬಾಗಿಲಲ್ಲಿ ಅವನ ದರ್ಶನ ಮಾಡಬೇಕು.ನಾಭಿಯಿಂದ ಬ್ರಹ್ಮಉದ್ಭವವಾಗಿರುವುದನ್ನು ನೋಡಬಹುದು.ತುಂಬಾ ದೊಡ್ಡ ದೇವಸ್ಥಾನ. ಚೆನ್ನಾಗಿದೆ.

Z : ದೇವರೊಂದು ಮೂರು ಬಾಗಿಲು ! ಆಮೇಲೆ ?

ನಾನು : ನಾನು ಅಮ್ಮ ಮೊದಲು ದರ್ಶನ ಮುಗಿಸಿ ಬಸ್ ಬಳಿ ಬಂದೆವು. ಅನಂತ್ ಅಂಕಲ್ ಗೆ ತೀರ ಹುಷಾರಿರಲಿಲ್ಲ ಆದ್ದರಿಂದ ಅವರು ಬಸ್ಸಿನಲ್ಲೇ ಇದ್ದರು. ಆದರೆ ನಾವು ಮತ್ತೆ ಬಂದಾಗ ಅವರಿರಲಿಲ್ಲ. ದೇವಸ್ಥಾನಕ್ಕೆ ಹೋಗಿದ್ದಾರ್ರೇನೋ ಅಂದುಕೊಂಡರೆ ಬಸ್ಸಿನ ಕ್ಲೀನರ್ ಬಂದು ಅಂಕಲ್ ಆಸ್ಪತ್ರೆಗೆ ಹೋಗಿರುವುದಾಗಿ ಹೇಳಿದ. ಆಂಟಿ, ಅಣ್ಣ, ಅಪರ್ಣ ಮೂವರು ದೇವಸ್ಥಾನದಲ್ಲಿಯೇ ಇದ್ದರು. ನಮಗೆ ಗಾಬರಿಯಾಯ್ತು. ನಾವು ತಕ್ಷಣ ಆಸ್ಪತ್ರೆಗೆ ಹೋದೆವು.

Z : ಅಯ್ಯಯ್ಯೋ !

ನಾನು : ಅಂಕಲ್ ಗೆ ಪೇಸ್ ಮೇಕರ್ ಅಳವಡಿಸಲಾಗಿತ್ತು. ರಾಮೇಶ್ವರದಲ್ಲಿ ಸ್ನಾನ ಮಾಡಿ ನೀರಿನ ವ್ಯತ್ಯಾಸವಾಗಿ ಉಬ್ಬುಸ ಬಂದು ಉಸಿರಾಡಲು ತೊಂದರೆಯಾಗುತ್ತಿತ್ತು. ನಾನು ಅಮ್ಮನನ್ನು ಅಲ್ಲಿಯೇ ಬಿಟ್ಟು ಮತ್ತೆ ದೇವಸ್ಥಾನಕ್ಕೆ ಓಡಿ ಹೋದೆ. ದಾರಿಯಲ್ಲೇ ಎಲ್ಲರೂ ಸಿಕ್ಕರು. ವಿಷಯ ತಿಳಿಸಿದ ತಕ್ಷಣ ಸುಧಾ ಆಂಟಿ ಮತ್ತು ಅಣ್ಣ ನನ್ನೊಂದಿಗೆ ಆಸ್ಪತ್ರೆಗೆ ಧಾವಿಸಿದರು. ECG ತೆಗೆಸಿ ಯಾವುದಕ್ಕೂ ಅವರನ್ನು ಅಡ್ಮಿಟ್ ಮಾಡುವುದು ಸೂಕ್ತ ಎಂದು ತೀರ್ಮಾನಿಸಲಾಯ್ತು. ಆಂಟಿ ಅಣ್ಣ ಮತ್ತು ಅಮ್ಮ ಅಲ್ಲಿಯೇ ಉಳಿದುಕೊಳ್ಳಲು ಸಾಧ್ಯವೇ ಎಂದು ಕೇಳಿದರು.ಅಣ್ಣ ಬೆಂಗಳೂರಿಗೆ ಫೋನ್ ಮಾಡಿ ಅವರ ಮಗನನ್ನು ವಿಮಾನದಲ್ಲಿ ಬರಲು ಹೇಳಿ, ಇವರಿಬ್ಬರನ್ನು ಮಾರನೆಯ ದಿನ ವಿಮಾನದಲ್ಲಿ ಕಳಿಸಿ ಮತ್ತೆ ನಮ್ಮೊಟ್ಟಿಗೆ ಬಂದು ಸೇರಿಕೊಳ್ಳುವುದಾಗಿ ಹೇಳಿದರು. ಆ ರಾತ್ರಿ ಪೂರ್ತಿ ನಾವು ಪ್ರಯಾಣಿಸಿ ಬೆಳಿಗ್ಗೆ ಕಾಲಟಿ ತಲುಪಬೇಕಿತ್ತು. ಹಾಗಾಗಿ ಬಸ್ಸಿನಲ್ಲಿ ಇತರರು ಇರುವುದರಿಂದ ಭಯವಿಲ್ಲೆಂದು ನಾನು ಇವರಿಬ್ಬರನ್ನು ಧೈರ್ಯವಾಗಿ ಅಲ್ಲೇ ಇರಲು ಹೇಳಿ, ಅಪರ್ಣನೊಟ್ಟಿಗೆ ಬಸ್ಸು ಹತ್ತಿದೆ. ಆವತ್ತು ಡಿಸೆಂಬರ್ ಮೂವತ್ತೊಂದು. 2008 ನೇ ವರ್ಷ ಹೀಗೆ ಕೊನೆಗೊಳ್ಳಬಹುದೆಂದು ಯಾರಿಗೂ ಗೊತ್ತಿರಲಿಲ್ಲ. ಆಂಟಿ ಮತ್ತು ಅಂಕಲ್ ಬಗ್ಗೆ ನಮಗೆ ಫೋನ್ ಮಾಡಿ ತಿಳಿಸಿ ಎಂದು ಅಣ್ಣ ಅಮ್ಮನಿಗೆ ಹೇಳಿ ನಾನು ಅಪರ್ಣ ಪ್ರಯಾಣ ಆರಂಭಸಿದೆವು. ..

Z : !!!!!!!!!!!

ನಾನು : ನಮಗೆ ಭಯವಾಗಬಹುದೆಂದು ಎಲ್ಲರೂ ಹೆದರಿದ್ದರೇ ಹೊರತು ನಮಗಂತೂ ಭಯವಗಾಲಿಲ್ಲ. ಚಿಕ್ಕಂದಿನಿಂದ ಇಬ್ಬರೇ ಇದ್ದು, ಇಬ್ಬರೇ ಓಡಾಡಿ ಅಭ್ಯಾಸವಾಗಿತ್ತು ಆದ್ದರಿಂದ ನಿರ್ಭೀತಿಯಿಂದ ಮುಸುಕು ಹೊದ್ದು ಮಲಗಿದೆವು. ಬಸ್ಸು ತನ್ನಷ್ಟಕ್ಕೆ ಸಾಗುತ್ತಿತ್ತು. ಕನ್ಯಾಕುಮಾರಿಯಲ್ಲಿ ತಗೆದ ಚಿತ್ರಗಳ ಸ್ಲೈಡ್ ಷೋ ನೋಡಿಬಿಡು. ಮಿಕ್ಕಿದ ಕಥೆ ಆಮೇಲೆ.

ಉತ್ತರಾಯಣ ೩

ನಾನು: ಬೃಂದಾವನಕ್ಕೆ ಹೊರಡಲು ನಾಲ್ಕು ಘಂಟೆಯಷ್ಟೊತ್ತಿಗೆ ರೆಡಿ ಇರಬೇಕು ಎಂದು ಮ್ಯಾನೇಜರ್ ವೆಂಕಟೇಶ್ ಅವರು ಹೇಳಿದ್ದರು. ಇವರೆಲ್ಲರೂ ಊಟ ಮಾಡಿ, ಮಲಗಿ, ಎದ್ದು ರೆಡಿಯಾಗು...